ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ (ಮೆಕ್ಕೆ ಜೋಳ) ಅತ್ಯಂತ ಪ್ರಮುಖ ಬೆಳೆಯಾಗಿದೆ. ಕೆಲವು ದಿನಗಳಿಂದ ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಈಗಾಗಲೇ ಜಿಲ್ಲೆಯ ಬಹುತಾಕ ಭಾಗಗಳಲ್ಲಿ 15ರಿಂದ 20 ದಿನದ ಮೆಕ್ಕೆಜೋಳ ಬೆಳೆಯನ್ನು ಕಾಣಬಹುದಾಗಿದೆ. ಇದರೊಂದಿಗೆ ಪ್ರಸ್ತುತ ಮೆಕ್ಕೆಜೋಳದ ಎಲೆ ಅಥವಾ ಗರಿಗಳಲ್ಲಿ ಸೈನಿಕ ಹುಳು ಅಥವಾ ಲದ್ದಿ ಹುಳುಗಳ ಬಾಧೆ ಕಂಡುಬAದಿದೆ. ಹೀಗಾಗಿ ಈ ಹುಳುಗಳ ನಿಯಂತ್ರಣಕ್ಕೆ ರೈತರು ಅಳವಡಿಸಿಕೊಳ್ಳಬೇಕಿರುವ ಹತೋಟಿ ಕ್ರಮಗಳ ಕುರಿತು ಜಿಲ್ಲಾ ಕೃಷಿ ಇಲಾಖೆ ಸಲಹೆ ನೀಡಿದ್ದೇವೆ.
ಹತೋಟಿ ಕ್ರಮಗಳು
ಜೂನ್ ಆರಂಭದಿAದ ಜುಲೈ 15ನೇ ತಾರೀಖಿನ ವರೆಗಿನ ಅವಧಿಯು ಮೆಕ್ಕೆ ಜೋಳ ಬಿತ್ತನೆಗೆ ಸೂಕ್ತ ಸಮಯವಾಗಿದೆ. ತಿಂಗಳ ಆರಂಭದಲ್ಲಿ ಬಿತ್ತನೆ ಮಾಡಿರವ ರೈತರು ಈಗಾಗಲೇ ತಮ್ಮ ಬೆಳೆಯ ಗರಿಗಳ ಮೇಲೆ ಇರುವ ಮೊಟ್ಟೆಗಳ ಗುಂಪು ಹಾಗೂ ಮೊದಲ ಹಂತದ ಮರಿಗಳಿರುವುದನ್ನು ಗುರುತಿಸಿ, ಅಂತಹ ಗರಿಗಳನ್ನು ಸಾಧ್ಯವಾದಷ್ಟು ಕಿತ್ತು ನಾಶಮಾಡಬೇಕು. ಹುಳುಗಳ ಸಂಖ್ಯೆ ಹೆಚ್ಚಾಗಿದ್ದಲ್ಲಿ, ಪ್ರತಿ ಎಕರೆಗೆ 30 ಪಕ್ಷಿ ಸೂಚಿಗಳನ್ನು ನೆಡಬಬೇಡಿ. ಇದರಿಂದ ಪಕ್ಷಿಗಳು ಜಮೀನಿಗೆ ಬಂದು ಹುಳುಗಳನ್ನು ತಿನ್ನುತ್ತವೆ. 30 ದಿನಗಳ ಬೆಳೆಯಲ್ಲಿ ಪ್ರತಿ ಎಕರೆಗೆ 15 ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು. ಹುಳುಗಳ ಮೊಟ್ಟೆಗಳ ನಾಶಕ್ಕೆ ಪರತಂತ್ರ ಜೀವಿಯಾದ ಟ್ರೈಕೊಗ್ರಾಮ ಪ್ರೀಟಿಯೋಸಮ್ ಅನ್ನು ಪ್ರತಿ ಎಕರೆಗೆ 50 ಸಾವಿರದಂತೆ (3 ಟ್ರೈ ಕೋಕಾರ್ಟ್ಗಳನ್ನು) ನಿರ್ಧರಿತ ಅಂತರದಲ್ಲಿ ಬೆಳೆಗಳಲ್ಲಿ ಬಿಡಬೇಕು. ಮೆಟರೈಜೀಂ ಅನಿಸೋಪ್ಲಿಯೆ (1*10/8 ಸಿಎಫ್ಯು/ಗ್ರಾಂ) 5 ಗ್ರಾಂ. ಅನ್ನು ಪ್ರತಿ ಲೀಟರ್ ನೀರಿಗೆ ಅಥವಾ ನ್ಯೂಮೋರಿಯಾ ರಿಲೈ (1*10/8 ಸಿಎಫ್ಯು/ಗ್ರಾಂ) ಅನ್ನು 3 ಗ್ರಾಂ. ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಗೆ ಸಿಂಪಡಿಸಬೇಕು.
ಲದ್ದಿ ಹುಳುವಿನಿಂದ ಶೇ.10 ರಷ್ಟು (ಪ್ರತಿ 100 ಗಿಡಗಳಿಗೆ 10 ಗಿಡಗಳು) ಹಾನಿಯಾಗಿದ್ದಲ್ಲಿ ಶೇ.5 ಬೇವಿನ ಕಷಾಯ (ಅಜಾಡಿರಕ್ಟಿನ್ 1500 ಪಿಪಿಎಂ) ವನ್ನು ಪ್ರತಿ ಲೀಟರ್ ನೀರಿಗೆ 5 ಮಿ.ಲೀ. ಬೇವಿನ ಕಶಾಯ ಬೆರೆಸಿ ಸಿಂಪಡಿಸಬೇಕು. ಲದ್ದಿ ಹುಳುವಿನಿಂದ ಶೇ.20ರಷ್ಟು ಹಾನಿಯಾಗಿದ್ದಲ್ಲಿ ಎಮಾಮೆಕ್ಟಿನ್ ಬೆಂಜೋಯೇಟ್ 5% ಎಸ್.ಜಿ ಅನ್ನು 0.3 ಮಿ.ಲೀ. ಅಥವಾ ಥೈಯೋಡಿಕಾರ್ಬ್ ಅನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡುವುದು ಸೂಕ್ತ. ಹಾಗೇ, ಪ್ರತಿ ಸಿಂಪರಣೆಯನ್ನು ಮುಂಜಾನೆ ಮತ್ತು ಸಾಯಂಕಾಲದ ಸಂದರ್ಭದಲ್ಲಿ ಕೈಗೊಳ್ಳುಬೇಕು.
ವಿಶೇಷ ಸೂಚನೆ :
ರೈತರು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಹೊಲಗಳಿಗೆ ಹೋಗಿ ಕೀಟನಾಶಕವು ನೇರವಾಗಿ ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು. ಕೀಟನಾಶಕ ಸಿಂಪರಣೆ ಮಾಡುವಾಗ ಕಡ್ಡಾಯವಾಗಿ ಸುರಕ್ಷತಾ ಕವಚಗಳನ್ನು ಬಳಸಬೇಕು. ಜೊತೆಗೆ, ಸಿಂಪರಣಾ ದ್ರಾವಣ ದೇಹದ ಮೇಲೆ ಬೀಳದಂತೆ ಹಾಗೂ ಉಸಿರಾಟದ ಮೂಲಕ ದೇಹ ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಮತ್ತು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share your comments