ಆರ್ಥಿಕವಾಗಿ ಬಂಡವಾಳ ರೂಪದಲ್ಲಿ ಸಾಲ ನೀಡಲು ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಡಿ ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಸೇರಿದಂತೆ, ಅರ್ಜಿ ಸಲ್ಲಿಕೆ ಹೇಗೆ ? ಯೋಜನೆ ಸೌಲಭ್ಯ ಪಡೆಯಲು ಯಾರು ಅರ್ಹರು ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಏನಿದು ಸ್ವನಿಧಿ ಯೋಜನೆ ?
ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ಮಾಫಿಯಾದಿಂದ ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲಿ ಈ ಹಿಂದೆ ಜಾರಿಗೆ ತಂದಿದ್ದ ಶೂನ್ಯ ಬಡ್ಡಿದರದ ಸಾಲ ಯೋಜನೆ ಬಡವರ ಬಂಧು ಯೋಜನೆಯ ಮಾದರಿಯಲ್ಲಿಯೇ ಕೇಂದ್ರ ಸರ್ಕಾರವು ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಿಯಿಸಿದೆ. ಈ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತಿದ್ದು, ಒಂದು ವರ್ಷದೊಳಗೆ ಮಾಸಿಕ ಕಂತುಗಳ ಮೂಲಕ ಹಿಂದಿರುಗಿಸಬೇಕಾಗುತ್ತದೆ.
ಏನೇನು ದಾಖಲೆಗಳು ಬೇಕು?
ವ್ಯಾಪಾರಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ತಾವು ವ್ಯಾಪಾರ ಮಾಡುವ ಬಗೆಗಿನ ಸರ್ಟಿಫಿಕೇಟ್ (CoV) ಅಥವಾ ವ್ಯಾಪಾರಿಗಳ ಗುರುತಿನ ಚೀಟಿ (ID) ಅಥವಾ ವ್ಯಾಪಾರ ಮಾಡುವ ಪ್ರೊವಿಶನಲ್ ಸರ್ಟಿಫಿಕೇಟ್ ಅಥವಾ ಶಿಫಾರಸಿನ ಪತ್ರ (LoR)ವನ್ನು ಸಲ್ಲಿಸಬೇಕು. ಇದರ ಜತೆಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ವಿವರ ಹಾಗೂ ಸ್ಥಳೀಯ ಸಾಕ್ಷಿದಾರರ ಸಹಿ ಕೂಡ ಅರ್ಜಿ ಸಲ್ಲಿಸುವಾಗ ಅಗತ್ಯವಿದೆ.
ಪಿಎಂ ಸ್ವನಿಧಿಗೆ ಸಾಲ ನೀಡುವ ಸಂಸ್ಥೆಗಳು:
ಬ್ಯಾಂಕ್‌ಗಳು, ಶೆಡ್ಯೂಲ್ಡ್ ಕಮರ್ಶಿಯಲ್ ಬ್ಯಾಂಕ್ (ಎಸ್‌ಸಿಬಿ), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್‌ಆರ್‌ಬಿ), ಸಣ್ಣ ಹಣಕಾಸು ಬ್ಯಾಂಕ್ (ಎಸ್‌ಎಫ್ಬಿ), ಕೋ-ಆಪರೇಟಿವ್ ಬ್ಯಾಂಕ್, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಸ್‌ಎಚ್‌ಜಿ ಬ್ಯಾಂಕ್. ಉದಾ: ಸ್ಟ್ರೀಟ್ ನಿಧಿ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್ಸಿ)ಗಳು ಮತ್ತು ಸಣ್ಣ ಹಣಕಾಸು ಸಂಸ್ಥೆ (ಎಂಎಫ್‌ಐ)ಗಳು.
ಯೋಜನೆಯ ಲಾಭಗಳು:
ಬಂಡವಾಳದ ಸಾಲದ ಅವಧಿ 1 ವರ್ಷವಿದೆ. ಅವಧಿಯೊಳಗೆ ಮರುಪಾವತಿ ಮಾಡಿದವರಿಗೆ ಬಡ್ಡಿಯಲ್ಲಿ ಶೇ. 7 ರಷ್ಟು ಸಬ್ಸಿಡಿ. ತ್ತೈಮಾಸಿಕ ಪಾವತಿಗೂ ಅವಕಾಶ ನೀಡಲಾಗಿದೆ. ಡಿಜಿಟಲ್ ವಹಿವಾಟಿನ ಮೇಲೆ ಮಾಸಿಕ ಕ್ಯಾಶ್ ಬ್ಯಾಕ್ ಪ್ರೋತ್ಸಾಹ ಧನ. ಮೊದಲ ಸಾಲದ ಸಮಯೋಚಿತ/ಶೀಘ್ರ ಪಾವತಿಯ ಮೇಲೆ ಸಾಲ ಅರ್ಹತೆ ಏರಿಸಲಾಗುತ್ತದೆ. ದೇಶಾದ್ಯಂತ ನಗರ ಸ್ಥಳೀಯ ಸಂಸ್ಥೆಗಳನ್ನು ಈ ಯೋಜನೆಯು ಒಳಗೊಳ್ಳುತ್ತದೆ. ಸಾಲ ಪಡೆಯಲು ಯಾವುದೇ ಮೇಲಾಧಾರ ಭದ್ರತೆಯ ಅಗತ್ಯವಿಲ್ಲ. ಶೀಘ್ರ ಪಾವತಿಗೆ ಯಾವುದೇ ದಂಡವಿಲ್ಲ.
ಯಾರು ಅರ್ಜಿ ಸಲ್ಲಿಸಬಹುದು ?
2020ರ ಮಾರ್ಚ್ 24ರ ವೇಳೆಯಲ್ಲಿ ಹಾಗೂ ಅದಕ್ಕೂ ಮೊದಲು ನಗರ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ವ್ಯಾಪಾರ ಮಾಡುತ್ತಿರುವ ಗ್ರಾಮೀಣ/ನಗರ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಪಿಎಂ-ಸ್ವನಿಧಿ ವೆಬ್ ಸೈಟ್ www.pmsvanidhi.mohua.gov.in ಗೆ ಸಂಪರ್ಕಿಸಬಹುದು.
Share your comments