ರಾಸಾಯನಿಕಗಳಿಂದ ಬೇಸತ್ತು ಸಾವಯುವ ಕೃಷಿಯೆಡೆಗೆ ಇಂದು ನಾವು ನೀವೆಲ್ಲಾ ಹೆಜ್ಜೆ ಇಡುತ್ತಿದ್ದೇವೆ, ಸಾವಯುವ ಕೃಷಿಯಲ್ಲಿ ನಾವು ಬೆಳೆಗಳಿಗೆ ಪೋಷಕಾಂಶಗಳನ್ನು ನೀಡಲು ಪಂಚಗವ್ಯ, ಜೀವಾಮೃತ, ಬೀಜಾಮೃತ, ಹಾಗೂ ಹಲವಾರು ಅಂಶಗಳನ್ನು ನಾವು ಬಳಸುತ್ತೇವೆ, ಆದರೆ ಕೀಟಗಳನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನುನಿಮಗೆ ಹೇಳಿಕೊಡುತ್ತೇನೆ.
ಸಾವಯವ ಕೃಷಿಯಲ್ಲಿ ಕೀಟಗಳ ನಿಯಂತ್ರಣಕ್ಕಾಗಿ ಹಲವಾರು ಅಂಶಗಳಿವೆ. ಆದರೆ ಅದರಲ್ಲಿ ಒಂದು ಮುಖ್ಯ ಅಂಶ ನೀಮಾಸ್ತ್ರ, ನೀಮಾಸ್ತ್ರ ಸಸ್ಯಗಳ ಮೂಲಕ ತಯಾರಿಸಿದ ಒಂದು ಮಿಶ್ರಣವಾಗಿದೆ. ಇದನ್ನು ಬಳಸುವ ಮೂಲಕ ನಾವು ಬೆಳೆಗಳಲ್ಲಿ ಬರುವಂತಹ ರಸಹೀರುವ ಕೀಟಗಳು ಹಾಗೂ ಮಿಲಿಬಗ್ ಗಳನ್ನು ನಿಯಂತ್ರಿಸಬಹುದು. ಆದರೆ ಅತ್ಯಂತ ಶಕ್ತಿಶಾಲಿ ಹಾಗೂ ದೊಡ್ಡ ಕೀಟಗಳಗಳನ್ನು ಪ್ರಾಥಮಿಕ ಹಂತದಲ್ಲಿ ಮಾತ್ರ ನಿಯಂತ್ರಿಸಬಹುದು.
ಬೇಕಾಗುವ ಸಾಮಗ್ರಿಗಳು:
ದೇಸಿ ಹಸುವಿನ ಸಗಣಿ-2 ಕೆಜಿ
ದೇಸಿ ಹಸುವಿನ ಗಂಜಲ- 10 ಲೀಟರ್
ನೀರು-200 ಲೀಟರ್
ಬೇವಿನ ಎಲೆ ಹಾಗೂ ಕಾಂಡಗಳು -10 ಕೆಜಿ
ತಯಾರಿಸುವ ವಿಧಾನ:
ಮೊದಲು ಬೇವಿನ ಎಲೆ ಹಾಗೂ ಕಾಂಡಗಳನ್ನು ರುಬ್ಬಿ ಅದನ್ನು ಪೇಸ್ಟ್ ತರಹ ಮಾಡಿ ಇದರ ಬದಲು ನೀವು 10 ಕೆಜಿ ಬೇವಿನ ಬೀಜಗಳನ್ನು ಸಹ ಬಳಸಬಹುದು, ಹಾಗೂ ಎರಡು ಕೆಜಿ ಸಗಣಿಯನ್ನು ನೀರಿನಲ್ಲಿ ಯಾವುದೇ ಗಂಟು ಇರದ ಹಾಗೆ ಚೆನ್ನಾಗಿ ಕಲಿಸಬೇಕು.
ಬ್ಯಾರೆಲಿಗೆ ಎರಡು ನೂರು ಲೀಟರ್ ನೀರನ್ನು ತುಂಬಿಸಬೇಕು, ಇದಕ್ಕೆ 10 ಲೀಟರ್ ದೇಸಿ ಹಸುವಿನ ಗಂಜಲ, ಎರಡು ಕೆಜಿ ಸಗಣಿಯನ್ನು ನಾವು ನೀರಿನಲ್ಲಿ ಕಲಿಸಿ ಇಟ್ಟಿರುವಂತಹ ಮಿಶ್ರಣವನ್ನು ಹಾಕಬೇಕು ಹಾಗೂ 10 ಕೆಜಿ ಬೇವಿನ ಪೇಸ್ಟನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಬೇಕು. ಇದನ್ನು ಕೂಡ ದಿನಕ್ಕೆ ಎರಡು ಬಾರಿ ಒಂದು ಉದ್ದನೆಯ ಕೋಲಿನ ಮೂಲಕ ಎಡದಿಂದ ಬಲಕ್ಕೆ ಒಂದೇ ದಿಕ್ಕಿನಲ್ಲಿ ಪ್ರತಿದಿನ ಎರಡು ಬಾರಿ ತಿರುಗಿಸಬೇಕು. ಹೀಗೆ ಈ ಪ್ರಕ್ರಿಯೆಯನ್ನು ಎರಡು ದಿನಗಳವರೆಗೆ ಅಂದರೆ 48 ಗಂಟೆಗಳವರೆಗೆ ಮಾಡಬೇಕು. ಮೂರನೇ ದಿನದಿಂದ ನಮಗೆ ನೀಮಾಸ್ತ್ರ ಬೆಳಕಿಗೆ ತಯಾರಾಗಿದೆ.
ಹೇಗೆ ಬಳಸುವುದು:
ಇದನ್ನು ನಾವು ತುಂತುರು ಹನಿ ನೀರಾವರಿ ಅಥವಾ ಸ್ಪ್ರೇಯರ್ ಮೂಲಕ ಸಿಂಪಡಿಸಬಹುದು.
ಯಾವ ಯಾವ ಕೀಟಗಳನ್ನು ಇದು ನಿಯಂತ್ರಿಸುತ್ತದೆ:
ನೀಮಾಸ್ತ್ರವನ್ನು ಬಳಸುವ ಮೂಲಕ ನಾವು ಅಫಿಡ್ಸ್, ಜಾಸ್ಸಿಡ್ಸ್, ಸ್ಪೈಡರ್, ಸ್ಕ್ವ್ಯಾಷ್ ಬಗ್, ಸ್ಟಿಂಕ್ ಬಗ್, ರಸ ಹೀರುವ ಕೀಟಗಳು ಹಾಗೂ ಥ್ರಿಪ್ಸ್ ನುಸಿ.
ಪ್ರಮುಖ ಸೂಚನೆ:
ಹಲವಾರು ವಿಜ್ಞಾನಿಗಳು ಹಾಗೂ ರೈತರ ಅಭಿಪ್ರಾಯವನ್ನು ಸಂಗ್ರಹಿಸಿದ ಮೇರೆಗೆ ಕೇವಲ ನೀಮಾಸ್ತ್ರ ವನ್ನು ಬಳಸುವ ಮೂಲಕ ನಾವು ಸಮಗ್ರ ಕೀಟಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಇದರ ಜೊತೆಗೆ ಇನ್ನಿತರ ಅಸ್ತ್ರಗಳ ಆದ ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ ಗಳನ್ನು ಬಳಸಿದರೆ ಸಾಧ್ಯ ಎಂದು ಹೇಳುತ್ತಾರೆ.
ರೈತರು ಹಾಗೂ ವಿಜ್ಞಾನಿಗಳ ಮಾಹಿತಿ ಮೇರೆಗೆ ಈ ನೀಮಾಸ್ತ್ರ ವನ್ನು ಹದಿನೈದು ದಿನಗಳಿಗೊಮ್ಮೆ ನಾವು ಸಿಂಪಡಿಸಿದರೆ ಒಳ್ಳೆಯ ಫಲಿತಾಂಶ ಬರುತ್ತದೆ. ಹಾಗೂ ಇದನ್ನು ತಯಾರಿಸಿದ ನಂತರ ಆರು ತಿಂಗಳ ಒಳಗಡೆಯೇ ಇದನ್ನು ಬಳಸಬೇಕು
ಲೇಖಕರು: ಚಿನ್ನಪ್ಪ ಎಸ್. ಅಂಗಡಿ
Share your comments