ರಾಜ್ಯದ ಬಹುತೇಕ ಕಡೆಗಳಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ತತ್ತಿರಿಸಿವೆ. ಇಲ್ಲಿಯವರೆಗೆ ರಾಜ್ಯದಲ್ಲಿ ಮಳೆಯ ಸಂಬಂಧಿ ಅವಘಡಕ್ಕೆ ಏಳಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಎಕರೆ ಬೆಳೆ ಹಾಳಾಗಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮುಂಗಾರು ಮಳೆಗೆ ರೈತರ ಅಪಾರ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿ ಸಿಲುಕಿದ್ದರು. ಆದರೆ ಅಕ್ಟೋಬರ್ ತಿಂಗಳಲ್ಲಿ ಮಳೆಯ ನಿರೀಕ್ಷೆಯಲ್ಲಿರಲಿಲ್ಲ. ಆದರೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಶಿ ಮಾಡಲು ತೊಡಗಿದ್ದ ರೈತರಿಗೆ ಸಂಕಷ್ಟ ಎದುರಾಗಿದೆ. ಬೆಳೆಯಲ್ಲಾ ಹೊಲದಲ್ಲಿಯೇ ಕೊಳೆಯುತ್ತಿದೆ.
ಒಂದೆಡೆ ಬೆಳೆ ಕೊಚ್ಚಿಕೊಂಡು ಹೋದರೆ ಇನ್ನೊಂದೆಡೆ ಬೆಳೆಯಲ್ಲಿ ನೀರು ನಿಂತಿದ್ದರಿಂದ ಅಲ್ಲೇ ಕೊಳೆಯುತ್ತಿದೆ. ಇನ್ನೊಂದೆಡೆ ಮಳೆಯಿಂದಾಗಿ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗುತ್ತಿವೆ.
ರಾಯಚೂರು ಜಿಲ್ಲೆಯಲ್ಲಿ ಹಳ್ಳ ದಲ್ಲಿ ಯುವಕ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ರೈತರೊಬ್ಬರು ಮಲಪ್ರಭಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಬಳಿ ಮಲಪ್ರಭಾ ನದಿಯಲ್ಲಿ ಕೊಣ್ಣೂರು ಗ್ರಾಮದ ರೈತ ವೆಂಕನಗೌಡ ರಾಮನ ಗೌಡ ಸಾಲಿಗೌಡರ (38) ಕೊಚ್ಚಿಕೊಂಡು ಹೋಗಿದ್ದಾರೆ. ಹೊಲದಿಂದ ಮನೆಗೆ ತೆರಳಲು ಸೇತುವೆ ದಾಟುವಾಗ ಅವಘಡ ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಸಮೀಪದ ಹಳ್ಳದಲ್ಲಿ ಚನ್ನಬಸವ (35) ಕೊಚ್ಚಿ ಹೋಗಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನಲ್ಲಿ ಸೀತಾಫಲ ಹಣ್ಣು ಬಿಡಿಸಲು ಹೋಗಿದ್ದ ಮಹಿಳೆ ಹಳ್ಳಕ್ಕೆ ಕೊಚ್ಚಿಕೊಂಡು ಹೋಗಿದ್ದಾಳೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಪಾರ ಬೆಲೆ ಹಾಳಾಗಿದೆ. ಕಲಬುರಗಿ, ಬಾಗಲಕೋಟೆ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅಪಾರ ಬೆಳೆ ಹಾಳಾಗಿದೆ.
ಇನ್ನೇನು ಕಟಾವಿಗೆ ಬರಬೇಕಾಗಿದ್ದ ಈರುಳ್ಳಿ, ಶಾಂಗ, ಮೆಕ್ಕೆಜೋಳ, ಅಲಸಂದಿ, ಹೆಸರು, ಉದ್ದು, ಹತ್ತಿ ಮತ್ತಿತರ ಬೆಳೆಗಲು ನೀರಿನಲ್ಲಿ ಮುಳುಗಿ ಹಾಳಾಗಿದ್ದು, ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
Share your comments