ಪ್ರಸಕ್ತ ವರ್ಷ ಉತ್ತಮ ಮುಂಗಾರು ಆರಂಭವಾಗಿದ್ದರಿಂದ ರೈತಬಾಂಧವರ ಮುಖದಲ್ಲಿ ಕಳೆಗಟ್ಟಿತ್ತು. ಸರಿಯಾದ ಸಮಯಕ್ಕೆ ಮಳೆಯಾಗಿದ್ದರಿಂದ ಖುಷಿಯಲ್ಲಿದ್ದ ರೈತರು ಸಾಲಸೂಲ ಮಾಡಿ ಹೆಸರು, ಉದ್ದು ಬಿತ್ತನೆ ಮಾಡಿದ್ದರು. ಕಳೆದ ಐದಾರು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಸರು ಉದ್ದು ಬೆಳೆಗಳು ನಳನಳಿಸುತ್ತಿದ್ದವು. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತನಿಗೆ ನಿರಂತರವಾಗಿ ಸುರಿದ ಮಳೆ ಹೊಲಲ್ಲಿಯೇ ಮೊಳಕೆ ಒಡೆದುಹೋಗುವಂತೆ ಮಾಡಿತು. ಇದರಿಂದಾಗಿ ಲಕ್ಷಾಂತರ ರೈತರ ಹೆಸರು ಹೊಲದಲ್ಲಿಯೇ ಕೊಳೆಯಿತು. ಇದ್ದ ಬೆಳೆಯನ್ನು ಕಷ್ಟಪಟ್ಟು ರಾಶಿ ಮಾಡಿ ಮಾರಾಟ ಮಾಡಲು ಮಾರುಕಟ್ಟೆಗೆ ಹೋದರೆ ಬೆಲೆ ಕುಸಿತದ ಮತ್ತೊಂದು ಏಟು. ಹೀಗೆ ರೈತ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಮಾರುಕಟ್ಟೆಯ ಆಟಕ್ಕೆ ನಲುಗಿಹೋಗಿದ್ದಾನೆ.
ಸರ್ಕಾರವೇನೋ ಹೆಸರಿಗೆ ಕ್ವಿಂಟಾಲಿಗೆ 7196 ರೂಪಾಯಿ ಬೆಂಬಲ ಬೆಲೆ ಘೋಷಸಿದೆ. ಆದರೆ ಇಲ್ಲಿಯವರಿಗೆ ಸರ್ಕಾರ ಖರೀದಿ ಕೇಂದ್ರಗಳನ್ನೇ ತೆರೆದಿಲ್ಲ. ಹೆಸರು ಬೆಳೆ ರಾಶಿಯಾಗಿ ತಿಂಗಳಾದರೂ ಸಹ ಇಲ್ಲಿಯವರೆಗೆ ಖರೀದಿ ಕೇಂದ್ರ ಆರಂಭವಾಗದೆ ಇರುವದಿರಂದ ರೈತರು ಕಂಗಾಲಾಗಿದ್ದಾರೆ. ಇದ್ದ ಬೆಳೆಗಾದರೂ ಮಾರುಕಟ್ಟೆಯಲ್ಲಿ ಬೆಲೆ ಸಿಗಬಹುದೆಂದು ಹೋದರೆ 2000 ದಿಂದ 4 ಸಾವಿರ ರೂಪಾಯಿಗೆ ಖರೀದಿಯಾಗುತ್ತಿದೆ. ಉತ್ತಮ ಬೆಲೆ ಬರಬಹುದೆಂದು ನಿರೀಕ್ಷೆಯಲ್ಲಿದ್ದ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.
ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂದು ಸರ್ಕಾರದ ಮೇಲೆ ನಿರಂತರವಾಗಿ ರೈತರು ಒತ್ತಡ ಹಾಕುತ್ತಿದ್ದರೂ ಸಹ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಹಲವು ಬಾರಿ ಗಮನ ಸೆಳೆದರೂ ಸರ್ಕಾರ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರೋಪಿಸುತ್ತಿದ್ದಾರೆ.
ಹೆಸರನ್ನು ಕೊಯ್ಲು ಮಾಡಿ ಬಹಳ ದಿನಗಳ ಕಾಲ ರೈತರು ಮನೆಗಳಲ್ಲಿ ದಾಸ್ತಾನು ಮಾಡಲಾಗುವುದಿಲ್ಲ. ಹುಳದ ಕಾಟ ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ರೈತರು ಅಡ್ಡಾದಿಡ್ಡಿ ಬೆಲೆಗಳಿಗೆ ಮಾರಿಕೊಳ್ಳುತ್ತಿದ್ದಾರೆ. ಸರ್ಕಾರ ಕೂಡಲೇ ರೈತರ ನೆರವಿಗೆ ಬಂದರೆ ಇದ್ದ ರೈತರಿಗಾದರೂ ಅನುಕೂಲವಾಗುತ್ತದೆ.
ಯಾಕೆ ಕುಸಿತ?:
ಮಾರುಕಟ್ಟೆಯಲ್ಲಿ ರೈತರಿಗೆ ಸೂಕ್ತ ದರ ಸಿಗುತ್ತಿಲ್ಲ. ವರ್ತಕರು ಒಂದಾಗಿ ಕಮ್ಮಿ ದರ ನಿಗದಿಪಡಿಸಿದ್ದರಿಂದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಪೂರೈಕೆ ಕಮ್ಮಿಯಾದರೆ ಬೆಲೆ ಹೆಚ್ಚಾಗಬೇಕು ಎನ್ನುವುದು ಅರ್ಥಶಾಸ್ತ್ರದ ನಿಯಮ. ಆದರೆ ಇಲ್ಲಿ ಬೆಳೆ ಕಮ್ಮಿಯಾದರೆ ಬೆಲೆ ಹೆಚ್ಚಾಗಿಲ್ಲ. ಹೆಸರು ಮಾರುಕಟ್ಟೆಗೆ ಬರುವ ಮುನ್ನ ಕ್ವಿಂಟಾಲ್ಗೆ 7000-7500 ಸಾವಿರ ರೂ. ಬೆಲೆ ಇತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ 3000 ದಿಂದ 4000 ರೂಪಾಯಿಗೆ ಖರೀದಿಯಾಗುತ್ತಿದೆ.
ಮಾರುಕಟ್ಟೆಯಲ್ಲಿ ಸರಕಾರ ಘೋಷಿಸಿದ ಬೆಂಬಲ ಬೆಲೆಗಿಂತಲೂ ಕಮ್ಮಿ ಬೆಲೆಗೆ ಧಾನ್ಯ ಮಾರಾಟ ಮಾಡುತ್ತಿದ್ದರೂ ಸರಕಾರ ಮಧ್ಯಪ್ರವೇಶಿಸುತ್ತಿಲ್ಲ ಎಂಬ ರೈತರ ಆಕ್ರೋಶವಾಗಿದೆ.
Share your comments