ಅತಿವೃಷ್ಠಿಯಿಂದ ಬೆಳೆಹಾನಿಯಾದ ರೈತರಿಗೆ ಪರಿಹಾರ ಕಲ್ಪಿಸಲು ಅನುಕೂಲವಾಗುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸುವ ಮೂಲಕ ಕೃಷಿಕರಿಗೆ ನೆರವಾಗಬೇಕೆಂದು ಕೃಷಿ ಇಲಾಖೆಯ ನಿರ್ದೇಶಕರಾದ ಬಿ. ವೈ. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಗುರುವಾರ ಕಲಬುರಗಿ ಜಿಲ್ಲೆಯ ಫಿರೋಜಾಬಾದ್, ನದಿಸಿನ್ನೂರ್, ಫರಹತಾಬಾದ್, ಹೆರೂರು, ಸರಡಗಿ ಗ್ರಾಮಗಳಲ್ಲಿನ ರೈತರ ತಾಕುಗಳಿಗೆ ಭೇಟಿ ನೀಡಿ ಬೆಳೆಹಾನಿಯನ್ನು ವೀಕ್ಷಿಸಿ, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಬೆಳೆ ಹಾನಿ ಕುರಿತು ಸಭೆ ನಡೆಸಿ ನಿಖರವಾದ ಮಾಹಿತಿ ಪಡೆದರು. ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವ ರೈತರಿಗೆ ತ್ವರಿತವಾಗಿ ಪರಿಹಾರ ಕಲ್ಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಬೆಳೆ ಹಾನಿ ಸಮೀಕ್ಷೆ ಮಾಡುವಾಗ ನಿಖರ ಹಾಗೂ ವಾಸ್ತವಾಂಶವುಳ್ಳ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು. ಸರ್ಕಾರದ ಮಾರ್ಗಸೂಚಿಯನ್ವಯ ರೈತರಿಗೆ ಪರಿಹಾರ ಕಲ್ಪಿಸುವ ಕೆಲಸವನ್ನು ಸಮರೋಪಾದಿಯಲ್ಲಿ ನಿರ್ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ತೊಗರಿ, ಹತ್ತಿ, ಕಬ್ಬು, ಉದ್ದು, ಮುಸುಕಿನ ಜೋಳ ಸೇರಿದಂತೆ ಒಟ್ಟು 1.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಕುರಿತು ಜಂಟಿ ಕೃಷಿ ನಿರ್ದೇಶಕರಾದ ರಿತೇಂದ್ರನಾಥ ಸೂಗುರ ಅವರು ನಿರ್ದೇಶಕರಿಗೆ ಮಾಹಿತಿ ನೀಡಿದರು.
Share your comments