ಕೃಷಿ ನಮ್ಮ ದೇಶದ ಬೆನ್ನೆಲಬು. ರೈತರು ಕಷ್ಟಪಟ್ಟು ಹೊಲದಲ್ಲಿ ಬೆಳೆಯುವ ಬೆಳೆಗಳಿಗೆ ಲಾಭದಾಯಕ ಬೆಲೆ ದೊರೆಯಬೇಕು. ಆಗ ಮಾತ್ರ ಅವರ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ. ಕೃಷಿ ಉತ್ಪನ್ನಗಳ ಸಾಗುವಳಿಗಾಗಿ ರೈತರು ಬೀಜ, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮುಂತಾದವುಗಳಿಗಾಗಿ ಹೇರಳವಾಗಿ ಹಣ ಖರ್ಚು ಮಾಡುತ್ತಾರೆ. ಸಾಗುವಳಿ ಮಾಡಿದ ಕೃಷಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾದಾಗ ಮಾತ್ರ ಮುಂದಿನ ಬೆಳೆಯ ಸಾಗುವಳಿ, ಕುಟುಂಬದ ನಿರ್ವಹಣೆ ಹಾಗೂ ಆರ್ಥಿಕವಾಗಿ ಸದೃಢರಾಗಲು ಅನುಕೂಲವಾಗುತ್ತದೆ.
ಹೀಗಾಗಿ ಮಾರಾಟದ ಕಾರ್ಯ ಬಹುಮುಖ್ಯ ಅದರಲ್ಲಿ ಬೆಲೆ ಗಮನಾರ್ಹ. ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆತಾಗ ಮಾತ್ರ ರೈತರ ಬಾಳಿನಲ್ಲಿ ಶಾಂತಿ, ನೆಮ್ಮದಿ ನೆಲೆಸುವದು. ಈ ದಿಸೆಯಲ್ಲಿ 1999ರಲ್ಲಿ ಫ್ಲೋರ್‍ಪ್ರೈಸ್ ಆವರ್ತನಿಧಿ ಯೋಜನೆಯನ್ನು ತೋಟಗಾರಿಕಾ ಉತ್ಪನ್ನಗಳಿಗಾಗಿ ಜಾರಿಗೆ ತಂದ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ಟೊಮೆಟೊ, ಈರುಳ್ಳಿ, ಆಲೂಗಡ್ಡೆ ಬೆಳೆದ ರೈತರು ಮಾರುಕಟ್ಟೆಯಲ್ಲಿ ಬೆಲೆಗಳು ಕುಸಿದು ಚಿಂತಾಜನಕದ ಸ್ಥಿತಿಯಲ್ಲಿದ್ದಾಗ ಅವರ ನೆರವಿಗೆ ಬಂದದ್ದು ಕರ್ನಾಟಕ ಸರ್ಕಾರ.
ಅಂತೆಯೇ ರಾಜ್ಯದಲ್ಲಿ ಕೃಷಿ ಬೆಲೆ ಆಯೋಗ ರಚಿಸುವ ನಿರ್ಧಾರವನ್ನು ಜನೇವರಿ 28 ರಂದು ನಡೆದ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರೈತರು ಬೆಳೆದ ಬೆಳೆಗಳಿಗೆ/ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕಲ್ಪಿಸುವುದು, ಬೆಳೆ ಬೆಳೆಯಲು ಮಾಡಿದ ಖರ್ಚು ವೆಚ್ಚಗಳ ಅನುಸಾರ ರೈತರಿಗೆ ಲಾಭದಾಯಕ ಬೆಲೆ ದೊರಕಿಸುವುದು ಆಯೋಗ ಸ್ಥಾಪನೆಯ ಉದ್ದೇಶವಾಗಿದೆ. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಒದಗಿಸುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೃಷಿ ಬೆಲೆ ಆಯೋಗವು ಸಹಕಾರಿಯಾಗಲಿದೆ.
ಬೆಲೆ ಕುಸಿತಗೊಂಡ ಸಂದರ್ಭದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸರ್ಕಾರವೇ ಅಡಮಾನ ಇಟ್ಟುಕೊಂಡು ಶೇ.50 ರಷ್ಟು ಮುಂಗಡ ಹಣವನ್ನು ರೈತರಿಗೆ ಪಾವತಿಸಲಿದೆ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾದಾಗ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಹಿಂತಿರುಗಿಸುವ ವ್ಯವಸ್ಥೆ ಒದಗಿಸಿದೆ. ರೈತರ ಉತ್ಪನ್ನಗಳನ್ನು ಶೇಖರಿಸಿಡಲು ಗೋದಾಮುಗಳು, ಮಾರುಕಟ್ಟೆಯ ಸಮಗ್ರ ಮಾಹಿತಿ, ಕೃಷಿ ಉತ್ಪನ್ನಗಳ ಸಾರಿಗೆ ವ್ಯವಸ್ಥೆ ಹಾಗೂ ಮಾರುಕಟ್ಟೆಯ ಮೂಲಸೌಕರ್ಯ ಒದಗಿಸುವುದು ಆಯೋಗದ ಉದ್ದೇಶಗಳಲ್ಲಿ ಒಂದು. ಹೊಸತಂತ್ರಜ್ಞಾನದ ಬೆಳೆ ಪಧ್ಧತಿಯ ಬಗ್ಗೆ ಸಮರ್ಪಕವಾಗಿ ಅರಿವು ಮೂಡಿಸುವುದಲ್ಲದೇ ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಸಂಧರ್ಭದಲ್ಲಿ ಸರಿಯಾದ ನಿಯಮವನ್ನು ಸಿಧ್ಧಪಡಿಸುವುದು ಆಯೋಗದ ಕಾರ್ಯವಾಗಿದೆ.
ಕೃಷಿ ಬೆಲೆ ಆಯೋಗದ ಕರ್ತವ್ಯಗಳೇನೆಂದರೆ ನಿಯಮಿತವಾಗಿ ಮತ್ತು ವ್ಯವಸ್ಥಿತವಾಗಿ ಸ್ಥಳೀಯ ಬೇಡಿಕೆ, ಪರಿಕರಗಳ ಸರಬರಾಜು, ಹುಟ್ಟುವಳಿ ಪ್ರತಿಬಿಂಬಿಸುವ ಪ್ರಾಮಾಣಿತ ಬೆಲೆ ಪರಿಕಲ್ಪನೆಗಳನ್ನು ಬಳಸಿಕೊಂಡು ತೋಟಗಾರಿಕಾ ಬೆಳೆಗಳು ಸೇರಿದಂತೆ ರಾಜ್ಯದ ಪ್ರಮುಖ ಕೃಷಿ ಬೆಳೆಗಳ ಸಾಗುವಳಿ ವೆಚ್ಚ ಅಂದಾಜಿಸುವದು. ನಂತರ ನಿಯತಕಾಲಿಕವಾಗಿ ರಾಜ್ಯ ಸರ್ಕಾರದಿಂದ ಮಧ್ಯಸ್ಥಿಕೆ ವಹಿಸಬೇಕಾಗಿರುವ ಬೆಳೆಗಳನ್ನು ಗುರುತಿಸವದು. ಪ್ರಾರಂಭಿಕವಾಗಿ ರಾಗಿ, ಜೋಳ, ಸಜ್ಜೆ, ಕಿರುಧಾನ್ಯಗಳು, ತೊಗರಿ,, ನೆಲಗಡಲೆ, ಆಲೂಗಡ್ಡೆ, ಟೊಮೆಟೊ ಮತ್ತು ಈರುಳ್ಳಿ ಬೆಳೆಗಳನ್ನು ಪರಿಗಣಿಸುವದು ಇತರೆ ಬೆಳೆಗಳನ್ನು ಸೇರ್ಪಡೆ ಮಾಡುವದರ ಬಗ್ಗೆ ಸಮಿತಿಯು ಕಾಲಕಾಲಕ್ಕೆ ಸರ್ಕಾರವು ಗುರತಿಸಿ ಸೂಚಿಸಿದಂತೆ ಕ್ರಮ ಕೈಗೊಳ್ಳುವದು. ಅಲ್ಲದೇ ಕೃಷಿ ಉತ್ನನ್ನಗಳಿಗೆ ಸಂಭವನೀಯ ಬೆಲೆ ನೀಡಲು ಬೆಳೆಗಳ ಉತ್ಪಾದಕತೆ, ಉತ್ಪಾದನೆ ಆವರಿಸಿದ ವಿಸ್ತೀರ್ಣ ಮತ್ತು ಮುಂಗಡ ಬೆಲೆ ಸರಬರಾಜು ಮತ್ತು ಬೇಡಿಕೆ ಬಗ್ಗೆ ವಿಶ್ಲೇಷಣೆ ಮಾಡುವದು. ಅಂತೆಯೇ ರೈತರ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನಿಸಿ ಪ್ರಮುಖ ಕೃಷಿ ಉತ್ನನ್ನಗಳ ಲಾಭದಾಯಕ ಬೆಲೆಗಳನ್ನು ಕನಿಷ್ಟ ಬಿತ್ತನೆಗೆ 2 ತಿಂಗಳ ಮುಂಚೆ ಶಿಫಾರಸ್ಸು ಮಾಡುವದು. ತದನಂತರ ಕೃಷಿ ಮತ್ತು ತೋಟಗಾರಿಕೆ ಪದಾರ್ಥಗಳ ವೆಚ್ಚಗಳು, ಬೆಲೆ ಮತ್ತು ಮಾರುಕಟ್ಟೆ ವ್ಯಾಪಾರ ಇತ್ಯಾದಿ ಅಂಶಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹವಾದ ಸಂಶೋಧನೆ ಬಗ್ಗೆ ಮಾಹಿತಿ ಸಂಗ್ರಹಣೆ ವಿಶ್ಲೇಷಣೆ ಮಾಡುವದು. ಅಂತೆಯೇ ಕೃಷಿ ಮತ್ತು ತೊಟಗಾರಿಕೆಗೆ ಸಂಬಂಧಪಟ್ಟಂತೆ ಉತ್ಪಾದನೆ ಮರುಕಟ್ಟೆ ಬೆಲೆ ಹಾಗೂ ವ್ಯಾಪಾರದ ಬಗ್ಗೆ ಅಧ್ಯಯನ ವರದಿಗಳನ್ನು ಪ್ರಕಟಿಸುವದು ಮತ್ತು ಬೆಲೆ ಏರಿಳಿತ, ಮಾರುಕಟ್ಟೆ ಅಪಾಯಗಳು, ಹೆಚ್ಚಿನ ವೆಚ್ಚಗಳು ಮತ್ತು ಇತರ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸಂಶೋಧಕರು, ತಜ್ಞರು, ಮಾರುಕಟ್ಟೆ ವೃತಿಪರರು ಮತ್ತು ಸಲಹೆಗಾರರನ್ನು ತೊಟಗಿಸಿಕೊಂಡು ಕಾರ್ಯಾಗಾರ ವಿಚಾರ ಸಂಕೀರ್ಣ ಸಮಾಲೋಚನೆಗಳನ್ನು ಏರ್ಪಡಿಸುವದು.
ಇದಕ್ಕೂ ಮೀರಿ ಪ್ರಾಯೋಗಿಕ ಯೋಜನೆಯ ಆಧಾರದ ಮೇರೆಗೆ ಸಾಮೂಹಿಕ ಮತ್ತು ಗುಂಪು ಮಾರಾಟಗಾರಿಕೆ ಉಪಕ್ರಮಗಳು, ಮಧ್ಯವರ್ತಿಳಿಂದ ಉಂಟಾಗುವ ಶೋಷಣೆಯನ್ನು ತಪ್ಪಿಸುವದು ಮತ್ತು ಆಹಾರ ಭದ್ರತೆ ಧ್ಯೇಯಗಳನ್ನು ಗಮನದಲ್ಲಿರಿಸಿಕೊಂಡು ಆಹಾರ ಧಾನ್ಯಗಳ ಉತ್ಪಾದಕತೆಯನ್ನು ಹೆಚ್ಚಿಸಲು ಪೂರಕ ಕ್ರಮಗಳನ್ನು ಕೈಗೊಳ್ಳುವದು. ಆಧುನಿಕ ಮಾರುಕಟ್ಟೆ, ವಿದ್ಯುನ್ಮಾನ ವ್ಯಾಪಾರ, ಭವಿಷ್ಯದ ಮಾರುಕಟ್ಟೆ, ವಾಣಿಜ್ಯ ಬೆಳೆಗಳ ಆಧುನಿಕ ವ್ಯಾಪಾರೋದ್ಯಮದ ಪ್ರಯೋಜನೆಗಳನ್ನು ಪಡೆಯಲು ವಿಶೇಷ ಸರಕು ಮಾರುಕಟ್ಟೆಗಳ ಬಗ್ಗೆ ಸಲಹೆ ನೀಡುವದು. ರೈತರಿಗೆ ಮಾಹಿತಿ ಒದಗಿಸಲು ಮತ್ತು ಬೆಳೆ ಉತ್ಪಾದನೆ, ಮಾರುಕಟ್ಟೆ ಮತ್ತು ಸ್ಥಳೀಯ ಕಾಲೋಚಿತ ಮಾಹಿತಿ ಆಧರಿಸಿ ವಿವಿಧ ಮಾರುಕಟ್ಟೆಗಳಲ್ಲಿ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿಗಾಗಿ ನಿಯಮಿತವಾಗಿ ಪೋರ್ಟಲ್ ನವೀಕರಣಕ್ಕಾಗಿ ಒಂದು ವಿಶೇಷ ತಾಂತ್ರಿಕಕೋಶ ರೂಪಿಸಲು ಕೃಷಿ ಪೋರ್ಟಲ್ ಅಭಿವೃದ್ಧಿ ಪಡಿಸುವದು.
ರಾಜ್ಯದ ಕೃಷಿ ವಲಯಗಳು ಅಸ್ಥಿತ್ವಕ್ಕೆ ಬಂದು ಹಲವು ವರ್ಷಗಳು ಕಳೆದರೂ ಸಣ್ಣ ಹಿಡುವಳಿದಾರರ, ಒಣ ಬೇಸಾಯ ಮತ್ತು ನೀರಾವರಿ ರೈತರಿಗೆ ಅಂತಹ ಲಾಭವೇನಾಗಿಲ್ಲ. ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಹೊಸ ತಂತ್ರಜ್ಞಾನಗಳ ಬಳಕೆ, ರೈತರಿಗೆ ಬೀಜ, ಗೊಬ್ಬರ ಹಾಗೂ ತರಬೇತಿಗಳನ್ನು ನೀಡಿ ಪ್ರೋತ್ಸ್ಸಾಹಿಸುವ ಅಗತ್ಯವಿದೆ. ಇದರಿಂದ ಉದ್ಯೋಗ ಅರಿಸಿ ಪಟ್ಟಣ ಪ್ರದೇಶಗಳಿಗೆ ವಲಸೆ ಹೊಗುವುದನ್ನು ತಡೆಗಟ್ಟಬಹುದು. ಮಾನವ ಸಮಾಜಕ್ಕೆ ತಳಹದಿ ಕೃಷಿ. ದೇಶದ ಮೂಲ ಕಸಬು ಕೃಷಿಯಾಗಿರುವದರಿಂದ ಹೊಸ ಹೊಸ ಯೋಜನೆಗಳ ಮುಖಾಂತರ ರೈತರಿಗೆ ಕೃಷಿಯ ಸಮಗ್ರ ಮಾಹಿತಿಯನ್ನು ವಿಸ್ತರಿಸುವುದರಿಂದ ರೈತರು ಉತ್ತಮ ಕೃಷಿ ಕೈಗೊಂಡು ಯಶಸ್ವಿಯಾಗುವಲ್ಲಿ ಸಂದೇಹವಿಲ್ಲ.
ಲೇಖಕರು:
ಶಗುಪ್ತಾ ಅ. ಶೇಖ ಎಂ.ಬಿ.ಎ(ಕೃಷಿ ವ್ಯವಹಾರ)
ಪ್ಲಾಟ್ ನಂ. 588 ಜೆ.ಡಿ.ಎ ಲೇಔಟ್,
ಪೆಟ್ರೋಲ್ ಪಂಪ್ ಎದುರಿಗೆ, ಹೀರಾಪುರ ಕ್ರಾಸ್ ಗುಲಬರ್ಗಾ
ಪಿನ್ 585103
Share your comments