ರಾಜ್ಯದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಒಂದೆಡೆ ಬೆಳೆಗಳು ಕೊಚ್ಚಿಕೊಂಡು ಹೋದರೆ ಇನ್ನೊಂದೆಡೆ ಉಳಿದ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗುತ್ತಿವೆ. ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಮೆಕ್ಕೆಜೋಳ, ಈರುಳ್ಳಿ, ತೊಗರಿ ಸೇರಿದಂತೆ ಇತರ ಬೆಳೆಗಳು ಹಲವಾರು ರೋಗಗಳಿಗೆ ತುತ್ತಾಗುತ್ತಿವೆ
ಮಳೆಯ ಪ್ರವಾಹದಿಂದಾಗಿ ಬೆಳೆ ಕೊಚ್ಚಿಕೊಂಡು ಹೋಗಿ ಚಿಂತೆಯಲ್ಲಿದ್ದ ರೈತರಿಗೆ ಇತ್ತೀಚೆಗೆ ಬೆಳೆಗಳಿಗೆ ತಗಲುತ್ತಿರುವ ರೋಗಗಳಿಂದ ಇನ್ನಷ್ಟು ಆತಂಕ ಸೃಷ್ಟಿಸಿದೆ. ಇದ್ದ ಬೆಳೆಯಾದರೂ ಹೆಚ್ಚು ಇಳುವರಿ ಕೊಡಲಿ ಎಂದು ಆಶಾಭಾವನೆ ಇಟ್ಟುಕೊಂಡ ತೊಗರಿ ಬೆಳೆದ ರೈತರಿಗೆ ಇನ್ನಷ್ಟು ಸಂಕಷ್ಟದಲ್ಲಿ ತಳ್ಳಿದೆ.
ಚುಕ್ಕೆ ಕಾಯಿ ಕೊರಕ, ಕಾಯಿಕೊರೆಯುವ ಕೀಡೆ, ಹೆಲಿಕೋವರ್ಪಾ ಆರ್ಮಿಜೆರ, ಕಾಯಿ ನೊಣ, ಮತ್ತು ರಸ ಹೀರುವ ಕೀಟಗಳ ಬಾಧೆ ಹತೋಟಿಗೆ ಸೂಕ್ತ ಕ್ರಮ ಅನುಸರಿಸಬೇಕು. ರೈತರು ಸ್ವಲ್ಪ ಎಚ್ಚರ ತಪ್ಪಿದರೆ ತೊಗರಿ ಬೆಳೆಯನ್ನು ಈ ಕೀಟಗಳು ತಿಂದು ಹಾಳು ಮಾಡುತ್ತವೆ. ಈ ಕೀಟಗಳಿಂದ ತಮ್ಮ ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ. ರೈತರು ಈ ಕೀಟಗಳ ಹತೋಟಿ ಕ್ರಮಗಳನ್ನು ಸರಿಯಾದ ಸಮಯದಲ್ಲಿ ಕೈಗೊಂಡರೆ ತಮ್ಮ ಬೆಳೆಗಳನ್ನು ರಕ್ಷಿಸಬಹುದು ಎಂದು ಕೃಷಿ ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ಹಸಿರು/ಕಾಯಿ ಕೊರಕ ಕೀಡೆ(ಹೆಲಿಕೊವರ್ಪಾ) :
ಮೊದಲನೇ ಕೀಟನಾಶಕದ ಸಿಂಪರಣೆ : ಪ್ರತಿಶತ 25-50 ರಷ್ಟು ಹೂವಾಡುವಾಗ ಪ್ರತಿ ಗಿಡದಲ್ಲಿ ಎರಡು ತತ್ತಿ ಅಥವಾ ಒಂದು ಕೀಡೆ ಕಾಣಿಸಿಕೊಂಡರೆ ಮೊದಲನೇ ಸಿಂಪರಣೆಯಾಗಿ ತತ್ತಿ ಕೀಟನಾಶಕಗಳಾದ ಪ್ರೊಫೆನೋಸಾನ್ 50 ಇ.ಸಿ. 2 ಮಿ.ಲೀ. ಮಿಥೊಮಿಲ್ 0.6 ಗ್ರಾಂ ಅಥವಾ ಥಯೋಡಿಕಾರ್ಬ 75 ಡಬ್ಲು ಪಿ 0.6 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು.
ಎರಡನೇ ಸಿಂಪರಣೆ : ಪ್ರತಿ ಲೀಟರ್ ನೀರಿಗೆ ಶೇ. 5 ರ ಬೇವಿನ ಬೀಜದ ಕಷಾಯ ಅಥವಾ ಮೆನಸಿನಕಾಯಿ (0.5%) ? ಬೆಳ್ಳುಳ್ಳಿ (0.25%) ಕಷಾಯ ಬಳಸಬೇಕು. ಬೇವಿನ ಬೀಜದ ಲಭ್ಯತೆ ಇಲ್ಲದಿದ್ದರೆ ಬೇವಿನ ಮೊಲದ ಕೀಟನಾಶಕಗಳನ್ನು ಪ್ರತಿ ಲೀ ನೀರಿಗೆ 3 ಮಿ.ಲೀ ನಂತೆ ಉಪಯೋಗಿಸಬೇಕು ಅಥವಾ ಹೆಲಿಕೋವರ್ಪಾ ಎನ್.ಪಿ.ವಿ. ನಂಜಾಣುವನ್ನು ಎಕರೆಗೆ 100 ಎಲ್.ಇ ನಂತೆ ಬೆರೆಸಿ ಸಿಂಪಡಿಸಬೇಕು.
ಮೂರನೇಯ ಸಿಂಪರಣೆ : ಹುಳುಗಳ ಬಾಧೆ ಮತ್ತು ಸಂಖ್ಯೆ ಹೆಚ್ಚಾಗಿರು ಸಮಯದಲ್ಲಿ ಕೀಟನಾಶಕಗಳಾದ 0.3 ಗ್ರಾಂ ಇಮಾಮೆಕ್ಟಿನ್ ಬೆಂಜೋಯೆಟ್ 5 ಎಸ್.ಜಿ ಅಥವಾ 0.15ಮಿ.ಲೀ ಕ್ಲೋರೆಂಟ್ರಿನಿಲಿಫ್ರೋಲ್ 18.5 ಎಸ್.ಸಿ ಅಥವಾ 0.2 ಗ್ರಾಂ ಪ್ಲೊಬೆಂಡಿಯಾಮೈಡ್ 20ಡಬ್ಲೂ.ಜಿ ಅಥವಾ 0.75 ಮಿ.ಲೀ ನೊವಲ್ಯುರಾನ್ 10 ಇ.ಸಿ ಅಥವಾ 0.1 ಮಿ.ಲೀ ಸ್ಪ್ತ್ರೈನೋಸಾಡ್ 45 ಎಸ್.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು.
ಚುಕ್ಕೆ ಕಾಯಿ ಕೊರಕ (ಮರುಕ/ಜಾಡ ಹುಳು/ಬಲೆ ಕಟ್ಟುವ ಕೀಟ)
ಈ ಕೀಟವು ಇತ್ತೀಚಿನ ದಿನಗಳಲ್ಲಿ ತೊಗರಿಯ ಮೇಲೆ ಹೆಚ್ಚಾಗಿ ಕಂಡು ಬರುತ್ತಿದೆ.. ಪ್ರೌಢ ಚಿಟ್ಟೆಯು ಕುಡಿ, ಮೊಗ್ಗು ಮತ್ತು ಎಲೆಗಳ ಮೇಲೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳಿಂದ ಬಂದ ಮರಿ ಹುಳುಗಳು ಮೊಗ್ಗುಗಳನ್ನು, ಕಾಯಿಗಳನ್ನು ಮತ್ತು ಎಲೆಗಳನ್ನು ಕೂಡಿಸಿ ಬಲೆಯನ್ನು ಕಟ್ಟುತ್ತದೆ. ಈ ಕೀಟದ ನಿಯಂತ್ರಣಕ್ಕಾಗಿ ಮಡಚಿದ, ಗುಂಪುಗಟ್ಟಿದ ಜಾಡು ಎಲೆಗಳನ್ನು ಬೆಳೆಯ ಮೇಲಿಂದ ಬಿಡಿಸಬೇಕು. ಬೆಳೆಯು ಮೊಗ್ಗು ಹಾಗೂ ಹೂವು ಬಿಡುವ ಸಮಯದಲ್ಲಿದ್ದಾಗ 2.0 ಮಿ.ಲೀ ಪ್ರೊಪೆನೋಪಾಸ್ 50 ಇ.ಸಿ ಅಥವಾ ಅಸಿಫೇಟ್ 1 ಗ್ರಾಂ. ಅಥವಾ ಅಸಿಟಾಮಾಪ್ರಿಡ್ 0.33. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ರಸ ಹೀರುವ ಕೀಟಗಳು :
ಜಿಗಿಹುಳಗಳು ತೊಗರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಾಗ ಹೆಚ್ಚಿನ ಹಾನಿ ಉಂಟು ಮಾಡುತ್ತವೆ. ಅಂತಹ ಸನ್ನಿವೇಶದಲ್ಲಿ ಅಂತರವ್ಯಾಪಿ ಕೀಟನಾಶಕಗಳಾದ 0.2 ಮಿ.ಲೀ ಥೈಯೋಮಿಥಾಕ್ಸಾಮ್ 25 ಡಬ್ಲೂ.ಜಿ ಅಥವಾ ಅಸಿಫೇಟ್ 1 ಗ್ರಾಂ. ಅಥವಾ ಅಸಿಟಾಮಾಪ್ರಿಡ್ 0.33 ಗ್ರಾಂ. ಪ್ರತಿ ಲೀಟರ .ನೀರಿಗೆ ಬೆರೆಸಿ ಬೆಳೆಯ ಮೇಲೆ ಈ ಕೀಟದ ಹಾವಳಿ ಕಂಡು ಬಂದಾಗ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿಬೇಕು.
Share your comments