ಕೃಷಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.
1. ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಮಹಾರಾಷ್ಟ್ರ ನಿರ್ಣಯಕ್ಕೆ ವಿರೋಧ
2. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಸರ್ಕಾರದಿಂದ ಅಧಿಸೂಚನೆ
3. ಕುವೆಂಪು ಕವಿಮನೆ ದುರಸ್ತಿಗೆ 1 ಕೋಟಿ ಅನುದಾನ
4. ಸಕ್ಕರೆ ಆಯುಕ್ತರ ಕಚೇರಿ ಬೆಳಗಾವಿಗೆ ಶೀಘ್ರ ಸ್ಥಳಾಂತರ
5. ಗೂಗಲ್‌ನಿಂದ ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಉತ್ತೇಜನ
6. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ
7. ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಸರ್ಕಾರಿ ಗೋಶಾಲೆ: ಪ್ರಭು ಚವ್ಹಾಣ್
8. ಆಧಾರ್‌ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು!
9. ರಾಜ್ಯದಲ್ಲಿ ಚರ್ಮಗಂಟು ರೋಗ ನಿಯಂತ್ರಣ
10. ಕೊರೊಮಂಡಲ್‌ನ ಗ್ರೊಮೊರ್‌ಸುರಕ್ಷಾ ವತಿಯಿಂದ ರೈತ ದಿನಾಚರಣೆ
-------
1. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇದೀಗ ಮತ್ತಷ್ಟು ಜಟಿಲ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ಗಡಿಯಲ್ಲಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಮತ್ತು ಭಾಲ್ಕಿ ವ್ಯಾಪ್ತಿಯಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಬದ್ಧತೆಯ ನಿರ್ಣಯವನ್ನು ಮಹಾರಾಷ್ಟ್ರದ ವಿಧಾನಮಂಡಲದಲ್ಲಿ ಮಂಗಳವಾರ ಅಂಗೀಕರಿಸಲಾಗಿದೆ. ಅಲ್ಲದೇ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೂ ಬಲ ತುಂಬುವ ಪ್ರಸ್ತಾವವನ್ನು ಇದರಲ್ಲಿ ಸೇರಿಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಎರಡು ಪುಟಗಳ ನಿರ್ಣಯವನ್ನು ಮಂಡಿಸಿದ್ದಾರೆ. ಮಹಾರಾಷ್ಟ್ರದ ಎರಡೂ ಸದನಗಳಲ್ಲಿಯೂ ನಿರ್ಣಯವು ಸರ್ವಾನುಮತದಿಂದ ಅಂಗೀಕಾರಿಸಲಾಗಿದೆ. ಮಹಾರಾಷ್ಟ್ರದ ಈ ನಿರ್ಣಯಕ್ಕೆ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಹಾರಾಷ್ಟ್ರದ ಈ ನಿರ್ಣಯವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-------
Lumpy Skin Disease| ಚರ್ಮಗಂಟು ರೋಗದಿಂದ ಜಾನುವಾರು ಸಾವು: ಪರಿಹಾರಕ್ಕೆ 30ಕೋಟಿ
-------
2. ರಾಜ್ಯ ನಾಗರಿಕ ಸೇವೆಗಳ ಕಾಯ್ದೆ–2020ಅನ್ನು ಜಾರಿಗೊಳಿಸಿ, ಸರ್ಕಾರ ಅಧಿಸೂಚನೆ ಹೊರಡಿಸಿದೆ. ವರ್ಗಾವಣೆ ಪ್ರಕ್ರಿಯೆಯು ಡಿ.28ರಿಂದಲೇ ಆರಂಭವಾಗಿ, 2023ರ ಫೆ.28ಕ್ಕೆ ಮುಗಿಯಲಿದೆ. ಶಿಕ್ಷಕರ ವರ್ಗಾವಣೆ ನಿಯಮಗಳನ್ನು ಸರಳೀಕರಣಗೊಳಿಸಿದ್ದು, ಶಿಕ್ಷಕಸ್ನೇಹಿ ವರ್ಗಾವಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಇದೀಗ ವರ್ಗಾವಣಾ ವೇಳಾ ಪಟ್ಟಿಯೂ ಬಿಡುಗಡೆಯಾಗಿದ್ದು, ಕಾಯ್ದೆ ತಿದ್ದುಪಡಿಯ ಕರಡು ಅಧಿಸೂಚನೆಗೆ ಸಲ್ಲಿಕೆಯಾದ ಪ್ರಮುಖ ಆಕ್ಷೇಪಣೆಗಳನ್ನು ಪರಿಗಣಿಸಲಾಗಿದೆ. 10ರಿಂದ 20 ವರ್ಷ ಸೇವೆ ಸಲ್ಲಿಸಿ ಪದೋನ್ನತಿ ಪಡೆದ ಶಿಕ್ಷಕರ ಕೋರಿಕೆಯಂತೆ ಸೇವಾಅಂಕಗಳನ್ನು ನೀಡಲಾಗಿದೆ. ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ 25ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ವಲಯಗಳಿಗೆ ವರ್ಗಾವಣೆ ಮಾಡಲು ಅವಕಾಶ ಇರುತ್ತದೆ. ವಲಯಗಳ ವರ್ಗಾವಣೆ ಪೂರ್ಣಗೊಂಡ ಬಳಿಕ ಹೊರ ಜಿಲ್ಲೆಗಳ ವರ್ಗಾವಣೆ ಕೋರಿಕೆಗಳನ್ನು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ.
-------
Heavy Rain ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ವಿವಿಧೆಡೆ ಮೂರು ದಿನ ಮಳೆ
-------
3. ಕುಪ್ಪಳಿಯ ಕುವೆಂಪು ಕವಿಮನೆ, ಹೇಮಾಂಗಣ ಹಾಗೂ ಸುತ್ತಮುತ್ತಲ ಪ್ರದೇಶಗಳ ದುರಸ್ತಿ ಕಾರ್ಯಕ್ಕೆ ಸರ್ಕಾರದಿಂದ 1 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ರಾಷ್ಟ್ರಕವಿ ಕುವೆಂಪು ಪ್ರಾಧಿಕಾರದಿಂದ ಕುವೆಂಪು ಅವರ ಮನೆ ದುರಸ್ತಿಗೆ ಸರ್ಕಾರ ದಿಂದ ಸಹಾಯಧನ ನೀಡುವಂತೆ ಮನವಿ ಮಾಡಲಾಗಿತ್ತು. ಮನವಿಯ ಆಧಾರದ ಮೇಲೆ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.
-------
4. ಅಧಿವೇಶನ ಮುಕ್ತಾಯವಾದ ನಂತರ ಬೆಳಗಾವಿ ಸುವರ್ಣಸೌಧಕ್ಕೆ ಸಕ್ಕರೆ ಆಯುಕ್ತಾಲಯವನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡುವುದಾಗಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ. ಕಳೆದ ವರ್ಷವೇ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಕಚೇರಿಯನ್ನು ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿದೆ ಎಂದಿದ್ದಾರೆ.
-------
5. ಗೂಗಲ್ ಕೃತಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಒಂದು ಮಿಲಿಯನ್ ಡಾಲರ್‌ಗಳವರೆಗೆ ಅನುದಾನ ನೀಡಲು ಮುಂದಾಗಿದೆ. ಅನುದಾನದಲ್ಲಿ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಕ್ಕೆ ಉತ್ತೇಜನ ನೀಡುವ ಸಾಧ್ಯತೆ ಇದೆ. ಹೊಸ ತಂತ್ರಜ್ಞಾನದಿಂದಾಗಿ ರೈತರಿಗೆ ಹವಾಮಾನದ ಬಗ್ಗೆ ನಿಖರ ಮಾಹಿತಿ ದೊರೆಯಲಿದೆ. ತಂತ್ರಜ್ಞಾನದ ಸಹಾಯದಿಂದ, ಕೃಷಿಗೆ ಸಂಬಂಧಿಸಿದ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. 2019ರ ದ್ವಿತೀಯಾರ್ಧದಲ್ಲಿ, ಕೃತಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು Google $ 2 ಮಿಲಿಯನ್ ಸಹಾಯ ಮಾಡುತ್ತಿತ್ತು. ಭಾರತದ ಅರ್ಧದಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.
-------
-------
6. ರಾಜ್ಯದಲ್ಲಿ ಬಹುತೇಕ ಒಣಹವೆ ಮುಂದುವರಿದಿದ್ದು, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದಿದೆ. ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಬೆಳಗಿನ ಜಾವ ಕೆಲವು ಕಡೆಗಳಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ. ಉಳಿದಂತೆ ಗರಿಷ್ಠ ಉಷ್ಣಾಂಶ 25 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಇರಲಿದೆ. ಇನ್ನು ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
-------
7. ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಶೀಘ್ರದಲ್ಲೇ ಸರ್ಕಾರಿ, ಗೋಶಾಲೆ ನಿರ್ಮಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಚರ್ಮಗಂಟುರೋಗ ಪೀಡಿತ ಜಾನುವಾರುಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಈ ಭಾಗದ ರೈತರು ದೇವರಿಗೆ ಹರಕೆ ಹೊತ್ತು ತಂದುಬಿಡುವ ಜಾನುವಾರುಗಳ ರಕ್ಷಣೆ ಹಾಗೂ ಯಲ್ಲಮ್ಮನ ಗುಡ್ಡದಲ್ಲಿ ನಡೆಯುವ ದನಗಳ ಜಾತ್ರೆಯನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
-------
8. ಆಧಾರ್‌ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ಜೋಡಣೆ ಕಡ್ಡಾಯ ಮಾಡಲಾಗಿದ್ದು, ಇದೀಗ ಕೊನೆಯ ಗಡುವು ನೀಡಲಾಗಿದೆ. 2023ರ ಮಾರ್ಚ್ 31ರ ಒಳಗೆ ಆಧಾರ್‌ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಲಿಂಕ್‌ಮಾಡಿಕೊಳ್ಳಬೇಕು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಈ ಅವಧಿಯ ಒಳಗಾಗಿ ಪಾನ್‌ಕಾರ್ಡ್ ಲಿಂಕ್‌ಆಗದಿದ್ದರೆ, ಪಾನ್‌ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಸೂಚನೆ ನೀಡಲಾಗಿದೆ. ಅದಾಯ ತೆರಿಗೆ ಇಲಾಖೆ ಕಾಯ್ದೆ 1961ರ ಅನ್ವಯ ಆಧಾರ್ ಜೊತೆಗೆ ಪಾನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಈಗಾಗಲೇ ಹೇಳಲಾಗಿದೆ. ಆದರೆ, ಇಲ್ಲಿಯವರೆಗೆ ಹಲವರು ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡಿಕೊಂಡಿಲ್ಲ. ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಆಧಾರ್‌ನೊಂದಿಗೆ ಪಾನ್ ಕಾರ್ಡ್ ಜೋಡಣೆ ಮಾಡಿಕೊಳ್ಳದೆ ಇದ್ದರೆ, ಅವಧಿ ಮುಗಿದ ಬಳಿಕ ಏಪ್ರಿಲ್ 1ರಿಂದ ಪಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
-------
9. ರಾಜ್ಯದಲ್ಲಿ ಚರ್ಮಗಂಟು ರೋಗ ಹತೋಟಿಯಲ್ಲಿದೆ. ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಚರ್ಮಗಂಟು ರೋಗ ಹೆಚ್ಚಳವಾಗಿದೆ. ಆದರೆ, ನಮ್ಮಲ್ಲಿ ಇಳಿಕೆ ಆಗಿದೆ. ಇನ್ನು ಚರ್ಮಗಂಟು ರೋಗದಿಂದ ಸಾವನ್ನಪ್ಪು ಜಾನುವಾರುಗಳ ಮಾಲೀಕರಿಗೆ ನಷ್ಟ ಭರಿಸಲು ಕ್ರಮವಹಿಸಲಾಗಿದೆ. ಅಲ್ಲದೇ ರೈತರಲ್ಲಿ ಈ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ. ಚರ್ಮಗಂಟು ರೋಗ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುವಂತೆ ಪಶು ವೈದ್ಯರಿಗೂ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
-------
10. ಕೊರೊಮಂಡಲ್‌ನ ಗ್ರೊಮೊರ್‌ಸುರಕ್ಷಾ ವತಿಯಿಂದ ಈಚೆಗೆ ರೈತ ದಿನಾಚರಣೆ ಆಚರಿಸಲಾಯಿತು. ರೈತರ ದಿನಾಚರಣೆಯ ಅಂಗವಾಗಿ ಗ್ರೊಮೊರ್‌ಸುರಕ್ಷಾ ವತಿಯಿಂದ ದೇಶದಾದ್ಯಂತ 150 ಸಭೆಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಅಂದಾಜು 10 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಸಭೆಯಲ್ಲಿ ರೈತರೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳು, ಕೀಟನಾಶಕ ವಿತರಕರು ಭಾಗವಹಿಸಿದ್ದು ವಿಶೇಷವಾಗಿತ್ತು.
-------
Share your comments