1. ಸುದ್ದಿಗಳು

ರಾಜ್ಯದ ಹಲವೆಡೆ ಆರಿದ್ರಾ ಮಳೆ ಆರ್ಭಟ

rain

ರಾಜ್ಯದ ಮೈಸೂರು ಭಾಗ, ಮಲೆನಾಡು ಹಾಗೂ ಕಲ್ಯಾಣ ಕರ್ನಾಟಕದ ಹಲವೆಡೆ ಭಾನುವಾರ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಯಾದಗಿರಿ ಜಿಲ್ಲೆಯ ತಗ್ಗು ಪ್ರದೇಶದ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತು.  8 ಮನೆಗಳು ಭಾಗಶಃ ಕುಸಿದಿವೆ.

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ ಭಾಗಗಳಲ್ಲಿ ಮುಂಗಾರು ಅಬ್ಬರ ಎಂದಿಗಿಂದಲೂ ಜೋರಾಗಿತ್ತು. ಶನಿವಾರ ಮತ್ತು ಭಾನುವಾರ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಕೇವಲ ಕಲ್ಯಾಣ ಕರ್ನಾಟಕವಷ್ಟೇ ಅಲ್ಲ, ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದೆ.

ಮೈಸೂರಿನಲ್ಲಿ ಆಬ್ಬರಿಸಿದ ಮಳೆ:

ಮೈಸೂರು ನಗರದಲ್ಲಿ ಭಾನುವಾರ ಸಂಜೆ ಸುರಿದ ಜೋರು ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ 2 ಅಡಿಯಷ್ಟು ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಯಿತು. ರಾಯಚೂರು ತಾಲ್ಲೂಕಿನ ಇಡಪನೂರು ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಹಳ್ಳದ ಸೇತುವೆ ಅರ್ಧ ಭಾಗ ಕೊಚ್ಚಿ ಹೋಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ 2.2 ಸೆಂ.ಮೀ. ಮಳೆಯಾಗಿದೆ. ಚಿಕ್ಕಮಗಳೂರು, ಶೃಂಗೇರಿ, ಎನ್‌.ಆರ್‌.ಪುರ, ಬಾಳೆಹೊನ್ನೂರು, ಕೊಪ್ಪ ಮತ್ತು ಕಳಸ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಕರಾವಳಿ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನದಿಂದ ಮೋಡ ಮುಸುಕಿದ ವಾತಾವರಣ ಇದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮದ ಹೊರವಲಯದಲ್ಲಿ ಹಳ್ಳದ ಸೇತುವೆಯ ತಡೆ ಗೋಡೆ ಕೊಚ್ಚಿ ಹೋಗಿದೆ.  ಕೊಡಗು ಜಿಲ್ಲೆಯಲ್ಲೂ ಮುಂಗಾರು ಚುರುಕಾಗಿದೆ. ಮಡಿಕೇರಿ, ತಲಕಾವೇರಿ, ಭಾಗಮಂಡಲ, ನಾಪೋಕ್ಲು, ವಿರಾಜಪೇಟೆ ವ್ಯಾಪ್ತಿಯಲ್ಲಿ ಮಧ್ಯಾಹ್ನದ ನಂತರ ನಿರಂತರವಾಗಿ ಮಳೆಯಾಯಿತು.

ಹಾಸನ ಜಿಲ್ಲೆಯ ವಿವಿಧೆಡೆ ಅಲ್ಪ ಪ್ರಮಾಣದ ಮಳೆಯಾಗಿದೆ. ಚನ್ನರಾಯಪಟ್ಟಣ, ನುಗ್ಗೇಹಳ್ಳಿ, ಸಕಲೇಶಪುರ, ಶ್ರವಣಬೆಳಗೊಳದಲ್ಲಿ ಸಾಧಾರಣ ಮಳೆ ಸುರಿದಿದೆ. ಹಾಸನ ನಗರದಲ್ಲಿ ಒಂದು ತಾಸು ತುಂತುರು ಮಳೆಯಾಗಿದೆ.. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಭಾನುವಾರ ಸಾಧಾರಣ ಮಳೆ ಆಗಿದೆ.

Published On: 29 June 2020, 12:41 PM English Summary: Aridra rainfall is prevalent throughout the state

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.