ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಬೆಳೆಗಾರರ ಸಂಕಷ್ಟ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಅವರು ಶುಕ್ರವಾರ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ಬೆಳೆಗಾರರು ಹಾಗೂ ರೈತರೊಂದಿಗೆ ಆನ್ಲೈನ್ ಸಂವಾದದಲ್ಲಿ ಬೆಳೆಗಾರರ ಸಂಕಷ್ಟ ಆಲಿಸಿ ಮಾತನಾಡಿದರು.
ಮೂರು ವರ್ಷ ತೀವ್ರ ಬರಗಾಲ, ಎರಡು ವರ್ಷ ಅತಿವೃಷ್ಟಿಯಿಂದಾಗಿ ಕಾಫಿ, ಅಡಿಕೆ, ತೆಂಗು, ಕಾಳುಮೆಣಸು ಎದುರಿಸುತ್ತಿರುವ ಕಷ್ಟಗಳನ್ನು ಬೆಳೆಗಾರರು, ಜನಪ್ರತಿನಿಧಿಗಳು ವಿವರವಾಗಿ ತಿಳಿಸಿದ್ದಾರೆ. ಸಂಬಂಧಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ರೈತರ ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಪಟ್ಟಿ ಮಾಡಿ ತಮಗೆ ಕಳುಹಿಸಿಕೊಡಬೇಕು. ಸಾಲ ಮರು ಹೊಂದಾಣಿಕೆ, ಬಡ್ಡಿ ಮನ್ನಾ ಮನವಿಗಳ ಬಗ್ಗೆ ಗಮನ ಹರಿಸಲಾಗುವುದು. ಕಾಫಿ ಬೆಳೆಗಾರರು ಆದಾಯ ತೆರಿಗೆ ಸೆಕ್ಷನ್ 7ಬಿ(1) ನಿಂದ ವಿನಾಯಿತಿ ಕೋರಿದ್ದು, ಈ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು. ಮನವಿಗಳನ್ನು ಪರಿಶೀಲಿಸಿ ನೆರವು ನೀಡುವ ನೀಡಲು ಗಮನ ಹರಿಸಲಾಗುವುದು ಎಂದರು.
ಪ್ರಮುಖವಾಗಿ ತೆಂಗು, ಅಡಕೆ, ಕಾಫಿ, ಮೆಣಸು,ಏಲಕ್ಕೆ ಸೇರಿ ಇತರೆ ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಹಾನಿಯಾಗಿರುವುದು ಗಮನಕ್ಕೆ ತಂದಿದ್ದೀರಾ, ಬೆಳೆವಾರು ಸಮಸ್ಯೆಗಳನ್ನು ಪಟ್ಟಿ ಮಾಡಿ ಕಳುಹಿಸಿ. ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೃಷಿ ಮತ್ತು ತೋಟಗಾರಿಕೆ ಸಚಿವರ ಗಮನ ಸೆಳೆಯಲಾಗುವುದು. ತೆಂಗು ಪುನಶ್ಚೇತನ ಹಾಗೂ ನಿಗದಿತ ಬೆಂಬಲ ಬೆಲೆಗೂ ಕ್ರಮ ವಹಿಸಲಾಗುವುದು ಎಂದರು.
ಬೆಳಗಾರರ ಮನವಿಗಳ ಪಟ್ಟಿಯನ್ನು ಇ–ಮೇಲ್ ಮೂಲಕ ಕಳಿಸುವಂತೆಯೂ ಸಚಿವೆ ನಿರ್ಮಲಾ ತಿಳಿಸಿದರು.
ಕರ್ನಾಟಕ ಬೆಳೆಗಾರರ ಸಂಘ(ಕೆಜಿಎಫ್) ದ ಪ್ರಧಾನ ಕಾರ್ಯದರ್ಶಿ ಮುರಳೀಧರ ಮಾತನಾಡಿ,ಕಳೆದ ಐದಾರು ವರ್ಷಗಳಿಂದ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಾಫಿ ಉದ್ಯಮ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಗೆ ಇತ್ತೀಚೆಗೆ ವಿಧಿಸಿದ್ದ ಲಾಕ್ಡೌನ್ ನಿಂದ ತೋಟಗಳ ನಿರ್ವಹಣೆ ಕಷ್ಟವಾಗಿತ್ತು. ಬೆಳೆಯ ಇಳುವರಿಯೂ ಕಡಿಮೆಯಾಗಿದೆ. ತೋಟಗಳನಿರ್ವಹಣೆಗೆ ಹೊಸದಾಗಿ ಸಾಲ ನೀಡಿ ಮರುಪಾವತಿಸಲು ಮುಂದಿನ ಐದು ವರ್ಷದ ಅವಧಿಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ, ಬೆಂಗಳೂರಿನಿಂದ ಸಂಸದೆ ಶೋಭಾ ಕರಂದ್ಲಾಜೆ, ಇತರರು ಬೆಳೆಗಾರರ ಸಂಕಷ್ಟಗಳನ್ನು ಸಚಿವರಿಗೆ ತಿಳಿಸಿದರು.
Share your comments