ಆಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೈಮಾನಿಕ ಸಮೀಕ್ಷೆ ನಡೆಸಿದರು. ಶುಕ್ರವಾರ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಮಧ್ಯಂತರವಾಗಿ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧಂಕರ್ ಮತ್ತು ಇತರ ರಾಜ್ಯ ಅಧಿಕಾರಿಗಳೊಂದಿಗೆ ಬಸಿರ್ಹತ್ನಲ್ಲಿ ನಡೆದ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ”ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಜನರೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಂತಿವೆ ಎಂದರು.
ಆಂಫಾನ್ ನಿಂದ ಹಾನಿಗೊಳಗಾದವರಿಗೆ ಮನೆ ಕಳೆದುಕೊಂಡವರಿಗೆ, ಹಾನಿಗೊಂಡವರಿಗೆ ನೆರವು ನೀಡಲಾಗುವುದು.ಇಂತಹ ಅಗ್ನಿಪರೀಕ್ಷೆ ಸಮಯದಲ್ಲಿ ಕೇಂದ್ರ ಸರ್ಕಾರ ಪಶ್ಚಿಮಬಂಗಾಳದ ಜತೆ ಇರುತ್ತೇವೆ. ನಾವು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಕೆಲಸವನ್ನು ಸಾಧಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.
”ಮೇ ತಿಂಗಳಲ್ಲಿ, ದೇಶವು ಚುನಾವಣೆಗಳಲ್ಲಿ ನಿರತವಾಗಿತ್ತು ಮತ್ತು ಆ ಸಮಯದಲ್ಲಿ ನಾವು ಒಡಿಶಾದಲ್ಲಿ ಚಂಡಮಾರುತವನ್ನು ಎದುರಿಸಬೇಕಾಯಿತು. ಈಗ, ಒಂದು ವರ್ಷದ ನಂತರ, ಈ ಚಂಡಮಾರುತವು ನಮ್ಮ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಪಶ್ಚಿಮ ಬಂಗಾಳದ ಜನರು ಇದರಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ, ಎಂದು ಹೇಳಿದರು.
ಆಂಫಾನ್ಗೆ ಪಶ್ಚಿಮ ಬಂಗಾಳದಲ್ಲಿ 80 ಬಲಿ
ಪೂರ್ವ ಕರಾವಳಿಯಲ್ಲಿ ಆಂಫಾನ್ ಆರ್ಭಟ ಜೋರಾಗಿದ್ದು, ಪಶ್ಚಿಮ ಬಂಗಾಳ ರಾಜ್ಯದಲ್ಲೊಂದೆ 80 ಜನ ಭೀಕರ ಚಂಡಮಾರುತಕ್ಕೆ ಬಲಿಯಾಗಿದ್ದಾರೆ ಎಂದು ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇನ್ನು, ಆಂಫಾನ್ನಿಂದ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ.ಪರಿಹಾರವನ್ನು ದೀದಿ ಘೋಷಿಸಿದ್ದಾರೆ.
ಇಂತಹ ವಿನಾಶವನ್ನು ಇದುವರೆಗೂ ನಾನು ನೋಡಿದ್ದಿಲ್ಲ.ಗಂಟೆಗೆ 165 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ, ಮಳೆಯಿಂದ ಪಶ್ಚಿಮ ಬಂಗಾಳ ಅಕ್ಷರಶಃ ನಲುಗಿದೆ ಎಂದು ತಿಳಿಸಿದ್ದಾರೆ.
Share your comments