ಜಾನುವಾರುಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ವಾರ್ರೂಂ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.
ಅವರು ವಿಜಯಪುರದಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿ, ಪಶು ವೈದ್ಯರು ಹಳ್ಳಿಗಳಿಗೆ ಹೋಗುತ್ತಿಲ್ಲವೆಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಸಿಗುತ್ತಿಲ್ಲ ಎಂದು ರೈತರಿಂದ ದೂರುಗಳು ಕೇಳಿಬಂದಿವೆ. ಕಾರಣ ರೈತರ ದೂರುಗಳಿಗೆ ಸ್ಪಂದಿಸುವ ಉದ್ದೇಶದಿಂದ ವಾರ್ರೂಂ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.
ಪಶು ಆರೋಗ್ಯದಲ್ಲಿ ವ್ಯತ್ಯಾಸವಾದರೂ ರೈತರು ವಾರ್ ರೂಂಗೆ ಕರೆ ಮಾಡಿದರೆ ಸಾಕು, ವೈದ್ಯರು ರೈತರನ್ನು ಸಂಪರ್ಕಿಸಿ ಪಶುಗಳಿಗೆ ಚಿಕಿತ್ಸೆ ನೀಡುವರು. ವಾರ್ರೂಂ ಸಹಾಯವಾಣಿಗೆ ರೈತರಿಂದ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸಂಬಂಧಿಸಿದ ವೈದ್ಯರಿಗೆ ಮಾಹಿತಿ ರವಾನಿಸಿ, ಚಿಕಿತ್ಸೆ ನೀಡಲು ಸ್ಥಳಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಜಾನುವಾರುಗಳ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಪಶು ಸಂಜೀವಿನಿ ಆಂಬುಲೆನ್ಸ್ ಸೇವೆ ಈಗಾಗಲೇ ಆರಂಭಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸರ್ಕಾರದಿಂದ ಪಶುಗಳ ತುರ್ತು ಚಿಕಿತ್ಸೆಗಾಗಿ ಪಶು ಸಂಜೀವಿನ ವಾಹನವನ್ನು ನೀಡಲಾಗಿದೆ. ರಾಜ್ಯದ 15 ಜಿಲ್ಲೆಗಳಿಗೆ ಆಂಬುಲೆನ್ಸ್ ಒದಗಿಸಲಾಗಿದ್ದು, ಉಳಿದ ಜಿಲ್ಲೆಗಳಿಗೂ ಶೀಘ್ರದಲ್ಲೇ ಒದಗಿಸಲಾಗುವುದು ಎಂದು ತಿಳಿಸಿದರು.
Share your comments