ಕೃತಕ ಗರ್ಭಧಾರಣೆ ಎನ್ನುವುದು ಕ್ಷೀರ ಕ್ರಾಂತಿಯ ಪ್ರಮುಖ ಭಾಗ. ಈ ಪದ್ಧ್ದತಿಯಿಂದ ಕಡಿಮೆ ಹಾಲಿನ ಇಳುವರಿ ನೀಡುವ ಸ್ಥಳೀಯ ಹಸು ಅಥವಾ ಎಮ್ಮೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುವ ತಳಿಯ ಹೋರಿ ಅಥವಾ ಕೋಣದ ವೀರ್ಯಾಣುಗಳನ್ನು ನೀಡಿ ಮಿಶ್ರತಳಿ ಪಡೆಯಬಹುದು. ಇದು ಹೈನುಗಾರಿಕೆಗೆ ವರದಾನವಾಗಿದೆ.
ಏನಿದು ಕೃತಕ ಗರ್ಭಧಾರಣೆ( artificial insemination):
ಹಸು ಅಥವಾ ಎಮ್ಮೆಯ ಗರ್ಭಕೋಶದೊಳಗೆ ಸೂಕ್ತ ಉಪಕರಣಗಳ ಸಹಾಯದಿಂದ ವೀರ್ಯಾಣುಗಳನ್ನು ವರ್ಗಾಯಿಸುವ ಪ್ರಕ್ರಿಯೆಯೇ ಕೃತಕ ಗರ್ಭಧಾರಣೆ ಎನ್ನುತ್ತಾರೆ. ಈ ಪ್ರಕ್ರಿಯೆ ಪಶುಪಾಲನೆಯಲ್ಲಿ ಅತ್ಯಂತ ಪ್ರಮುಖವಾದ ಅವಿಷ್ಕಾರ. ಇದರಿಂದ ರಾಸುಗಳ ತಳಿಯ ಸಂವರ್ಧನೆ ಮತ್ತು ಇನ್ನೂ ಉತ್ತಮ ಗುಣಲಕ್ಷಣಗಳಿರುವ ಮೇಲ್ದರ್ಜೆಯ ಜಾನುವಾರುಗಳನ್ನು ಪಡೆಯಲು ಸಾಧ್ಯ.
ವರ್ಷಕ್ಕೆ 7ಸಾವಿರ ಲೀಟರ್ ಹಾಲು ಕೊಡುವಂತಹ ಸಾಮರ್ಥ್ಯವುಳ್ಳ ಉತ್ಕೃಷ್ಟ ಎಚ್ಎಫ್ ತಳಿಯಿಂದ ಜನಿಸಿದ ಹೋರಿಯಿಂದ ಸಂಗ್ರಹಿಸಿದ ವೀರ್ಯವನ್ನು ಆಕಳುಗಳಿಗೆ ಮತ್ತು ವರ್ಷಕ್ಕೆ 3ಸಾವಿರ ಲೀಟರ್ ಹಾಲು ನೀಡುವಂತಹ ‘ಮುರ್ರಾ’ ಎಮ್ಮೆಯ ತಳಿಯಿಂದ ಜನಿಸಿದ ಕೋಣಗಳ ವೀರ್ಯವನ್ನು ಎಮ್ಮೆಗಳಿಗೆ ಉಚಿತವಾಗಿ ಕೊಡಲಾಗುವುದು.ಹಾಲಿನ ಉತ್ಪಾದನೆ ಹೆಚ್ಚಿಸುವ ಮೂಲಕ ಹೈನುಗಾರರ ಆರ್ಥಿಕ ಮಟ್ಟ ಹೆಚ್ಚಿಸುವ ಆಶಯ ಹೊಂದಲಾಗಿದೆ.
ಮುನ್ನೆಚ್ಚರಿಕೆ ಇದ್ದರೆ ಉತ್ತಮ (precaution):
ರೈತರು ಈ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದು ಜಾನುವಾರುಗಳಿಗೆ ಅದರ ಅಗತ್ಯಕ್ಕೆ ಅನುಸಾರವಾಗಿ ವೀರ್ಯವನ್ನು ಕೊಡಿಸಬೇಕು. ಒಮ್ಮೆಯೂ ಕರು ಹಾಕದ ಹಸುಗಳಿಗೆ ಜೆರ್ಸಿ ತಳಿಯ ವೀರ್ಯವನ್ನು ಕೊಡಿಸುವುದು ಸೂಕ್ತ. ಇದರಿಂದ ಪ್ರಸವದ ಸಮಯದಲ್ಲಿ ತೊಂದರೆ ಉಂಟಾಗುವುದಿಲ್ಲ. ಹಸುವು ಬೆದೆಗೆ ಬಂದಾಗ ಪಶುವೈದ್ಯರನ್ನು ಸಂರ್ಪಕಿಸಿ ಹಸುವಿನ ವಯಸ್ಸು ಹಾಗೂ ಆ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿ ಕೃತಕ ಗರ್ಭಧಾರಣೆ ಮಾಡಿಸುವುದು ಮತ್ತು ಹೆಚ್ಚಿನ ಮಾಹಿತಿಗೆ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸುವುದು ಸರಿಯಾದ ಕ್ರಮ.
ಕೃತಕ ಗರ್ಭಧಾರಣೆ ಕಾರ್ಯಕ್ರಮ:
ಆಗಸ್ಟ್ 1 ರಿಂದ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಯೋಜನೆಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸರಾಸರಿ 40ರಿಂದ 50 ಹಳ್ಳಿಗಳನ್ನು ಆಯ್ಕೆ ಮಾಡಲಾಗುವುದು. ಕೇಂದ್ರದ ಮಾರ್ಗಸೂಚಿ ಪ್ರಕಾರ ಈ ಗ್ರಾಮಗಳಲ್ಲಿ ಸ್ಥಳೀಯ ತಳಿಯ 100 ಆಕಳು ಹಾಗೂ ಎಮ್ಮೆಗಳಿಗೆ ಉತ್ಕೃಷ್ಟ ದೇಸಿ ಹಾಗೂ ವಿದೇಶಿ ತಳಿಗಳ ವೀರ್ಯವನ್ನು ಬಳಸಿ ಉಚಿತವಾಗಿ ಕೃತಕ ಗರ್ಭಧಾರಣೆ ಮಾಡಲಾಗುವುದು.
9 ತಿಂಗಳ ಅಭಿಯಾನ:
ಅಭಿಯಾನ 9 ತಿಂಗಳವರೆಗೆ ನಡೆಯಲಿದೆ. ಎಮ್ಮೆ Buffalo) ಅಥವಾ ಆಕಳು (Cow) ತಳಿ ಸಂವರ್ಧನೆಗೆ ಯೋಗ್ಯವಿರುವ ಸಮಯಕ್ಕೆ (ಬೆದೆಗೆ) ಬಂದಾಗ ಸಂತಾನೋತ್ಪತ್ತಿಗಾಗಿ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಮೊದಲು ಎಲ್ಲೆಲ್ಲಿ ಪಶು ಆಸ್ಪತ್ರೆಗಳಿವೆಯೋ ಆ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾಂಸ್ಥಿಕವಾಗಿ ನೆರವೇರಿಸಲಾಗುತ್ತಿತ್ತು. ಈಗ ಈ ಅಭಿಯಾನದಲ್ಲಿ ಇತರ ಹಳ್ಳಿಗಳನ್ನೂ ಒಳಪಡಿಸಲಾಗುತ್ತಿದೆ.
ಈ ಕಾರ್ಯಕ್ಕಾಗಿ ಕೃತಕ ಗರ್ಭಧಾರಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಅವರಿಗೆ ಇಂತಿಷ್ಟು ಎಮ್ಮೆ ಹಾಗೂ ಆಕಳುಗಳಿಗೆ ಕೃತಕ ಗರ್ಭಧಾರಣೆ ಕಾರ್ಯ ನಿರ್ವಹಿಸುವಂತೆ ಗುರಿ ನೀಡಲಾಗಿದೆ. ನಿಗದಿತ ಎಮ್ಮೆ ಅಥವಾ ಆಕಳು ಗರ್ಭ ಧರಿಸಿದರೆ 50 ಹಾಗೂ ಕರು ಜನಿಸಿದರೆ100 ಅನ್ನು ಈ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ಕೊಡಲಾಗುವುದು.
Share your comments