ಕರ್ನಾಟಕಕ್ಕೆ ವಿಶ್ವ ಮಟ್ಟದಲ್ಲಿ ಮನ್ನಣೆ ಸಿಗುವ ಮತ್ತೊಂದು ಕಾರ್ಯ ಇದೀಗ ಆಗಿದೆ.
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿದೆ.
ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಸಹ ಇದೀಗ ಸೇರಿಸಲಾಗಿದೆ.
ಕರ್ನಾಟಕದ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರದ ಪ್ರಸಿದ್ಧ ಹೊಯ್ಸಳ ದೇವಾಲಯಗಳನ್ನು
ಯುನೆಸ್ಕೊ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ.
2014ರ ಏಪ್ರಿಲ್‌ನಿಂದಲೂ ಹೊಯ್ಸಳ ದೇವಾಲಯಗಳನ್ನು ಯುನೆಸ್ಕೊದ ತಾತ್ಕಾಲಿಕ ಪಟ್ಟಿಯಲ್ಲಿ ಇರಿಸಲಾಗಿತ್ತು.
2022-23ಕ್ಕೆ ವಿಶ್ವ ಪಾರಂಪರಿಕ ತಾಣವನ್ನಾಗಿ ಪರಿಗಣನೆ ಮಾಡುವಂತೆ ಜನವರಿ 2022ರಲ್ಲಿ ಭಾರತವು ನಾಮನಿರ್ದೇಶನ ಮಾಡಿತ್ತು.
ಸರ್ಕಾರದ ಮನವಿಗೆ ಅನುಮತಿ ನೀಡಲಾಗಿದ್ದು, ಇದೀಗ ಯುನೆಸ್ಕೊ ಪಟ್ಟಿಗೆ ಹೊಯ್ಸಳ ದೇವಾಲಯಗಳನ್ನು ಸೇರ್ಪಡೆ ಮಾಡಲಾಗಿದೆ.
ಪ್ರಧಾನಿ, ಮುಖ್ಯಮಂತ್ರಿ ಮೆಚ್ಚುಗೆ
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದಕ್ಕೆ
ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಸ ಹಂಚಿಕೊಂಡಿದ್ದಾರೆ.
ಈ ಸಂಬಂಧ ಏಕ್ಸ್‌ನಲ್ಲಿ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬೆಳವಣಿಗೆಯು ದೇಶಕ್ಕೆ ಮತ್ತಷ್ಟು ಹೆಮ್ಮೆಯನ್ನು ಮೂಡಿಸಿದೆ.
ಹೊಯ್ಸಳ ದೇವಾಲಯಗಳ ಸೌಂದರ್ಯ ಹಾಗೂ ಸಂಕೀರ್ಣ ವಿವರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ
ಪರಂಪರೆ ಹಾಗೂ ಪೂರ್ವಜರ ಅಸಾಧಾರಣ ಕರಕುಶಲತೆಗೆ ಸಾಕ್ಷಿ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು
ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಾಡಿನ ಪ್ರವಾಸಿ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲಸೌಲಭ್ಯ
ಮತ್ತು ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯಕ್ಷೇತ್ರಗಳ ತೊಟ್ಟಿಲು ಕರ್ನಾಟಕಕ್ಕೆ ಸ್ವಾಗತ ಎಂದು ಹೇಳಿದ್ದಾರೆ.
ಇನ್ನು ಇದೀಗ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿರುವ ಹೊಯ್ಸಳ ದೇವಾಲಯಗಳು
ಭಾರತೀಯ ಪುರಾತತ್ವ ಸರ್ವೇಕ್ಷಣೆಯ ರಕ್ಷಿತ ಸ್ಮಾರಕಗಳ ಸಾಲಿನಲ್ಲಿವೆ.
ಹೊಯ್ಸಳರು 12 ಮತ್ತು 13ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ರಾಜವಂಶಜರಾಗಿದ್ದಾರೆ.
ಕರ್ನಾಟಕ ಸಂಸ್ಕೃತಿಗೆ ಅವರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.
ಅಲ್ಲದೇ ಕಲೆ, ಸಾಹಿತ್ಯ ಮತ್ತು ಪ್ರಮುಖವಾಗಿ ದೇವಾಲಯದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿದೆ.
Share your comments