ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್ ದಿನದ ಪ್ರಮುಖ ಸುದ್ದಿಗಳನ್ನು ನೀಡುತ್ತಿದೆ. https://www.youtube.com/channel/UC04Q0MV695st8ZVFWS9EXBQ ನ ಮೂಲಕ ನೀವು ಸುದ್ದಿಗಳನ್ನು ವೀಕ್ಷಿಸಬಹುದು.
ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
1. ಕಾವೇರಿ ನದಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೆ ಭಾರೀ ಹಿನ್ನೆಡೆ!
2. ಕೇಂದ್ರ ಜಲ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ
3. ರಾಜ್ಯದಲ್ಲಿ ಬೆಳೆ ನಾಶದ ಆತಂಕ ಮುಖ್ಯಮಂತ್ರಿ ಸಿದ್ದರಾಮಯ್ಯ
4. ಕರ್ನಾಟಕದಲ್ಲಿ ಬರ: ಈ ಬಾರಿ ಸರಳ ಮೈಸೂರು ದಸರಾ
5. ಹಸಿರು ಬರದ ಬಗ್ಗೆ ಕೇಂದ್ರಕ್ಕೆ ಶೀಘ್ರ ವರದಿ
ಸುದ್ದಿಗಳ ವಿವರ ಈ ರೀತಿ ಇದೆ.
1. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಗುರುವಾರ ತಮಿಳುನಾಡಿಗೆ
ಮುಂದಿನ 15 ದಿನಗಳ ಅವಧಿಗೆ ನಿತ್ಯವೂ 5 ಸಾವಿರ ಕ್ಯೂಸೆಕ್ ಕಾವೇರಿ ನದಿ ನೀರು ಬಿಡುವಂತೆ ಆದೇಶ ಮಾಡಿದೆ.
ಅಲ್ಲದೇ ಕಾವೇರಿ ನದಿನೀರು ಪ್ರಾಧಿಕಾರ ನೀಡಿದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
2. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಅವರು ಗುರುವಾರ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಸಂಸದರೊಂದಿಗೆ ನಿಯೋಗದಲ್ಲಿ ತೆರಳಿ ಕೇಂದ್ರ ಸಚಿವರನ್ನು ಭೇಟಿಯಾದ
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನದಿ ನೀರಿನ ವಸ್ತುಸ್ಥಿತಿಯ ಬಗ್ಗೆ ತಿಳಿಸಿದರು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಇದ್ದರು.
3. ಕಾವೇರಿ ನದಿ ನೀರಿನ ಸಮಸ್ಯೆ ಇದೀಗ ತಾರಕಕ್ಕೆ ಏರಿದೆ. ಕರ್ನಾಟಕದಲ್ಲಿ ಮಳೆ ಕೊರತೆಯಿಂದಾಗಿ ನೀರಿನ ಅಭಾವ ಎದುರಾಗಿದೆ.
ಜಲಾಶಯದ ನೀರಿನ ಮಟ್ಟ ಗಮನಿಸಿದರೆ ಬೆಳೆ ನಾಶವಾಗುವ ಆತಂಕವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳವಳ
ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಲಿದೆ.
ಹೀಗಾಗಿ ರಾಜ್ಯದಲ್ಲಿನ ವಸ್ತುಸ್ಥಿತಿಯ ಕುರಿತು ಕೇಂದ್ರ ಜಲ ಸಚಿವರಿಗೆ ಮನವರಿಕೆ ಮಾಡಲಾಗಿದೆ.
ಅವರೂ ಸಹ ಈ ಸಂಬಂಧ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದಿದ್ದಾರೆ.
4. ರಾಜ್ಯದಲ್ಲಿ ಮುಂಗಾರು ರೈತರ ಕೈಹಿಡಿಯದ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ತೀವ್ರ ಬರದ ಛಾಯೆ ಆವರಿಸಿದೆ.
ಹೀಗಾಗಿ ಈ ಬಾರಿ ಸರಳ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ
ಡಾ.ಎಚ್.ಸಿ.ಮಹಾದೇವಪ್ಪ ಅವರು, ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದೆ.
ಹೀಗಾಗಿ ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.
5. ಕರ್ನಾಟಕದಲ್ಲಿ ಎದುರಾಗಿರುವ ಹಸಿರು ಬರದ ಬಗ್ಗೆ ಕೃಷಿ ಸಂಶೋಧಕರ ಮೂಲಕ ವೈಜ್ಞಾನಿಕ ವರದಿಯನ್ನು
ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಆಗಿರುವ ಬೆಳೆ ನಷ್ಟ ಪರಿಹಾರದ ಅಂದಾಜನ್ನು ಸಚಿವ ಸಂಪುಟ ಸಭೆಯಲ್ಲಿ
ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.
Share your comments