ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷಶನ್ ಸಂಸ್ಥಾಪಕ ಜಗ್ಗಿ ವಾಸುದೇವ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ಕಾವೇರಿ ಕೂಗು (Kaveri Koogu) ಎಂಬ ಅಭಿಯಾನದ ಮೂಲಕ ರೈತರನ್ನು ಅರಣ್ಯ ಕೃಷಿಗೆ ಪ್ರೋತ್ಸಾಹಿಸುತ್ತಿದ್ದಾರೆ.
ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ ಹಾಗೂ ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದಾಗಿದೆ. ಈ ಅಭಿಯಾನದ ಮೂಲಕ ರೈತ ಸಂಕುಲಕ್ಕೆ ಸರ್ಕಾರದ ನೆರವು ಕೊಡಿಸುವುದು ಹಾಗೂ ಅರಣ್ಯ ಕೃಷಿ (Agro forestry) ಪರಿಕಲ್ಪನೆಯಡಿ 242 ಕೋಟಿ ಮರ ಬೆಳೆಸುವ ಮಹತ್ವದ ಗುರಿ ಹೊಂದಿದ್ದಾರೆ. ಸಾಮಾನ್ಯ ಜನರಿಗೆ ಅರಣ್ಯ ಕೃಷಿ ಕುರಿತು ಪರಿಕಲ್ಪನೆಯಿಲ್ಲ. ಈ ಕಾರಣದಿಂದಾಗಿ ತಮಿಳುನಾಡಿನಲ್ಲಿ ಯಶಸ್ಸು ಕಂಡನಂತರ ಕರ್ನಾಟಕದಲ್ಲಿ ಅರಣ್ಯ ಕೃಷಿ ಯೋಜನೆಯಡಿ ಸಹಾಯಧನ ಕೊಡಿಸಿ ಕೃಷಿಕರೂ ಅಭಿಯಾನದಲ್ಲಿ ಭಾಗಿಯಾಗುವಂತೆ ಮಾಡಿದ್ದಾರೆ.
ಏನಿದು ಕಾವೇರಿ ಕೂಗು (What is Cauvery Calling)?
ಎಲ್ಲಾ ನದಿಗಳಂತೆ ಕಾವೇರಿಯು ಕೂಡ ಅರಣ್ಯ ಪೋಷಿತ ನದಿ. ಆದರೆ ನಗರೀಕರಣ ಬೆಳೆದಂತೆಲ್ಲಾ ಅರಣ್ಯ ನಾಶವಾಗುತ್ತಿದೆ. ಭೂಮಿಯ ಜೈವಿಕಾಂಶದ ಮರುಪೂರೈಕೆಯೂ ಆಗುತ್ತಿಲ್ಲ. ಭೂಮಿಯು ನೀರನ್ನು ಹಿಡಿದಿಟ್ಟುಕೊಳ್ಳುತ್ತಿಲ್ಲ. ಇದರಿಂದಾಗಿ ಕಾವೇರಿ ಬತ್ತಿಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾವೇರಿಗೆ ಮತ್ತೆ ಜೀವಂತಿಕೆ ತಂದುಕೊಡುವ ಆಂದೋಲನವೇ ಕಾವೇರಿ ಕೂಗು.
ಕಾವೇರಿ ಕೂಗು ಉದ್ದೇಶ (Cauvery Calling aim)?
ಕಾವೇರಿ ಜಲಾನಯನ ಹಾಗೂ ನದಿ ಪಾತ್ರದ ಸರ್ಕಾರಿ ಭೂಮಿಗಳಲ್ಲಿ ಸ್ಥಳೀಯ ಪ್ರಭೇದದ ಮರಗಳು ಮತ್ತು ಖಾಸಗಿ ಜಮೀನಿನಲ್ಲಿ ಅರಣ್ಯ ಕೃಷಿ (ಅಗ್ರೋ ಪಾರೆಸ್ಟ್ರಿ ಅಂದರೆ ಸಾಂಪ್ರದಾಯಿಕ ಬೆಳೆಗಳ ಜೊತೆ ಹಣ್ಣುಗಳು ಮತ್ತು ಟಿಂಬರ್ ಮರಗಳನ್ನು ಬೆಳೆಸುವುದು ಎಂಬ ಪರಿಕಲ್ಪನೆಯಡಿ 242 ಕೋಟಿ ಮರ ನೆಡುವುದು ಇದರ ಉದ್ದೇಶ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವ ಜೊತೆಗೆ ಕಾವೇರಿ ನೀರಿನ ಹರಿವು ಹೆಚ್ಚಾಗುತ್ತದೆ. ಜೊತೆಗೆ ಮುಂದಿನ 10 ರಿಂದ 12 ವರ್ಷದಲ್ಲಿ ರೈತರ ಆದಾಯವೂ ಹೆಚ್ಚಾಗಲಿದೆ ಎಂಬ ಪರಿಕಲ್ಪನೆ ಹೊಂದಿದೆ.
ರೈತರ ಆದಾಯ ದ್ವಿಗುಣವಾಗುವುದು ಹೇಗೆ?
ರೈತರು ತಮ್ಮ ಪೂರ್ತಿ ಜಮೀನಿಲ್ಲಿ ಅರಣ್ಯ ಕಷಿ ಆರಂಭಿಸದೆ ಕೇವಲ ಮೂರನೇ ಒಂದರಷ್ಟು ಕೃಷಿ ಭೂಮಿಯಲ್ಲಿ ಅರಣ್ಯ ಕೃಷಿ ಆರಂಭಿಸುವಂತೆ ಮಾಡುವುದು ಈ ಆಂದೋಲನದ ಉದ್ದೇಶ. ಉಳಿದ ಭಾಗದಲ್ಲಿ ರೈತ ತನಗೆ ಬೇಕಾದ ಬೆಳೆ ಬೆಳೆಯಬಹುದು. ಒಂದು ಹೆಕ್ಟೆರಗೆ ಅರಣ್ಯ ಭೂಮಿಯಲ್ಲಿ 240 ಮರ ನೆಟ್ಟು ನಾಲ್ಕು ಅಥವಾ 5 ವರ್ಷ ಕಳೆದ ನಂತರ ಅರ್ಧ ಮರಗಳನ್ನು ಕಡಿದು ಮಾರಬಹುದು. ಇಂತಿಷ್ಟು ವರ್ಷದ ನಂತರ ರೈತರು ತಮ್ಮ ಜಮೀನಿನಲ್ಲಿ ನೆಟ್ಟ ಮರಗಳನ್ನು ಕಡಿಯಲು ಅವಕಾಶ ಮಾಡಿಕೊಡಲಾಗುವುದು. ಹೀಗೆ ಮರ ಕಡಿದ ಜಾಗದಲ್ಲಿ ಬೇರೆ ಮರ ನೆಡುತ್ತಾ ಹೋದರೆ ನಾಲ್ಕೈದು ವರ್ಷಕ್ಕೆ ಆದಾಯ ಬಂದೇ ಬರುತ್ತದೆ. ಅಲ್ಲದೆ ನಮ್ಮ ಅಗತ್ಯಕ್ಕೆ ಬೇಕಾದ ಮರಗಳಿಗೆ ಕಾಡನ್ನು ಆಶ್ರಯಿಸುವುದೂ ತಪ್ಪುತ್ತದೆ. ಆಗ ಅರಣ್ಯವೂ ಹೆಚ್ಚುತ್ತದೆ. ರೈತರ ಆದಾಯವೂ ಹೆಚ್ಚುತ್ತದೆ ಎಂಬುದು ಇದರ ಆಶಯ.
ಅರಣ್ಯ ಕೃಷಿ (Agro forestry) ಪ್ರೋತ್ಸಾಹ ಧನ ಪಡೆಯುವುದು ಹೇಗೆ?
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರತಿ ಹೆಕ್ಟೇರಗೆ 50 ಸಾವಿರ ರೂಪಾಯಿಯವರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ಒಂದು ಹೆಕ್ಟೆರ್ಗೆ 240 ಗಿಡಗಳನ್ನು ಹಾಕಬಹುದು. ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ರಿಯಾಯಿತಿ ದರದಲ್ಲಿ 1 ರೂಪಾಯಿ ಮತ್ತು 3 ರೂಪಾಯಿಗೆ ಸಸಿ ನೀಡಲಾಗುವುದು. ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ ರೂ. 30/- ಗಳನ್ನು ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ ರೂ. 30/- ಹಾಗೂ ರೂ. 40/- ಹೀಗೆ ಒಟ್ಟು ರೂ. 100/- ಗಳನ್ನು ಪ್ರೋತ್ಸಾಹ ಧನವನ್ನಾಗಿ ಪಾವತಿಸಲಾಗುತ್ತದೆ. ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಖಾತೆಗಳಇಗೆ ಜಮೆ ಮಾಡಲಾಗುವುದು. ಪ್ರೋತ್ಸಾಹ ಧನ ಪಡೆಯುದಲ್ಲದೇ ರೈತರು ಮರಗಳಿಂದ ಸಿಗುವಂತಹ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರಮಟ್ಟು, ಇತ್ಯಾದಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ.
ಸಸಿ ಪಡೆಯಲು ನೀವು ನೀಡಬೇಕಾದ ದಾಖಲೆಗಳು (Douments):
ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಅಕೌಂಟ್ ಮಾಹಿತಿ, ಪಹಣಿ, ಎರಡು ಪಾಸ್ ಪೋರ್ಟ್ ಸೈಜಿನ ಪೋಟೋ ನೀಡಿ ಹತ್ತಿರದ ಅರಣ್ಯ ಇಲಾಖೆ ಅಥವಾ ಸಸ್ಯಕ್ಷೇತ್ರಗಳಿಂದ ಪಡೆಯಬಹುದು.
ಸಹಾಯವಾಣಿ:
ಕಾವೇರಿ ಕೂಗು ತಂಡವು 80009 80009 ಎಂಬ ಸಹಾಯವಾಣಿಯನ್ನು ಸಹ ಆರಂಭಿಸಿದೆ. ರೈತರು ಯೋಜನೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕರೆ ಮಾಡಬಹುದು.
Share your comments