1. ತೋಟಗಾರಿಕೆ

ಮಾವು

Raw mango benefits and usage

‘ಮಾವು ಎಂದಾಕ್ಷಣ ತನ್ನ ವಿಶಿಷ್ಟ ಸಿಹಿ ಸ್ವಾದದ ಮೂಲಕ ಬಳಕೆದಾರನ ಬಾಯಲ್ಲಿ ನೀರೂರಿಸುವ ವಿವಿಧ ಆಕಾರ-ಆಕರ್ಷಕ ವರ್ಣದಿಂದ ಪರಿಚಿತವಾಗಿರುವ ಹಣ್ಣಿನ ಕಲ್ಪನೆ ಮೂಡುವುದು ಸಹಜ. ತೋಟಗಾರಿಕಾ ಬೆಳೆಯಾಗಿರುವ ಮಾವಿನ ಹಣ್ಣನ್ನು ನೇರವಾಗಿ ಸೇವಿಸುವುದು ಮಾತ್ರವಲ್ಲದೆ ಅದರ ರಸದಿಂದ ವಿವಿಧ ಬಗೆಯ ಮೌಲ್ಯ ವರ್ಧಿತ ವಸ್ತುಗಳನ್ನು ತಯಾರಿಸಿ ಬಳಕೆ ಮಾಡಲಾಗುತ್ತಿದೆ.

ಮಾವಿನ ಪರಿಚಯ ಹೊಸದೇನಲ್ಲ. ಸಾವಿರಾರು ವರ್ಷಗಳಿಂದ ಬಳಕೆಯಾಗುತ್ತಿರುವ ಮಾವಿನಲ್ಲಿ ಇದೀಗ ಮಧುರ ಸ್ವಾದವುಳ್ಳ ಅನೇಕ ಸುಧಾರಿತ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ - ನಿಜ. ಆದರೆ ನಿಸರ್ಗದಲ್ಲಿ ತಾನಾಗಿಯೇ ಬೆಳೆದುಕೊಳ್ಳುವ ಕಾಡು ಮಾವಿನ ತಳಿಗಳನ್ನು ಕೂಡ ಕಡೆಗಣಿಸುವಂತಿಲ್ಲ. ಈ ಕಾಡುತಳಿಯ ಮಾವುಗಳಲ್ಲಿ ಕೆಲವು ತಳಿಗಳು ಮಧುರ ಸವಿಯನ್ನು ಹೊಂದಿದ್ದರೂ ಸಣ್ಣ ಗಾತ್ರ ಅಥವಾ ಅಧಿಕ ನಾರಿನ ಅಂಶ ಹೊಂದಿದ್ದು ವಾಣಿಜ್ಯ ದೃಷ್ಟಿಯಿಂದ ನೋಡಿದರೆ ಸುಧಾರಿತ ತಳಿಯ ಮಾವಿನ ಹಣ್ಣಿನ ಎದುರು ಅಷ್ಟೇನು ಬೆಲೆಯುಳ್ಳದ್ದೆನಿಸದಿರಬಹುದು. ಮಲೆನಾಡಿನ ಅರಣ್ಯ ಇಲ್ಲವೇ ಹೊಳೆ-ಹಳ್ಳಗಳ ಅಂಚಿನಲ್ಲಿ ಹೆಮ್ಮರವಾಗಿ ಬೆಳೆದು ನಿಲ್ಲುವ ‘ಅಪ್ಪೆ’ ಎಂಬ ಕಾಡು ಮಾವು ಹಣ್ಣಾದಾಗಲೂ ಪೂರ್ಣ ಹುಳಿ ರುಚಿಯನ್ನೇ ಹೊಂದಿರುತ್ತದೆ. ಹೀಗಿದ್ದರೂ ಈ ಕಾಡು ಮಾವಿನ ತಳಿ ಹೇಗೆ ಉಪಯುಕ್ತವಾಗಿರುತ್ತವೆ – ಗೊತ್ತೆ?

ಪೂರ್ವ ಪರಿಚಿತ – ಮಿಡಿ ಮಾವು:

ಶತಮಾನಗಳಷ್ಟು ಹಿಂದಿನಿಂದಲೂ ಮಲೆನಾಡಿನ ಭಾಗದಲ್ಲಿ ಮಿಡಿಮಾವು ಉಪ್ಪಿನಕಾಯಿ ಪ್ರಸಿದ್ಧವಾಗಿದೆ. ಫೆಬ್ರುವರಿ-ಮಾರ್ಚ ಸಮಯದಲ್ಲಿ ಹೊಳೆ-ಹಳ್ಳಗಳ ಅಂಚಿನಲ್ಲಿ ಬೆಳೆದುಕೊಂಡಿರುತ್ತಿದ್ದ ಮಾವಿನ ಮರಗಳಲ್ಲಿ ಬೆಳೆಯುತ್ತಿರುವ ಸೂಕ್ತವಾದ ಹಂತದ ಮಿಡಿಮಾವುಗಳನ್ನು ಕೊಯ್ದು ತಂದು ಅವುಗಳನ್ನು ಶುದ್ಧವಾದ ನೀರಿನಿಂದ ತೊಳೆದು ನೆರಳಿನಲ್ಲಿ ಹರವಿ ತೇವವು ಆರಿದ ನಂತರ ಕಾಜು ಇಲ್ಲವೆ ಮಣ್ಣಿನ ಪಾತ್ರೆಗಳಲ್ಲಿ ಅಗತ್ಯ ಪ್ರಮಾಣದ ಉಪ್ಪಿನ ಮಿಶ್ರಣದೊಂದಿಗೆ ಹಾಕಿ ಮುಚ್ಚಿಡುತ್ತಾರೆ. ಒಂದು ವಾರದೊಳಗೆ ಆ ಮಿಡಿಮಾವುಗಳು ಆಕಾರದಲ್ಲಿ ಕುಗ್ಗಿ ಚಪ್ಪಟಿಯಾಗಿ ನೀರಿಗೆಗಳಿಂದ ಕೂಡಿರುತ್ತವೆ. ಇವುಗಳಲ್ಲಿ ಆಯ್ಕೆ ಮಾಡಿದ ಮಿಡಿಗಳನ್ನು ಉಪ್ಪಿನಕಾಯಿ ತಯಾರಿಸಲು ಬಳಸಿಕೊಳ್ಳುತ್ತಾರೆ. ಅನುಭವಿ ತಾಯಂದಿರು ವಿನೆಗರ್ ಮುಂತಾದ ಯಾವುದೆ ರಾಸಾಯನಿಕ ವಸ್ತುಗಳನ್ನು ಬಳಸದೆ ತಯಾರಿಸಿದ ಈ ಉಪ್ಪಿನ ಕಾಯಿಗಳು ವರ್ಷಗಟ್ಟಲೇ ಕೆಡದೆ ಉಳಿಯುವುದು ಗಮನಾರ್ಹ ಸಂಗತಿ.

ಉಪ್ಪಿನಕಾಯಿ ಉದ್ಯಮಕ್ಕೆ ಉಪಯುಕ್ತ:

ಮಾವಿನ ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ಉಪ್ಪಿನಕಾಯಿ ಕೂಡ ಒಂದು. ‘ಊಟಕ್ಕೆ ಮೊದಲು ಉಪ್ಪಿನಕಾಯಿ’ ಎಂಬ ಗಾದೆ ಕೂಡ ಇದೆ. ಹಿಂದೆ ಉಪ್ಪಿನಕಾಯಿಗಳನ್ನು ಮನೆಯಲ್ಲೆ ತಯಾರಿಸಿಕೊಳ್ಳುವುದು ವಾಡಿಕೆಯಾಗಿತ್ತು. ಇಂದಿನ ಅವಸರದ ಯುಗದಲ್ಲಿ ಉಪ್ಪಿನಕಾಯಿ ತಯಾರಿಕೆ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಮಾರುಕಟ್ಟೆಯಲ್ಲಿ ದೊರೆಯುವ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಉಪ್ಪಿನಕಾಯಿ ಕೂಡ ಒಂದು ಸ್ಥಾನ ಹೊಂದಿದೆ. ಲಿಂಬು ಮುಂತಾದ ಹುಳಿ ರುಚಿಯ ಹಣ್ಣುಗಳು ಮಾತ್ರವಲ್ಲದೆ ರಾಸಾಯನಿಕಗಳ ಸಹಾಯದಿಂದ ತಯಾರಿಸಲಾಗುವ ವಿವಿಧ ಬಗೆಯ ತರಕಾರಿಗಳ ಉಪ್ಪಿನಕಾಯಿಗಳು ಕೂಡ ಈಗ ಲಭ್ಯ.

ಉಪ್ಪಿನಕಾಯಿ ತಯಾರಿಕೆಯಲ್ಲಿ ಮಾವಿನಕಾಯಿಗಳನ್ನು ವಿಫುಲವಾಗಿ ಬಳಸಲಾಗುತ್ತಿದೆ. ಹಣ್ಣು ಮಾಡಲು ಹೆಚ್ಚು ಉಪಯುಕ್ತವಲ್ಲದ ಮಾವಿನಕಾಯಿಗಳನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸುವುದು ಸಾಮಾನ್ಯ. ಹೆಚ್ಚು ಜನರು ಮಾವಿನಕಾಯಿಯ ಉಪ್ಪಿನಕಾಯಿಗಳನ್ನು ಇಷ್ಟ ಪಡುತ್ತಾರೆ. ಸಾಮಾನ್ಯ ದರ್ಜೆಯ ಮಾವಿನಕಾಯಿಗಳ ಲಭ್ಯತೆ ಕಡಿಮೆಯಿದ್ದರೆ ತೋತಾಪುರಿಯಂಥ ತಳಿಯ ಮಾವಿನಕಾಯಿಗಳನ್ನೂ ಕೂಡ ಬಳಸುತ್ತೇವೆ.

ಮಾವಿನಕಾಯಿಯ ಉಪ್ಪಿನಕಾಯಿಗಳಲ್ಲಿ ತುಸು ಬೆಳೆದ ಮಾವಿನಕಾಯಿಗಳ ಹೋಳುಗಳನ್ನು ಹಾಕಿರುತ್ತಾರೆ. ಇದಕ್ಕಿಂತಲೂ ಹೆಚ್ಚು ಜನಪ್ರಿಯವಾಗಿರುವುದೆಂದರೆ ಮಿಡಿಮಾವು ಬಳಸಿರುವ ಉಪ್ಪಿನಕಾಯಿ ಇತರ ಉಪ್ಪಿನಕಾಯಿಗಳಿಗಿಂತ ಮಿಡಿಮಾವು ಉಪ್ಪಿನಕಾಯಿಗೆ ಬೆಲೆಯೂ ಹೆಚ್ಚು. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಮಿಡಿಮವುಗಳು ಪೂರೈಕೆಯಾಗದ ಕಾರಣ ಈ ವಿದ್ಯಮಾನ ಸಹಜ. ಮಿಡಿಮಾವು ಲಭ್ಯವಿರುವ ಕಾಲದಲ್ಲಿ ಉಪ್ಪಿನಕಾಯಿ ತಯಾರಿಸುವ ಉದ್ಯಮಿಗಳು ತಮಗೆ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಂಡು ನಂತರ ಅವುಗಳನ್ನು ಉಪಯೋಗಿಕೊಳ್ಳುವತ್ತ ಬರುತ್ತಾರೆ. ಮಾವಿನ ವರ್ಗದಲ್ಲಿ ಸೇರಿಕೊಂಡಿದ್ದರೂ ಈ ಮಿಡಿ ಮಾವಿನ ಸಂಗತಿಯೆ ಬೇರೆ.

ವಿನಾಶದ ಅಂಚಿನಲ್ಲಿ ವಿಭಿನ್ನ ತಳಿಗಳು:

ಸುಧಾರಿತ ಹಣ್ಣು ಮಾವಿನ ತಳಿಗಿಂತಲೂ ಹೆಚ್ಚಿನ ತಳಿಗಳನ್ನು ಈ ಕಾಡು ಮಿಡಿಮಾವು ತಳಿಗಳಲ್ಲಿ ಕಾಣಬಹುದು. ಉದ್ದನೆಯ, ಗುಂಡಗಾಗಿರುವ, ಗಿಡ್ಡದಾದ ಮಾತ್ರವಲ್ಲ ಅವುಗಳು ತಮ್ಮದೇ ಆದ ವಿಶಿಷ್ಟ ಸುವಾಸನೆಯ ಸೊನೆಯನ್ನು ಹೊಂದಿದ್ದು ಈ ಮೂಲಕ ಸ್ಥಳೀಯರಿಂದ ವಿಶೇಷ ಮನ್ನಣೆಯನ್ನು ಕೂಡ ಪಡೆದುಕೊಂಡಿರುತ್ತವೆ! ‘ಜೀರಿಗೆ ಪರಿಮಳ’, ‘ಶುಂಠಿ’, ‘ಕಂಚಿಹುಳಿ’ ಇತ್ಯಾದಿ ಸುವಾಸನೆಯ ಮೂಲಕ ತಳಿಯನ್ನು ಹೆಸರಿಸುವುದಲ್ಲದೇ ಕೆಲವಕ್ಕೆ ವ್ಯಕ್ತಿಗಳ ಹೆಸರಿನಿಂದ ಕೂಡ ಕರೆಯುವುದಿದೆ.         

ಮಿಡಿಮಾವು ಹಂಗಾಮಿನಲ್ಲಿ ಮಲೆನಾಡಿನ ಭಾಗದ ರೈತರ ಸಂತೆಗಳಲ್ಲಿ ಇವು ಅಲ್ಪ ಪ್ರಮಾಣದಲ್ಲಿ ಮಾರಾಟ ವಾಗುವುದನ್ನು ನೋಡಬಹುದು. ಉತ್ತಮ ಪರಿಮಳದ ಮಿಡಿಗಳಾಗಿದ್ದಲ್ಲಿ ಕೆಲವೇ ಕ್ಷಣಗಳಲ್ಲಿ ಮಾರಾಟವಾಗಿ ಬಿಡುತ್ತವೆ.

ಸ್ವಾಭಾವಿಕವಾಗಿ ಬೆಳೆದುಕೊಂಡಿರುವ ಅದೆಷ್ಟೋ ಉತ್ತಮ ‘ಅಷ್ಪೆ’ ಮಿಡಿಮಾವು ತಳಿಗಳು ಕಣ್ಮರೆಯಾಗುತ್ತಿವೆ. ಈ ನಡುವೆ ಕೆಲವು ಪ್ರಗತಿಪರ ಯುವ ರೈತರು ಉತ್ತಮ ಗುಣಮಟ್ಟದ ಮಿಡಿಮಾವು ತಳಿಗಳನ್ನು ಕಸಿಮಾಡಿ ಸಸಿಗಳನ್ನು ಬೆಳೆಸಿ ರಕ್ಷಿಸುವ ಹವ್ಯಾಸ ಬೆಳೆಸಿಕೊಂಡಿರುವುದು ಶ್ಲಾಘನೀಯ.

ಮಿಡಿಮಾವು ಮರಗಳು ಸ್ವಾಭಾವಿಕವಾಗಿ ಹೆಚ್ಚು ಎತ್ತರಕ್ಕೆ ಬೆಳೆದುಕೊಂಡಿರುವುದರಿಂದ ಮರಗಳನ್ನು ಏರಿ ಕಾಯಿಗಳನ್ನು ಕೊಯ್ಲು ಮಾಡಲು ಕುಶಲತೆಯುಳ್ಳ ಅನುಭವಿಗಳೇ ಬೇಕು. ದೊಡ್ಡ-ದೊಡ್ಡ ಮರಗಳಲ್ಲಿ ಎಲ್ಲ ಕಾಯಿಗಳನ್ನು ಕೊಯ್ಲು ಮಾಡುವುದು ಕಷ್ಟ. ಕೆಲವರು ಟೊಂಗೆಗಳನ್ನು ಕತ್ತರಿಸಿ ಮರಕ್ಕೆ ಹಾನಿ ಮಾಡುವುದು ಇಲ್ಲದಿಲ್ಲ.

ರೈತರು ತಮ್ಮ ತೋಟ-ಹೊಲಗಳ ಅಂಚಿನಲ್ಲಿ ಪೂರಕ ಬೆಳೆಯಾಗಿ ಮಾತ್ರವಲ್ಲದೆ ಅವಕಾಶವಿದ್ದಲ್ಲಿ ಹೆಚ್ಚಿನ ಮಿಡಿಮಾವು ಬೆಳೆಸಿಕೊಂಡರೆ ಉತ್ತಮ.

ಸ್ವಾಭಾವಿಕವಾಗಿ ಬೀಜದಿಂದ ಹುಟ್ಟಿದ ಮಿಡಿಮಾವು ಮರಗಳು ಹೆಚ್ಚು ಕಾಲ ಬಾಳುವುದಾದರೂ ಫಸಲು ನೀಡಲು ಹೆಚ್ಚಿನ ಸಮಯ ಬೇಕು. ಅಲ್ಲದೆ ಪರಕೀಯ ಪರಾಗ ಸ್ಪರ್ಶದ ಗಾರಣದಿಂದಾಗಿ ತಳಿಯ ಗುಣಧರ್ಮದಲ್ಲಿ ವ್ಯತ್ಯಾಸ ವಾಗುವ ಸಾಧ್ಯತೆ ಇರುತ್ತದೆ. ಉತ್ತಮ ಗುಣಮಟ್ಟದ ತಳಿಗಳನ್ನು ಆಯ್ದು ಕಸಿ ಮಾಡಿದ ಗಿಡಗಳಿಂದ ಅದೇ ಗುಣಮಟ್ಟದ ಫಸಲನ್ನು ಶೀಘ್ರದಲ್ಲಿ ಪಡೆಯಲು ಸಾಧ್ಯವಾಗುವುದರಿಂದ ಲಾಭದಾಯಕವೆನಿಸುತ್ತದೆ.

ಹಿಂದೆ ದಾರಿಹೋಕರಿಗೆ ನೆರಳು ನೀಡಲು ಮಾವಿನ ಗಿಡಗಳನ್ನು ನೆಡುವ ಸಂಪ್ರದಾಯವಿತ್ತು. ಸ್ವಾದಿಷ್ಟ ಸವಿಯ ಮಾವಿನಹಣ್ಣುಗಳು ಸಂತೃಪ್ತಿ ನೀಡುವಂತೆ ರುಚಿಕರ ಮಿಡಿ ಮಾವುಗಳು ಕೂಡ ಬಳಕೆದಾರನ ಮನ ಗೆಲ್ಲುವುದು ಮಾತ್ರವಲ್ಲದೆ ರೈತನಿಗೆ ಲಾಭಕರವಾದ ಆದಾಯ ನೀಡಬಹುದೆಂದು ಆಶಿಸಬಹುದಾಗಿದೆ.

Published On: 04 October 2018, 03:09 AM English Summary: Raw Mango usage, importance and benefits

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.