1. ಸುದ್ದಿಗಳು

ಈ ಮೊಬೈಲ್ ಆ್ಯಪ್ ಗಳ ಸಹಾಯದಿಂದ ಕ್ಷಣಾರ್ಧದಲ್ಲಿ ಕೃಷಿ ಆಧಾರಿತ ಮಾಹಿತಿ ಪಡೆಯಿರಿ

KJ Staff
KJ Staff
Mobile App

ಕೃಷಿ ಭಾರತ ದೇಶದ ಆರ್ಥಿಕತೆಯ ಪ್ರಮುಖ ಕ್ಷೇತ್ರವಾಗಿದೆ, ಹಾಗೂ ಲಕ್ಷಾಂತರ ರೈತರ ಜೀವನೋಪಾಯವಾಗಿದೆ, ಭೂಮಿ ಮತ್ತು ನೀರಿನ ಸಂಪನ್ಮೂಲಗಳು ಬಹುತೇಕ ತಮ್ಮ ಮಿತಿಗಳನ್ನು ತಲುಪಿವೆ, ಸರಕುಗಳ ಬೆಲೆ ಏರಿಳಿತಗೊಳ್ಳುತ್ತಿದ್ದು, ಭಾರತದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಖ್ಯೆ ಹೆಚ್ಚಾಗಿದ್ದು, ಅವರ ಲಾಭವು ನಗಣ್ಯವಾಗಿದೆ. ಅದರಿಂದ ಕಾರ್ಯವಿಧಾನವನ್ನು ಪರಿಶೀಲಿಸುವ ಮತ್ತು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ.

ಮೊಬೈಲ್ ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇದನ್ನು ಕೃಷಿ ಕ್ಷೇತ್ರಕ್ಕೆ ಸಂಪನ್ಮೂಲಗಳಾಗಿ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಉತ್ತಮ ಇಳುವರಿ ಬಂದರು ಅವರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಇಂತಹ ಹಲವಾರು ಸಮಸ್ಯೆಗಳ ನಿರ್ವಹಣೆಗಾಗಿ ಹಲವಾರು ಮೊಬೈಲ್ ಅಪ್ಲಿಕೇಷನ್‍ಗಳು ಬಂದಿವೆ. ಇವು ಉತ್ತಮ ಕೃಷಿ ಇಳುವರಿ, ಸಾಕಣೆ ಕೇಂದ್ರಗಳ ಆರೈಕೆ, ಬೆಳೆಗಳ ಆರೈಕೆ ಹೀಗೆ ಹಲವಾರು ಉಪಯೋಗಗಳನ್ನು ಒದಗಿಸುತ್ತದೆ. ಇಂದಿನ ದಿನಗಳಲ್ಲಿ ಕೃಷಿ ಜ್ಞಾನ ಮತ್ತು  ಕೌಶಲ್ಯದಂತಹ ಮೃದು ಸಂಪನ್ಮೂಲಗಳು ಕಠಿಣ ಸಂಪನ್ಮೂಲಗಳಷ್ಟೇ ಮುಖ್ಯವಾಗಿದೆ. ಆದರೆ ಶೇ. 60 ರಷ್ಟು ರೈತರಿಗೆ ಮಾಹಿತಿಯ ಲಭ್ಯತೆ ಇರದ ಕಾರಣ ಅವರು ಹೊಸ ತಂತ್ರಜ್ಞಾನದ ಅಳವಡಿಕೆಯ ಪ್ರಮಾಣ ಕ್ಷೀಣಿಸಿದೆ.

ಭಾರತ ಸರ್ಕಾರದ ಕೃಷಿ ಸಚಿವಾಲಯವು ರೈತರಿಗಾಗಿ ಅನೇಕ ಮೊಬೈಲ್ ಯೋಜನೆಗಳನ್ನು ಪ್ರಾರಂಭಿಸಿದೆ. ಐ. ಸಿ. ಟಿ. ಅಪ್ಲಿಕೇಶನ್‍ಗಳ ಮೂಲಕ ಉಪಯೋಗವನ್ನು ಪಡೆಯಬಹುದು. ಹೊಸ ವೈರ್‍ಲೆಸ್ ಮತ್ತು ಉಪಗ್ರಹ ಆಧಾರಿತ ಸಲಹೆಗಳನ್ನು ಪಡೆಯಲಾಗುತ್ತಿದೆ. ಈ ಸೌಲಭ್ಯಗಳನ್ನು ಪಡೆಯಲು ಸ್ಮಾರ್ಟ್ ಫೋನ್‍ಗಳು ಅತ್ಯಗತ್ಯ ಸಾಧನವಾಗಿದೆ.

  1. ಕೆವಿಕೆ ಮೊಬೈಲ್ ಆ್ಯಪ್ – KVK Mobile App

ಕೆವಿಕೆ ಮೊಬೈಲ್ ಆ್ಯಪ್: ಒಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್,  ಮಾಹಿತಿ ತಂತ್ರಜ್ಞಾನ ವಿಭಾಗದವರು ಅಭಿವೃದ್ದಿ ಪಡಿಸಿರುವ ಆ್ಯಪ್. ಇದರ ಉದ್ದೇಶ ನಮ್ಮ ಭಾರತ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳ ಮಾಹಿತಿ ಒಂದೇ ಆ್ಯಪ್ ಅಡಿಯಲ್ಲಿ ಸಿಗಲಿದೆ ಮತ್ತು ಆಯಾ ಜಿಲ್ಲೆಯ ರೈತರು ಸಂಪರ್ಕಿಸಿ ಮಾಹಿತಿ ಪಡೆಯಲು ಒಂದು ವರದಾನವಾಗಬೇಕೆನ್ನುವ ದೃಷ್ಠಿಯಿಂದ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.

ಕೆವಿಕೆ: ಕೃಷಿ ವಿಜ್ಞಾನ ಕೇಂದ್ರದಿಂದ ಮಾಹಿತಿ ಪಡೆಯಬೇಕಾದರೆ, ಇದರಲ್ಲಿ ಕೆವಿಕೆ ಐಕಾನ್ ಮೇಲೆ ಒತ್ತಿ ನಿಮ್ಮ ರಾಜ್ಯ ಮತ್ತು ಜಿಲ್ಲೆ ಆಯ್ಕೆ ಮಾಡಿದರೆ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆವಿಕೆಗಳ ಮಾಹಿತಿ ದೊರೆಯುತ್ತದೆ.

ಸೌಲಭ್ಯಗಳು: ಕೆವಿಕೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಯಬಹುದು. ಉದಾ: ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯ, ಸೂಕ್ಷ್ಮ ಪೋಷಕಾಂಶಗಳ ಉತ್ಪಾದನಾ ಘಟಕ, ಮೇವಿನ ಬೀಜಗಳ ಲಭ್ಯತೆ ಹಾಗೂ ಇತರೆ ದೊರೆಯುವ ಸೌಲಭ್ಯಗಳು.

ಚಟುವಟಿಕೆಗಳು: ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಾಗುವ ಮತ್ತು ಪೂರ್ಣಗೊಂಡ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬಹುದು.

ತಜ್ಞರಿಂದ ಮಾಹಿತಿ: ರೈತರು ಈ ಆ್ಯಪ್ ಮುಖಾಂತರ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಕಳುಹಿಸಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಸೂಕ್ತ ಸಲಹೆಗಳನ್ನು ಪಡೆಯಬಹುದು. ಎಲ್ಲಾ ರೈತ ಬಾಂಧವರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು ಅಥವಾ ಕೆಳಗಿನ ಲಿಂಕ್‍ನಿಂದ ಪಡೆಯಬಹುದು.

https://play.google.com/store/apps/details?id=com.icar.iasri.kvkapp&hl=en_IN&gl=US

  1. ಕಿಸಾನ್ ರಥ್ ಮೊಬೈಲ್ ಅಪ್ಲಿಕೇಶನ್ - KISAN RATH MOBILE APP

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಲಾಕ್‍ಡೌನ್ ಸಮಯದಲ್ಲಿ ಆಹಾರ ಧಾನ್ಯಗಳ ಸಾಗಾಣೆಗೆ ಅನುಕೂಲವಾಗಲೆಂದು ಕಿಸಾನ್ ರಥ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.

ಕಿಸಾನ್ ರಥ್ ಮೊಬೈಲ್ ಅಪ್ಲಿಕೇಶನ್ ದೇಶದಾದ್ಯಂತ ರೈತರು, ರೈತ ಉತ್ಪಾದಕರ ಸಂಘಗಳು ಮತ್ತು ವ್ಯಾಪಾರಿಗಳಿಗೆ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಸಾಗಿಸಲು ಸಾರಿಗೆ ಸೇವಾ ಪೂರೈಕೆದಾರರನ್ನು ಹುಡುಕಲು ಮತ್ತು ಸಂಪರ್ಕಿಸಲು ಸಹಾಯ ಮಾಡುತ್ತದೆ.

ಈ ಅಪ್ಲಿಕೇಶನ್ ಮೂಲಕ ರೈತರು 5 ಲಕ್ಷಕ್ಕೂ ಹೆಚ್ಚು ಟ್ರಕ್ ಮತ್ತು 20000 ಟ್ರಾಕ್ಟರುಗಳನ್ನು ಸಂಪರ್ಕಿಸಬಹುದು. ರೈತರು ತಮ್ಮ ಉತ್ಪನ್ನಗಳನ್ನು ಸಾಗಿಸಲು, ಸಾರಿಗೆ ಸೇವಾ ಪೂರೈಕೆದಾರರೊಂದಿಗೆ ಸಂಪರ್ಕಿಸಿ, ವ್ಯಾಪಕ ಶ್ರೇಣಿಯ ಟ್ರಕ್‍ಗಳು ಮತ್ತು ಟ್ರಾಕ್ಟರ್ ಟ್ರಾಲಿಗಳನ್ನು ಪಡೆಯಬಹುದಾಗಿದೆ.

ಸಾರಿಗೆದಾರರು ತಮ್ಮ ವಾಹನಗಳನ್ನು ನೊಂದಾಯಿಸಿ, ರೈತರು ಮತ್ತು ವ್ಯಾಪಾರಿಗಳಿಗೆ ಸೇವೆಗಳನ್ನು ಒದಗಿಸಬಹುದು. ಈ ಅಪ್ಲಿಕೇಶನ್ ಮೂಲಕ, ಸಾಗಣೆದಾರರು ಪೋಸ್ಟ್ ಮಾಡಿದ ಲೋಡ್‍ಗಳನ್ನು ವೀಕ್ಷಿಸಿ, ಅವುಗಳ ಲಭ್ಯತೆ ಮತ್ತು ಉಲ್ಲೇಖಗಳೊಂದಿಗೆ ಪ್ರತಿಕ್ರಿಯಿಸಬಹುದು.

ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು ಅಥವಾ ಕೆಳಗಿನ ಲಿಂಕ್‍ನಿಂದ ಪಡೆಯಬಹುದು.ಈ ಅಪ್ಲಿಕೇಶನ್ ಮೂಲಕ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಸಾಗಿಸಲು ಸಹಾಯ ಮಾಡುತ್ತದೆ.

https://play.google.com/store/apps/details?id=com.velocis.app.kishan.vahan&hl=en_IN

  1. ಫಾರ್ಮಸ್ ಮೊಬೈಲ್ ಅಪ್ಲಿಕೇಶನ್- FARMS – Farm Machinery Solution App

ಭಾರತ ಸರಕಾರ, ಕೃಷಿ ಇಲಾಖೆಯಿಂದ ಫಾರ್ಮಸ್- ಫಾರ್ಮ ಮಶಿನರಿ ಸೆಲೂಶನ್ಸ್ ಎಂಬ ಬಹುಭಾಷೆಯಲ್ಲಿ ಲಭ್ಯವಿರುವ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.

ರೈತರು ಈ ಮೊಬೈಲ್ ಅಪ್ಲಿಕೇಶನ್ ಮೂಲಕ ಮಷಿನರಿ ಹಬ್‍ಗಳಲ್ಲಿ ಲಭ್ಯವಿರುವ ಕೃಷಿ ಯಂತ್ರೋಪಕರಣಗಳನ್ನು 5 ಕಿ.ಮೀ. ರಿಂದ 500 ಕಿ.ಮೀ. ಅಂತರದಲ್ಲಿರುವ ಗ್ರಾಹಕ ಬೇಡಿಕೆ ಕೇಂದ್ರಗಳಿಂದ ಬಾಡಿಗೆಗೆ ಪಡೆಯಬಹುದು.

ಅಡಿಕೆ, ಕಬ್ಬು, ತೊಗರಿ, ಟೊಮ್ಯಾಟೊ, ತೆಂಗಿನಕಾಯಿ, ಭತ್ತ, ಮೆಕ್ಕೆಜೋಳ, ಮಾವು ಮುಂತಾದ ಬೆಳೆಗಳಿಗೆ ಉಪಯೋಗಿಸುವ ಯಂತ್ರಗಳಾದ ಟ್ರಾಕ್ಟರ್, ಪವರ್ ಟಿಲ್ಲರ್, ರೋಟಾವೇಟರ್, ರೀಪರ್, ಡೋಜರ್ ಮತ್ತು ಹಾರ್ವೆಸ್ಟರ್‍ಗಳ ಅವಶ್ಯಕತೆ ಇದ್ದಲ್ಲಿ ತಮ್ಮ ವಿಳಾಸ ನಮೂದಿಸಿದರೆ ಹತ್ತಿರದ ಕೃಷಿ ಯಂತ್ರೋಪಕರಣ ಕೇಂದ್ರ ಹಾಗೂ ಅದರ ವಿವರವನ್ನು ಸೂಚಿಸುತ್ತದೆ.

ಇದರಿಂದ ರೈತರು ತಮಗೆ ಬೇಕಾಗಿರುವ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಸಮಯದಲ್ಲಿ ಹಾಗೂ ವಿವಿಧ ಕೇಂದ್ರಗಳ ಬಾಡಿಗೆ ದರಗಳನ್ನು ಪರೀಕ್ಷಿಸಿ ಸೂಕ್ತ ದರವನ್ನು ಆಯ್ಕೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ಎಲ್ಲಾ ರೈತ ಬಾಂಧವರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ  ಯೋಜನೆಯ ಲಾಭವನ್ನು ಪಡೆಯಬಹುದು ಅಥವಾ ಕೆಳಗಿನ ಲಿಂಕ್‍ನಿಂದ ಪಡೆಯಬಹುದು. ಈ ಅಪ್ಲಿಕೇಶನ್ ಮೂಲಕ ರೈತರು ಕಡಿಮೆ ಸಮಯದಲ್ಲಿ ಕೃಷಿ ಯಂತ್ರೋಪಕರಣಗಳ ಉಪಯೋಗ ಪಡೆಯಬಹುದು.

https://play.google.com/store/apps/details?id=app.chcagrimachinery.com.chcagrimachinery&hl=en_IN&gl=US

  1. ಪಿ.ಎಮ್. ಕಿಸಾನ್ ಮೊಬೈಲ್ ಅಪ್ಲಿಕೇಶನ್ - PM KISAN MOBILE APP

ಸಣ್ಣ ಮತ್ತು ಅತಿ ಸಣ್ಣರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎಂಬ ಹೊಸ ಕೇಂದ್ರ ವಲಯ ಯೋಜನೆಯನ್ನು ಪ್ರಾರಂಭಿಸಿದೆ.

ಈ ಯೋಜನೆಯಡಿ ವರ್ಷಕ್ಕೆ ರೂ.6000/- ಗಳನ್ನು ಮೂರು ಸಮಾನ ಕಂತುಗಳಲ್ಲಿ ಅರ್ಹ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.2000/- ಗಳಂತೆ ವರ್ಗಾಹಿಸಲಾಗುತ್ತದೆ. ಮತ್ತಷ್ಟು ವಿಸ್ತರಿಸಲು ಎನ್.ಐ.ಸಿ. (NIC), ಕೇಂದ್ರ ಸರ್ಕಾರವು ಪಿ.ಎಂ. ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.

ರೈತರು ಈ ಅಪ್ಲಿಕೇಶನ್ ಮೂಲಕ ಸ್ವತಃ ತಾವೇ ನೊಂದಾಯಿಸಿ, ನೊಂದಣಿ ಮತ್ತು ಪಾವತಿಗಳ ಸ್ಥಿತಿಯನ್ನು ತಿಳಿಯಬಹುದು. ಆಧಾರ್‍ಕಾರ್ಡ್‍ನ ಪ್ರಕಾರ ಹೆಸರು ಮತ್ತು ವಿವರ  ತಪ್ಪಿದ್ದಲ್ಲಿ ಸರಿಪಡಿಸಬಹುದು. ಪಿ.ಎಂ. ಕಿಸಾನ್ ಯೋಜನೆ ಬಗ್ಗೆ ಪೂರ್ಣ ಮಾಹಿತಿ ತಿಳಿಯಬಹುದು ಮತ್ತು ಸಂದೇಹವಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ಸಂಪರ್ಕಿಸಬಹುದು.  ಎಲ್ಲಾ ರೈತ ಬಾಂಧವರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು ಅಥವಾ ಕೆಳಗಿನ ಲಿಂಕ್‍ನಿಂದ ಪಡೆಯಬಹುದು.

https://play.google.com/store/apps/details?id=com.nic.project.pmkisan

  1. ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ – Farmers Crop Survey App

ಬಿತ್ತನೆ ಮಾಡಿದ ಬೆಳೆಗಳ ಸ್ಪಷ್ಟ ಚಿತ್ರಣವನ್ನು ಹೊಂದಲು ಮತ್ತು ರಾಜ್ಯದ ಎಲ್ಲಾ ಕೃಷಿ ಭೂಮಿಯಲ್ಲಿ ನೀರಾವರಿ ಪ್ರಕಾರವನ್ನು ಅಳವಡಿಸಿ ರೈತರು ತಾವೇ ಬೆಳೆದ ಬೆಳೆಯ ವಿವರವನ್ನು ದಾಖಲಿಸಿ ನಿಗದಿತ ಸಮಯದೊಳಗೆ ವರದಿ ಮಾಡಲು ಅನುಕೂಲ ಕಲ್ಪಿಸಿಕೊಡುವ ಸಲುವಾಗಿ “ರೈತರು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್” ಅನ್ನು ಬಿಡುಗಡೆ ಮಾಡಲಾಗಿದೆ.

ರೈತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು  OTP ಸಂಖ್ಯೆಯನ್ನು ನಮೂದಿಸಿ ತಮ್ಮ ವಿವರಗಳನ್ನು ನೋಂದಣಿ ಮಾಡಿ, ಮೊಬೈಲ್ ಆ್ಯಪ್‍ನಲ್ಲಿ ಮೊದಲು ಮಾಸ್ಟರ್ ವಿವರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ತಮ್ಮ ಜಮೀನಿನ ಸರ್ವೆ ನಂಬರ್‍ಗಳನ್ನು  ಆ್ಯಪ್‍ಗೆ ಸೇರಿಸಿಕೊಳ್ಳಬೇಕು.

ರೈತರು ತಾವು ಬೆಳೆದ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ 2 ಛಾಯಾ ಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕಾಗಿರುತ್ತದೆ. ಹೀಗೆ ಅಪ್ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುತ್ತಾರೆ.

ಬೆಳೆ ಸಮೀಕ್ಷೆ ಮಾಹಿತಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಬೆಳೆ ಕಟಾವು ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲು, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಹಾಗೂ ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮುಖಾಂತರ ಬೆಳೆ ಸಾಲ ನೀಡುವ ಸಂದರ್ಭದಲ್ಲಿ ಬೆಳೆ ಪರಿಶೀಲನೆ ಮಾಡಲು ಈ ವಿವರಗಳನ್ನು ಬಳಸಲಾಗುತ್ತದೆ.

ಎಲ್ಲಾ ರೈತ ಬಾಂಧವರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು ಅಥವಾ ಕೆಳಗಿನ ಲಿಂಕ್‍ನಿಂದ ಪಡೆಯಬಹುದು.

https://play.google.com/store/apps/details?id=com.csk.KariffTPKfarmer.cropsurvey&hl=en_IN&gl=US

ಲೇಖನ : ಚೈತ್ರ ಶ್ರೀ ಎಚ್. ಎಂ., ಸವಿತಾ ಎಸ್. ಎಂ., ಮತ್ತು ಲತಾ ಆರ್. ಕುಲಕರ್ಣ, ಕೃಷಿ ವಿಜ್ಞಾನ ಕೇಂದ್ರ, ರಾಮನಗರ

Published On: 25 January 2021, 04:38 PM English Summary: Agriculture Based Mobile Apps information

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.