ಕಲಬೆರಕೆಯ ಭಯವೇ? ನೀವೇ ಪತ್ತೆ ಹಚ್ಚಿ ನೋಡಿ??
ಮಾರುಕಟ್ಟೆಯಿಂದ ತರುವ ಅನೇಕ ದಿನಬಳಕೆ ವಸ್ತುಗಳಲ್ಲಿ ಕಲಬೆರಕೆ ತೀರಾ ಸಾಮಾನ್ಯ. ಆಹಾರ ಪದಾರ್ಥಗಳ ತಪಾಸಣೆ ಮಾಡುವ ಅಧಿಕಾರಿಗಳು ಇದ್ದಾರೊ ಇಲ್ಲವೋ ಗೊತ್ತಿಲ್ಲ? ಹಾಲು, ತುಪ್ಪ, ಕಾಫಿ ಪೌಡರ್, ಟೀ ಪೌಡರ್, ಅಡುಗೆ ಎಣ್ಣೆ....... ಮುಗಿಯದ ಪಟ್ಟಿ. ಕಲಬೆರಕೆ ಮಾಡಿರೋದು ಗೊತ್ತೇ ಆಗೋಲ್ಲ. ಆದರೂ ಸುಲಭವಾಗಿ ಪತ್ತೆ ಹಚ್ಚಬಹುದು. ಇದಕ್ಕೆ ಸ್ವಲ್ಪ ಆಸಕ್ತಿ, ತಾಳ್ಮೆ ಬೇಕಷ್ಟೆ. ನೈಸರ್ಗಿಕ ಪದಾರ್ಥಗಳನ್ನು ಕಲಬೆರಕೆಯಲ್ಲಿ ಬೆರಸಿದ್ದರೆ ಪರವಾಗಿಲ್ಲ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ರಾಸಾಯನಿಕಗಳಾಗಿದ್ದರೆ? ನಮ್ಮಲ್ಲಿನ ಗ್ರಾಹಕ ಸದಾ ಎಚ್ಚರವಿರುವುದೊಂದೇ ಇದಕ್ಕೆ ಪರಿಹಾರ. ಕಲಬೆರಕೆ ಕಂಡು ಹಿಡಿಯುವ ಸುಲಭದ ವಿಧಾನಗಳ ವಿವರವೇ ಈ ಲೇಖನ. ಆ ಮೂಲಕ ಅಗತ್ಯ ಆಹಾರ ಪದಾರ್ಥಗಳನ್ನು ಕೊಳ್ಳುವಾಗ ನೀವು ಎಚ್ಚರವಹಿಸಲಿ ಹಾಗೂ ಸುರಕ್ಷಿತ ಆಹಾರ ನಿಮ್ಮದಾಗಲಿ ಎಂಬ ಆಶಯ.
ನೀರು ಬೆರೆಸಿದ ಹಾಲು:
ನೀರು ಬೆರೆಸಿದ ಹಾಲಾಗಿದ್ದರೆ ಊಟದ ತಟ್ಟೆ ಓರೆಯಾಗಿಡಿದು ಒಂದೆರಡು ಹನಿ ಹಾಕಿದಾಗ ಅದರ ಯಾವ ಗುರುತೂ ಇಲ್ಲದೆ ವೇಗವಾಗಿ ಚಲಿಸಿವುದು. ಶುದ್ಧ ಹಾಲಿನ ಚಲನೆ ನಿಧಾನವಾಗಿದ್ದು ಚಲನೆಯ ನಂತರವೂ ಅದರ ಗುರುತು ಕಾಣಿಸುವುದು.
ಡಿಟರ್ಜಂಟ್ ಬೆರೆಸಿದ ಹಾಲು:
ಹತ್ತು ಮಿಲಿ ಹಾಲಿಗೆ ಹತ್ತು ಮಿಲಿ ನೀರು ಸೇರಿಸಿ ಅಲ್ಲಾಡಿಸಿದಾಗ ಹೆಚ್ಚಿನ ನೊರೆ ಬಂದಲ್ಲಿ ಅದರಲ್ಲಿ ಡಿಟರ್ಜಂಟ್ ಬೆರೆಸಿದ್ದಾರೆಂದೇ ಅರ್ಥ.
ಶರ್ಕರಪಿಷ್ಠ (ಸ್ಟಾರ್ಚ್ ಪೌಡರ್) ಬೆರೆಸಿದ ಹಾಲು:
ಹಾಲಿನ ಮಾದರಿಗೆ ಎರಡು ಹನಿ ಟಿಂಕ್ಚರ್ ಅಯೊಡಿನ್ ಹಾಕಿ ಅಲ್ಲಾಡಿಸಿದಾಗ ನೀಲಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಶರ್ಕರಪಿಷ್ಠ ಬೆರೆಸಿದ್ದಾರೆಂದು ತಿಳಿಯಬೇಕು. ಶುದ್ಧ ಹಾಲಾಗಿದ್ದಲ್ಲಿ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗದು.
ಸ್ಟಾರ್ಚ್ ಬೆರೆಸಿದ ತುಪ್ಪ/ಬೆಣ್ಣೆ:
ಪಾರದರ್ಶಕ ಗಾಜಿನ ಬೌಲ್ನಲ್ಲಿ ಅರ್ಧ ಚಮಚೆ ತುಪ್ಪ ತೆಗೆದುಕೊಂಡು ಅದಕ್ಕೆ ಎರಡು ಹನಿ ಟಿಂಕ್ಚರ್ ಅಯೊಡಿನ್ ಹಾಕಿ ಅಲ್ಲಾಡಿಸಿದಾಗ ನೀಲಿ ಬಣ್ಣಕ್ಕೆ ತಿರುಗಿದರೆ ಸ್ಟಾರ್ಚ್ ಬೆರೆಸಿರುವುದು ಖಾತ್ರಿ. ಸಾಮಾನ್ಯವಾಗಿ ಆಲೂಗಡ್ಡೆ/ಗೆಣಸಿನ ಪುಡಿಯನ್ನು ಕಲಬೆರಕೆಯಾಗಿ ತುಪ್ಪದಲ್ಲಿ ಹಾಕಿರುತ್ತಾರೆ.
ಇತರೇ ಎಣ್ಣೆ ಬೆರೆಸಿದ ತೆಂಗಿನೆಣ್ಣೆ:
ಮಾದರಿ ತೆಂಗಿನೆಣ್ಣೆಯನ್ನು ಗಾಜಿನ ಲೋಟಕ್ಕೆ ಹಾಕಿ ಅರ್ಧ ಗಂಟೆ ರೆಫ್ರಿಜರೇಟರಿನಲ್ಲಿಡಬೇಕು. ಶುದ್ಧ ತೆಂಗಿನೆಣ್ಣೆಯಾಗಿದ್ದಲ್ಲಿ ಅದು ಘನೀಕೃತಗೊಂಡು ಒಂದೇ ತೆರನಾಗಿ ಕಾಣುವುದು. ಬೇರೆ ಎಣ್ಣೆ ಬೆರೆಸಿದ್ದಲ್ಲಿ ಎರಡು ಪದರುಗಳು ಕಾಣಿಸುತ್ತವೆ.
ಸಕ್ಕರೆ/ಬೆಲ್ಲ ಬೆರೆಸಿದ ಜೇನುತುಪ್ಪ:
ಪಾರದರ್ಶಕ ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು ಮಾದರಿ ಜೇನುತುಪ್ಪದ ಒಂದೆರಡು ಹನಿ ಅದರಲ್ಲಿ ಹಾಕಿ. ಸಕ್ಕರೆ ಮಿಶ್ರಿತ ಜೇನುತುಪ್ಪವಾಗಿದ್ದಲ್ಲಿ ಅದು ನೀರಿನಲ್ಲಿ ಕರಗಿ ಹೋಗುತ್ತದೆ. ಅಥವಾ ಬೆಂಕಿಕಡ್ಡಿಯನ್ನು ಮಾದರಿ ಜೇನುತುಪ್ಪದಲ್ಲಿ ಅದ್ದಿ ಬೆಂಕಿಪೊಟ್ಟಣದಿಂದ ಹಚ್ಚಿದಾಗ, ಶುದ್ಧ ಜೇನುತುಪ್ಪವಾಗಿದ್ದಲ್ಲಿ ಶಬ್ಧರಹಿತವಾಗಿ ಹತ್ತಿ ಉರಿಯುವುದು. ಸಕ್ಕರೆ ಬೆರೆಸಿದ್ದಲ್ಲಿ ಉರಿಯುವಾಗ ಶಬ್ಧ ಬಂದೇ ಬರುವುದು.
ಸೀಮೆಸುಣ್ಣದ ಪುಡಿ ಬೆರೆಸಿದ ಸಕ್ಕರೆ:
ಪಾರದರ್ಶಕ ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು 10ಗ್ರಾಂ ಸಕ್ಕರೆ ಮಾದರಿಯನ್ನು ಹಾಕಿ ಕರಗಿಸಿ. ಕರಗಿದ ನಂತರ ತಳದಲ್ಲಿ ಏನೂ ಉಳಿಯದಿದ್ದಲ್ಲಿ ಅದು ಶುದ್ಧ. ಒಂದು ವೇಳೆ ಸೀಮೆಸುಣ್ಣದ ಪುಡಿ ಬೆರೆಸಿದ್ದಲ್ಲಿ ಅದು ನೀರಿನಲ್ಲಿ ಕರಗದೆ ತಳದಲ್ಲಿ ಹಾಗೆಯೇ ಉಳಿಯುವುದು.
ಎರ್ಗಾಟ್ ಶಿಲೀಂಧ್ರ ಮಿಶ್ರಿತ ಗೋದಿ:
100ಮಿಲಿ ನೀರಿಗೆ 20ಗ್ರಾಂ ಉಪ್ಪು ಬೆರೆಸಿ ಕರಗಿಸಿರುವ ದ್ರಾವಣವನ್ನು ಗಾಜಿನ ಲೋಟಕ್ಕೆ ಸುರಿದು ಮಾದರಿ ಗೋದಿ ಹಾಕಿ. ಎರ್ಗಾಟ್ ಶಿಲೀಂಧ್ರ ಮಿಶ್ರಿತವಾಗಿದ್ದಲ್ಲಿ ಅವು ನೀರಿನಲ್ಲಿ ತೇಲುತ್ತವೆ. ಗೋದಿ ಉತ್ತಮ ಗುಣಮಟ್ಟದ್ದಾಗಿದ್ದರೆ ತೇಲದೆ ತಳ ಮುಟ್ಟುತ್ತದೆ.
ವೊಟ್ಟು ಬೆರೆಸಿದ ಗೋದಿ ಹಿಟ್ಟು:
ಪಾರದರ್ಶಕ ಗಾಜಿನ ಲೋಟದಲ್ಲಿ ನೀರು ತುಂಬಿ. ಒಂದು ಚಮಚ ಮಾದರಿ ಹಿಟ್ಟನ್ನು ಹಾಕಿ. ಅದು ಶುದ್ಧವಾಗಿದ್ದಲ್ಲಿ ನೀರಿನ ಮೇಲ್ಮೈನಲ್ಲಿ ಯಾವುದೇ ಹೊಟ್ಟು ತೇಲುವುದು ಕಾಣಿಸದು. ಹೊಟ್ಟು ಬೆರೆಸಿದ್ದಲ್ಲಿ ಅದು ಖಂಡಿತ ತೇಲುವುದು ಗೋಚರಿಸುತ್ತದೆ.
ಬಣ್ಣ ಲೇಪಿತ ಆಹಾರ ದಾನ್ಯಗಳು:
ಮಾದರಿ ಆಹಾರ ದಾನ್ಯವನ್ನು ನೀರಿನಲ್ಲಿ ತೊಳೆದಾಗ ಅವು ಶುದ್ಧವಾಗಿದ್ದಲ್ಲಿ ಯಾವುದೇ ಬಣ್ಣ ಬರುವುದಿಲ್ಲ. ಕೃತಕ ಬಣ್ಣ ಲೇಪಿಸಿದ್ದಲ್ಲಿ ತೊಳೆದ ನೀರು ಬಣ್ಣದಿಂದ ಕೂಡಿರುವುದು ತಿಳಿಯುವುದು.
ಕಬ್ಬಿಣದ ಚೂರು ಬೆರೆಸಿದ ಮೈದಾ/ರವೆ:
ಮಾದರಿಯ ಮೇಲೆ ಅಯಸ್ಕಾಂತ ಓಡಾಡಿಸಿದಾಗ, ಕಬ್ಬಿಣದ ಚೂರುಗಳಿದ್ದಲ್ಲಿ ಸುಲಭವಾಗಿ ಅದಕ್ಕೆ ಅಂಟಿಕೊಳ್ಳುತ್ತವೆ.
ಕಲಬೆರಸಿರುವ ಹಿಂಗು:
ಮಾದರಿ ಹಿಂಗನ್ನು ಚಮಚೆಯ ಮೇಲೆ ತೆಗೆದುಕೊಂಡು ಬೆಂಕಿಗೆ ಹಿಡಿದಾಗ ಅದು ಕರ್ಪೂರದಂತೆ ಉರಿದರೆ ಶುದ್ಧ. ಕಲಬೆರೆಕೆ ಹಿಂಗಾದಲ್ಲಿ ಉರಿಯ ತೀಕ್ಷ್ಣತೆ ಮತ್ತು ಉರಿಯುವ ವೇಗ ಕಡಿಮೆ. ನೀರಿನಲ್ಲಿ ಕರಗಿಸಿದಾಗ ಹಿಂಗು ಸಂಪೂರ್ಣವಾಗಿ ಕರಗುವುದು. ಶೇಷ ಉಳಿದರೆ ಅದು ಕಲಬೆರಕೆ.
ಪರಂಗಿ ಬೀಜ ಬೆರೆಸಿದ `ಕಾಳುಮೆಣಸು’:
ನೀರು ತುಂಬಿದ ಗಾಜಿನ ಲೋಟಕ್ಕೆ ಮಾದರಿ ಕಾಳುಮೆಣಸು ಹಾಕಿ. ಶುದ್ಧ ಕಾಳುಮೆಣಸಾಗಿದ್ದಲ್ಲಿ ಅದು ತೇಲದೆ ಲೋಟದ ತಳಭಾಗಕ್ಕೆ ಹೋಗುವುದು. ಪಪಾಯ ಬೀಜ ಬೆರೆಸಿದ್ದಲ್ಲಿ ಅವು ಮುಳಗದೆ ತೇಲುವುವು.
ತೈಲ ಲೇಪಿತ ಕಾಳುಮೆಣಸು:
ಸ್ವಲ್ಪ ಉಜ್ಜಿದಾಗ ಸೀಮೆ ಎಣ್ಣೆಯ ವಾಸನೆ ಬರುವುದು.
ಕೃತಕ ಬಣ್ಣ ಹಾಕಿರುವ ಖಾರದ ಪುಡಿ:
ನೀರು ತುಂಬಿದ ಗಾಜಿನ ಲೋಟಕ್ಕೆ ಮಾದರಿ ಖಾರದ ಪುಡಿಯನ್ನು ಹಾಕಿದಾಗ, ಕೃತಕವಾಗಿದ್ದಲ್ಲಿ ಬಣ್ಣದ ಎಳೆಗಳು ಕೂಡಲೆ ತಳಮುಖವಾಗಿ ಚಲಿಸುವುದು ಗೋಚರಿಸುತ್ತದೆ.
ಇಟ್ಟಿಗೆ ಪುಡಿ/ಮರಳು ಬೆರೆಸಿದ ಖಾರದಪುಡಿ:
ಮಾದರಿ ಖಾರದ ಪುಡಿಯನ್ನು ನಿರಿಗೆ ಹಾಕಿದಾಗ ಇಟ್ಟಿಗೆ ಪುಡಿ/ಮರಳು ಬೆರೆಸಿದ್ದಿಲ್ಲಿ ಅವು ನೀರಿನಲ್ಲಿ ಕರಗದೆ ತಳದಲ್ಲಿ ಸೇರುವುದು ಗೋಚರಿಸುವುದು.
ಕ್ಯಾಸಿಯಾ ಚಕ್ಕೆ ಬೆರೆಸಿರುವ ಚಕ್ಕೆ:
ನೈಜ ಚಕ್ಕೆಯ ಪದರು ತೆಳುವಾಗಿದ್ದು ಪೆನ್/ಪೆನ್ಸಿಲ್ ಸುತ್ತ ಸುಲಭವಾಗಿ ಸುತ್ತಬಹುದು. ಹಾಗೂ ನೈಜ ಚಕ್ಕೆಯ ವಾಸನೆ ತೀವ್ರವಾಗಿರುವುದಿಲ್ಲ. ಚಕ್ಕೆಯ ಗಾತ್ರ ತೆಳುವಾಗಿರದೆ ದಪ್ಪವಿದ್ದಲ್ಲಿ ಅದು ಖಂಡಿತ ನೈಜ ಚಕ್ಕೆಯೇ ಅಲ್ಲಾ.
ಜೀರಿಗೆಯಲ್ಲಿ ಇದ್ದಿಲು ಪುಡಿ ಲೇಪಿಸಿದ ಹುಲ್ಲಿನ ಬೀಜ:
ಮಾದರಿ ಜೀರಿಗೆಯನ್ನು ಅಂಗೈನಲ್ಲಿ ಹಾಕಿ ಉಜ್ಜಿದಾಗ ಕೈ ಕಪ್ಪಾದರೆ ಅದು ಕಲಬೆರಕೆಯಲ್ಲದೆ ಮತ್ತೇನು?
ಆರ್ಜಿಮೋನ್ ಬೆರೆಸಿದ ಸಾಸಿವೆ:
ಗಾಜಿನ ತಟ್ಟೆಯೊಂದರಲ್ಲಿ ಮಾದರಿ ಸಾಸಿವೆ ತೆಗೆದುಕೊಂಡು ಸೂಕ್ಷ್ಮವಾಗಿ ಗಮನಿಸಿ. ಸಾಸಿವೆಯ ಮೇಲ್ಮೈ ಮೃದುವಾಗಿದ್ದು ಅದರ ಒಳ ಬಣ್ಣ ಹಳದಿಯಾಗಿರುತ್ತದೆ. ಆರ್ಜಿಮೋನ್ ಬೀಜದ ಹೊರಮೈ ಒರಟಾಗಿದ್ದು ಒಳಬಣ್ಣ ಬಿಳಿ ಇರುತ್ತದೆ.
ಲೆಡ್ ಕ್ರೋಮೇಟ್ ಲೇಪಿತ ಅರಿಶಿಣ ಕೊಂಬು:
ಅರಿಶಿಣ ಕೊನೆಯೊಂದನ್ನು ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಹಾಕಿ. ಶುದ್ಧ ಅರಿಶಿಣ ಕೊನೆಯಾಗಿದ್ದಲ್ಲಿ ಯಾವುದೇ ಬಣ್ಣ ಬಿಡದು. ಲೆಡ್ ಕ್ರೋಮೇಟ್ ಲೇಪಿತ ಅರಿಶಿಣ ಗಾಢ ಬಣ್ಣವನ್ನು ಕೂಡಲೇ ಬಿಡುವುದು.
ಕೃತಕ ಬಣ್ಣ ಬೆರೆಸಿದ ಅರಿಶಿಣ ಪುಡಿ:
ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಒಂದು ಚಮಚೆ ಅರಿಶಿನ ಪುಡಿ ಹಾಕಿ. ಶುದ್ಧ ಅರಿಶಿಣ ಪುಡಿ ತಳ ಸೇರುವಾಗ ತಿಳಿ ಹಳದಿ ಬಣ್ಣ ಗೋಚರಿಸುವುದು. ಕೃತಕ ಬಣ್ಣ ಲೇಪಿಸಿದ್ದಲ್ಲಿ ತಳ ಸೇರುವಾಗ ಗಾಢ ಬಣ್ಣ ಗೋಚರಿಸುವುದು.
ಮರದೊಟ್ಟು ಬೆರೆಸಿರುವ ಕೊತ್ತಂಬರಿ/ಮಸಾಲೆ ಪುಡಿ:
ನೀರು ತುಂಬಿದ ಗಾಜಿನ ಲೋಟಕ್ಕೆ ಮಾದರಿ ಮಸಾಲ ಪುಡಿ ಹಾಕಿದಾಗ ಅದು ಶುದ್ಧವಾಗಿದ್ದಲ್ಲಿ ಯಾವುದೇ ಹೊಟ್ಟು ನೀರಿನ ಮೇಲೆ ಕಾಣಿಸದು. ಕಲಬೆರಕೆಯಾಗಿದ್ದಲ್ಲಿ ಹೊಟ್ಟು ನಿರಿನ ಮೇಲ್ಭಾಗದಲ್ಲಿ ತೇಲುವುದು ಗೋಚರಿಸುತ್ತದೆ.
ಮ್ಯಾಲಕೈಟ್ ಹಸಿರು ಬಣ್ಣ ಲೇಪಿತ ಹಸಿರು ತರಕಾರಿಗಳು:
ನೀರಿನಲ್ಲಿ ಅದ್ದಿದ ಹತ್ತಿಯುಂಡೆ ತೆಗೆದುಕೊಂಡು ಮಾದರಿ ತರಕಾರಿಯ ಮೇಲ್ಮೈ ಉಜ್ಜಿದಾಗ ಹತ್ತಿ ಹಸಿರಾದರೆ ಅದು ಖಂಡಿತ ಕೃತಕ ಬಣ್ಣ ಲೇಪಿತ ತರಕಾರಿಯೇ.
ಕೃತಕ ಬಣ್ಣ ಲೇಪಿಸಿದ ಬಟಾಣಿ:
ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಮಾದರಿ ಬಟಾಣಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಅರ್ಧ ಗಂಟೆಯ ನಂತರ ನೋಡಿದಾಗ ನೀರು ಬಣ್ಣದ್ದಾಗಿದ್ದರೆ ಖಂಡಿತ ಅದಕ್ಕೆ ಕೃತಕ ಬಣ್ಣ ಹಾಕಲಾಗಿರುತ್ತದೆ.
ಬಿಳಿ ಪುಡಿ ಬೆರೆಸಿದ ಅಯೋಡೈಜ್ಡ್ ಉಪ್ಪು:
ಮಾದರಿ ಉಪ್ಪನ್ನು ನೀರಿನಲ್ಲಿ ಕರಗಿಸಿದಾಗ ಅವಶೇಷ ಉಳಿಯದೆ ಸಂಪೂರ್ಣ ಕರಗಿದರೆ ಅದು ಶುದ್ಧ. ನೀರ ಬಣ್ಣ ಬಿಳಿಯಾದರೆ ಅಥವಾ ತಳದಲ್ಲಿ ಶೇಷ ಉಳಿದರೆ ಅದು ಕಲಬೆರಕೆ.
ಅಯೋಡೈಜ್ಡ್ ಉಪ್ಪಿಗೆ ಸಾಮಾನ್ಯ ಉಪ್ಪು ಬೆರೆಸಿರುವುದು:
ಅರ್ಧಕ್ಕೆ ಕತ್ತರಿಸಿರುವ ಆಲೂಗಡ್ಡೆ ಹೋಳಿನ ಮೇಲೆ ಮಾದರಿ ಉಪ್ಪನ್ನು ಹಾಕಿ ಒಂದೆರಡು ನಿಮಿಷ ಬಿಡಿ. ಅದು ಅಯೋಡೈಜ್ಡ್ ಉಪ್ಪಾಗಿದ್ದಲ್ಲಿ ಆಲೂಗಡ್ಡೆಯ ಕತ್ತರಿಸಿದಭಾಗ ನೀಲಿ ಬಣ್ಣಕ್ಕೆ ತಿರುಗುವುದು. ಸಾಮಾನ್ಯ ಉಪ್ಪಾಗಿದ್ದಲ್ಲಿ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗದು.
ಎರೆಮಣ್ಣು ಬೆರೆಸಿದ ಕಾಫಿ ಪೌಡರ್:
ನೀರು ತುಂಬಿದ ಪಾರದರ್ಶಕ ಗಾಜಿನ ಲೋಟದಲ್ಲಿ ಅರ್ಧ ಚಮಚೆ ಮಾದರಿ ಕಾಫಿ ಪೌಡರ್ ಹಾಕಿ. ಒಂದು ನಿಮಿಷ ಕಲಕಿ, ಐದು ನಿಮಿಷ ಬಿಡಿ. ಲೋಟದ ತಳಭಾಗದಲ್ಲಿ ಯಾವುದೇ ಘನ ಪದಾರ್ಥ ಕಾಣಿಸದಿದ್ದಲ್ಲಿ ಅದು ಶುದ್ಧ ಕಾಫಿ ಪೌಡರ್. ಒಂದು ವೇಳೆ ಎರೆಮಣ್ಣು ಬೆರೆಸಿದ್ದಲ್ಲಿ ಅದರ ಕಣಗಳು ತಳದಲ್ಲಿ ಕಾಣಿಸುತ್ತವೆ.
ಕೋಲ್ ಟಾರ್ ಬೆರೆಸಿರುವ ಚಹಾ ಪೌಡರ್:
ಫಿಲ್ಟರ್ ಪೇಪರಿನ ಮೇಲೆ ಮಾದರಿ ಚಹಾಪುಡಿ ಹಾಕಿ. ನೀರನ್ನು ಚಿಮುಕಿಸಿ. ಶುದ್ಧವಾಗಿದ್ದಲ್ಲಿ ಅದರ ಗುರುತು ಫಿಲ್ಟರ್ ಪೇಪರಿನ ಮೇಲೆ ಕಾಣಿಸದು. ಕೋಲ್ ಟಾರ್ ಬೆರೆಸಿದ್ದಲ್ಲಿ ಕೂಡಲೇ ಅದರ ಬಣ್ಣ ಫಿಲ್ಟರ್ ಪೇಪರಿಗೆ ಹತ್ತುವುದು.
ಕಬ್ಬಿಣದ ಚೂರು ಬೆರೆಸಿದ ಚಹಾಪುಡಿ:
ಅಯಸ್ಕಾಂತವನ್ನು ಮಾದರಿ ಚಹಾಪುಡಿಯ ಮೇಲೆ ಆಡಿಸಿದಾಗ, ಅದರಲ್ಲಿ ಕಬ್ಬಿಣದ ಚೂರುಗಳಿದ್ದಲ್ಲಿ ಕೂಡಲೇ ಅವು ಅಯಸ್ಕಾಂತಕ್ಕೆ ಅಂಟಿಕೊಳ್ಳುವುವು.
ಮೇಣ ಲೇಪಿತ ಸೇಬುಹಣ್ಣು:
ಚಾಕುವಿನಿಂದ ಸೇಬಿನ ಮೇಲ್ಮ್ಮೈ ಕೆರೆದಾಗ ಮೇಣ ಬರುವುದು ತಿಳಿಯುತ್ತದೆ.
ಚಿಕೋರಿ ಪುಡಿ ಬೆರೆಸಿದ ಕಾಫಿ ಪೌಡರ್:
ಮಾದರಿ ಕಾಫಿ ಪೌಡರನ್ನು ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಹಾಕಿ. ಚಿಕೋರಿ ಪುಡಿ ಬೆರೆಸಿದ್ದಲ್ಲಿ ಅದು ತಳಕ್ಕೆ ಹೋಗಿ ಕೂರುವುದು. ಶುದ್ಧವಾದ ಕಾಫಿ ಪೌಡರ್ ಆಗಿದ್ದಲ್ಲಿ ಅದು ನೀರಿನ ಮೇಲೆ ತೇಲುತ್ತದೆ.
ಯೂರಿಯಾ ಬೆರೆಸಿದ ಸಕ್ಕರೆ:
ಮಾದರಿ ಸಕ್ಕರೆಯನ್ನು ಅಂಗೈನಲ್ಲಿ ಉಜ್ಜಿದಾಗ ಅಥವಾ ನೀರಿನಲ್ಲಿ ಕರಗಿಸಿದಾಗ ಅಮೋನಿಯಾ ವಾಸನೆ ಬರುವುದು. ಶುದ್ಧವಾದ ಸಕ್ಕರೆ ವಾಸನೆ ರಹಿತವಾಗಿರುತ್ತದೆ.
ನಮ್ಮ ಆರೋಗ್ಯ ನಮಗೆ ಸುರಕ್ಷಿತವೇ ಅಲ್ಲವೇ ಎಂಬುದನ್ನು ನಾವೇ ಖಾತ್ರಿಪಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ಗ್ರಾಹಕ ಓದುಗರು ಸುಲಭವಾಗಿ ಕಲಬೆರಕೆ ಪತ್ತೆ ಹಚ್ಚುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಯಾವುದಾದರೂ ಆಹಾರ ಸುರಕ್ಷತಾ ಪ್ರಯೋಗಾಲಯವನ್ನು ಸಂಪರ್ಕಿಸಬಹುದು ಇಲ್ಲವೇ ಲೇಖಕರನ್ನು 9480557634 ಈ ನಂಬರಿನಲ್ಲಿ ಮಧ್ಯಾನ್ಹ 1-2 ಗಂಟೆಯ ಸಮಯದಲ್ಲಿ ಸಂಕರ್ಪಿಸಬಹುದು ಅಥವಾ harish.bs@uhsbagalkot.edu.in ಈ ಮಿಂಚಂಚೆಗೂ ಪ್ರತಿಕ್ರಿಯೆ ಕಳುಹಿಸಬಹುದು.
ಲೇಖಕರು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು.
Share your comments