1. ಅಗ್ರಿಪಿಡಿಯಾ

ಇಲಿ ನಿಯಂತ್ರಣಕ್ಕೆ ಇಲ್ಲಿದೆ ದಾರಿ

Rat

ಬೆಳೆಗಳಿಗೆ ಇಲಿಕಾಟ ಎಲ್ಲಾ ಕಡೆ ಇದ್ದುದ್ದೆ. ಬಿತ್ತನೆಯಿಂದ ಕೊಯ್ಲಿನವರೆಗೆ, ಕೊಯ್ಲಿನಿಂದ ಮಾರುಕಟ್ಟೆಗೆ ಬೆಳೆ ಕೊಂಡೊಯ್ಯುವವರೆಗೆ ಇಲಿಕಾಟ ರೈತರಿಗೆ ತಪ್ಪಿದ್ದಲ್ಲ. ಒಮ್ಮೊಮ್ಮೆ ಅವು ಮಾಡುವ ನಷ್ಟ ಬಲು ದುಬಾರಿ. ಹೀಗಾಗಿ ಇಲಿ ರೈತರ ಆದಾಯಕ್ಕೆ ಕತ್ತರಿ ಹಾಕುತ್ತಿರುತ್ತದೆ. ಇಂತಹ ಇಲಿ ನಿಯಂತ್ರಣಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಇಲಿಗಳು ಪ್ರಪಂಚದ ಎಲ್ಲಾ  ಕಡೆಗಳಲ್ಲಿ ಇವೆ. ಮನೆ, ಹೊಲ, ಗದ್ದೆ, ತೋಟ, ಮೈದಾನ ಹೀಗೆ ಎಲ್ಲಾ ಕಡೆ  ವಾಸಿಸುತ್ತವೆ. ಇವುಗಳು ಪುಟ್ಟ ಜೀವಿಗಳಾಗಿದ್ದರೂ ಸಹ ರಾಷ್ಟ್ರದ ಆಹಾರ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುವುದರಿಂದ ಮನುಷ್ಯನಿಗೆ ಅನೇಕ ರೋಗಗಳನ್ನು ಉಂಟುಮಾಡುತ್ತವೆ. ಮುಖ್ಯವಾಗಿ ಆಮಶಂಕೆ, ಕಾಮಾಲೆ,  ರಿಕೆಟ್ಸಿಯಾ,  ಪ್ಲೇಗ್ ಅಂತೆಯೇ ಮರಮುಟ್ಟು ಪೆಟ್ಟಿಗೆ ಪೀಠೋಪಕರಣಗಳ ಉಡುಗೆ ತೊಡುಗೆಗಳನ್ನು ಕಡಿದು ನಷ್ಟ ಮಾಡುವುದರ ಜೊತೆಯಲ್ಲಿ ಮನೆಗಳಲ್ಲಿ ಬಿಲ ತೋಡಿ ಮನೆಯನ್ನು ಆರ್ದ್ರ ಗೊಳಿಸುತ್ತವೆ ಹಾಗೂ ಸಂಗ್ರಹ ಮಾಡಿದ ದವಸಧಾನ್ಯಗಳನ್ನು ಹಾಳುಮಾಡುತ್ತವೆ.

ಇಲಿಗಳು ಹೊಲ-ಗದ್ದೆ ತೋಟಗಳಲ್ಲಿನ ಬೆಳೆಗಳಿಗೆ ಹಾನಿ ಮಾಡಿ ಮಾನವನಿಗೆ ಅಪಾರ ನಷ್ಟವನ್ನುಂಟು ಮಾಡುತ್ತದೆ. ಬಿತ್ತನೆ ಕಾಲದಿಂದ ಪ್ರಾರಂಭವಾಗಿ ಸುಗ್ಗಿಯ ಕಾಲದ ವರೆಗೆ ಇಲಿಗಳ ಕಾಟ ತಪ್ಪಿದ್ದಲ್ಲ.  ಹೊಲಗದ್ದೆ, ತೋಟಗಳಲ್ಲಿ ಮಾತ್ರವಲ್ಲದೆ ಒಕ್ಕಣೆಯ ಸಮಯದಲ್ಲಿ ಹಾಗೂ  ಒಕ್ಕಣೆಯ ನಂತರ ಗೋದಾಮು ಮತ್ತು ಉಗ್ರಾಣಗಳ ಮೇಲೆ ದಾಳಿ ನಡೆಸುತ್ತವೆ. ಅಲ್ಲಿನ ಆಹಾರ ಪದಾರ್ಥಗಳನ್ನು ತಿಂದು ನಾಶಪಡಿಸುವುದು, ಸಂಪರ್ಕ ಬರುವ ಆಹಾರ ಪದಾರ್ಥಗಳನ್ನು ಮನುಷ್ಯನಿಗೆ ನಿರುಪಯೋಗಿಯಾಗುವಂತೆ ಮಾಡುತ್ತದೆ.  ಇಲಿಗಳ ಸಂತಾನೋತ್ಪತ್ತಿ ತ್ವರಿತಗತಿಯಲ್ಲಿ ನಡೆಯುತ್ತದೆ.  ಇವುಗಳ ಸಂಖ್ಯೆ ಹೆಚ್ಚುವುದು ಹಾವಳಿಗೆ ಮುಖ್ಯ ಕಾರಣ.  ಸಾಕಷ್ಟು ಆಹಾರ ,ವಾಸಕ್ಕೆ ಯೋಗ್ಯವಾದ ಸ್ಥಳ ಮತ್ತು ಅನುಕೂಲಕರವಾದ ವಾತಾವರಣವಿದ್ದಾಗ ಇಲಿಗಳ ಸಂಖ್ಯೆಯು ಅಧಿಕವಾಗುತ್ತದೆ ಹಾಗೂ ಸಂತಾನ ಅಭಿವೃದ್ಧಿಯೂ ವರ್ಷದ ಎಲ್ಲಾ ಕಾಲದಲ್ಲಿಯೂ ಆಗಬಹುದು.

ಇಲಿಗಳ ನಿರ್ಮೂಲನವು ಒಂದು ಜಟಿಲವಾದ ಪ್ರಶ್ನೆಯಾಗಿಯೇ ಉಳಿದಿದೆ. ಇಲಿಗಳ ಹಾವಳಿಯನ್ನು ತಡೆಗಟ್ಟಲು ಅವುಗಳನ್ನು ನಾಶ ಪಡಿಸಲು ಅನಾದಿಕಾಲದಿಂದಲೂ ಹಲವಾರು ಕ್ರಮಗಳನ್ನು ಅನುಸರಿಸಿಕೊಂಡು ಬಂದಿದ್ದೇವೆ, ಅವುಗಳನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಿದ್ದಾರೆ. ಇಲಿಗಳನ್ನು ದೂರಮಾಡುವುದು ಮತ್ತು ಇಲಿಗಳನ್ನು ನಾಶಮಾಡುವುದು,

 ಇಲಿಗಳನ್ನು ದೂರಮಾಡುವುದು

ಸಾಕು ಪ್ರಾಣಿ ಮತ್ತು ಸ್ವಾಭಾವಿಕ ಶತ್ರುಗಳ ಉಪಯೋಗಗಳನ್ನು ಮನೆಗಳಲ್ಲಿ ಸಾಕುವುದು ಪ್ರಾಚೀನ ಕಾಲದಿಂದಲೂ ಬೆಳೆದು ಬಂದ ಪದ್ಧತಿ. ನಾಯಿಯ ಪಾತ್ರ ಮನೆಗಾವಲು ಮತ್ತು ಬೇಟೆಯಾಗಿದ್ದುಬೆಕ್ಕಿನ ಪಾತ್ರವು ಕೇವಲ ಇಲಿಗಳ ಹತೋಟಿಗಾಗಿ ಇದೆ. ರೈತರು ಹೊಲದ ಅಲ್ಲಲ್ಲಿ ಕೋಲುಗಳನ್ನು ನೆಡುವುದರಿಂದ ರಾತ್ರಿಯ ಕಾಲದಲ್ಲಿ ಗೂಬೆಗಳು ಕುಳಿತು ಹೊಂಚುಹಾಕಿ ಬಿಲದಿಂದ ಹೊರಬಂದ ಇಲಿಗಳನ್ನು ಕೊಂದು ತಿನ್ನುತ್ತವೆ.

 ಆಹಾರ ವಸ್ತುಗಳನ್ನು ಎಲ್ಲ ಕಡೆಗಳಲ್ಲಿ ಇಲ್ಲಿಗೆ ಸಿಗದಂತೆ ಇಡುವುದು ಸಾಧ್ಯವಿಲ್ಲದಿದ್ದರೂ ಕೆಲವು ಸನ್ನಿವೇಶಗಳಲ್ಲಿ ಈ ಕೆಲಸವನ್ನು ಸುಲಭವಾಗಿ ಮಾಡಬಹುದುಇದರಿಂದ ಒಂದೆರಡು ಭೇಟಿಯ ನಂತರ ಆಹಾರ ಸಿಗದೇ ಇಲಿಗಳು ತಾವಾಗಿಯೇ ಆ ಸ್ಥಳದಿಂದ ದೂರ ಹೋಗುತ್ತವೆಕತ್ತಲೆ ಮತ್ತು ಕಸಕಡ್ಡಿ ತುಂಬಿದ ಹೊಲಸು ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಇಲಿಗಳು ಕಂಡುಬರುತ್ತವೆ, ಆದ್ದರಿಂದ ಮನೆ, ಉಗ್ರಣ, ಅಂಗಡಿ, ಮಳಿಗೆ, ಗೋದಾಮುಗಳ ನೈರ್ಮಲ್ಯಕ್ಕೆ ಒತ್ತುಕೊಡಬೇಕು.

ಧಾನ್ಯ ಸಂಗ್ರಾಹಕ ಕಟ್ಟಡ ಮತ್ತು ಗೋದಾಮು ಕಟ್ಟುವಾಗ ಎಲ್ಲ ಕೊಳವೆ ಮತ್ತು ಮರಗಳ ರಚನೆಯನ್ನು ಗೋಡೆಯ ಒಳಗಡೆಯೇ ಇರಿಸುವುದು ಉತ್ತಮ. ಗೋದಾಮುಗಳಿಗೆ ಶಾಶ್ವತ ಮೆಟ್ಟಿಲುಗಳನ್ನು ಕಟ್ಟಬಾರದು ಕಿಟಕಿ ಬಾಗಿಲು  ಸಂದಿಲ್ಲದೆ ಮುಚ್ಚಿಕೊಳ್ಳುವಂತಿರಬೇಕು . ಗಾಳಿ ಸಂಚಾರದ ಕಿಟಕಿಗಳಿಗೆ ಲೋಹದ ಬಲೆಯನ್ನು ಹೊಡೆಯಬೇಕು. ಬಾಗಿಲಿನ ಕೆಳಗೆ ಇಲಿಗಳು ಕೊರೆಯುವುದನ್ನು ತಡೆಯಲು ತಗಡು ಹೊಡೆಯಬೇಕು. ಧಾನ್ಯ ಶೇಖರಿಸುವ ಮೊದಲು ಕಟ್ಟಡದ ಒಳಭಾಗವನ್ನು ಚೆನ್ನಾಗಿ ಪರಿಶೀಲಿಸಿ ನಂತರ ಶೇಖರಿಸಬೇಕು.

ಮ್ಯಾಲಥಾಯನ್ ಕೀಟನಾಶಕವನ್ನು ಪ್ರತಿ ಚದರ ಅಡಿಗೆ 31 ಮಿ.ಗ್ರಾಂ ನಂತೆ ( ಒಂದು ಗ್ರಾಂ  ಪ್ರತಿ 30 ಚದರ ಅಡಿಗೆ) ಸಿಂಪಡಿಸುವುದರಿಂದ 20 ದಿನಗಳವರೆಗೆ ಇಲಿಗಳನ್ನು ವೀಕರ್ಷಿಸಬಹುದು.

ಇಲಿಗಳನ್ನು ನಾಶಮಾಡುವುದು

ಇಲಿಗಳನ್ನು ಕತ್ತಿ, ದೊಣ್ಣೆಗಳಿಂದ  ಮನೆ ಮತ್ತು ವಠಾರದಲ್ಲಿ ಕೊಲ್ಲುವುದು ಅಷ್ಟೊಂದು ಪರಾಕ್ರಮದ ಕೆಲಸವೆಂದು ಹೇಳಲು ಅಸಾಧ್ಯವಾದರೂ, ಅತೀ ಸಾಹಸದ ಕೆಲಸವೆಂದು ಹೇಳಬಹುದು.  

ಹೊಲದಲ್ಲಿ ಬೆಳೆ ಕಟಾವಾದ ಬಳಿಕ ಹೊಲದ ಅಂಚಿನಲ್ಲಿರುವ ಬಿಲಗಳನ್ನು ಅಗೆದು ತೆಗೆದು ಇಲಿಗಳನ್ನು ಕೊಲ್ಲುವುದು ಉತ್ತಮ.

 ಜಗತ್ತಿನ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಜನಾಂಗಕ್ಕೆ ಸೇರಿದ ಜನರು ಇಲಿಗಳನ್ನು ಹಿಡಿದು ಆಹಾರಕ್ಕಾಗಿ ಬಳಸುವುದು ಇದೆ.

 ಆಕರ್ಷಕ ಆಹಾರ :- ಇಲಿಗಳ ಆಕರ್ಷಣೆ ಮಾಡಲು ಪುಡಿಮಾಡಿದ ಅಕ್ಕಿ, ಗೋಧಿ ,ಜೋಳ, ಮುಸುಕಿನ ಜೋಳ, ಸಜ್ಜೆ, ಬಾಳೆಹಣ್ಣು, ಸೀಬೆಹಣ್ಣು, ಕಲ್ಲಂಗಡಿ, ಸುಟ್ಟ ಕೊಬ್ಬರಿ, ಒಣಮೀನು ಮೊದಲಾದ ಪದಾರ್ಥಗಳನ್ನು ಉಪಯೋಗಿಸಬಹುದು. ಕಾಳು ಮತ್ತು ಧಾನ್ಯಗಳನ್ನು ಹುರಿಯುವುದರಿಂದ ಇಲಿಗಳು ಹೆಚ್ಚು ಆಕರ್ಷಕವಾಗುತ್ತವೆ

ಗೋಧಿ, ಮುಸುಕಿನ ಜೋಳ, ತೊಗರಿ, ಸಜ್ಜೆ ಇವುಗಳ ಕಾಳು ಅಥವಾ ಹಿಟ್ಟು(94-95 ಪಾಲು)

ಸಾಸಿವೆ ಅಥವಾ ನೆಲಗಡಲೆ ಎಣ್ಣೆ (2 ಪಾಲು)

ಬೆಲ್ಲ ಅಥವಾ ಮೊಲಾಸಸ್ ಮುಂತಾದ ಸಿಹಿ ಪದಾರ್ಥ (3 ಪಾಲು)

ಝಿಂಕ್ ಫಾಸ್ಫಾಯಿಡ್ (3 ಪಾಲು)

ತೊಗರಿಬೇಳೆ (4 ಕಿ ಗ್ರಾಂ)

ನೆಲಗಡಲೆ ಎಣ್ಣೆ (150 ಮಿ ಲೀ)

ಝಿಂಕ್ ಫಾಸ್ಫಾಯಿಡ್(100 ಗ್ರಾಂ)

ಮುಸುಕಿನ ಜೋಳ, ತೊಗರಿ, ಪುಡಿಮಾಡಿದ ಅಕ್ಕಿ (92 ಪಾಲು)

ವನಸ್ಪತಿ ಎಣ್ಣೆ(3 ಪಾಲು)

ವಾರ್ಫಾರಿನ್ (5 ಪಾಲು)

ತೊಗರಿಬೇಳೆ (2 ಕಿ ಗ್ರಾಂ)

ನೆಲಗಡಲೆ ಎಣ್ಣೆ (200 ಮಿ ಲೀ)

ವಾರ್ಫಾರಿನ್ (100 ಗ್ರಾಂ)

ವಿಷ ಪ್ರಯೋಗ:

 ಇಲಿಗಳಿಗೆ ವಿಷಕಾರಿಯಾಗಿರುವ ವಸ್ತುಗಳನ್ನು ಇಲ್ಲಿ ನಾಶಕ ಎಂದು ಕರೆಯುತ್ತಾರೆ. ಇಲಿನಾಶಕಗಳಲ್ಲಿ ಅತಿ ಹೆಚ್ಚು ಬಳಕೆ ಮಾಡುವ ವಸ್ತು ಝಿಂಕ್ ಫಾಸ್ಫಾಯಿಡ್, ಇದರಿಂದ ಹೊರಡುವ ಬೆಳ್ಳುಳ್ಳಿ ಅಂತಹ ವಾಸನೆ ಮನುಷ್ಯನಿಗೆ ಮತ್ತು ಸಾಕುಪ್ರಾಣಿಗಳಿಗೆ ವಿಕರ್ಷಕವಾಗಿದ್ದರು  ಇಲಿಗಳಿಗೆ ಅತಿ ಆಕರ್ಷಕವಾಗಿದೆ. ಮಳೆ ಮತ್ತು ತೇವ ತುಂಬಿದ ವಾತಾವರಣಕ್ಕಿಂತ ಒಣಹವೆ ಇರುವ ದಿವಸಗಳಲ್ಲಿ ಉಪಯೋಗಿಸುವುದು ಉತ್ತಮ.  ನೂರು ಪಾಲು ಆಹಾರಕ್ಕೆ 2-3 ಝಿಂಕ್ ಫಾಸ್ಫಾಯಿಡ್ ಉಪಯೋಗಿಸಬೇಕು. ಅದರಂತೆಯೇ ಅಸ್ತಿಗತ ವಿಷ ಅಂದರೆ ರಕ್ತ ಹೆಪ್ಪುಗಟ್ಟುವುದನ್ನು ನಿಲ್ಲಿಸಿ ಸಾವನ್ನು ಉಂಟುಮಾಡುವ ಇಲಿನಾಶಕಗಳು. “ವಾರ್ಫಾರಿನ್ಈ ಗುಂಪಿಗೆ ಸೇರಿದ ಒಂದು ರಾಸಾಯನಿಕ. ರುಚಿ ಮತ್ತು ವಾಸನೆ ಇಲ್ಲದ ಈ ಪದಾರ್ಥಗಳನ್ನು ಆಹಾರದೊಡನೆ ಸೇರಿಸಿದಾಗ ಇಲಿಗಳು ಆಹಾರವನ್ನು ಸಂದೇಹವಿಲ್ಲದೆ ಸ್ವೀಕರಿಸುತ್ತವೆ.  ಐದರಿಂದ ಆರು ದಿನಗಳವರೆಗೆ ಇಲಿಗಳು ಆಹಾರವನ್ನು ಸ್ವೀಕರಿಸುತ್ತಾ ಹೋಗುತ್ತವೆ. ಸಾಕಷ್ಟು ವಿಷವು ರಕ್ತದಲ್ಲಿ ಸೇರಿದಾಗ ರಕ್ತನಾಳಗಳು ಒಡೆದು ರಕ್ತಸ್ರಾವವಾಗಿ ಸಾಯುತ್ತವೆ ಆಹಾರದೊಂದಿಗೆ 0.025 ಪ್ರಮಾಣದಲ್ಲಿ ಇವುಗಳನ್ನು ಸೇರಿಸಬಹುದು.

ಕಾಳುಗಳನ್ನು ಆಕರ್ಷಕ ಆಹಾರವಾಗಿ ಉಪಯೋಗಿಸುವಾಗ ಎರಡು ತಾಸು ಅವುಗಳನ್ನು ನೆನೆ ಹಾಕಬೇಕು. ನಂತರ ಕಾಳುಗಳನ್ನು ನೀರಿನಿಂದ ತೆಗೆದು ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೆಲಗಡಲೆ ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಬೇಕು. ಆಯ್ಕೆಮಾಡಿದ ಆಕರ್ಷಕ ಆಹಾರಕ್ಕೆ ತಕ್ಕಷ್ಟು ವಿಷಪದಾರ್ಥ ಸೇರಿಸಿ ಒಂದು ಮರದ ಕೋಲಿನ ಸಹಾಯದಿಂದ ಮಿಶ್ರಣ ಮಾಡಬೇಕು. ಆಹಾರ ಪದಾರ್ಥ ಹಿಟ್ಟಿನ ರೂಪದಲ್ಲಿದ್ದರೆ, ಅದಕ್ಕೆ  ತಕ್ಕಷ್ಟು ವಿಷಪದಾರ್ಥ ಹಾಕಿ ನಂತರ ನೀರು ಬೆರೆಸಿ ಮಿಶ್ರಣದ ಬಿಲ್ಲೆಗಳಾಗಿ ಮಾಡಬೇಕು.

ಸ್ಥಳದ ಆಯ್ಕೆ:- ಆಕರ್ಷಕ ಆಹಾರದ ಆಯ್ಕೆಗಿಂತಲೂ ಆಹಾರವನ್ನು ನೀಡುವ ಸ್ಥಳದ ಆಯ್ಕೆಯು ಮತ್ತು ಆಹಾರವಿಡುವ ಕ್ರಮವು ಪ್ರಮುಖವಾದದ್ದು. ಇಲಿಗಳು ಆಕರ್ಷಕ ಆಹಾರವನ್ನು ತಿಂದುವೋ ಅದೇ ಕಡೆಯಲ್ಲಿ ಒಂದೆರಡು ಬಾರಿ ವಿಷ ರಹಿತ ಆಹಾರವನ್ನು ಉಣಿಸಬೇಕು, ತದನಂತರ ವಿಷ ಮಿಶ್ರಿತ ಆಹಾರವನ್ನು ಇಲಿಗಳನ್ನು ಸಾಯಿಸಬೇಕು.

ಬಿಲಗಳಲ್ಲಿರುವ ಇಲಿಗಳನ್ನು ನಾಶಮಾಡಲು ಒಣಗಿದ ಎಲೆ, ಬೆರಣಿ, ಒಣಹುಲ್ಲು ಮೊದಲಾದವುಗಳನ್ನು ಮೆಣಸಿನ ಕಾಯಿಯೊಂದಿಗೆ ಬಿಲದೊಳಗೆ ಸೇರಿಸಿ ಬೆಂಕಿಹಾಕಿ ಹೊಗೆಯೆಬ್ಬಿಸುವುದು ಸಾಮಾನ್ಯ ಪದ್ಧತಿಯಾಗಿದೆ.

ಅಲ್ಯೂಮಿನಿಯಂ ಫಾಸ್ಫಾಯಿಡ್ ಅಥವಾ ಸೆಲೆಫೋನ್ ಬಿಲ್ಲೆಗಳನ್ನು  ಬಿಲದೊಳಗೆ ಹಾಕಿ, ಬಿಲದ ದ್ವಾರಗಳನ್ನು ಕಲಸಿದ ಮಣ್ಣಿನಿಂದ ಕೂಡಲೇ ಮುಚ್ಚಬೇಕು. 3 ಗ್ರಾಂ ತೂಕದ ಒಂದು ಬಿಲ್ಲೆಯ ಅರ್ಧಭಾಗವನ್ನು ಒಂದು ಬಿಲಕ್ಕೆ ಹಾಕಬೇಕು.

ಇಲಿಗಳನ್ನು ಜೀವಂತವಾಗಿ ಹಿಡಿಯಲು ಅಥವಾ ಕೊಲ್ಲಲು ಹಲವಾರು ಸಾಧನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅವುಗಳನ್ನು ಬಳಸಿ ಇಲಿಗಳ ಹತೋಟಿ ಮಾಡಬಹುದು

ದೇಶದ ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಕಾರ್ಯದಲ್ಲಿ ಇಲಿಗಳ ಹತೋಟಿಗೆ  ಪ್ರಾಮುಖ್ಯ ಸ್ಥಾನ ಕೊಡಬೇಕಾಗಿದೆ. ಇಲಿಗಳ ಹತೋಟಿಯ ಬಗ್ಗೆ ಕೈಗೊಳ್ಳಬಹುದಾದ ಹಲವಾರು ಕ್ರಮಗಳನ್ನು ಈ ಮೊದಲೇ ವಿವರಿಸಿದೆ. ಸಂದರ್ಭಕ್ಕನುಸಾರವಾಗಿ ಕ್ರಮಗಳನ್ನು ಅನುಸರಿಸಿದರೆ ಇಲಿಗಳ ನಿಯಂತ್ರಣ ಸಾಧ್ಯ ಎಂದು ಹೇಳುತ್ತಾ ನನ್ನ ಅಂಕಣಕ್ಕೆ ಪೂರ್ಣವಿರಾಮ, ವಿಚಾರಗಳಿಗಲ್ಲ.

ಲೇಖನ: 1. ಡಾ. ಸುಶೀಲ ನಾಡಗೌಡ, ಸಹ ಪ್ರಾಧ್ಯಾಪಕರು, ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು-584104

  1. ರಾಖೇಶ್.ಎಸ್, ಎಂ.ಎಸ್ಸಿ(ಕೃಷಿ), ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು-584104
Published On: 25 December 2020, 09:08 AM English Summary: How to control rat problem

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.