ಸಾಮಾನ್ಯವಾಗಿ ಕೆಲವೊಮ್ಮೆ ರಾತ್ರಿ ಮಾಡಿದ ಅನ್ನ ಉಳಿದು ಹೋಗುವುದು ಸಾಮಾನ್ಯ! ಆದ್ರೆ ಇದೇ ಅನ್ನಕ್ಕೆ ಮರುದಿನ ಈರುಳ್ಳಿ, ಉಪ್ಪು, ಹುಳಿ, ಖಾರ ಹಾಕಿ ವೆರೈಟಿ ಶೈಲಿಯ ಚಿತ್ರಾನ್ನ ಮಾಡುತ್ತಾರೆ. ಅನ್ನ ಬೇಯಿಸಿದ ನಂತರವೂ ಚಿತ್ರಾನ್ನ ಮಾಡಬಹುದು. ಮಾಡುವ ವಿಧಾನ ನೋಡೋಣ ಬನ್ನಿ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 120 ಎಂಎಲ್)
2 ಕಪ್ ಅಕ್ಕಿ(ಸೋನಾ ಮಸೂರಿ)
1 ಕಪ್ ತೆಂಗಿನ ತುರಿ
3 ಹಸಿರು ಮೆಣಸಿನಕಾಯಿ
1 ಟೀಸ್ಪೂನ್ ಸಾಸಿವೆ
2 ಟೇಬಲ್ ಸ್ಪೂನ್ ಶೇಂಗಾ
2 ಟೀಸ್ಪೂನ್ ಉದ್ದಿನ ಬೇಳೆ
2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
6 ಕರಿಬೇವಿನ ಎಲೆ
2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
1/4 ಟೀಸ್ಪೂನ್ ಅರಿಶಿನ ಪುಡಿ
1 ದೊಡ್ಡ ನಿಂಬೆ ಹಣ್ಣು
4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಮಾಡುವ ವಿಧಾನ:
ಒಂದು ಕುಕ್ಕರ್ ನಲ್ಲಿ 2 ಕಪ್ ಅಕ್ಕಿ ತೆಗೆದುಡಕೊಂಡು ತೊಳೆಯಿರಿ. ಅನ್ನ ಮಾಡಲು ಬೇಕಾದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಅನ್ನ ಸ್ವಲ್ಪ ಮೆತ್ತಗೆ ಬೆಂದಿರಬೇಕು. ಬೇಕಾದಲ್ಲಿ ಅಕ್ಕಿಯೊಂದಿಗೆ ನೆನೆಸಿದ ಬಟಾಣಿ ಕಾಳನ್ನು ಸೇರಿಸಿ ಬೇಯಿಸಿಕೊಳ್ಳಿ. ಅನ್ನ ಬೇಂಯುವ ಸಮಯದಲ್ಲಿ ಚಿತ್ರಾನ್ನಕ್ಕೆ ಒಗ್ಗರಣೆ ಮಾಡಿಕೊಳ್ಳೊಣ. ಒಗ್ಗರಣೆ ಪ್ರಾರಂಭಿಸುವ ಮೊದಲು ಒಂದು ಮಿಕ್ಸಿ ಜಾರಿನಲ್ಲಿ 1 ಕಪ್ ತೆಂಗಿನ ತುರಿ, 3 ಹಸಿರು ಮೆಣಸಿನಕಾಯಿ, 1/2 ಚಮಚ ಸಾಸಿವೆ ಹಾಕಿ. ಅದನ್ನು ನೀರು ಹಾಕದೆ ಪುಡಿ ಮಾಡಿ ಪಕ್ಕಕ್ಕಿಡಿ. ಇದನ್ನು ಒಗ್ಗರಣೆ ಮಾಡುವಾಗ ಮುಂದೆ ಉಪಯೋಗಿಸಲಾಗುತ್ತದೆ.
ಈಗ ಒಂದು ದೊಡ್ಡ ಬಗೋಣಿಯನ್ನು ತಗೆದುಕೊಂಡು ಎಣ್ಣೆ ಹಾಕಿ ಕಾಯಲು ಇಡಿ. ಅದಕ್ಕೆ ಶೇಂಗಾ ಹಾಕಿ. ಇವು ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.ಸಾಸಿವೆ ಸಿಡಿದ ಕೂಡಲೇ ಅರಶಿನ ಪುಡಿ ಮತ್ತು ಕರಿಬೇವು ಸೇರಿಸಿ. ಈ ಹಂತದಲ್ಲಿ ಗ್ಯಾಸ್ ಆಫ್ ಮಾಡಿ.ನಂತರ ಪುಡಿಮಾಡಿದ ತೆಂಗಿನ ತುರಿ, ಸಾಸಿವೆ ಮತ್ತು ಹಸಿಮೆಣಸಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ. ಕೂಡಲೇ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಕಲಸಿ. ಕೊನೆಯಲ್ಲಿ ದೊಡ್ಡ ರಸಭರಿತವಾದ ನಿಂಬೆ ಹಣ್ಣಿನಿಂದ ತೆಗೆದ ರಸವನ್ನು ಸೇರಿಸಿ. ಈ ಅನ್ನವು ಸ್ವಲ್ಪ ಹುಳಿ ಹುಳಿಯಾಗಿರಬೇಕು. ನಂತರ ಬೇಯಿಸಿದ ಅನ್ನ ಸೇರಿಸಿ. ಈಗ ಇವೆಲ್ಲವನ್ನು ಚಮಚದಿಂದ ಚೆನ್ನಾಗಿ ಕಲಸಿ.ಈಗ ಚಿತ್ರಾನ್ನ ಬಡಿಸಲು ಸಿದ್ಧವಾಗುವುದು.
ಲೇಖಕರು: ಶಗುಪ್ತಾ ಅ ಶೇಖ
Share your comments