ಭಾರತ ಕೃಷಿ ಪ್ರಧಾನ ದೇಶ. ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು ಭಾರತದ ಗ್ರಾಮೀಣ ಜನಸಂಖ್ಯೆಯ 80% ಕ್ಕಿಂತ ಹೆಚ್ಚು ಜನರಿಗೆ ಆದಾಯದ ಮುಖ್ಯ ಮೂಲಗಳಾಗಿವೆ. ಕೃಷಿ ಮತ್ತು ಸಂಬಂಧಿತ ವಲಯಗಳು ದೇಶದ ಒಟ್ಟು ಜಿಡಿಪಿಗೆ ಸುಮಾರು 17-18% ರಷ್ಟು ಕೊಡುಗೆ ನೀಡುತ್ತದೆ. ರೈತ ದಿನ ಅಥವಾ ರಾಷ್ಟ್ರೀಯ ರೈತ ದಿನಾಚರಣೆ ಅಥವಾ ಕಿಸಾನ್ ದಿವಸ್ ಅನ್ನು ಪ್ರತಿವಷ೯ ಡಿಸೆಂಬರ್ 23 ರಂದು ರಾಷ್ಟ್ರವ್ಯಾಪಿ ಆಚರಿಸಲಾಗುತ್ತದೆ . ತುತ್ತು ಅನ್ನ ತಿನ್ನುವ ಮೊದಲು ರೈತನನ್ನು ನೆನೆ ಎಂಬ ನಾಣ್ನುಡಿಯಂತೆ ಇಂದು ನಾವೆಲ್ಲರೂ ನಿಶ್ಚಿಂತೆಯಿಂದ ಹಸಿವಿಲ್ಲದ ಜೀವನ ನಡೆಸುತ್ತಿದ್ದರೆ , ಇದಕ್ಕೆ ರೈತನ ಶ್ರಮದ ಬೆವರೇ ಕಾರಣ.
ಹಿನ್ನಲೆ:
ದೇಶದ ಐದನೇ ಪ್ರಧಾನಿ ಮತ್ತು ರೈತ ನಾಯಕರಾದ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾದ ಡಿಸೆಂಬರ್ 23 ರಂದು ಪ್ರತಿವಷ೯ ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿಸುತ್ತಾರೆ. ಚರಣ್ ಸಿಂಗ್ ರವರು ತಮ್ಮ ಅವಧಿಯಲ್ಲಿ ದೇಶದ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಹತ್ತಾರು ನೀತಿಗಳನ್ನು ಜಾರಿಗೆ ತಂದವರು. ಆಧುನಿಕ ಕೃಷಿ ಪದ್ದತಿ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದರು. ಅವರು ಸ್ವತಹಃ ರೈತ ಕುಟುಂಬಕ್ಕೆ ಸೇರಿದವರಾಗಿದ್ದರಿಂದ ರೈತರ ಕಷ್ಟಗಳನ್ನು ಅರಿತವರಾಗಿದ್ದರು. ಅವರು ಲಾಲ್ ಬಹದ್ದೂರ್ ಶಾಸ್ತ್ರಿರವರ " ಜೈ ಜವಾನ್ ಜೈ ಕಿಸಾನ್ " ಎಂಬ ಘೋಷವಾಕ್ಯವನ್ನು ಅನುಸರಿಸುತ್ತಿದ್ದರು. ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ಯ್ರ ನಂತರದವರೆಗೂ ಕೃಷಿಗೆ ಅವರ ಕೊಡುಗೆ ಅಪಾರ.
ಇದನ್ನೂ ಓದಿ:ರೈತನ ಮಹತ್ವ ತಿಳಿಸುವ ಈ ಸಣ್ಣದೊಂದು ಕಥೆ ಪ್ರತಿಯೊಬ್ಬರು ಓದಲೇ ಬೇಕು
ಚೌಧರಿ ಚರಣ್ ಸಿಂಗ್ ಯಾರು?
ಚರಣ್ ಸಿಂಗ್ ರವರು 1902 ಡಿಸೆಂಬರ್ 23 ರಂದು ಉತ್ತರ ಪ್ರದೇಶದ ಹಾಪುರದಲ್ಲಿ ಜನಿಸಿದರು. ಚರಣ್ ಸಿಂಗ್ ರವರು 1979 ರ ಜುಲೈ 28 ರಿಂದ 1980 ಜನವರಿ 14 ರ ವರೆಗೆ ಭಾರತದ ಐದನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಚರಣ್ ಸಿಂಗ್ ರವರು ರೈತರ ಸಮಸ್ಯೆ ಮತ್ತು ಅವರ ಹಕ್ಕುಗಳಿಗಾಗಿ ಹೋರಾಡಿದವರು. ಸಿಂಗ್ ರವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ನಂತರ ಕೇಂದ್ರ ಗೃಹ ಸಚಿವರಾಗಿ, ಹಣಕಾಸು ಸಚಿವರಾಗಿ ಮತ್ತು ದೇಶದ ಉಪ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಕೃಷಿಗೆ ಚರಣ್ ಸಿಂಗ್ ರವರ ಕೊಡುಗೆ:
ಚರಣ್ ಸಿಂಗ್ ರವರ ಕೊಡುಗೆಗಳನ್ನು ಸ್ಮರಿಸಲು ರೈತ ದಿನ ಅತೀ ಸೂಕ್ತ ದಿನ. ದೇಶದ ಅಭಿವೃಧ್ದಿಗಾಗಿ ಯೋಜನ ಆಯೋಗದ ಪರ್ಯಾಯ ಮಾದರಿಯನ್ನು ನಿರೂಪಿಸಲು ಪ್ರಯತ್ನಿಸಿದರು. ಈ ಮಾದರಿಯು ಗಾಂಧೀಜಿಯವರಿಂದ ಪ್ರೇರೇಪಿತವಾಗಿತ್ತು ಹಾಗೂ ಇದು ಅವರ ಸ್ವಂತ ಕೃಷಿಯ ಅನುಭವದ ಪ್ರತಿಬಿಂಬವಾಗಿತ್ತು. 1960 ಮತ್ತು 1970 ರ ದಶಕಗಳಲ್ಲಿ ಭಾರತದ ಚುನಾವಣ ರಾಜಕೀಯಕ್ಕೆ ರೈತರ ಸಮಸ್ಯೆಗಳನ್ನು ತಂದರು. ಚರಣ್ ಸಿಂಗ್ ರವರು ತಾವೊಬ್ಬ ಕೃಷಿಕರೆಂದು ಬಿಂಬಿತಗೊಂಡವರು. ಅವರು ಜಾತಿಗಿಂತ ರಾಜಕೀಯ ತತ್ವ ಮುಖ್ಯ ಎಂದು ನಂಬಿದವರಾಗಿದ್ದರು. ಚೌಧರಿ ಚರಣ್ ಸಿಂಗ್ ರವರು ರೈತರ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ರೈತರ ಜೀವನೂಪಾಯವನ್ನು ಸುಧಾರಿಸಲು ವಿವಿಧ ಪರಿಹಾರಗಳನ್ನು ಚಿತ್ರಿಸಿದ್ದಾರೆ. ಅವರು ಮಂಡಿಸಿದ 1979 ರ ಬಜೆಟ್ ನಲ್ಲಿ ಅವರು ರೈತರ ಪರವಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಿದರು. ಚರಣ್ ಸಿಂಗ್ ರವರು ಜಮಿನ್ದಾರಿ ನಿರ್ಮೂಲನ ಕಾಯ್ದೆಯನ್ನು ಜಾರಿಗೆ ತಂದವರು.
ರೈತ ದಿನ ಹೇಗೆ ಆಚರಿಸುತ್ತಾರೆ?
ರೈತ ದಿನದಂದು ಹಲವಾರು ಚರ್ಚೆಗಳು, ರಸಪ್ರಶ್ನೆ ಕಾರ್ಯಕ್ರಮಗಳು ಮತ್ತು ಹಲವಾರು ಸ್ಪರ್ಧೆಗಳನ್ನು ಆಯೋಜಿಸುವುದರ ಮೂಲಕ ಆಚರಿಸುತ್ತಾರೆ. ರೈತರ ಇಳುವರಿಯನ್ನು ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು. ಸರ್ಕಾರವು ತನ್ನ ಹೊಸ ನೀತಿಗಳ ಕುರಿತು, ಹೊಸ ತಂತ್ರಜ್ಞಾನಗಳ ಬಳಕೆ ಮತ್ತು ಹೊಸ ವೈಜ್ಞಾನಿಕ ವಿಧಾನಗಳ ಬಳಕೆಯ ಕುರಿತು ಮಾಹಿತಿ ನೀಡಲು ರೈತರನ್ನು , ಸರ್ಕಾರದ ಪ್ರತಿನಿಧಿಗಳನ್ನು ಮತ್ತು ಕೃಷಿ ಇಲಾಖೆಗೆ ಆಹ್ವಾನಿಸಲಾಗಿರುತ್ತದೆ. ರೈತ ಈ ಸಮಾಜದ ಬೆನ್ನೆಲುಬು. ಈ ದೇಶದ ಆರ್ಥಿಕಥೆಗೆ ಅವರ ಕೊಡುಗೆ ಅಪಾರ ಹೀಗಾಗಿ ಉತ್ಸಾಹವನ್ನು ಹೆಚ್ಚಿಸಲು ಮತ್ತು ರೈತರ ಸೇವೆಯನ್ನು ಸ್ಮರಿಸಲು ಈ ದಿನ ಅತಿ ಸೂಕ್ತ.
ಕೃಷಿಯ ಅವಲೋಕನ:
ಕೃಷಿಯು ಸುಮಾರು 12,000 ವರ್ಷಗಳ ಹಿಂದೆ ಜಾನುವಾರುಗಳನ್ನು ಸಾಕುವುದರ ಮೂಲಕ ಪ್ರಾರಂಭವಾಯಿತು. ಆದ್ದರಿಂದ ಇದೊಂದು ಹಳೆಯ ಉದ್ಯೋಗವಾಗಿದೆ. ಒಬ್ಬ ರೈತ ಈ ದೇಶಕ್ಕೆ ಆಹಾರ ಒದಗಿಸಲು ಹಗಲು ರಾತ್ರಿ ಎನ್ನದೇ ದುಡಿಯುತ್ತಾನೆ. 60 ರ ದಶಕದಲ್ಲಿ ಹಸಿರುಕ್ರಾಂತಿಯು ಪಂಜಾಬ್ ಮತ್ತು ಹರಿಯಾಣದಲ್ಲಿ ವಿಕಸನಗೊಂಡಿತು. ಇದರಿಂದ ರೈತರು ತಮ್ಮ ಉತ್ಪಾದಕತೆ ಹೆಚ್ಚಿಸಲು ಮತ್ತು ಕೃಷಿ ಸರಕುಗಳಲ್ಲಿ ಭಾರತವು ಸ್ವಾವಲಂಬಿಯಾಗಲು ಸಹಾಯವಾಯಿತು. ಹೊಸ ನೀತಿಗಳು, ತಂತ್ರಜ್ಞಾನ ಮತ್ತು ಸುಧಾರಣೆಗಳ ಹೊರತಾಗಿಯೂ ಭಾರತದಲ್ಲಿ ಕೃಷಿ ಇನ್ನು ಭೀಕರ ಸ್ಥಿತಿಯಲ್ಲಿದೆ. ಪ್ರತಿ ವರ್ಷ ಭಾರತದ ರೈತರು ಬರ, ಪ್ರವಾಹ ಮುಂತಾದ ನೈಸರ್ಗಿಕ ಬಿಕ್ಕಟ್ಟುಗಳ ವಿರುಧ್ಧ ಹೋರಾಡಬೇಕಾಗುತ್ತದೆ. ಹೆಚ್ಚುತ್ತಿರುವ ರೈತರ ಆತ್ಮಹತ್ಯೆಯ ಪ್ರಮಾಣ ಈ ದೇಶದ ಅಭಿವೃಧ್ಧಿ ಮತ್ತು ಆರ್ಥಿಕ ಸ್ಥಿರತೆಗೆ ಮಾರಕವಾಗತೊಡಗಿದೆ.
ಕೃಷಿ ಪದ್ದತಿಗಳನ್ನು ಸುಧಾರಿಸಿದಾಗ ಮಾತ್ರ ನಮ್ಮ ದೇಶ ಅಭಿವೃಧ್ಧಿಗೊಳ್ಳಲು ಸಾಧ್ಯವಾಗುತ್ತದೆ, ಆದ್ದರಿಂದ ನಮ್ಮ ರೈತರನ್ನು ಮತ್ತು ಅವರ ಕಠಿಣ ಪರಿಶ್ರಮಕ್ಕೆ ಉತ್ತೇಜಿಸುವುದು, ಪ್ರೋತ್ಸಾಹಿಸುವುದು,ಸಹಾಯ ಮಾಡುವುದು ಮತ್ತು ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ.
ಜೈಕಿಸಾನ್
ಲೇಖನ: ಶ್ರೀನಿವಾಸ ಜಿ., ಕೃಷಿ ವಿದ್ಯಾರ್ಥಿ, ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ
Share your comments