ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಂಗಳವಾರ ಸಹ ಉತ್ತಮ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನದಿಗಳಲ್ಲಿ ಅಪಾರಪ್ರಮಾಣದ ನೀರು ಹರಿದುಬರುತ್ತಿದ್ದರಿಂದ ಮೈದುಂಬಿ ಹರಿಯಲಾರಂಭಿಸಿವೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದ್ದರಿಂದ ಡ್ಯಾಂಗಳಿಂದ ನೀರನ್ನು ಹೊರಬಿಡಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದ್ದು, ಕೊಟ್ಟಿಗೆಹಾರದಲ್ಲಿ ಧಾರಾಕಾರವಾಗಿ ಸುರಿದಿದೆ. ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಮಳೆ ಬಿರುಸಾಗಿತ್ತು. ಹೇಮಾವತಿ, ತುಂಗಾ, ಭದ್ರಾ ನದಿಗಳಲ್ಲಿ ನೀರಿನಮಟ್ಟ ಹೆಚ್ಚಳವಾಗಿದೆ. ಕೊಡಗು ಜಿಲ್ಲೆಯ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗಿದೆ. ಸ್ನಾನಘಟ್ಟವು ಮುಳುಗುವ ಹಂತ ತಲುಪಿದೆ. ನಾಪೋಕ್ಲು, ತಲಕಾವೇರಿಯಲ್ಲೂ ಬಿಡದೆ ಮಳೆ ಸುರಿಯುತ್ತಿದ್ದು, ಕಾವೇರಿ ನದಿಯು ಕೊಡಗಿನಲ್ಲಿ ಮೈದುಂಬಿ ಹರಿಯುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಚುರುಕಾಗಿದ್ದು, ಶಿರಸಿ ಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೇ ಸುರಿಯಿತು. ಸಿದ್ದಾಪುರ ದಲ್ಲೂ ಇಡೀ ದಿನ ರಭಸದ ಮಳೆ ಆಯಿತು. ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಾಧಾರಣ ಮಳೆ ಯಾಗಿದೆ. ಧಾರವಾಡ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾ ಯಿತು. ರಾಯಚೂರು ತಾಲ್ಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ.
ಬೆಳಗಾವಿಯಲ್ಲಿಯೂ ಸಹ ಉತಮ ಮಳೆಯಾಗಿದ್ದು, ಘಟಪ್ರಭಾ ನದಿಗೆ ಸೋಮವಾರ 5009 ಕ್ಯೂಸೆಕ್ ಒಳಹರಿವಿದ್ದು, ಮಂಗಳವಾರ 6089 ಕ್ಯೂಸೆಕ್ ಏರಿಕೆಯಾಗಿದೆ. ಅಳ್ಲದೆ ಮಲಪ್ರಭಾ ನದಿಯಲ್ಲೂ 250 ರಿಂದ 1214 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟ 100 ರಗಡಿ ತಲುಪಿದೆ. ಇದೇ ರೀತಿ ಮಳೆ ಮುಂದುವರಿದರೆ ಜುಲೈ ಅಂತ್ಯದ ವೇಳೆ ಜಲಾಶಯ ಭರ್ತಿಯಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.
Share your comments