ರಾಜ್ಯದಲ್ಲಿ ಈಗ ಕುಂಭದ್ರೋಣ ಮಳೆಯಾಗುತ್ತಿದೆ. ಕರಾವಳಿಯಲ್ಲಿ ಇದೀಗ ಪ್ರವಾಹದ ಭೀತಿ ಎದುರಾಗಿದೆ.
ಈ ನಡುವೆ (Instagram Reels) ರೀಲ್ಸ್ ಮಾಡಲು ಹೋದ ಯುವಕ ಫಾಲ್ಸ್‌ನ ಬಂಡೆ ಮೇಲೆ ನಿಂತು ರೀಲ್ಸ್ ಮಾಡುವಾಗ ಕಾಲುಜಾರಿ ಬಿದ್ದು
ಕೊಚ್ಚಿಕೊಂಡು ಹೋಗಿರುವ ಹೃದಯವಿದ್ರಾವಕ ದೃಶ್ಯ ಇದೀಗ ವೈರಲ್ ಆಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಕೊಲ್ಲೂರು ಸಮೀಪದ ಅರಸಿನಗುಂಡಿ
ಜಲಪಾತದಲ್ಲಿ ಶರತ್‌ಕುಮಾರ್ (23) ವರ್ಷದ ಯುವಕ ಭಾನುವಾರ ಸಂಜೆ
ಇನ್‌ಸ್ಟಾಗ್ರಾಮ್‌ಗಾಗಿ ವಿಡಿಯೋ ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಘಟನೆಯನ್ನು ಆತನ ಸ್ನೇಹಿತ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.
ಸಾವನ್ನಪ್ಪಿದ ಶರತ್‌ಕುಮಾರ್ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರು ಎಂದು ಗುರುತಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಕುಮಾರ್ ಬಂಡೆಯ ಅಂಚಿನಲ್ಲಿ ನಿಂತು
ಜಲಪಾತಗಳನ್ನು ವೀಕ್ಷಿಸುತ್ತಿರುವಾಗ, ಅವರು ಜಾರಿಬಿದ್ದು ಭಾರೀ ನೀರಿನ ಹರಿವಿನಿಂದ ಕೊಚ್ಚಿಹೋಗಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕೊಲ್ಲೂರು
ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಯುವಕನ ಕುಟುಂಬ ಕೂಡ ಸೋಮವಾರ ಕೊಲ್ಲೂರಿಗೆ ತಲುಪಿದ್ದಾರೆ.
ಇದೀಗ ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಸಂತಾಪ ಮತ್ತು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಿಂದ ಸಾಮಾಜಿಕ ಜಾಲತಾಣದಲ್ಲಿ ಮನವಿ
ಈ ಘಟನೆ ನಡೆದ ನಂತರ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಕರ್ಕಿ (Prashanth Naik Karki) ಎಂಬವರು ಸಾಮಾಜಿಕ ಜಾಲತಾಣದಲ್ಲಿ
ಕರಾವಳಿಗೆ ಪ್ರವಾಸ ಬರುವವರಿಗೆ ಈ ರೀತಿ ಮನವಿ ಮಾಡಿದ್ದಾರೆ.
ಜಿಲ್ಲೆಗೆ ಬರೋ ಪ್ರವಾಸಿಗರ, ಸ್ನೇಹಿತರ, ಸಾರ್ವಜನಿಕರ ಗಮನಕ್ಕೆ ಇದನ್ನು ತರಲು ಇಚ್ಛಿಸುತ್ತೇನೆ.
ಉತ್ತರಕನ್ನಡ ಎಲ್ಲಾ ನದಿಗಳು (ಪ್ರಮುಖ ನಾಲ್ಕು ನದಿಗಳಾದ ಶರಾವತಿ, ಅಘನಾಶಿನಿ, ಗಂಗಾವಳಿ, ಕಾಳಿ) ಸೇರಿದಂತೆ ಎಲ್ಲವೂ ತುಂಬಿ ಹರಿಯುತ್ತಿದ್ದು
ನದಿ ಪಾತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಈ ಪ್ರಸ್ತುತ ಸಮಯದಲ್ಲಿ ಉತ್ತರ ಕನ್ನಡದ ಜಲಪಾತಗಳ, ನದಿಪಾತ್ರಗಳ,
ಸಮುದ್ರ ತೀರಗಳ ವೀಕ್ಷಣೆಗೆ ಬರೋದು ಅಪಾಯಕಾರಿಯಾಗಿದ್ದು ಮುಂದಿನ ಏಳು ದಿನಗಳ ಕಾಲ ಪ್ರವಾಸದ ಪ್ಲಾನ್ ಇದ್ದರೆ ಕಾನ್ಸಲ್ ಮಾಡೋದು ಒಳಿತು.
ಹಾಗೆ ಮಳೆಗಾಲ ಮುಗಿಯೊ ತನಕ ಜಲಪಾತದ ನೀರಿಗೆ ಇಳಿಯೋದು ಜೀವಕ್ಕೆ ಅಪಾಯ ತರುವಂತದ್ದು.
ಪ್ರವಾಹದ ನಂತರ ನೀರು ಹರಿಯೋ ಜಾಗ ತನ್ನ ಅಡಿಗಿನ ಭೂಮಿಯನ್ನ ಹೇಗೆ ಬೇಕೊ ಹಾಗೆ ಕೊರೆದು ಎತ್ತರ,
ತಗ್ಗು, ಸುಳಿ ಸೃಷ್ಟಿಸಿಕೊಂಡಿರುತ್ತದೆ. ಹಾಗಾಗಿ ನೀರಿಗೆ ಇಳಿಯೋ, ನೀರಿನ ಹತ್ತಿರ (Instagram Reels) ಹೋಗಿ ಹುಚ್ಚಾಟ ಮಾಡೋದು,
ರಿಸ್ಕ್ ತಕೊಳೋದು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಹಾಗೆ ಮುಂದಿನ ಅಕ್ಟೋಬರ್ ತಿಂಗಳು ಮುಗಿಯೋವರೆಗೆ ದಯವಿಟ್ಟು ಉತ್ತರಕನ್ನಡ ಸಮುದ್ರ ತೀರಗಳಲ್ಲಿ ನೀರಿಗೆ ಇಳಿಯಬೇಡಿ.
ಸಮುದ್ರ ಕೂಡ ಪ್ರತಿ ಮಳೆಗಾಲದ ನಂತರ ತನ್ನ ಮೇಲ್ಮೈ ಬದಲಿಸಿಕೊಳ್ಳುತ್ತದೆ.
ನೀರು ಅಪಾಯಕಾರಿ; ಅದರಲ್ಲೂ ಮಳೆಗಾಲದಲ್ಲಿ ಮತ್ತು ಅದರ ನಂತರ ಎರಡು ತಿಂಗಳು ಇನ್ನೂ ಅಪಾಯಕಾರಿ.
ಹುಚ್ಚಾಟಗಳಿಗೆ ಪ್ರಾಣ ಕಳೆದುಕೊಳ್ಳಬೇಡಿ. ಜೀವ ಅಮೂಲ್ಯ. ನೀರಿಗೆ ಹಾಕಿ ಅದನ್ನ ಸುಮ್ಮನೆ ಕಳೆದುಕೊಳ್ಳಬೇಡಿ.
ಇವಾಗ ಏನಾದರೂ ಆದರೆ, ಮೃತದೇಹವನ್ನು ಕೂಡ ಹುಡುಕೋದು ಕಷ್ಟ ನಮಗೆ.
ದಯವಿಟ್ಟು ನದಿಪಾತ್ರಗಳಲ್ಲಿ, ಸಮುದ್ರ ತೀರಗಳಲ್ಲಿ ಕಾಳಜಿಯಿಂದ, ಜವಾಬ್ದಾರಿಯಿಂದ ವರ್ತಿಸಿ ಎಂದು ಹೇಳಿದ್ದಾರೆ.
Share your comments