ಹಾವೇರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕೊರೊನಾ ಸಮಯದಲ್ಲೂ ಬಿತ್ತನೆ ಬೀಜಗಳ ಖರೀದಿ ಹಾಗೂ ಬಿತ್ತನೆ ಬಿರುಸುನಿಂದ ನಡೆದಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿರುವ ತೊಗರಿ, ನವಣೆ ಹಾಗೂ ಸೆಣಬು ಬೀಜಗಳು ಮಾರಾಟವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ. ಅಶೋಕ ಪಿ. ಅವರು ರೈತರೊಂದಿಗೆ ಚರ್ಚಿಸಿ, ಬೀಜೋಪಚಾರ ಪದ್ಧತಿಯ ಪ್ರಾತ್ಯಕ್ಷಿಕೆ ನೀಡಿದರು.
ಈ ವೇಳೆ ಮಾತನಾಡಿದ ಡಾ. ಅಶೋಕ ಅವರು, ಮುಂಗಾರು ಪ್ರಾರಂಭವಾಗಿ, ಬಿತ್ತನೆ ಸಮಯ ಬಂತೆಂದರೆ ರೈತರು ವಿವಿಧ ಬೆಳೆಗಳ, ತಳಿಗಳ ಬೀಜಗಳನ್ನು ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿರುವುದು ಸಹಜ. ನೂಲಿನಂತೆ ಸೀರೆ ಬೀಜದಂತೆ ಬೆಳೆ, ತಾಯಿಯಂತೆ ಮಗು, ಬೀಜದಂತೆ ಬೆಳೆ ಎಂಬ ನಾಣ್ಣುಡಿಗಳು ಕೃಷಿಯಲ್ಲಿ ಬಿತ್ತನೆ ಬೀಜದ ಮಹತ್ವವನ್ನು ಸಾರಿ ಹೇಳುತ್ತವೆ. ಆರೋಗ್ಯವಂತ ಹಾಗೂ ರೋಗರಹಿತ ಉತ್ತಮ ಗುಣಮಟ್ಟದ ಬೀಜವನ್ನು ಬಿತ್ತುವುದರಿಂದ ಹೆಚ್ಚು ಇಳುವರಿ ಸಿಗುತ್ತದೆ. ಉತ್ತಮ ಗುಣಮಟ್ಟದ ಬಿತ್ತನೆ ಬೀಜದ ಉಪಯೋಗವು ಕೃಷಿಯನ್ನು ಲಾಭದಾಯಕವಾಗಿಸುತ್ತದೆ. ಜೊತೆಗೆ ವ್ಯವಸಾಯದಲ್ಲಿ ಯಶಸ್ಸು ಗಳಿಸಲು ಮೂಲಕಾರಣವಾಗಿದೆ ಎಂದರು.
ರೈತರು ತಾವು ಬೆಳೆದ ಹಿಂದಿನ ಬೆಳೆಯಿಂದಲೇ ಬೀಜಗಳನ್ನು ಸಂಗ್ರಹಿಸಿ ಮತ್ತೆ ಮುಂದಿನ ಬೆಳೆಗೆ ಬಿತ್ತನೆಗಾಗಿ ಉಪಯೋಗಿಸುವುದರಿಂದ ಇಳುವರಿ ಕಡಿಮೆಯಾಗುತ್ತಿದೆ. ಆದ್ದರಿಂದ ಹೆಚ್ಚಿನ ಇಳುವರಿ ಪಡೆಯಬೇಕಾದರೆ ದೃಢೀಕೃತ ಹಾಗೂ ಪ್ರಮಾಣಿತ ಬೀಜಗಳನ್ನು ಬಿತ್ತನೆಗೆ ಉಪಯೋಗಿಸುವುದು ಸೂಕ್ತ. ಕೃಷಿಯಲ್ಲಿ ಬೀಜವು ಮೂಲ ಸಾಮಗ್ರಿಯಾಗಿದ್ದು ಇದು ಒಂದು ಜೈವಿಕ ಶಕ್ತಿಯಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಬಿತ್ತನೆ ಬೀಜದ ಗುಣಮಟ್ಟ ತಿಳಿಯಿರಿ
ಬೀಜ ಕೂಡ ಸಜೀವ ವಸ್ತು. ಮೊದಲೆಯದಾಗಿ ಬಿತ್ತನೆ ಬೀಜದಲ್ಲಿ ಮೊಳಕೆ ಒಡೆಯುವ ಶಕ್ತಿ (ಶೇ. 80-90 ರಷ್ಟು) ಇರಲೇಬೇಕು. ಇದರ ಜೊತೆಗೆ ಬೀಜ ಭೌತಿಕವಾಗಿ ಹಾಗೂ ಅನುವಂಶಿಕವಾಗಿ ಶುದ್ಧವಾಗಿರಬೇಕು. ನಿರ್ದಿಷ್ಟ ತೂಕ ಹಾಗೂ ಗಾತ್ರ ಹೊಂದಿರಬೇಕು. ಕೀಟ ಬಾಧೆ ಹಾಗೂ ರೋಗಗಳಿಂದ ಮುಕ್ತವಾಗಿರಬೇಕು. ಒಂದೇ ಸಮನಾದ ಬೆಳೆಯ ನಿಲುವು ಹಾಗೂ ಒಂದೇ ಸಮಯಕ್ಕೆ ಕೊಯ್ಲಿಗೆ ಬರುವುದು ಮುಂತಾದ ಗುಣಗಳನ್ನು ಹೊಂದಿರುವ ಬೀಜಕ್ಕೆ ಗಣಮಟ್ಟದ ಬಿತ್ತನೆಯ ಬೀಜ ಎಂದು ಕರೆಯಬಹುದು. ಬಿತ್ತನೆ ಬೀಜಗಳು ಅನ್ಯ ಜಾತಿಯ ತಳಿಗಳ ಕಲಬೆರೆಕೆ ಹಾಗೂ ಕಳೆ ಕಸದ ಬೀಜಗಳಿಂದ ಮುಕ್ತವಾಗಿರಬೇಕು ಎಂದು ಹೇಳಿದರು.
ಬೀಜೋಪಚಾರ
ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ವಿವಿಧ ರೋಗ/ ಕೀಟನಾಶಕಗಳಿಂದ ಅಥವಾ ಜೈವಿಕ ಅಣುಜೀವಿಗಳಿಂದ ಉಪಚರಿಸುವುದು ಅತ್ಯಂತ ಮುಖ್ಯವಾಗಿದೆ. ಹೀಗೆ ಮಾಡುವುದರಿಂದ ಬೆಳೆಗಳಿಗೆ ಬರಬಹುದಾದ ಹಲವಾರು ರೋಗ ಮತ್ತು ಕೀಟಗಳ ಹಾವಳಿಯನ್ನು ತಪ್ಪಿಸಬಹುದು. ಇದರ ಜೊತೆಗೆ ದ್ವಿದಳ ಧಾನ್ಯದ ಬೀಜವನ್ನು ವಿವಿಧ ಜೈವಿಕ ಅಣುಜೀವಿ ಗೊಬ್ಬರದಿಂದ ಉಪಚರಿಸುವುದರಿಂದ ವಾತಾವರಣದಲ್ಲಿರುವ ಸಾರಜನಕ ಬೆಳೆಗಳಿಗೆ ದೊರಕುವಂತೆ ಮಾಡಬಹುದು.
ಬೀಜೋಪಚಾರದ ಮಹತ್ವ
ಬಿತ್ತನೆ ಮಾಡಿರುವ ಗುಣಮಟ್ಟದ ಆಧಾರದಲ್ಲಿ ಕೃಷಿಯ ಯಶಸ್ಸನ್ನು ನಿರ್ಧರಿಸಲಾಗುತ್ತದೆ. ಕೃಷಿಯಲ್ಲಿ ಬೀಜ ಅತೀ ಕಡಿಮೆ ಖರ್ಚಿನ ಸಂಪನ್ಮೂಲಗಳಲ್ಲಿ ಒದೆಂದು ಹೇಳಬಹುದು. ಅದರ ಜೊತೆಗೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದ್ದೇ ಆದರೆ, ಬೆಳೆಗೆ ಹಾನಿ ಮಾಡುವ ಅನೇಕ ಕೀಟ ಹಾಗೂ ರೋಗಗಳನ್ನು ಕಡಿಮೆ ಖರ್ಚಿನಲ್ಲಿ ತಡೆಗಟ್ಟಬಹುದು. ಜೈವಿಕ ಗೊಬ್ಬರವಾಗಿರುವ ರೈಜೋಬಿಯಂ ಅಣುಜೀವಿ ಗೊಬ್ಬರದಿಂದ (ಪ್ರತಿ ಎಕರೆಗೆ ಬೇಕಾಗುವ ಬೀಜಕ್ಕೆ 150 ಗ್ರಾಂ) ದ್ವಿದಳ ಧಾನ್ಯಗಳಾದ ತೊಗರಿ, ಶೇಂಗಾ, ಸೋಯಾ ಅವರೆ, ಹೆಸರು, ಅಲಸಂಧೆ ಮುಂತಾದ ಬೆಳೆಯ ಬೀಜಗಳಿಗೆ ಬೀಜೋಪಚಾರ ಮಾಡಿ ಬಿತ್ತವುದರಿಂದ ಹವೆಯಲ್ಲಿ ಇರುವ ಸಾರಜನಕವನ್ನು ಬೇರುಗಳ ಗಂಟುಗಳಲ್ಲಿ ಸಂಗ್ರಹಿಸಲು ಹಾಗೂ ಬೆಳೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಹಾಗೇ, ಏಕದಳ ಧಾನ್ಯದ ಬೆಳೆಗಳಾದ ಜೋಳ, ಗೋಧಿ, ಸಜ್ಜೆ ಮುಂತಾದ ಬೀಜಗಳನ್ನು ಅಜೋಸ್ಪೆರಿಲಮ್ ಅಣುಜೀವಿ ಗೊಬ್ಬರ (ಪ್ರತಿ ಎಕರೆಗೆ ಬೇಕಾಗುವ ಬೀಜಕ್ಕೆ 150 ಗ್ರಾಂ.) ಬಳಸಿ ಉಪಚರಿಸಬೇಕು. ಇದರಿಂದ ವಾತಾವರಣದಲ್ಲಿರುವ ಸಾರಜನಕ ಬೆಳೆಗಳಿಗೆ ಲಭ್ಯವಾಗುತ್ತದೆ. ಬಳಿಕ ಮೇಲುಗೊಬ್ಬರ ರೂಪದಲ್ಲಿ ಕಡಿಮೆ ಪ್ರಮಾಣದ ಸಾರಜನಕವನ್ನು ಕೊಟ್ಟರೂ ಸಾಕು. ಇತ್ತೀಚೆಗೆ ಭೂಮಿಯಲ್ಲಿ ಸಸ್ಯಗಳಿಗೆ ಲಭ್ಯವಾಗದ ರೂಪದಲ್ಲಿ ಇರುವ ರಂಜಕದ ಅಂಶವನ್ನು ಕರಗಿಸಿ ಸಸ್ಯಗಳಿಗೆ ಒದಗಿಸುವ ಅಣುಜೀವಿ ಗೊಬ್ಬರಗಳು (ಫಾಸ್ಟೊರೋಯಿಜಿಂಗ್ ಬ್ಯಾಕ್ಟೀರಿಯಾ) ಕೂಡ ಲಭ್ಯವಿದ್ದು, ಇವುಗನ್ನು ಬಳಸಿಯೂ ಬೀಜೋಪಚಾರ ಮಾಡಬಹುದು. ಮಣ್ಣನಿಂದ ಬೆಳೆಗೆ ತಗುಲುವ ರೋಗಗಳ ನಿರ್ವಹಣೆಗಾಗಿ ಜೈವಿಕ ಶಿಲೀಂದ್ರ ನಾಶಕ ಟ್ರೈಕೋಡರ್ಮಾದ ಪುಡಿಯನ್ನು ಪ್ರತಿ ಕೆ.ಜಿ ಬೀಜಕ್ಕೆ 4 ಗ್ರಾಂ. ನಂತೆ ಲೇಪನ ಮಾಡುವುದರಿಂದ ಶೇಂಗಾ, ಹತ್ತಿ, ಮುಂತಾದ ಬೆಳೆಗಳಿಗೆ ಬೀಜೋಪಚಾರ ಮಾಡಿ, ನಂತರ ಅಣುಜೀವಿಗಳಿಂದ ಬೀಜೋಪಚಾರ ಮಾಡಬೇಕು ಎಂದು ಹಿರಿಯ ವಿಜ್ಞಾನಿ ಡಾ. ಅಶೋಕ ಅವರು ರೈತರಿಗೆ ವಿವರಿಸಿದರು.
ಈ ವೇಳೆ ಪ್ರಗತಿಪರ ರೈತರಾದ ಶ್ರೀ. ನಿಂಗಪ್ಪ ಕಬ್ಬೂರ, ಶ್ರೀ ಮಾಲತೇಶ ಶಿಡಗನಾಳ ಹಾಗೂ ಇತರರು ಪಾಲ್ಗೋಡಿದ್ದರು.
Share your comments