ತೋಟಗಾರಿಕಾ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದ್ದು, ಬೆಳೆ ವಿಮೆ ನೋಂದಣಿ ಅವಧಿಯನ್ನು ಜು.10ರವರೆಗೆ ವಿಸ್ತರಿಸಿದೆ.
ಮುಂಗಾರು ಹಿಂಗಾರು ಹಂಗಾಮು ಹವಾಮಾನ ಆಧಾರಿತ ಬೆಳೆ 2020-21ನೇ ಸಾಲಿನಿಂದ 2022-23ನೇ ಸಾಲಿನ ವಿಮೆ ಯೋಜನೆಗೆ ಸರ್ಕಾರ ಅನುಮೋದನೆ ನೀಡಿತ್ತು. ಕೇಂದ್ರ ಸರ್ಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ತೋಟಗಾರಿಕೆ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ಪರಿಹಾರವನ್ನು ಪಡೆಯಲು ಈ ಯೋಜನೆ ಅವಕಾಶ ಕಲ್ಪಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ವಿಮೆ ಮಾಡಿಸುವಲ್ಲಿ ವಿಳಂಬವಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಕನಿಷ್ಟ ವಾರದ ಮಟ್ಟಿಗಾದರೂ ವಿಸ್ತರಿಸಿ ನೋಂದಣಿಗೆ ಅವಕಾಶ ನೀಡಬೇಕೆಂದು ರೈತರು ಆಗ್ರಹಿಸಿದ್ದರು. ರಾಜ್ಯದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯು ವಿಮಾ ಕಂಪನಿಗಳ ಒಪ್ಪಿಗೆಯೊಂದಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಗಡುವು ವಿಸ್ತರಿಸಲು ಮನವಿ ಮಾಡಿಕೊಂಡಿತ್ತು. ಪ್ರಸ್ತಾವನೆಗೆ ಕೇಂದ್ರ ತ್ವರಿತವಾಗಿ ಸ್ಪಂದಿಸಿದೆ.
ನಿಗದಿತ ಬೆಳೆಗಳು, ಪ್ರೀಮಿಯಂ ದರ ಹಾಗೂ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಸಾಲಗಾರರಲ್ಲದ ರೈತರು ಬ್ಯಾಂಕ್ ಅಥವಾ ಗೊತ್ತುಪಡಿಸಿದ ವಿಮಾ ಏಜೆಂಟರ ಮೂಲಕ ಕಂತು ಪಾವತಿ ಮಾಡಬಹುದಾಗಿದೆ. ಸಾಲಗಾರ ರೈತರ ವಿಮಾ ಕಂತನ್ನು ಸಾಲದ ಖಾತೆಯಲ್ಲಿ ಬ್ಯಾಂಕ್ಗಳು ಕಡಿತಗೊಳಿಸಿ ಆಯಾ ವಿಮಾ ಕಂಪನಿಗಳಿಗೆ ಭರಿಸಬೇಕು ಎಂದು ಸೂಚಿಸಲಾಗಿದೆ.
Share your comments