ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ, ಶೇಂಗಾ, ಉದ್ದು, ಹೆಸರು ಕಾಳುಗಳನ್ನು ಖರೀದಿ ಮಾಡಲು ತೀರ್ಮಾನಿಸಿದೆ.
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಧಾನ್ಯ ಖರೀದಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
2020-21ರಲ್ಲಿ ಕೇಂದ್ರವು 1.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅನುಮತಿ ನೀಡಿದೆ. ಹೆಚ್ಚುವರಿಯಾಗಿ ಇನ್ನೂ 1 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಪ್ರಮಾಣಕ್ಕೆ, ಅಂದರೆ ಸುಮಾರು 2.10 ಲಕ್ಷ ಟನ್ ಭತ್ತ ಖರೀದಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಭತ್ತ ಖರೀದಿಗಾಗಿ ಈಗಾಗಲೇ ನೋಂದಣಿ ಆರಂಭವಾಗಿದೆ. ತಕ್ಷಣವೇ ಭತ್ತ ಖರೀದಿ ಆರಂಭಿಸಲಾಗುವುದು. ಜನವರಿ ತಿಂಗಳ ಅಂತ್ಯದವರೆಗೂ ರೈತರು ನೋಂದಣಿ ಮಾಡಿಸಬಹುದು.. ಭತ್ತ ಖರೀದಿ ಪ್ರತಿ ರೈತರಿಂದ ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಠ 75 ಕ್ವಿಂಟಲ್ ಖರೀದಿಸಲಾಗುವುದು ಎಂದು ಅವರು ಹೇಳಿದ್ದಾರೆ.
ರಾಗಿ ಮತ್ತು ಬಿಳಿಜೋಳ ಖರೀದಿಯನ್ನು ಇದೇ 15 ರಿಂದ ಆರಂಭಿಸಲಾಗುವುದು. ರಾಗಿ ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್ ಖರೀದಿಸಲಾಗುವುದು. ಈ ಬಾರಿ 4 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಳಿ ಜೋಳ ಪ್ರತಿ ಎಕರೆಗೆ 15 ಕ್ವಿಂಟಲ್‌ನಂತೆ ಗರಿಷ್ಠ 75 ಕ್ವಿಂಟಲ್ ಖರೀದಿಸಲಾಗುವುದು ಎಂದು ಹೇಳಿದರು.
ತೊಗರಿ ಖರೀದಿಗೆ ನೋಂದಣಿ ಇದೇ 15 ರಿಂದ ಆರಂಭವಾಗಲಿದೆ. ಜನವರಿ 1 ರಿಂದ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಖರೀದಿ ಅವಧಿ 90 ದಿನಗಳಾಗಿದ್ದು, ಪ್ರತಿ ಎಕರೆಗೆ ಗರಿಷ್ಠ 7.5 ಕ್ವಿಂಟಲ್, ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಲ್ ಖರೀದಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೆಸರುಕಾಳು: ಕಳೆದ ಸೆ.14ರಿಂದಲೇ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದರೂ ಹೆಚ್ಚಿನ ಆವಕಗಳು ಆಗಿಲ್ಲ. ಆದರೂ ರೈತರಿಗೆ ಮುಂದೆ ಅನುಕೂಲ ಕಲ್ಪಿಸಲು ಪ್ರತಿ ರೈತರಿಂದಲೂ ಗರಿಷ್ಠ 20 ಕ್ವಿಂಟಾಲ್‌ವರೆಗೆ ಸರಕಾರ ಖರೀದಿಸಲಿದೆ.
ಉದ್ದು: ಉದ್ದಿನ ಖರೀದಿ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದರೂ ಹೆಚ್ಚಿನ ಆವಕವಾಗಿಲ್ಲ. ಮುಂದಿನ ವರ್ಷದಿಂದ ಜುಲೈ, ಆಗಸ್ಟ್‌ನಲ್ಲಿಯೇ ಹೆಸರುಕಾಳು ಮತ್ತು ಉದ್ದು ಖರೀದಿ ಪ್ರಕ್ರಿಯೆ ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆಯಡಿ ಘೋಷಿಸಿರುವ ದರ (ಪ್ರತಿ ಕ್ವಿಂಟಾಲ್‌ಗೆ)
ಭತ್ತ ಸಾಮಾನ್ಯ: 1868 ರೂ.
ಭತ್ತ ಗ್ರೇಡ್ ಎ: 1888 ರೂ.
ರಾಗಿ: 3295 ರೂ.
ಬಿಳಿ ಜೋಳ ಹೈಬ್ರಿಡ್: 2620 ರೂ.
ಬಿಳಿ ಜೋಳ ಮಾಲ್ದಂಡಿ: 2640 ರೂ.
ತೊಗರಿ: 6000 ರೂ.
ಶೇಂಗಾ: 5275 ರೂ.
Share your comments