ಕೃಷಿ ಭೂಮಿ ನೀರಾವರಿಯೇ ಇರಲಿ, ಅಥವಾ ಮಳೆ ಆಶ್ರಿತ (ಬೆದ್ಲು) ಭೂಮಿಯೇ ಆಗಿರಲಿ ಮಳೆ ಬೇಕೇ ಬೇಕು. ಮಳೆ ಆಶ್ರಿತ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದಲ್ಲಿ ಬಿತ್ತನೆ ಪೂರ್ವ, ಬಿತ್ತನೆ ನಂತರದ ಹಂತಗಳಲ್ಲಿ ಮಳೆಯ ಅಗತ್ಯವಿರುತ್ತದೆ. ಬೀಜಗಳನ್ನು ಬಿತ್ತುವ ಮೊದಲು ಹೊಲ ಉಳುಮೆ ಮಾಡಲು ಒಂದು ಹದ ಮಳೆ ಆಗಬೇಕು. ಬಿತ್ತನೆ ಪೂರ್ವದಲ್ಲೂ ಮಳೆಯ ಅಗತ್ಯವಿರುತ್ತದೆ. ಬಿತ್ತಿದ ನಂತರದ ದಿನಗಳಲ್ಲೂ ಭೂಮಿಯಲ್ಲಿ ತೇವಾಂಶವಿದ್ದು, ಬೀಜಗಳು ಸರಿಯಾದ ಪ್ರಮಾಣದಲ್ಲಿ ಮೊಳಕೆ ಒಡೆಯಬೇಕೆಂದರೆ ಸಮರ್ಪಕ ಪ್ರಮಾಣದಲ್ಲಿ ಮಳೆಯಾಗುವುದು ಅತಿ ಮುಖ್ಯ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲೇ ಮಳೆ ಆರಂಭವಾದ ಕಾರಣ ಬಿತ್ತನೆ ಕಾರ್ಯ ಬೇಗನೆ ಶುರುವಾಗಿತ್ತು. ಬಳಿಕ ವಾಡಿಕೆಗಿಂತಲೂ ಹೆಚ್ಚು ತಿಂಗಳುಗಳ ಕಾಲ ಮಳೆಗಾಲವಿದ್ದುದರಿಂದ ಬೆಳೆಗಳಿಗೆ ನೀರಿನ ಸಮಸ್ಯೆಯೂ ಆಗಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಜೂನ್ ಮೊದಲ ವಾರ ಮುಂಗಾರು ರಾಜ್ಯವನ್ನು ಪ್ರವೇಶಿಸಿದೆ. ಈ ನಡುವೆ ‘ತೌಕೆ’ ಮತ್ತು ‘ಯಾಸ್’ ಚಂಡಮಾರುತಗಳು ಬಂದು ಹೋದ ಕಾರಣ ಕೆಲವೆಡೆ ಮೇ ತಿಂಗಳಲ್ಲಿ ಮಳೆಯಾಗಿದೆ. ಈ ಮಳೆಯನ್ನೇ ನೆಚ್ಚಿಕೊಂಡು ಹಲವು ಜಿಲ್ಲೆಗಳ ರೈತರು ಬಿತ್ತನೆಕೂಡ ಮಾಡಿದ್ದಾರೆ. ಆದರೆ ಜೂನ್ ಆರಂಭದಲ್ಲೇ ಗುಡುಗಿದ ಮುಂಗಾರು ಮೋಡಗಳು ನಿರೀಕ್ಷೆಯಷ್ಟು ಮಳೆಯನ್ನೇನೂ ಸುರಿಸಿಲ್ಲ. ಮುಂದೆ ಉತ್ತಮ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆಯಾದರೂ ಈಗಾಗಲೇ ಬಿತ್ತನೆಯ ಸಮಯ ಮೀರಿ ಹೋಗುತ್ತಿರುವುದು ರೈತರನ್ನು ಆತಂಕಕ್ಕೆ ದೂಡಿದೆ.
ಹಾಗಾದರೆ ಮಳೆಯ ಈ ಕಣ್ಣಾಮುಚ್ಚಾಲೆ ಆಟದ ನಡುವೆ ರೈತರ ನಡೆ ಹೇಗಿರಬೇಕು? ಈಗಾಗಲೇ ಮಳೆ ಸುರಿದು ಬಿತ್ತನೆ ಮಾಡಿರುವ ಪ್ರದೇಶಗಳ ರೈತರುಯಾವ ಕ್ರಮಗಳನ್ನು ಅನುಸರಿಸಬೇಕು ಮತ್ತು ಇನ್ನೂ ಸಮರ್ಪಕವಾಗಿ ಮಳೆಯಾಗದೆ ವರುಣ ದೇವನ ಕೃಪೆಗಾಗಿ ಕಾಯುತ್ತಿರುವ ಕೃಷಿಕರು ಏನು ಮಾಡಬೇಕು? ಎಂಬ ಮಾಹಿತಿಯನ್ನು ನಿವೃತ್ತ ಜಂಟಿ ಕೃಷಿ ನಿರ್ದೇಶಕರಾದ ಡಾ.ಆರ್.ಜಿ.ಗೊಲ್ಲರ್ ಅವರು ‘ಕೃಷಿ ಜಾಗರಣ’ ಜೊತೆ ಹಂಚಿಕೊಂಡಿದ್ದಾರೆ.
ಮಣ್ಣು ಹದವಾಗಿದ್ದರೆ ಬಿತ್ತನೆ ಮಾಡಿ
ಈ ವಾರ, ಅಂದರೆ ಜೂನ್ 13ರ ನಂತರ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವರದಿ ಹೇಳುತ್ತದೆ. ಹಾಗೇ ಈ ಮಳೆ ಎರಡು ಅಥವಾ ಮೂರು ದಿನ ಮಾತ್ರ ಇರಲಿದೆ ಎಂದು ಹವಾಮಾನ ಮಾಹಿತಿ ಬಿತ್ತರಿಸುವ ಕೆಲವು ಜಾಲತಾಣಗಳು ಹೇಳಿವೆ. ಇಂತಹ ಗೊಂದಲಗಳು ಸಹಜ. ರೈತರು ಮುಖ್ಯವಾಗಿ ತಿಳಿಯಬೇಕಿರುವುದು ಏನೆಂದರೆ ಮಳೆ ಬಂದೇ ಬರುತ್ತದೆ ಅಥವಾ ಬರುವುದೇ ಇಲ್ಲ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈಗ ಮಳೆಗಾಲ ಶುರುವಾಗಿರುವ ಕಾರಣ ರೈತರು ಹೆಚ್ಚು ಆಲೋಚಿಸದೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬಹುದು. ಬಿತ್ತಲು ಹದವಾಗಿರುವ ಜಮೀನುಗಳಲ್ಲಿ ಬೀಜೋಪಚಾರ ಮಾಡಿದ (ಒಂದುಕೆ.ಜಿ ಬಿತ್ತನೆಜಕ್ಕೆ 3 ಮಿಲೀ ಕ್ಲೋರ್ ಪೈರಿಫಾಸ್ ಮತ್ತು 2 ಗ್ರಾಂ. ಕಾರ್ಬೆಂಡೆಜಿಂ) ಒಣ ಬೀಜಗಳನ್ನು ಬಿತ್ತನೆ ಮಾಡಬಹುದು. ಹೀಗೆ ಮಾಡುವುದರಿಂದ ಒಂದು ವಾರದಿಂದ ಹತ್ತು ದಿನಗಳ ಸಮಯ ಉಳಿತಾಯವಾಗುತ್ತದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ಭಾಗದಲ್ಲಿ ಈ ಕ್ರಮ ದಶಕಗಳ ಹಿಂದಿ ನಿಂದಲೂ ಚಾಲ್ತಿಯಲ್ಲಿದೆ. ಮೊದಲೇ ಹೇಳಿದಂತೆ ಮಳೆ ಮಾಹಿತಿಯನ್ನು ನಿಖರವಾಗಿ ಹೇಳಲಾಗದು. ಹೀಗಾಗಿ ಈಗಾಗಲೇ ಮಳೆ ಆಗಿ, ಬಿತ್ತನೆ ಮಾಡಿರುವ ರೈತರು ಯಾವ ಕ್ರಮಗಳನ್ನು ಅನುಸರಿಸಬೇಕು ಮತ್ತು ಇನ್ನೂ ಮಳೆ ಆಗದಿರುವ ಪ್ರದೇಶದ ರೈತರು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
ಮಳೆಯಾಗಿ, ಬಿತ್ತನೆ ಮಾಡಿರುವ ರೈತರು...
- ಮುಂಗಾರು ಪೂರ್ವ ಮಳೆಗೆ ಬಿತ್ತನೆ ಮಾಡಿದ್ದು, ಈಗ ಮಳೆಯಾಗದೆ ಇರುವ ಭಾಗಗಳಲ್ಲಿ ನೀರಾವರಿ ಅನುಕೂಲ ಇದ್ದರೆ ತುಂತುರು ನೀರಾವರಿ ಪದ್ಧತಿ ಮೂಲಕ ಬೀಜಗಳಿಗೆ ನೀರುಣಿಸಿ.
- ಈಗಾಗಲೇ ಎರಡು ಚಂಡಮಾರುತಗಳು ಬಂದು ಹೋಗಿರುವುದರಿಂದ ಮಳೆ ವಿತರಣೆ ಏರುಪಾರಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ರಸಗೊಬ್ಬರ ಬಳಕೆಯಲ್ಲಿ ಹಿಡಿತವಿರಲಿ.
- ಗೊಬ್ಬರ ಹಾಕದೇ ಇದ್ದರೆ ಮಳೆ ಬೀಳುವವರೆಗೆ ಕಾಯುವದು ಸೂಕ್ತ. ಬಳಿಕ ಮಳೆ ಪ್ರಮಾಣಕ್ಕೆ ಅನುಗುಣವಾಗಿ ರಸಗೊಬ್ಬರ ನೀಡಿ.
- ನೀರು ಲಭ್ಯವಿದ್ದಲ್ಲಿ ಶೀಫಾರಸು ಮಾಡಿದ ಪ್ರಮಾಣದಲ್ಲಿ ಅರ್ಧದಷ್ಟು ಮೂಲ ಗೊಬ್ಬರವನ್ನು ಮಾತ್ರ ಬೆಳೆಗೆ ನೀಡಿ. ಬೆಳೆಯ ಶೀಘ್ರ ಚೇತರಿಕೆಗಾಗಿ ಪ್ರತಿ ಲೀಟರ್ ನೀರಿಗೆ 3 ಗ್ರಾಂ. 19:19:19 ಮತ್ತು 1 ಗ್ರಾಂ. ಲಘು ಪೋಷಕಾಂಶ ಮಿಶ್ರಣ ಮಾಡಿ ಸಿಂಪಡಿಸಿ.
- ಬೀಜಗಳು ಮೊಳಕೆ ಬಂದು ಸಾಲು ಕಾಣುತ್ತಿದ್ದರೆ ಎಡೆ ಹೊಡೆದು ಸಾಲು ಮಾಡಿ. ಇದರಿಂದ ಕಳೆ ಹತೋಟಿಯಾಗುತ್ತದೆ.
- ಭೂಮಿಯಲ್ಲಿ ಅಗತ್ಯದಷ್ಟು ತೇವಾಂಶವಿದ್ದು, ಕನಿಷ್ಠ ಎರಡು ವಾರ ನೆಲ ಒಣಗುವುದಿಲ್ಲ ಎಂದೆನಿಸಿದರೆ ಪ್ರತಿ ಲೀಟರ್ ನೀರಿಗೆ 2 ಗ್ರಾಂ. 19:19:19 ಮತ್ತು 1 ಗ್ರಾಂ. ಲಘು ಪೋಷಕಾಂಶ ಮಿಶ್ರಣ ಮಾಡಿ ಬೆಳೆಗೆ ನೀಡಿ.
ಮಳೆ ಆಗದಿರುವ ಭಾಗದಲ್ಲಿ...
- ಇನ್ನೂ ಮಳೆ ಆಗದಿರುವ ಭಾಗಗಳ ರೈತರು ಮೇ ಕಡೆಯ ವಾರದಲ್ಲಿ ಕೈಗೊಳ್ಳಬೇಕಿದ್ದ ಬಿತ್ತನೆ ಕಾರ್ಯವನ್ನು ಈಗ ಕೈಗೊಳ್ಳಬಹುದು. ಆದರೆ, ಬಿತ್ತನೆ ತಡವಾಗುವುದರಿಂದ ಇಳುವರಿ ಕಡಿಮೆಯಾಗಬಹುದು.
- ಜೂನ್ ಎರಡು ಅಥವಾ ಮೂರನೆ ವಾರ ಮಳೆ ಬಿದ್ದರೂ ಹೈಬ್ರೀಡ್ ಜೋಳ ಬಿತ್ತನೆ ಮಾಡದಿರುವುದು ಸೂಕ್ತ. ಬಿತ್ತನೆ ತಡವಾದಾಗ ಹೈಬ್ರೀಡ್ ತಳಿಗಳಿಗೆ ಸುಳಿ ಹಾಗೂ ಕಾಡಿಗೆ ರೋಗ ಬಾಧೆ ಹೆಚ್ಚು.
- ಮೆಕ್ಕೆಜೋಳ, ಹೆಸರು, ಸೋಯಾ ಅವರೆ, ಶೇಂಗಾ, ಉದ್ದು, ಅಲಸಂದೆ ಬಿತ್ತುವ ಮುನ್ನ ಪ್ರತಿ ಕೆ.ಜಿ ಬೀಜಕ್ಕೆ 3.5 ಮಿ.ಲೀ ಇಮಿಡಾಕ್ಲೋಪ್ರಿಡ್ ಲೇಪಿಸಿ. ಇದರಿಂದ ರಸ ಹೀರುವ ಕೀಟಗಳ ಬಾಧೆ ಹತೋಟಿಯಾಗುತ್ತದೆ.
- ಎರೆ ಭೂಮಿಯಲ್ಲಿ 18 ಅಂಗುಲ ಅಂತರದ ಸಾಲುಗಳಲ್ಲಿ ಶೇಂಗಾ ಬಿತ್ತಬೇಕು. ಜೆಪಿಬಿಡಿ 5 ತಳಿ ಬೀಜ ಬಿತ್ತುವುದರಿಂದ ತಡವಾಗಿ ಬಿತ್ತನೆಯಾದರೂ ಸಕಾಲದಲ್ಲಿ ಕಟಾವು ಮಾಡಬಹುದು.
- ಬಿತ್ತನೆ ಬಳಿಕ ಮಳೆಯಾಗುವವರೆಗೂ ಮೂಲ ರಸಗೊಬ್ಬರವನ್ನು ಬೆಳೆಗೆ ನೀಡಬೇಡಿ.
Share your comments