ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆಯೇ ರಾಜ್ಯದಲ್ಲಿ ಗೋ ಹತ್ಯೆ ನಿಷೇಧಕ್ಕೆ ಸಂಬಂಧಿಸಿದ ಮಸೂದೆಯನ್ನು ವಿಧಾನಸಭೆ ಕಲಾಪದಲ್ಲಿ ಬುಧವಾರ ಮಂಡನೆ ಮಾಡಲಾಯಿತು.
ಗೋಹತ್ಯೆ ನಿಷೇಧ ಮಸೂದೆಗೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಈ ಮಸೂದೆ ಯಾವುದೇ ಚರ್ಚೆಯಿಲ್ಲದೇ ಅಂಗೀಕಾರಗೊಂಡಿದೆ.
ಪಶು ಸಂಗೋಪನೆ ಮತ್ತು ವಕ್ಪ್ ಸಚಿವ ಪ್ರಭು ಚೌವ್ಹಾಣ್ ವಿಧೇಯಕ ಮಂಡನೆಗೆ ಆರಂಭಿಸುತಿದ್ದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಸದನ ಸಲಹಾ ಸಮಿತಿಯಲ್ಲಿ ಹೊಸ ವಿಧೆಯಕ ಮಂಡನೆ ಮಾಡಬಾರದು. ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿರುವ ವಿಧೇಯಕ ಗಳನ್ನು ಮಾತ್ರ ಮಂಡಿಸಬೇಕು ಎಂದು ತೀರ್ಮಾನಿಸಲಾಗಿದೆ. ಈಗ ಏಕಾಏಕಿ ಹೊಸ ಬಿಲ್ ಮಂಡಿಸುತ್ತಿದ್ದಾರೆ.ನಾವು ಇದನ್ನು ಒಪ್ಪುವುದಿಲ್ಲ ಎಂದು ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್ ಯಾವುದಾದರೂ ಅಗತ್ಯ ಬಿಲ್ ಇದ್ದರೆ ಅದನ್ನು ತರಬಹುದು ಎಂದು ಚರ್ಚೆಯಾಗಿತ್ತು. ಇದು ಅಗತ್ಯ ಬಿಲ್ ಇದೆ. ಅದನ್ನು ನಾವು ಮಂಡಸಿದ್ದೇವೆ ಎಂದು ಹೇಳಿದರು.
ಸ್ಪೀಕರ್ ಕಾಗೇರಿ ಕೂಡ ನಿನ್ನೆ ಮಹತ್ವದ ಬಿಲ್ ಮಂಡನೆ ಮಾಡಬಹುದು ಎಂದು ಚರ್ಚೆಯಾಗಿತ್ತು. ಹೀಗಾಗಿ ಇದನ್ನು ಮಂಡನೆಗೆ ಅವಕಾಶ ಕೊಟ್ಟಿರುವುದಾಗಿ ಹೇಳಿದರು. ಸ್ಪೀಕರ್ ಮನವಿಗೆ ಬಗ್ಗದ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು, ಮಸೂದೆಗೆ ಅಂಗೀಕಾರ ನೀಡಿರುವುದನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು. ಒಟ್ಟಿನಲ್ಲಿ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಪಡೆದಿದೆ.
ರಾಜ್ಯದಲ್ಲಿ ಹಸು, ಕರು, ಎತ್ತು, ಎಮ್ಮೆ ಕೋಣವನ್ನು ವಧೆ ಮಾಡುವುದಕ್ಕೆ ನಿಷೇಧ ವಿಧಿಸಲಾಗಿದೆ. ಗೋ ಹತ್ಯೆ ಮಾಡಿದರೆ 7 ವರ್ಷ ಜೈಲು, 5 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಲಾಗುವುದು.
Share your comments