ಟೊಮ್ಯಾಟೊ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವ ವಾಣಿಜ್ಯ ತರಕಾರಿಯಾಗಿದ್ದು. ಇತ್ತೀಚಿಗೆ ಟೊಮ್ಯಾಟೊ ಬೆಳೆಗೆ ವಿದೇಶಿ ಆಕ್ರಮಣಕಾರಿ ಪಿನ್‌ವರ್ಮ ಕೀಟ ಹೆಚ್ಚು ಮಾರಕವಾಗಿ ರೈತರು ನಷ್ಟ ಅನುಭವಿಸುವಂತೆ ಮಾಡುತ್ತಿದೆ. ಇದರ ಹಾವಳಿ ಎಲ್ಲಾ ಹಂತಗಳಲ್ಲಿ ಟೊಮ್ಯಾಟೊ ಬೆಳೆಯ ಎಲೆಗಳು, ಹಣ್ಣುಗಳು ಮತ್ತು ಕಾಂಡದ ಮೇಲೆಯು ದಾಳಿ ಮಾಡುವ ಶಕ್ತಿ ಹೊಂದಿರುವುದರಿಂದ ಟೊಮ್ಯಾಟೊ ಬೆಳೆಯ ಬೆಳೆವಣಿಗೆ ಮತ್ತು ಇಳುವರಿಯಲ್ಲಿ ಆಧಿಕ ಪ್ರಮಾಣದಲ್ಲಿ ಹಾನಿ ಮಾಡುವ ಸಂಭವವಿರುತ್ತದೆ. ಇದರಿಂದ ರೈತರಿಗೆ ಪಿನ್‌ವರ್ಮ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ಅವರಿಗೆ ಇದು ಒಂದು ಗಂಭೀರ ಕೀಟವಾಗಿದೆ. ಈ ಕೀಟವನ್ನು ನಿಯಂತ್ರಿಸಲು ಕೇವಲ ರಾಸಾಯನಿಕ ಕೀಟನಾಶಕಗಳನ್ನು ಬಳಸುವದರಿಂದ ನಿಯಂತ್ರಿಸಲು ಕಷ್ಟಕರ, ಅದ್ದರಿಂದ ಸಮಗ್ರ ಕೀಟ ನಿರ್ವಹಣೆ ಪದ್ದತಿಗಳನ್ನು ರೈತರು ಅನುಸರಿಸಿದರೆ ಮಾತ್ರ ಈ ಆಕ್ರಮಣಕಾರಿ ಕೀಟವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದಾಗಿದೆ.
ಕೀಟದ ಪರಿಚಯ:
ಟೊಮ್ಯಾಟೊ ಸುರಳಿಪೂಚಿಯ ವೈಜ್ಞಾನಿವಾಗಿ ಟ್ಯಟಾ ಅಬ್ಸಲೂಟ ಎಂದು ಗುರುತಿಸಲಾಗಿದೆ. ಈ ಕೀಟವು ಲೆಪಿಡಾಪ್ಟೆರಾ ಗಣಕ್ಕೆ ಸೇರಿದ ಗೆಲಿಚಿಡೆ ಎಂಬ ಕುಂಟುಂಬಕ್ಕೆ ಸೇರಿರುತ್ತದೆ. ಈ ಕೀಟವು ವಿದೇಶಿ ಹಾಗು ಆಕ್ರಮಣಕಾರಿ ಕೀಟವಾಗಿದ್ದು, ಪ್ರಥಮವಾಗಿ ದಕ್ಷಿಣ ಅಮೇರಿಕಾದಲ್ಲಿ ಕಂಡು ಬಂದಿರುತ್ತದೆ. ನಂತರ ಅಕ್ಟೋಬರ್ 2014 ರಂದು ಈ ಕೀಟವು ನಮ್ಮ ದೇಶದಲ್ಲಿ ಮಹರಾಷ್ಟç ರಾಜ್ಯದ ಪುಣೆ, ಆಹಮದ್ ನಗರ, ಧೂಲೆ, ಜಲ್‌ಗಾಂವ್, ನಾಶಿಕ್, ಸತಾರದಲ್ಲಿ ಹಾಗು 2015 ರಲ್ಲಿ ಕರ್ನಾಟಕದ ಬೆಂಗಳೂರು, ಕೊಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಂಡು ಬಂದು ಪ್ರತಿ ಶತ 87 ರಷ್ಟ ಟೊಮ್ಯಾಟೊ ಹೊಲಗಳು ನಾಶವಾಗಿವೆ ಎಂದು ತಿಳಿದು ಬಂದಿದೆ. ಟೊಮ್ಯಾಟೊ ಹೊರತುಪಡಿಸಿ ಬದನೆ, ಆಲೂಗಡ್ಡೆ, ಅವರೆ, ಮೆಣಸು, ತಂಬಾಕು ಹಾಗು ದತ್ತೂರ ಎಂಬ ಆಶ್ರಯ ಬೆಳೆಗಳಲ್ಲಿ ಬದುಕುತ್ತದೆ. ಈ ಕೀಟವನ್ನು ಟೊಮ್ಯಾಟೊ ಪಿನ್‌ವರ್ಮ, ಟೊಮ್ಯಾಟೊ ಹಣ್ಣು ಕೊರಕ, ಟೊಮ್ಯಾಟೊ ರಂಗೋಲಿ ಹುಳು ಹಾಗು ಸೌತ್ ಆಮೇರಿಕಾ ಟೊಮ್ಯಾಟೊ ಸುರಳಿಪೂಚಿ ಎಂದು ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ.
ಆಕಾರ:
ತತ್ತಿಗಳು 0.35 ಮೀ.ಮೀ ಉದ್ದವಿದ್ದು, ಕೆನೆ ಮಿಶ್ರಿತ ಹಳದಿ ಬಣ್ಣದಿಂದ ಕೂಡಿದ್ದು ಮತ್ತು ಅಂಡಾಕಾರದಲ್ಲಿರುತ್ತವೆ. ಪ್ರಾರಂಭಿಕ ಹಂತದ ಮರಿಹುಳುಗಳು ಕಂದು ಬಣ್ಣದಾಗಿದ್ದು ತಲೆಯ ಭಾಗವು ಕಪ್ಪಾಗಿರುತ್ತದೆ. ಹುಳುಗಳು ಎರಡನೆ ಹಂತದಲ್ಲಿ ಹಸಿರು ಬಣ್ಣದಿಂದ ಕೂಡಿದ್ದು ನಾಲ್ಕನೆ ಹಂತ ತಲುಪುವದರಲ್ಲಿ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಮೂದಲನೆ ಹಂತದ ಹುಳುವಿನ ಉದ್ದ 0.9 ಮೀ.ಮೀವಿದ್ದು ನಾಲ್ಕನೆ ಹಂತದಲ್ಲಿ 7.5 ಮೀ.ಮೀ ರವರೆಗೆ ಬೆಳೆಯುತ್ತದೆ. ಹುಳುವಿನ ಕೋಶದ ಉದ್ದ 6 ಮೀ.ಮೀ ಮತ್ತು ಕಂದು ಬಣ್ಣ ಹೊಂದಿರುತ್ತವೆ. ಪತಂಗಳು ಬಹಳ ಚಿಕ್ಕದಾಗಿದ್ದು, ತಿಳಿ ಕಂದು ಬಣ್ಣ ಹೊಂದಿದ್ದು ಮುಂಭಾಗದ ರೆಕ್ಕೆಗಳ ಮೇಲೆ ಕಪ್ಪು ಚುಕ್ಕೆಗಳು ಕಂಡು ಬರುತ್ತವೆ. ಇವು ಸುಮಾರು 5-7 ಮೀ.ಮೀ ಉದ್ದವಿರುತ್ತದೆ.
ಜೀವನಚಕ್ರ
ಹೆಣ್ಣು ಪ್ರೌಢ ಕೀಟವು ಸುಮಾರು 250 ತತ್ತಿಗಳನ್ನು ಗಿಡದ ಎಲೆ, ಮೂಗ್ಗು, ಮತ್ತು ಕಾಯಿಗಳ ಮೇಲೆ ಬಿಡಿ ಬಿಡಿಯಾಗಿ ಇಡುತ್ತದೆ. 4-6 ದಿನದಲ್ಲಿ ಮರಿಯಾಗಿ, ಮರಿಗಳಾವಸ್ಥೆಯಲ್ಲಿ 10-15 ದಿನ ಕಳೆಯುತ್ತವೆ. ಕೋಶವ್ಯವಸ್ಥೆಯು ಭೂಮಿಯಲ್ಲಿ ಅಥಾವ ಎಲೆಯಲ್ಲಿ 5 ರಿಂದ 6 ದಿನ ಕಳೆಯುತ್ತವೆ. ಈ ಕೀಟದ ವಿಶೇಷತೆ ಎಂದರೆ ಅನುಕೂಲರ ಪರಿಸರದಲ್ಲಿ ಇದು ಸೂಪ್ತಾವಸ್ಥೆಗೆ ಹೋಗದೆ ವರ್ಷದಲ್ಲಿ 10-12 ಸಂತತಿಗಳನ್ನು ಮುಗಿಸುತ್ತದೆ. ಈ ಕೀಟಗಳು ರಾತ್ರಿ ವೇಳೆಯಲ್ಲಿ ಸಕ್ರಿಯವಾಗಿದ್ದು, ಹಗಲಿನ ವೇಳೆಯಲ್ಲಿ ಎಲೆಗಳ ನಡುವೆ ಅಡಗಿಕೊಳ್ಳುತ್ತವೆ. ಇವುಗಳ ಸಂಪೂರ್ಣ ಜೀವನ ಚಕ್ರವು 30 ರಿಂದ 40 ದಿನಗಳವರೆಗೆ ಇರುತ್ತದೆ.
ಹಾನಿಯ ಲಕ್ಷಣಗಳು
ಸಣ್ಣ ಮರಿಗಳು ಎಲೆಯ ಮೇಲ್ಪದರುಗಳ ಮುಖಾಂತರ ಸೇರಿ ಎಲೆಗಳ ಮೇಲೆ ಸಣ್ಣ ಸಣ್ಣ ಸುಟ್ಟ ಬೊಬ್ಬೊಗಳು ಗೋಚರಿಸುತ್ತವೆ ಮತ್ತು ಅವುಗಳು ಪತ್ರ ಹರಿತ್ತನ್ನು ತಿನ್ನುವುದರಿಂದ ಬಿಳಿ ಸರ್ಪ ಛಾಯೆಯಂತಹ ಬಾಧೆ ಉಂಟಾಗುತ್ತದೆ.ಇದರಿಂದ ಎಲೆಗಳು ಸುಟ್ಟಂತ್ತಾಗಿ ಉದರಲಾರಂಬಿಸುತ್ತವೆ. ಈ ರೀತಿಯ ಬಾಧೆಯು ಕಾಯಿಗಳು ಬಿಡುವವರೆಗೊ ಇರುತ್ತವೆ. ತದನಂತರ ಕೀಟವು ಕಾಯಿ ಮತ್ತು ಹಣ್ಣುಗಳು ಮೇಲೆ ಸಣ್ಣ ರಂಧ್ರಗಳನ್ನುಂಟು (Pin hole like) ಮಾಡಿ, ಒಳ ಪದಾರ್ಥವನ್ನು ತಿನ್ನಲಾರಂಭಿಸುತ್ತದೆ. ಇದರಿಂದ ಹಣ್ಣುಗಳ ಗುಣಮಟ್ಟ ಕ್ಷೀಣಿಸಿ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಕುಂಠಿತಗೂಳಿಸುತ್ತದೆ. ಈ ಕೀಟದ ಬಾಧೆಗೆ ತುತ್ತಾದ ಕಾಯಿ ಮತ್ತು ಹಣ್ಣುಗಳು ಕೊಳೆಯಲು ಆರಂಭಿಸುತ್ತವೆ. ಇದರಿಂದಾಗಿ ಕಾಯಿ ಮತ್ತು ಹಣ್ಣುಗಳು ಉದುರಿ ಸಂಪೂರ್ಣ ಇಳುವರಿ ಕಡಿಮೆಯಾಗುತ್ತದೆ.
ಸಮಗ್ರ ಹತೋಟಿ ಕ್ರಮಗಳು
1) ಬೇಸಿಗೆಯಲ್ಲಿ ಮಾಗಿ ಉಳುಮೆ ತಪ್ಪದೆ ಮಾಡುವುದರಿಂದ ಕೀಟದ ಕೋಶ ನಾಶಪಡಿಸಿದಂತಾಗುತ್ತದೆ.
2) ಬೆಳೆ ಪರಿವರ್ತನೆ ಮಾಡುವುದು, ಸಸಿ ನಾಟಿ ಮಾಡುವ ಜಾಗದ ಸುತ್ತ ಕಳೆ ಮುಕ್ತವಾಗಿಡ ಬೇಕು ಹಾಗು ಸ್ವಚ್ಚತೆ ಕಾಪಾಡಿಕೋಳ್ಳುವುದು.
3) ಟೊಮ್ಯಾಟೊ ಬೆಳೆಯ ಸುತ್ತಮುತ್ತ ಇತರೆ ಆಶ್ರಯ ಬೆಳೆಗಳಾದ ಆಲೂಗಡ್ಡೆ, ಅವರೆ, ಮೆಣಸು, ತಂಬಾಕು ಹಾಗು ದತ್ತೂರ ಬೆಳೆಗಳನ್ನು ಬೆಳೆಯಬಾರದು.
4) ಕೀಟ ಬಾಧೆಗೆ ಒಳಗಾದ ಕಾಯಿ ಅಥವಾ ಹಣ್ಣುಗಳನ್ನು ಸಂಗ್ರಹಿಸಿ ಮಣ್ಣಿನಲ್ಲಿ ಮುಚ್ಚಿ ನಾಶಪಡಿಸಬೇಕು.
5) ಬೆಳೆ ಕಾಲಗೈ ಮಾಡುವುದು (ಇತರೆ ಸೊಲಾನೆಸಿ ಜಾತಿಗೆ ಸೇರದ ತರಕಾರಿ ಬೆಳೆಗಳನ್ನು ಬೆಳೆಯುವುದು)
6) ಕೀಟ ಬಾಧೆಗೆ ಒಳಗಾಗದ ಸಸಿಗಳನ್ನು ಆಯ್ಕೆ ಮಾಡಿಕೊಳ್ಳುವುದು.
7) ಟೊಮ್ಯಾಟೊ ಬೆಳೆಗಳನ್ನು ನಾಟಿ ಮಾಡಿದ 15 ದಿನಗಳ ನಂತರ ಮೋಹಕ ಬಲೆಗಳನ್ನು ಪ್ರತಿ ಹೆಕ್ಟರ್‌ಗೆ 5 ರಂತೆ ಉಪಯೋಗಿಸುವುದರಿಂದ ಕೀಟದ ಅರ್ಥಿಕ ಮಟ್ಟವನ್ನು ತಿಳಿಯಬಹುದು.
8) ಪ್ರೌಢ ಪತಂಗಗಳನ್ನು ಬೆಳಕಿಗೆ ಆಕರ್ಷಣೆಗೊಳ್ಳುವುದರಿಂದ ಬೆಳೆಯ ಒಂದು ಅಡಿ ಎತ್ತರದಲ್ಲಿ 15-20 ವ್ಯಾಟ್ ಸಾಮರ್ಥ್ಯದ ಬಲ್ಬನ್ನು ಅಳವಡಿಸಿ ಅದರ ಕೆಳಗಡೆ ಬಕೆಟ್ ಅಥಾವ ಪ್ಲಾಸ್ಟಿಕ್ ಬುಟ್ಟಿಯ ಅರ್ಥ ಮಟ್ಟದವರೆಗೆ ನೀರನ್ನು ಇಡುವುದರಿಂದ ಬೆಳಕಿಗೆ ಅಕರ್ಷಿತವದ ಪತಂಗಗಳು ನೀರಿನಲ್ಲಿ ಬಿದ್ದು ಸಾಯುವುದರಿಂದ ಮುಂದಿನ ಸಂತತಿಯನ್ನು ಕಡಿಮೆ ಮಾಡಬಹುದಾಗಿದೆ.
9) ಸಸಿಮಡಿಯಲ್ಲಿ ಟೊಮ್ಯಾಟೊ ಸಸಿಗಳನ್ನು ಸಂರಕ್ಷಿಸಲು ಶೇ 5 ರ ಬೇವಿನ ಕಷಾಯ ಅಥಾವ ಮಾರುಕಟ್ಟೆಯಲ್ಲಿ ಬೇವಿನ ಮೂಲದ ಕೀಟನಾಶಕಗಳನ್ನು 3 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
10) ರಾಸಾಯನಿಕ ಕೀಟನಾಶಕಗಳಾದ 0.5 ಮಿ.ಲೀ ಇಂಡಾಕ್ಸಿಕಾರ್ಬ 14.5 ಎಸ್.ಸಿ ಅಥಾವ 0.15 ಮಿ.ಲೀ ಕ್ಲೋರಾಂಥ್ರಿನೀಪ್ರೋಲ್ 18.5 ಎಸ್.ಸಿ ಅಥಾವ 0.75 ಮಿ.ಲೀ ನವಲೂರನ್ 10 ಇ.ಸಿ ಅಥಾವ 0.3 ಗ್ರಾಂ ಇಮಾಮೆಕ್ಟಿನ್ ಬೆಂಜೊಯೆಟ್‌ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
ಲೇಖನ: ಗುರುಪ್ರಸಾದ. ಹೆಚ್., ಅಮರೇಶ ವೈ.ಎಸ್.,ಸತೀಶಕುಮಾರ ಕಾಳೆ., ಚಿಕ್ಕೆಗೌಡರಕೊಟ್ರೆಶ ಮತ್ತು ಉಮೇಶಭರಿಕರ, ಐ.ಸಿ.ಎ.ಆರ್ - ಕೃಷಿ ವಿಜ್ಞಾನಕೇಂದ್ರ, ಯಾದಗಿರ (ಕವಡಿಮಟ್ಟಿ).
Share your comments