ಕೃಷಿಯ ಜೊತೆಗೆ ಕುರಿ ಸಾಕಾಣಿಕೆಯನ್ನು ಆರಂಭ ಮಾಡಿ 7ರಿಂದ 8 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ ಈ ಮಹಿಳೆ. ಇಲ್ಲಿದೆ ಸ್ಪೂರ್ತಿದಾಯಕ ಕೃಷಿ ಮಾಡುತ್ತಿರುವ ಮಹಿಳೆಯ ಕಥೆ...
ಹವ್ಯಾಸವನ್ನೇ ಉದ್ಯಮವಾಗಿಸಿಕೊಂಡ 21ರ ಯುವತಿ; ತಿಂಗಳಿಗೆ 40ರಿಂದ 45 ಸಾವಿರ ಆದಾಯ!
ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಉಪಕಸುಬುಗಳಲ್ಲಿ ಸಾಕಷ್ಟು ಸಾಧಿಸಿದ್ದರೂ ಕೂಡ ಇನ್ನೂ ಹೆಚ್ಚಿನದನ್ನು ಸಾಧಿಸಬೇಕಾಗಿದೆ ಎನ್ನುವ ತುಡಿತದಲ್ಲಿರುವ ಗದಗ ಜಿಲ್ಲೆಯ ಮುಳಗುಂದ ಗ್ರಾಮದ ಕೃಷಿ ಪದವಿಧರೆ ಶ್ರೀಮತಿ ಮಂಗಳಾ ಕಿರಣ ನೀಲಗುಂದ.
ಬರ ಪರಿಸ್ಥಿತಿಯಲ್ಲಿ ಪರ್ಯಾಯ ಮಾರ್ಗಗಳನ್ನು ಅನುಸರಿಸಿ ಯಶಸ್ಸನ್ನು ಕಂಡ ಮಹಿಳೆ ಮಂಗಳಾ ಕಿರಣ ನೀಲಗುಂದ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಗುಡಿಹೊನ್ನತ್ತಿ ಗ್ರಾಮದವರು. ತಂದೆ ಚಂದ್ರಶೇಖರ ಬಸಪ್ಪ ಉಪ್ಪಿನ.
ಓದಿನಲ್ಲಿ ಚುರುಕಾಗಿದ್ದ ಇವರನ್ನು ತಂದೆ ಚಂದ್ರಶೇಖರ ಅವರು ಮಿತಿಗಳನ್ನು ಹೇರದೆ ಗಂಡು ಮಗುವಿನಂತೆ ಬೆಳೆಸಿದರು. ಪರಿಣಾಮವಾಗಿ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇದ್ದ ಇವರು ತಂದೆಯವರ ಪ್ರೋತ್ಸಾಹದ ಮೂಲಕ ಓಟದಲ್ಲಿ ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
150 ಅಪರೂಪದ ಸಿರಿಧಾನ್ಯಗಳ Seed Bank ನಿರ್ಮಿಸಿದ ಬುಡಕಟ್ಟು ಮಹಿಳೆ ಲಹರಿಬಾಯಿ
ಬಿಎಸ್ಸಿ ಕೃಷಿ ಪದವಿಯನ್ನು ಪಡೆದುಕೊಂಡಿರುವ ಇವರು ಮೂಲತಃ ಕೃಷಿಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ವಿಚಾರದೊಂದಿಗೆ ಕೃಷಿ ಮತ್ತು ಕೃಷಿ ಉಪಕಸುಬಾದ ಕುರಿ ಸಾಕಾಣಿಕೆಯನ್ನು ಆರಂಭ ಮಾಡಲು ಪತಿ ಕಿರಣ ನೀಲಗುಂದ ಅವರೊಂದಿಗೆ ಚರ್ಚಿಸಿ ಕುರಿ ಸಾಕಾಣಿಕೆ ಆರಂಭಿಸಿದರು.
30 ಕುರಿ ಮರಿಗಳೊಂದಿಗೆ 2015ರಲ್ಲಿ ಕುರಿ ಸಾಕಾಣಿಕೆ ಆರಂಭ!
ಕೇವಲ 30 ಕುರಿ ಮರಿಗಳೊಂದಿಗೆ 2015ರಲ್ಲಿ ಕುರಿ ಸಾಕಾಣಿಕೆಯನ್ನು ಆರಂಭ ಮಾಡುತ್ತಾರೆ. 5 ತಿಂಗಳ ನಂತರ ಅವುಗಳನ್ನು ಮಾರಾಟ ಮಾಡಿದಾಗ ಕುರಿ ಸಾಕಾಣಿಕೆಯಲ್ಲಿ ಹೂಡಿದ್ದ ನಿವ್ವಳ ಖರ್ಚು ಮರಳಿ ಬಂದಿತ್ತು.
ನಂತರ ಎರಡನೇ ಬಾರಿಗೆ 70 ಕುರಿ ಮರಿ, ಮೂರನೇ ಬಾರಿ 100 ಕುರಿ ಮರಿ, ನಂತರ 200 ಕುರಿ ಮರಿಗಳನ್ನು ತಂದು ಸಾಕಾಣಿಕೆ ಮಾಡುವಷ್ಟು ಕುರಿ ಸಾಕಾಣಿಕೆ ಕೈ ಹಿಡಿದಿತ್ತು.
ಸಾಫ್ಟವೇರ್ ಕೆಲಸ ಬಿಟ್ಟು ಕೃಷಿಗೆ ನಿಂತ ಯುವಕ.. ಬಂಜರು ಭೂಮಿಯಲ್ಲಿ ವ್ಯವಸಾಯ ಮಾಡಿ ಗೆದ್ದ!
ಸ್ವಂತ ಬ್ರೀಡಿಂಗ್ ಮಾಡಲು ಆರಂಭ!
2018ರಲ್ಲಿ ಕುರಿ ಮರಿಗಳ ಬೆಲೆ ಹೆಚ್ಚಾಯಿತು. ಈ ಕಾರಣದಿಂದ ಇವರು ಸ್ವತಃ ತಾವೇ ಬ್ರೀಡಿಂಗ್ ಮಾಡುವ ಯೋಚನೆ ಮಾಡಿದರು. 150 ಹೆಣ್ಣು ಕುರಿ ಮರಿಗಳನ್ನು ಮತ್ತು 10 ಟಗರುಗಳನ್ನು ತಂದು ಕೊಟ್ಟಿಗೆ ಪದ್ದತಿ/ ಅರೆ ವಲಸೆ ಪದ್ದತಿಯಲ್ಲಿ ಸಾಕಲು ಪ್ರಾರಂಭಿಸಿದರು.
ಹೆಚ್ಚಿನ ಪಾಲನೆ-ಪೋಷಣೆಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆಡು ಮತ್ತು ಕುರಿ ಸಾಕಾಣಿಕೆ ತರಬೇತಿಯನ್ನು ಪಡೆದುಕೊಂಡರು. ಕುರಿಗಳ ನಿರ್ವಹಣೆಗೆ 3 ಜನ ಕೆಲಸಗಾರರನ್ನು ಕೂಡ ನೇಮಿಸಿಕೊಂಡಿದ್ದಾರೆ. ಸದ್ಯಕ್ಕೆ ಒಟ್ಟು 300 ಕುರಿಗಳು ಹಾಗೂ 100 ಟಗರುಗಳನ್ನು ಇವರು ಸಾಕುತ್ತಿದ್ದಾರೆ. ಸ್ಥಳೀಯವಾಗಿ ಕುರಿಗಳನ್ನು ಮಾರಾಟ ಮಾಡುತ್ತಾರೆ.
ಒಂದು ವರ್ಷದ ಟಗರು 40ರಿಂದ 55 ಕೆ.ಜಿ ತೂಗುತ್ತವೆ. ಇವುಗಳನ್ನು 15000 ದಿಂದ 25000 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ಒಟ್ಟು ವಾರ್ಷಿಕವಾಗಿ 7ರಿಂದ 8 ಲಕ್ಷದವರೆಗೆ ಈ ಕುರಿ ಸಾಕಾಣಿಕೆಯಿಂದ ಲಾಭವನ್ನು ಪಡೆಯುತ್ತಾರೆ. ಜೊತೆಗೆ 20 ಆಡು ಹಾಗೂ 200 ನಾಟಿ ಕೋಳಿ ಸಾಕಾಣಿಕೆಯನ್ನು ಕೂಡ ಮಾಡುತ್ತಿದ್ದಾರೆ.
ಕುರಿಗಳಿಗೆ ಆಹಾರವಾಗಿ ಜಮೀನಿನಲ್ಲಿ ಬೆಳೆದ ಶೇಂಗಾ, ಕಡಲೆ, ಗೋಧೀ ಹೊಟ್ಟು, ಜೋಳ, ಮೆಕ್ಕೆ ಜೋಳದ ಮೇವನ್ನು ನೀಡುತ್ತಾರೆ. ಹಸಿರು ಮೇವಿಗಾಗಿ ಜಲಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಪಶುಸಂಗೋಪಣೆ ಇಲಾಖೆಯಿಂದ ಜಲಕೃಷಿ ಯಂತ್ರವನ್ನು ಪಡೆದುಕೊಂಡಿದ್ದಾರೆ.
ಸ್ಥಳೀಯ ವೈದ್ಯರಿಂದ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸುತ್ತಾರೆ. ಕುರಿ ಸಾಕಾಣಿಕೆ ಜೊತೆಗೆ ಮನೆಯ ಆವರಣದಲ್ಲಿ ಸುಂದರ ಕೈತೋಟ, ಪೌಷ್ಟಿಕ ತೋಟ ಮಾಡಿದ್ದು ದಿನನಿತ್ಯದ ತರಕಾರಿಯನ್ನು ಸಹ ಬೆಳೆಯುತ್ತಾರೆ.
ಎರೆಹುಳು ಘಟಕವನ್ನು ಕೂಡ ಇವರು ನಿರ್ಮಿಸಿದ್ದು, ಕೈತೋಟ್ ಹಾಗೂ ಜಮೀನಿಗೆ ಬಳಸುತ್ತಿದ್ದಾರೆ. ಇದಕ್ಕಾಗಿ ಒಂದು ಜವಾರಿ ಹಸುವನ್ನು ಕೂಡ ಸಾಕಿದ್ದಾರೆ.
ಸ್ವಂತ ಉದ್ಯಮದಲ್ಲೂ ಸಾಧನೆ!
ಅನ್ನಪೂರ್ಣೇಶ್ವರಿ ಫುಡ್ ಪ್ರೊಸೆಸಿಂಗ್ ಎಂಬ ಸಣ್ಣ ಉದ್ಯಮ ಪ್ರಾರಂಭಿಸಿ ಖಾರದ ಪುಡಿ, ಮಸಾಲೆ ಪುಡಿ, ಅರಿಷಿನ ಪುಡಿಗಳನ್ನ ತಯಾರಿಸಿ ಮಾರಾಟ ಮಾಡುತ್ತಾರೆ. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿದ್ದಾರೆ.
ಇವರು ಈ ವ್ಯವಸ್ಥಿತ ಕೃಷಿ ಉಪಕಸುಬು ಮಾದರಿಯಾಗಿದ್ದು, ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ರೈತರು ಇವರ ಕಾರ್ಯವನ್ನು ನೋಡಲು ಇವರ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.
ಸಮಾಜ ಸೇವೆಗೂ ಸೈ
ಕೃಷಿಯೊಂದಿಗೆ ಸಾಮಾಜಿಕ ಸೇವೆ ಚಟುವಟಿಕೆಯಲ್ಲೂ ಮುಂದಾಗಿರುವ ಇವರು, ಮುಳಗುಂದದ ಶಾಲಾ-ಕಾಲೇಜುಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಮುರಾರ್ಜಿ ಶಾಲೆಗೆ 50ಕ್ಕೂ ಹೆಚ್ಚು ಹೂಕುಂಡಲಿ ಹಾಗೂ ಉಪಯುಕ್ತ ಸಸಿಗಳನ್ನು ನೀಡಿದ್ದಾರೆ.
ಪ್ರತಿ ವರ್ಷ ತಮ್ಮ ಗ್ರಾಮ ದೇವಿ ಜಾತ್ರೆಯಲ್ಲಿ 500ಕ್ಕೂ ಹೆಚ್ಚು ತುಳಸಿ ಸಸಿಗಳನ್ನು ಹಂಚುತ್ತಾರೆ. ಹುಟ್ಟುಹಬ್ಬ, ಮದುವೆ ಸಮಾರಂಭಗಳಿಗೆ ಕೂಡ ಸಸಿಯನ್ನೆ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ.
ಸ್ಥಳೀಯ ಮಠವೊಂದರಲ್ಲಿ ಅನಾಥ ಮಗುವನ್ನು ದತ್ತು ತೆಗೆದುಕೊಂಡು ಅವನ ವಿದ್ಯಾಬ್ಯಾಸವನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸನ್ಮಾನ ಮಾಡಿ, ಆರ್ಥಿಕ ನೆರವನ್ನು ಕೂಡ ನೀಡುತ್ತಾರೆ.
ಮಂಗಳಾ ನೀಲಗುಂದ ಅವರಿಗೆ ದೊರೆತ ಪ್ರಶಸ್ತಿಗಳು
* ಜಿಲ್ಲಾ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ : ಧಾರವಾಡದ ಕೃಷಿ ವಿಶ್ವವಿದ್ಯಾಲಯದ
* ಗದಗ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ : ಗದಗ ಜಿಲ್ಲಾ ಕೃಷಿ ಇಲಾಖೆ
* ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ : ಕೆ.ಎಚ್.ಪಾಟೀಲ್ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ
* ರೈತ ರತ್ನ ಪ್ರಶಸ್ತಿ : ರಾಯಚೂರಿನ ಇರಕಲ್ಲಿನ ಜ.ಶಿವಶಕ್ತಿ ಪೀಠ
* ರೈತ ರತ್ನ ಪ್ರಶಸ್ತಿ : ಕೃಷಿಕ ಸಮಾಜ ನವದೆಹಲಿ
Share your comments