1. ಸುದ್ದಿಗಳು

ಅಳಿವಿನಂಚಿನಲ್ಲಿ ಹೆದ್ದೂರು ಬದನೆ !


ಅಳಿವಿನಂಚಿನಲ್ಲಿ ಹೆದ್ದೂರು ಬದನೆ !

ಬರಹ: ಕೂಡಂಡ ರವಿ, ಹೊದ್ದೂರು.


ನಮಗೆ ಸಾಮಾನ್ಯ ಸಂತೆ ಮಾರುಕಟ್ಟೆಗಳಲ್ಲಿ ದೊರೆಯುವ ವೈವಿಧ್ಯಮಯ ಬದನೆಕಾಯಿಗಳು ತಿಳಿದಿವೆ. ಅದರೆ, ಹೆದ್ದೂರು ಬದನೆ ಅತ್ಯಂತ ವಿಶಿಷ್ಟವಾದದ್ದು. ಬಹುತೇಕರಿಗೆ ಈ ಹೆಸರೇ ಅಪರಿಚಿತ !
ವೈಶಿಷ್ಟ್ಯಮಯ ಬದನೆ
ಕೊಡಗಿನ ಕಿತ್ತಳೆ, ಹಸಿರು ಏಲಕ್ಕಿ, ಬೆಣ್ಣೆಹಣ್ಣುಗಳಂತೆ ಇದಕ್ಕೆ ಅದರದ್ದೇ ಆದ ಪ್ರಾದೇಶಿಕ ಭಿನ್ನತೆ, ವೈವಿಧ್ಯತೆಯೂ ಇವೆ. ಕೊಡಗಿನಲ್ಲಿ ಸರ್ವೆ ಸಾಮಾನ್ಯವಾಗಿ ಮಾರಾಟವಾಗುವ ಎಣ್ಣೆ ಬದನೆ, ಕರಾವಳಿ ಪ್ರದೇಶದ ಮಟ್ಟೀಗುಳ್ಳದಂತೆ. ಇದರ ಸಾಂಬಾರು, ಹುಳಿ, ಫಲಾವ್, ಬಾತ್ ಬಹಳ ರುಚಿ. ಕೆಂಡದಲ್ಲಿ ಸುಟ್ಟು ಹಸಿಮೆಣಸು, ಮಜ್ಜಿಗೆ, ನೀರುಳ್ಳಿ ಸೇರಿಸಿ ಮಾಡಿದ ಮೊಸರು ಗೊಜ್ಜು ಇದೆಯಲ್ಲಾ.. ತುಂಬಾ ರುಚಿಕರ.
ತೀರ್ಥಹಳ್ಳಿ ತಾಲೂಕು ತಾಯ್ನಾಡು
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಹೆದ್ದೂರಿಗೆ 25 ಕಿ.ಮೀ. ದೂರ. ಇಲ್ಲಿ ತುಂಗೆಗೆ ಉಪನದಿ ಸೇರುತ್ತದೆ. ನೆರೆ ಬಂದಾಗ ಸಂಗಮ ಸ್ಥಳದ ಆಚೀಚೆನ ದಡಗಳಲ್ಲಿ ಜೌಗು ಮಣ್ಣು ಹರಡಿಕೊಳ್ಳುತ್ತದೆ. ಇದು ಬದನೆ ಕೃಷಿಗೆ ಸೂಕ್ತ. ನಾಲ್ಕೈದು ದಶಕಗಳಿಂದ ಸುತ್ತಲಿನ ಕೃಷಿಕರು ಇಲ್ಲಿ ಬೇಲಿ ಹಾಕಿ ಕೃಷಿ ಮಾಡುತ್ತಿದ್ದಾರೆ. ಇಪ್ಪತ್ತಕ್ಕೂ ಮಿಕ್ಕಿ ರೈತರು. ನೂರಾರು ಏಕರೆಯಲ್ಲಿ ಬದನೆ ಕೃಷಿ ಮಾಡುತ್ತಿರುವರು. ಒತ್ತುವರಿಯಿಂದಾಗಿ ಈಗೀಗ ಈ ಜಾಗವೂ ಕುಂಠಿತವಾಗುತ್ತಿದೆ.
ಎರಡು ವಿಧಗಳು
ಈ ಬದನೆಯಲ್ಲಿ ಹಸಿರು ಮತ್ತು ನೇರಳೆ ವರ್ಣದವುಗಳಿವೆ. ಮಾರುಕಟ್ಟೆಯಲ್ಲಿ ಹಸಿರಿಗೆ ಬೇಡಿಕೆ ಹೆಚ್ಚು. ಮೂಲ ಹೆದ್ದೂರು ಬದನೆಯ ತೊಟ್ಟು, ಗಿಡದಲ್ಲಿ ಮುಳ್ಳುಗಳಿವೆ ! ಉಳಿದುದರಲ್ಲಿ ಇಲ್ಲ. ‘ಈಚೆಗೆ ವರ್ಣಸಂಕರದಿಂದಾಗಿ ಹಲವು ಮಿಶ್ರ ತಳಿಗಳಾಗಿವೆ. ರುಚಿಯಲ್ಲಿ ಮಾತ್ರ ಮೂಲತಳಿಯೇ ದೊಡ್ಡಣ್ಣ’ ಎನ್ನುವರು ಅಲ್ಲಿನ ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ.
ಕಾಡಿನ ಗಿಡ !
ಈ ಬದನೆಯ ಸಸಿ ಮಾಡುವ ರೀತಿ ವಿಶಿಷ್ಟಮಯ. ಕಾಡಿನಲ್ಲಿ ಬಿದಿರಿನ ಪೊದೆಗೆ ಬೆಂಕಿ ಬಿದ್ದು ಸುಟ್ಟುಹೋದ ಸ್ಥಳ ಇರುತ್ತದೆ. ಆ ಮಣ್ಣಿನಲ್ಲಿ ಅಲ್ಲೇ ಮಡಿ ಮಾಡಿ ಬೀಜ ಬಿತ್ತುತ್ತಾರೆ. ಗೌರಿ ಹಬ್ಬದ ಸುತ್ತಮುತ್ತ ಬೀಜ ಬಿತ್ತಿದರೆ
ದಸರಾದ ಹೊತ್ತಿಗೆ ಸಸಿಯಾಗಿರುತ್ತದೆ. ‘ಇದರಲ್ಲಿ ಹುಟ್ಟಿದ ಸಸಿ ಸದೃಢವಾಗಿರುತ್ತದೆ’ ಎಂಬ ವಿಶ್ವಾಸ ಈ ಕೃಷಿಕ ಸಮುದಾಯದವರದ್ದು.
ಮೇಘ ಮಳೆಗೆ ನಾಟಿ
ದಸರಾಕ್ಕೆ ಇಪ್ಪತ್ತು ದಿವಸ ಮುಂಚಿತವಾಗಿ ಬರುವ ‘ಮೇಘ ಮಳೆ’ಗೆ ಸಸಿ ನಾಟಿ. ಗಿಡ ನಾಲ್ಕಡಿ ಬೆಳೆಯುತ್ತದೆ. ಯುಗಾದಿಗೆ ಸೀಸನ್ ಮುಕ್ತಾಯ. ಗಿಡ ಸರಾಸರಿ ಮೂವತ್ತು ಕಾಯಿ ಬಿಡುತ್ತದೆ. ಒಂದೊಂದರ ತೂಕ ಅರ್ಧದಿಂದ ಒಂದು ಕಿಲೋ ಗ್ರಾಂ ! ಕೊಯ್ಲಿನ ಬಳಿಕ ಮೂರ್ನಾಲ್ಕು ದಿವಸ ತಾಳಿಕೆ ಇದೆ.
ಪ್ರತೀ ಮೂರು ದಿವಸಕ್ಕೊಮ್ಮೆ ಕೊಯಿಲು.
ಬೆಲೆ ತೀರಾ ಕಡಿಮೆ ?
ಅರುವತ್ತು ಕಿಲೋದ ಮೂಟೆ. ಸ್ಥಳದಲ್ಲೇ ಮಾರಾಟ. ಮೂಟೆ ಬದನೆಗೆ ಸರಿಸುಮಾರು 150 ರೂಪಾಯಿ ? ದರದಲ್ಲಿ ಏರುಪೇರಾಗುತ್ತದೆ. ಚಿಲ್ಲರೆಯಾಗಿಯೂ ಮಾರುತ್ತಾರೆ. ‘ಹೊಲಕ್ಕೆ ಬಂದು ಒಯ್ಯುವವರಿದ್ದಾರೆ. ಬಿಡುವಿದ್ದಾಗ ಹತ್ತಿರದ ಸಂತೆಯಲ್ಲಿ ಮಾರುತ್ತೇವೆ. ರೊಕ್ಕ ಹೆಚ್ಚಿಗೆ ಸಿಗುತ್ತದೆ. ಒಂದು ಮಳೆ ಬಿದ್ದರೆ ಸಾಕು, ಹುಳ ಸೇರಿ ಕೊಳ್ಳುತ್ತವೆ’, ಸಮಸ್ಯೆ ಮುಂದಿಡುತ್ತಾರೆ ಕೃಷಿಕ ರಾಮಣ್ಣ . ‘ಬದನೆ ಬೆಳೆವ ಕೃಷಿಕರಲ್ಲಿ ಸಂಘಟನೆಯಿಲ್ಲ. ದರ ನಿಶ್ಚಯವನ್ನೂ ಮಾಡುವುದಿಲ್ಲ. ಹಾಗಾಗಿ ಇವರ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ’ ಮೂರ್ತಿ ಬೇಸರಿಸುತ್ತಾರೆ.
ಕಳೆದ ಕಿಲೋಗೆ ಹದಿನಾರು ರೂಪಾಯಿ ಸಿಕ್ಕಿದೆ. ಅದು ಬಂಪರ್ ದರ ! ಒಂದು ರೂಪಾಯಿಗೆ ಇಳಿಯುವುದೂ ಇದೆ. ಸರಾಸರಿ 6-8 ರೂಪಾಯಿ. ‘ಮಾರುಕಟ್ಟೆಗೆ ಬೇರೆಡೆಯಿಂದ ಬದನೆ ಬಂದಾಗ, ಬೇಡಿಕೆ ಕಡಿಮೆಯಾಗುತ್ತದೆ’ ಬೆಳೆಗಾರ ಮಂಜಪ್ಪರ ಅಳಲು.
ಅಪಾರ ಬೇಡಿಕೆ
ಆದರೆ ಹೆದ್ದೂರು ಬದನೆಯ ರುಚಿಯುಂಡವರು ಇದನ್ನೇ ಹುಡುಕುತ್ತಾರೆ ! ಬೆಳೆದವರೇ ನೇರವಾಗಿ ಸಂತೆಯಲ್ಲಿ ಮಾರಿದಾಗ ಗ್ರಾಹಕರಿಗೂ ಲಾಭ, ಇವರಿಗೂ ಪ್ರಯೋಜನ. ರಖಂ ವ್ಯಾಪಾರಿಗಳು ಇವರಿಗೆ ಮೋಸ ಮಾಡುವುದೇ ಹೆಚ್ಚು! ‘ಹೆದ್ದೂರು ಬದನೆಗೆ ಬೇಡಿಕೆ ಇದೆ. ಇದು ಬೆಂಗಳೂರು ಮಾರುಕಟ್ಟೆ ಸೇರಬೇಕು. ಆಗ ದರವೂ ಜಾಸ್ತಿ ಸಿಗುತ್ತದೆ. ಹೆದ್ದೂರಿನಿಂದ ಕಿಲೋಮೀಟರ್ ದೂರದಲ್ಲಿ ಶಿವಮೊಗ್ಗ ಸಂಪರ್ಕ ಹೆದ್ದಾರಿ ಸಾಗುತ್ತದೆ. ಆ ಮುಖಾಂತರ ಬದನೆ ರಾಜಧಾನಿ ಸೇರಿದಲ್ಲಿ ಉತ್ತಮ ಬೆಲೆ ಖಚಿತ. ಬೆಳೆಯುವ ಬಹುತೇಕ ರೈತರಿಗೆ ಸ್ವಂತ ಭೂಮಿ ಇಲ್ಲ. ಕೆಲವರು ಅಲ್ಪಸ್ವಲ್ಪ ಜಾಗ-ಹಿತ್ತಲು ಮಾಡಿಕೊಂಡಿದ್ದಾರೆ. ಇದ್ದ ಜಾಗದಲ್ಲಿ ಮರಗೆಣಸು, ಭತ್ತ ಕೃಷಿ. ವರ್ಷದ ಐದಾರು ತಿಂಗಳು ಬರುವ ಬದನೆಯ ರೊಕ್ಕವೇ ಜೀವನಾಧಾರ. ಉಳಿದ ತಿಂಗಳುಗಳಲ್ಲಿ ಕೂಲಿ. ಒಂದರ್ಥದಲ್ಲಿ ಇವರ ಬದುಕಿನ ಅನಿವಾರ್ಯತೆಯೇ ‘ಹೆದ್ದೂರು ಬದನೆ’ಯನ್ನುಳಿಸಿದೆ !
ಬದುಕಿಗೆ ಆಸರೆಯೂ
ಉಳಿಸುವ ದಾರಿಯೆಂತು? ಪಶುವೈದ್ಯ ಡಾ. ಶೇಷಾಚಲ ಅವರ ಪ್ರಕಾರ ‘ಬೆಳೆಗಾರರಿಗೆ ಉತ್ತಮ ದರ ಸಿಗುವಂತೆ ಮಾಡಿದರೆ ಸಾಕು, ಬದುಕಿಗೆ ಆಸರೆಯೂ ಆಗುತ್ತದೆ. ಬದನೆಯ ತಳಿಯೂ ಉಳಿಯುತ್ತದೆ.
ಕೃಷಿಕ ಗೋವಿಂದಪ್ಪ ಅವರ ಪ್ರಕಾರ ‘ತೀರ್ಥಹಳ್ಳಿ, ಹೊಸನಗರ, ಕೊಪ್ಪ, ಶಿವಮೊಗ್ಗ, ಕೋಣಂದೂರಿನ ಕೃಷಿಕರು ಬೀಜ ಒಯ್ದು ಬೆಳೆದರು. ಈ ರುಚಿ ಅಲ್ಲಿ ಸಿಕ್ಕಿಲ್ಲ.’ ಇಲ್ಲಿ, ಹೆದ್ದೂರಲ್ಲಿ ಈಗ ಬೇರೆಡೆಯಿಂದ ತಂದ ಬೀಜದಿಂದಾಗಿ ಮೂಲ ತಳಿ ಮಿಶ್ರವಾಗಿ ಬಿಟ್ಟಿದೆ ! ಕೃಷಿಕ ಪ್ರಭಾಕರ್ ಅವರ ಪ್ರಕಾರ ಅವರು ಬೆಳೆದಿದ್ದನ್ನು ಅವರೇ ಮಾರಾಟ ಮಾಡುತ್ತಾರೆ. ತಿಂಗಳಲ್ಲಿ ಕೃಷಿಮೇಳಗಳಲ್ಲಿ ಭರ್ಜರಿ ವ್ಯಾಪಾರ. ಮೂರು ದಿನಗಳಲ್ಲಿ ಕ್ವಿಂಟಾಲ್‍ಗಟ್ಟಲೆ ಬದನೆ ಖಾಲಿ.
• ಈ ತಳಿಯ ಶುದ್ಧೀಕರಣ. * ಈ ರೈತರನ್ನು ಒಗ್ಗೂಡಿಸಿ ಒಳ್ಳೆಯ ಮಾರುಕಟ್ಟೆ ವ್ಯವಸ್ಥೆ ಒದಗಿಸುವುದು. ಸುತ್ತಮುತ್ತಲಿನ ಸಹೃದಯಿಗಳು,
ಕೃಷಿಸ್ನೇಹಿಗಳು ಈ ಕೆಲಸ ಮಾಡಲು ಸಾಧ್ಯವಿಲ್ಲವೇ? ಎಂದು ಬೇಸರವೆನಿಸುತ್ತದೆ.
ಅಳಿವಿನಂಚಿನಲ್ಲಿ ತಳಿ
ಅಳಿವಿನಂಚಿನಲ್ಲಿರುವ ಈ ತಳಿ ಉಳಿಯುತ್ತದೆ. ಇಲ್ಲದಿದ್ದರೆ ಶತಮಾನದಿಂದ ಬೆಳೆಯುತ್ತಿರುವ ಈ ತಳಿ ನಮ್ಮ ಕಣ್ಣೆದುರೇ ಕಣ್ಮರೆಯಾಗುತ್ತದೆ.’ ಹೆದ್ದೂರಿನ ಬದನೆ ಉಳಿಸಲು ಎರಡು ರೀತಿಯ ಯತ್ನ ಆಗಬೇಕಿದೆ. ಶತಮಾನಗಳಿಂದ ಜನಮನ ಸೆಳೆಯುತ್ತಾ ಬಂದಿರುವ ಈ ಬದನೆ ತಳಿ ಅಳಿಯುವುದರಲ್ಲಿದೆ. ಸಹೃದಯರು ರೈತರನ್ನು ಸಂಘಟಿಸಿ ಒಳ್ಳೆ ಮಾರುಕಟ್ಟೆ ಸಿಗುವಂತೆ ಮಾಡಿದಲ್ಲಿ “ಹೆದ್ದೂರು ಬದನೆ” ಉಳಿದುಕೊಂಡೀತು. ಮುಂದಿನ ಪೀಳಿಗೆಗೂ ಅದರ ಸವಿ ತಿಳಿದೀತು. ಇದೇ ಸ್ಥಿತಿ ಮುಂಬರುವ ವರ್ಷಗಳಲ್ಲಿ ಕೊಡಗಿನ ನಾಟಿ ತಿಂಗಳ ಹುರುಳಿ(ಬೀನ್ಸ್), ಹಸಿರು ಏಲಕ್ಕಿಗೂ ಬಂದರೂ, ಅಚ್ಚರಿಯಿಲ್ಲ !?

 

 

Published On: 25 July 2019, 01:05 PM English Summary: Endangered Species

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.