ಇದು ಮಳೆಗಾಲದ ಭತ್ತ ನಾಟಿ ಮಾಡುವ ಸಮಯ. ರಾಜ್ಯದ ಎಲ್ಲಾ ಜಲಾಶಯಗಳು ಬಹುತೇಕ ಭರ್ತಿಯಾಗುವ ಹಂತ ತಲುಪಿದ್ದು, ಆಯಾ ಜಲಾಶಯಗಳ ವ್ಯಾಪ್ತಿಯ ಜಲಾನಯನ ಪ್ರದೇಶಗಳಲ್ಲಿನ ಭತ್ತ ನಾಟಿ ಮಾಡಲು ಗದ್ದೆಗಳನ್ನು ಸಿದ್ಧಪಡಿಸುವ ಕಾರ್ಯಗಳು ಆರಂಭವಾಗಿವೆ. ಆದರೆ ಈ ಬಾರಿ ಡೀಸೆಲ್ ಹಾಗೂ ಟ್ರ್ಯಾಕ್ಟರ್ ಬಾಡಿಗೆ ಹೆಚ್ಚಳದ ಬಿಸಿ ರೈತರಿಗೆ ಬಹುವಾಗಿ ತಟ್ಟಿದೆ.
ಬೇರೆಯವರ ಟ್ರ್ಯಾಕ್ಟರ್ ಗಳಿಂದ ಬಾಡಿಗೆ ಹೊಡೆಸುವ ಸಣ್ಣ ರೈತರು ಮಾತ್ರವಲ್ಲದೆ ಸ್ವಂತ ಟ್ರ್ಯಾಕ್ಟರ್ ಹೊಂದಿ, ಅದರಲ್ಲಿ ತಮ್ಮ ಗದ್ದೆಯನ್ನಷ್ಟೇ ಉಳುಮೆ ಮಾಡಿಕೊಳ್ಳುವ ರೈತರೂ ಡೀಸೆಲ್ ಬೆಲೆ ಹೆಚ್ಚಳದಿಂದ ಕಂಗಾಲಾಗಿದ್ದಾರೆ. ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಟ್ರ್ಯಾಕ್ಟರ್ ಬಾಡಿಗೆ ಕೂಡ ಹೆಚ್ಚಾಗಿದೆ. ಕಳೆದ ವರ್ಷ ಒಂದು ಎಕರೆ ಭತ್ತದ ಗದ್ದೆಯನ್ನು ಉಳುಮೆ ಮಾಡಿ, ನಾಟಿ ಹಚ್ಚಲು ಸಿದ್ಧಪಡಿಸಿಕೊಡಲು 6,500 ರೂ. ತೆಗೆದುಕೊಳ್ಳುತ್ತಿದ್ದ ಮಾಲೀಕರು ಈ ಬಾರಿ ಏಕಾಏಕಿ 1,500 ರೂ. ಹೆಚ್ಚಿಸಿ, 8,000 ರೂ. ಕೇಳುತ್ತಿದ್ದಾರೆ.
ಕೊಪ್ಪಳ, ದಾವಣಗೆರೆ, ಬಳ್ಳಾರಿ, ಚಾಮರಾಜನಗರ, ಮಂಡ್ಯ, ಮೈಸೂರು, ರಾಆಯಚೂರು, ರುಮರೂರು, ಬೆಂಗಳೂರು ನಗರ, ಗ್ರಾಮಾಂತರ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಗದಗ, ಹಾವೇರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ರಾಜ್ಯದ 25 ಜಿಲ್ಲೆಗಳಲ್ಲಿ ಭತ್ತ ಬೆಳೆಯಲಾಗುತ್ತದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಟ್ರ್ಯಾಕ್ಟರ್ ಬಾಡಿಗೆ ಗಗನಮುಖಿಯಾಗಿದೆ.
ಭತ್ತಕ್ಕೂ ಬೆಲೆಯಿಲ್ಲ
ಒಂದೆಡೆ ಕೊರೊನಾ ಅಲೆಗಳ ಅಬ್ಬರದಲ್ಲಿ ಅಕ್ಕಿ ವ್ಯಾಪಾರವಾಗದೆ ಇರುವ ಹಿನ್ನೆಲೆಯಲ್ಲಿ ರೈಸ್ ಮಿಲ್ನವರು ಹೆಚ್ಚು ಭತ್ತ ಖರೀದಿಸುತ್ತಿಲ್ಲ. ಸ್ಥಳೀಯ ರೈಸ್ಮಿಲ್ನವರು ಭತ್ತ ಖರೀದಿಸದಿರುವ ಕಾರಣ ದಲ್ಲಾಳಿಗಳು ಕೂಡ ರೈತರಿಂದ ಭತ್ತ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅತ್ತ ಹೊರ ರಾಜ್ಯಗಳಿಗೆ ಹೋಗುತ್ತಿದ್ದ ಭತ್ತದ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಜೊತೆಗೆ, ವಿದೇಶಗಳಿಗೆ ಅಕ್ಕಿ ರಫ್ತು ಮಾಡಲೂ ಕೊರೊನಾ ಹೊಡೆತ ಕೊಟ್ಟಿದೆ. ಹೀಗಾಗಿ ಈ ಹಿಂದಿನ ಬೆಳೆ ವೇಳೆ ರೈತರು ಬೆಳೆದ ಕ್ರಿಂಟಾಲ್ ಸೋನ ಭತ್ತ ಕೇವಲ 1600 ರೂ.ಗೆ ಮಾರಾಟವಾಗಿದೆ. ಸರ್ಕಾರ ಬೆಂಬಲಬೆಲೆ ಘೋಷಿಸಿದ್ದರೂ ಎಪಿಎಂಸಿಗಳಲ್ಲಿನ ದಲ್ಲಾಳಿಗಳ ಹಾವಳಿ ಹಾಗೂ ಕಾಯುವಿಕೆಗೆ ಬೇಸತ್ತ ರೈತರು ಕಡಿಮೆ ಬೆಲೆಗೇ ದಲ್ಲಾಳಿಗಳಿಗೆ ಮಾರಾಟ ಮಾಡಿದ್ದಾರೆ. ಹೀಗೆ ಭತ್ತದ ಬೆಲೆ ಕುಸಿದಿರುವ ಸಂದರ್ಭದಲ್ಲೇ ಟ್ರ್ಯಾಕ್ಟರ್ ಬಾಡಿಗೆ ಹೆಚ್ಚಾಗಿರುವುದಕ್ಕೆ ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಬಿಡಿಗಾಸೂ ಉಳಿಯಲ್ಲ
ಈ ಕುರಿತು ಪ್ರತಿಕ್ರಿಯಿಸಿರುವ ಕೊಪ್ಪಳದ ರೈತ ಆಂಜನೇಯ ಅವರು, “ಎಕರೆಗೆ ಹೆಚ್ಚೆಂದರೆ 30 ಕ್ವಿಂಟಾಲ್ ಭತ್ತ ಬೆಳೆಯಬಹುದು. ಕಳೆದ ಬಾರಿ ಯಾವುದೇ ರೋಗಗಳ ಹಾವಳಿ ಇಲ್ಲದಿದ್ದರೂ ಎಕರೆಗೆ ಸರಾಸರಿ ಕೇವಲ 24 ಕ್ವಿಂಟಾಲ್ ಭತ್ತ ಬಂದಿದೆ. ನಮ್ಮ ಬಳಿ 8-10 ಲಕ್ಷ ಕೊಟ್ಟು ಟ್ರ್ಯಾಕ್ಟರ್ ಖರೀದಿಸಲು ಬಂಡವಾಳವಿಲ್ಲ. ಹೀಗಾಗಿ ಬೇರೆಯವರ ಟ್ರಾö್ಯಕ್ಟರ್ನಲ್ಲಿ ಉಳುಮೆ ಮಾಡಿಸುತ್ತೇವೆ. ಈ ಬಾರಿ ಒಂದು ಎಕರೆ ಗದ್ದೆಯನ್ನು ಸಿದ್ಧಮಾಡಿಕೊಡಲು 8,000 ರೂ. ಕೇಳುತ್ತಿದ್ದಾರೆ. ಇಷ್ಟೊಂದು ಹಣವನ್ನು ಟ್ರ್ಯಾಕ್ಟರ್ ಬಾಡಿಗೆ ಕೊಟ್ಟರೆ ತಿಂಗಳುಗಟ್ಟಲೆ ಕಷ್ಟಪಟ್ಟು, ನಿದ್ದೆಗೆಟ್ಟು ಬೆಳೆ ಬೆಳೆದ ನಮಗೆ ಒಂದು ಬಿಡಿಗಾಸು ಕೂಡ ಉಳಿಯುವುದಿಲ್ಲ” ಎನ್ನುತ್ತಾರೆ.
ಇತ್ತ ಟ್ರ್ಯಾಕ್ಟರ್ ಮಾಲೀಕರಿಗೋ ಅವರದೇ ಆದ ವ್ಯಥೆ. “ಮೊದಲು ಒಳ್ಳೆಯ ಡ್ರೆöÊವರ್ ಹುಡುಕಬೇಕು. ಅವರಿಗೆ ದಿನಕ್ಕೆ ಕನಿಷ್ಠ 500 ರೂಪಾಯಿ ಕೂಲಿ, ಸಂಜೆ ದಣಿವಾರಿಸಿಕೊಳ್ಳಲು 100-200 ರೂಪಾಯಿ ಕೊಡಬೇಕು. ಬಳಿಕ ಒಂದು ಎಕರೆಯಲ್ಲಿ ಕಲ್ಟಿವೇಟರ್ ಹೊಡೆಯಲು ಕನಿಷ್ಠವೆಂದರೂ 5ರಿಂದ 8 ಲೀಟರ್ ಡೀಸಲ್ ಖರ್ಚಾಗುತ್ತದೆ. ಇನ್ನು ಗದ್ದೆ ಹಸನು ಮಾಡಲು (ರೊಳ್ಳೆ ಹೊಡೆಯಲು) ಎಕರೆಗೆ 10 ಲೀಟರ್ ಡೀಸೆಲ್ ಬೇಕೇಬೇಕು. ಹೀಗೆ ಒಂದು ಬೆಳೆಗೆ ಒಂದು ಬಾರಿ ಒಣ ಕಲ್ಟಿವೇಟರ್, ಒಮ್ಮೆ ಕೆಸರು ಗದ್ದೆಯಲ್ಲಿ ಕೇಜ್ವ್ಹೀಲ್, ಮತ್ತೊಮ್ಮೆ ಹಿಂಜೆಮಣಿ (ಗದ್ದೆ ಸಮತಟ್ಟು ಮಾಡುವುದು) ಹೊಡೆಯುವಷ್ಟರಲ್ಲಿ ಒಂದು ಎಕರೆಗೆ ಕನಿಷ್ಠವೆಂದರೂ 25-30 ಲೀಟರ್ ಡೀಸೆಲ್ ಖಾಲಿಯಾಗಿರುತ್ತದೆ. ಟ್ರ್ಯಾಕ್ಟರ್ ಗದ್ದೆಗೆ ಇಳಿಯೆತೆಂದರೆ ಉಳುಮೆ ಸಾಧನಗಳ ರಿಪೇರಿ ಇದ್ದದ್ದೇ. ಇದರೊಂದಿಗೆ ಟ್ರ್ಯಾಕ್ಟರ್ ಎಂಜಿನ್ ಸವೆತ, ಟೈರ್ಗಳ ಸವೆತ ಎಲ್ಲವನ್ನೂ ಲೆಕ್ಕ ಹಾಕಿಕೊಂಡರೆ ನಾವು ಪಡೆಯುತ್ತಿರುವ ಬಾಡಿಗೆ ಕಡಿಮೆಯೇ. ಈಗಿನ ಡೀಸೆಲ್ ದರ ನೆನೆಸಿಕೊಂಡರೆ ಬಾಡಿಗೆ ಹೊಡೆಯುವುದನ್ನೇ ನಿಲ್ಲಿಸಬೇಕು ಅನಿಸುತ್ತದೆ” ಎನ್ನುತ್ತಾರೆ ದಾವಣಗೆರೆ ಜಿಲ್ಲೆ ದೇವರ ಬೆಳಕೆರೆಯ ಟ್ರ್ಯಾಕ್ಟರ್ ಮಾಲೀಕ ರಾಜೇಶ್.
ಇನ್ನು ಸ್ವಂತ ಟ್ರ್ಯಾಕ್ಟರ್ ಹೊಂದಿ, ಅದನ್ನು ತಮ್ಮ ಹೊಲದ ಕೆಲಸಕ್ಕೆ ಬಳಸುವ ರೈತರದ್ದು ಮತ್ತೊಂದು ರೀತಿಯ ಸಮಸ್ಯೆ. “ಡೀಸೆಲ್ ಬೆಲೆ ಲೀಟರ್ಗೆ 12 ರೂಪಾಯಿ ಇದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಟ್ರ್ಯಾಕ್ಟರ್ ಇದೆ. ಈಗ್ಗೆ ಎರಡು ಬೆಳೆಗಳ ಹಿಂದೆ ಅಂದರೆ ಒಂದು ವರ್ಷದ ಹಿಂದಷ್ಟೇ ಡೀಸೆಲ್ ಬೆಲೆ 65ರಿಂದ 70 ರೂ. ಆಸುಪಾಸಿನಲ್ಲಿತ್ತು. ಆಗ 1000 ರೂಪಾಯಿ ಕೊಟ್ಟರೆ ಕನಿಷ್ಠ 15 ಲೀಟರ್ ಡೀಸೆಲ್ ಬರುತ್ತಿತ್ತು. ಈಗ 1000 ರೂಪಾಯಿ ಕೊಟ್ಟರೆ 10 ಲೀಟರ್ ಡೀಸೆಲ್ ಬಂದರೆ ಹೆಚ್ಚು. ಈಗಿನ ಟ್ರ್ಯಾಕ್ಟರ್ ಗಳು ಹೆಚ್ಚು ಹಾರ್ಸ್ ಪವರ್ (ಹೆಚ್ಪಿ) ಹೊಂದಿರುವ ಕಾರಣ ಮೈಲೇಜ್ ಕಡಿಮೆ. ಹೀಗಾಗಿ 10 ಲೀಟರ್ ಡೀಸೆಲ್ ಒಂದು ಎಕರೆ ಹೊಲ ಉಳುಮೆ ಮಾಡಲು ಕೂಡ ಸಾಲುವುದಿಲ್ಲ. ನಾವು 5 ಎಕರೆ ಭತ್ತ ನಾಟಿ ಮಾಡುತ್ತಿದ್ದು, ಈ ಬಾರಿ ಕೇವಲ ಡೀಸೆಲ್ಗೇ ಸುಮಾರು 12,000 ರೂಪಾಯಿ ಖರ್ಚಾಗಿದೆ. ತೈಲ ಬೆಲೆ ಇನ್ನೂ ಹೆಚ್ಚಾದರೆ ಮತ್ತೆ ಎತ್ತು ಹೂಡಬೇಕಾಗುತ್ತದೆ,” ಎನ್ನುವುದು ಹಾವೇರಿಯ ಅಶೋಕ ಮಂಡಳ್ಳಿ ಅವರ ಅಭಿಪ್ರಾಯ.
ಒಟ್ಟಾರೆ ಡೀಸೆಲ್ ಬೆಲೆ ಹೆಚ್ಚಳ ರೈತರ ಕೃಷಿ ಭೂಮಿ ನಿರ್ವಹಣೆ ವೆಚ್ಚವನ್ನು ಹೆಚ್ಚಿಸಿದೆ. ಉತ್ತರ ಕರ್ನಾಟಕದ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯುವ ಬಹುತೇಕ ರೈತರು ಈಗಲೂ ನೇಗಿಲು, ಎಡೆಕುಂಟೆ ಹೊಡೆಯಲು ಎತ್ತುಗಳನ್ನೇ ಬಳಸುತ್ತಾರೆ. ಆದರೆ ಭತ್ತದ ಗದ್ದೆ ಸಿದ್ಧಪಡಿಸಲು ಎತ್ತುಗಳನ್ನು ಬಳಸುವುದು ತುಸು ಕಷ್ಟ. ಹೀಗಾಗಿ ಟ್ರ್ಯಾಕ್ಟರ್ ಬಾಡಿಗೆ ಹೆಚ್ಚಾದರೂ ಕೊಟ್ಟು ಗದ್ದೆ ಸಿದ್ಧಪಡಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಭತ್ತ ಬೆಳೆಗಾರರದ್ದಾಗಿದೆ.
Share your comments