ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಮೂಲಕ ಅನ್ನದಾತರ ಹಾಗೂ ಜನ ಸಾಮಾನ್ಯರ ಜೀವನಾಡಿ ಆಣೆಕಟ್ಟೆ ಎಂದೆನಿಸಿರುವ ಭ್ರದ್ರಾ ಜಲಾಶಯದ ಜಲಾನಯಾನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಅತಿ ಹೆಚ್ಚಿನ ವರ್ಷದಾರೆ ಆಗಿರುವ ಕಾರಣ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹೇಳಿದರು.
ಮಲೆನಾಡಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತರೀಕೆರೆ ತಾಲೂಕು ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಭದ್ರೆಯು ತನ್ನ ಗತ ವೈಭವವನ್ನು ಮರಳಿ ಪಡೆದಿದ್ದು, ಜಲಾಶಯಕ್ಕೆ ಅತಿ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ, ಕಳೆದ 15 ದಿನಗಳ ಹಿಂದೆ ಎಡ ಮತ್ತು ಬಲ ನಾಲೆಗಳಿಗೆ ನೀರು ಹರಿಸುವ ಸಂಬಂಧ ನಡೆಸಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವ್ಯಕ್ತಪಡಿಸಿದ್ದ ನೀರು ಕೊರತೆಯ ಆತಂಕ ಈಗ ದೂರವಾಗಿದೆ. ಹಿಂದಿನ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಒಂದು ತಿಂಗಳ ಮೊದಲೇ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಪ್ರತಿ ಬಾರಿ ಜಲಾಶಯ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುವುದು ವಾಡಿಕೆ. ಆದರೆ ಈ ವರ್ಷ ಒಂದು ತಿಂಗಳ ಮುಂಚೆ ಜಲಾಶಯ ತುಂಬುತ್ತಿರುವುದು ವಿಶೇಷ ದಾಖಲೆಯಾಗಿದೆ ಎಂದರು.
ಜಲಾಶಯ ಭರ್ತಿಯಾಗುವ ಹಂತ ತಲುಪಿರುವುದು ಸಹಜವಾಗೇ ರೈತರಿಗೆ ಖುಷಿ ನೀಡಿದೆ. ಅಧಿಕ ಪ್ರಮಾಣದ ನೀರು ಸಂಗ್ರಹವಾಗಿರುವ ಕಾರಣ ಈ ಬಾರಿಯೂ ಬೇಸಿಗೆ ಬೆಳೆಗೆ ನೀರು ಲಭ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಪವಿತ್ರಾ ರಾಮಯ್ಯ ಅವರು, ಕಳೆದ ಬಾರಿ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ಹರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಮುಂಗಾರು ಬೆಳೆಗಳಿಗೆ ಕೂಡ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಲಾಗುವುದು. ನಾನು ಅಧಿಕಾರದಲ್ಲಿ ಇರುವವರೆಗೆ ನಾಲೆಯ ಕೊನೆಯ ಭಾಗದ ರೈತರಿಗೆ ನೀರಿನ ವಿಚಾರದಲ್ಲಿ ತೊಂದರೆ ಆಗಲು ಬಿಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ವಿನಾಯಕ್, ಅಧೀಕ್ಷಕ ಅಭಿಯಂತರರಾದ ಚಂದ್ರಹಾಸ, ಕಾರ್ಯಪಾಲಕ ಅಭಿಯಂತರ ರವಿಚಂದ್ರ, ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಉಪಸ್ಥಿತರಿದ್ದರು.
ನದಿ ಪಾತ್ರದ ಜನರಿಗೆ ಎಚ್ಚರಿಕೆ
ಇನ್ನೊಂದೆಡೆ ಶರಾವತಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ತ್ವರಿತ ಗತಿಯಲ್ಲಿ ಹೆಚ್ಚಾಗುತ್ತಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಂಭವ ಇರುವುದರಿಂದ ಅಣೆಕಟ್ಟೆಯ ಕೆಳದಂಡೆ ಹಾಗೂ ನದಿ ಪಾತ್ರದುದ್ದಕ್ಕೂ ಇರುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕೋರಲಾಗಿದೆ.
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819.00 ಅಡಿಗಳಾಗಿದ್ದು, ಜುಲೈ 29ರ ಬೆಳಗ್ಗೆ 8 ಗಂಟೆಗೆ ನೀರಿನ ಮಟ್ಟ 1806.20 ಅಡಿ ಇತ್ತು. ಈ ದಿನದ ಲಿಂಗನಮಕ್ಕಿ ಜಲಾಶಯಕ್ಕೆ 18,552 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅದೇ ರೀತಿ ಜಲಾಶಯಕ್ಕೆ ನೀರಿನ ಒಳ ಹರಿವು ಮುಂದುವರಿದ ಪಕ್ಷದಲ್ಲಿ ಜಲಾಶಯವು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಹೆಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸಮದಯಲ್ಲಿ ಹೆಚ್ಚಾದ ನೀರನ್ನು ಹೊರಗೆ ಬಿಡಲಾಗುವುದು. ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟ ಎಲ್ಲ ನೀರು ಗೇರುಸೊಪ್ಪ ಜಲಾಶಯಕ್ಕೆ ಹರಿದು ಹೋಗುತ್ತದೆ. ಗೇರುಸೊಪ್ಪ ಜಲಾಶಯವು ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಏಕೆಂದರೆ, ಇದೊಂದು ಬ್ಯಾಲೆನ್ಸಿಂಗ್ ಜಲಾಶಯವಾಗಿದೆ. ಹೀಗಾಗಿ ಲಿಂಗನಮಕ್ಕಿ ಜಲಾಶಯದಿಂದ ಹೊರಬಿಟ್ಟ ನೀರನ್ನು ಸಂಗ್ರಹಿಸುವ ಅವಕಾಶ ಇರುವುದಿಲ್ಲ.
ಹೀಗಾಗಿ ನೀರು ನದಿಗೆ ಹರಿದು ಹೋಗಲಿದ್ದು, ಅಣೆಕಟ್ಟೆಯ ಕೆಳದಂಡೆ ಹಾಗೂ ನದಿ ಪಾತ್ರದ ಉದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಕುಟುಂಬ ಸದಸ್ಯರು, ಜಾನುವಾರು ಹಾಗೂ ಇತರೆ ಸಾಮಗ್ರಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತಳಗೊಳ್ಳಬೇಕು ಎಂದು ಈ ಮೂಲಕ ಸೂಚನೆ ನೀಡಲಾಗಿದೆ. ಜಲಾಶಯದ ಪ್ರತಿದಿನದ ನೀರಿನ ಮಟ್ಟ ಮತ್ತು ಒಳಹರಿವಿನ ಪ್ರಮಾಣದ ವಿವರವನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಪ್ರಕಟಣೆ ತಿಳಿಸಿದೆ.
Share your comments