ಕೃಷಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್ ಪರಿಚಯಿಸಿದೆ.
ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.
ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.
1. ದೇಶದಲ್ಲಿ ಹಿಂಗಾರು ಬಿತ್ತನೆ ಹೆಚ್ಚಳ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
2. ಡಿಸೆಂಬರ್ 7ರ ವರೆಗೆ ಕಾಲುಬಾಯಿ ರೋಗ ಲಸಿಕಾ ಅಭಿಯಾನ
3. ಕೃಷಿಕರ ಮಕ್ಕಳು ಉದ್ಯಮಿಗಳಾಗಲು ಶ್ರಮಿಸಬೇಕು: ಸಚಿವ ಅಶ್ವಥ್ ನಾರಾಯಣ್ 4. ಗ್ರಾ.ಪಂ ಗ್ರಂಥಾಲಯಗಳಿಗೆ ಸಂವಿಧಾನ ಪ್ರತಿ: ಬಸವರಾಜ ಬೊಮ್ಮಾಯಿ
5. ಕೃಷಿ ಆವಿಷ್ಕಾರಕ್ಕೆ ಒತ್ತು ನೀಡಿ; ನವೋದ್ಯಮಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ
6. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2 ಲಕ್ಷ ಕೋಟಿ ಹೂಡಿಕೆ: ಬಸವರಾಜ ಬೊಮ್ಮಾಯಿ
7. ಪುಣ್ಯಕೋಟಿ ಯೋಜನೆ: ಸರ್ಕಾರಿ ನೌಕರರಿಗೆ ತೆರಿಗೆ ವಿನಾಯ್ತಿ
8. ಆಯುಷ್ಮಾನ್ ಭಾರತ್ ಡಿಜಿಟಲ್; ಕರ್ನಾಟಕವೇ ಟಾಪ್!
9. ಆರನೇ ದಿನವೂ ಮುಂದುವರಿದ ಕಬ್ಬು ಬೆಳೆಗಾರರ ಪ್ರತಿಭಟನೆ
10. ರಾಜ್ಯ ಸರ್ಕಾರದಿಂದ 3,673 ಪೌರಕಾರ್ಮಿಕರ ಕೆಲಸ ಕಾಯಂ
ದೇಶದಲ್ಲಿ ಹಿಂಗಾರು ಬಿತ್ತ ಪ್ರದೇಶ ಹೆಚ್ಚಳವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಬಿತ್ತನೆಗೆ ಅನುಕೂಲಕರ ವಾತಾವರಣ ಮತ್ತು ಬಿತ್ತನೆ ಪ್ರದೇಶದಲ್ಲಿ ಏರಿಕೆ ಆಗಿರುವುದರಿಂದ ಪ್ರಸಕ್ತ ಹಿಂಗಾರು ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯೂ ಹೆಚ್ಚಾಗುವ ನಿರೀಕ್ಷೆ ಇದೆ.
2021ನೇ ಸಾಲಿಗೆ ಹೋಲಿಕೆ ಮಾಡಿದರೆ, ಈ ಬಾರಿಯ ಹಿಂಗಾರು ಅವಧಿಯಲ್ಲಿ 24.13 ಲಕ್ಷ ಹೆಕ್ಟೇರ್ನಷ್ಟು ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಆಗಿದೆ.
ನವೆಂಬರ್ 25ರವರೆಗೆ 358.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಅವಧಿಯ ಆಹಾರಧಾನ್ಯಗಳ ಬಿತ್ತನೆ ಆಗಿದೆ.
ಕಳೆದ ವರ್ಷ 334.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು.
ಇದಕ್ಕೆ ಹೋಲಿಸಿದರೆ ಈ ಬಾರಿ 24.13 ಲಕ್ಷ ಹೆಕ್ಟೇರ್ ಹೆಚ್ಚುವರಿ ಪ್ರದೇಶದಲ್ಲಿ ಬಿತ್ತನೆ ಆಗಿದೆ.
ಇನ್ನು ಗೋಧಿ ಬಿತ್ತನೆ ಪ್ರದೇಶವು 138.35 ಲಕ್ಷ ಹೆಕ್ಟೇರ್ಗಳಿಂದ 152.88 ಲಕ್ಷ ಹೆಕ್ಟೇರ್ಗೆ ಏರಿಕೆ ಕಂಡಿದೆ.
ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಗರಿಷ್ಠ ಪ್ರದೇಶದಲ್ಲಿ ಬಿತ್ತನೆ ಆಗಿದೆ.
ಜಾನುವಾರುಗಳಲ್ಲಿ ಕಾಲುಬಾಯಿ ರೋಗವನ್ನು ತಡೆಗಟ್ಟುವ ಉದ್ದೇಶಿದಿಂದ ಈಗಾಗಲೇ ರಾಜ್ಯದಲ್ಲಿ ಕಾಲುಬಾಯಿ
ರೋಗ ಲಸಿಕಾ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಈ ಅಭಿಯಾನವು ಡಿಸೆಂಬರ್ 7ರ ವರೆಗೆ ನಡೆಯಲಿದೆ.
ಕಾಲುಬಾಯಿ ರೋಗವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಈ ರೋಗದಿಂದ ಜಾನುವಾರುಗಳು ಸಮಸ್ಯೆಗೆ ಒಳಗಾಗುತ್ತವೆ.
ಅಲ್ಲದೇ ರೈತರಿಗೂ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಕಾಲುಬಾಯಿ ರೋಗವನ್ನು ತಡೆಯಲು ಪ್ರತಿ ಆರು
ತಿಂಗಳಿಗೊಮ್ಮೆ ಜಾನುವಾರುಗಳಿಗೆ ರೋಗದ ವಿರುದ್ಧ ಲಸಿಕೆ ಹಾಕಿಸುವುದೊಂದೇ ಮಾರ್ಗ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ತಿಳಿಸಿದೆ.
Food crisis| ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ|
----
ರೈತರ ಮಕ್ಕಳು ಒಕ್ಕಲುತನವನನ್ನು ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು. ಅವರಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.
ಪ್ರಾದೇಶಿಕ ಸಮುದಾಯದ ಆರ್ಥಿಕ ಸಬಲೀಕರಣದ ಉದ್ದೇಶದಿಂದ ರಚಿಸಲಾಗಿರುವ ಫರ್ಸ್ಟ್ ಸರ್ಕಲ್ ವತಿಯಿಂದ ಈಚೆಗೆ ನಡೆದ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಣ್ಣಿನ ಮಕ್ಕಳು ಸ್ವತಃ ಶ್ರಮಜೀವಿಗಳು, ಉದ್ಯಮಶೀಲತೆಯ ಸ್ಫೂರ್ತಿ ಹೊಂದಿದ್ದಾರೆ. ಹೀಗಾಗಿ, ಕೃಷಿಕರ ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು
ಎಂದಿದ್ದಾರೆ.
-------
ಗ್ರಾಮೀಣ ಪ್ರದೇಶಗಳಲ್ಲೂ ಭಾರತದ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ,
ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಿಗೆ ಸಂವಿಧಾನದ ಪ್ರತಿಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದವರಿಗೂ ಸಂವಿಧಾನ ಓದಲು ಅವಕಾಶ ಕಲ್ಪಿಸಲಾಗುವುದು.
ಅಲ್ಲದೇ ಸ್ಥಳೀಯ ಸಂಸ್ಥೆಗಳ ರಚನೆಯ ಮೂಲಕ ಆಡಳಿತ ವಿಕೇಂದ್ರೀಕರಣಕ್ಕೆ ಅವಕಾಶ ಕಲ್ಪಿಸಿದ
ಸಂವಿಧಾನದ 73 ಮತ್ತು 74ನೇತಿದ್ದುಪಡಿಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಗ್ರಾಮೀಣ ಪ್ರದೇಶಗಳ ಗ್ರಂಥಾಲಯಗಳಿಗೆ ನೀಡಲಾಗುವುದು ಎಂದರು.
ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ
-------
ಹೆಚ್ಚು ಆಕರ್ಷಕವಲ್ಲದ ಕ್ಷೇತ್ರಗಳ ಕಡೆಗೂ ಗಮನ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನವೋದ್ಯಮಗಳಿಗೆ ಸಲಹೆ ನೀಡಿದ್ದಾರೆ.
ಸಿರಿಧಾನ್ಯ ಉತ್ಪಾದನೆ ಹಾಗೂ ರೈತರ ಸ್ಥಿತಿ ಸುಧಾರಿಸುವಂತಹ ವಿಷಯಗಳಲ್ಲೂ ತೊಡಗಿಸಿಕೊಳ್ಳಿ ಎಂದಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ದೇಶದ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.
ಹವಾಮಾನ ಬದಲಾವಣೆ ತಡೆಯಲು ಪರಿಹಾರ ಹುಡುಕುವ ನಿಟ್ಟಿನಲ್ಲಿ ನವೋದ್ಯಮಗಳು ಸಕ್ರಿಯರಾಗಬೇಕು ಎಂದು ಹೇಳಿದ್ದಾರೆ.
ನವೋದ್ಯೋಗಿಗಳು ಈಗ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಹೀಗಾಗಿ ಹೆಚ್ಚು ಆಕರ್ಷಕವಲ್ಲದ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಳ್ಳುವಂತೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
--------
6. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಲಿದೆ ಎಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ಗೆ ಪರ್ಯಾಯವಾಗಿ ನವೀಕರಿಸಬಹುದಾದ ಇಂಧನವೇ ಹೆಚ್ಚು ಬಳಕೆಯಾಗಲಿದೆ.
ಹೈಡ್ರೋಜನ್ ಉದ್ಯಮದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಲಿದ್ದು, ಕಡಿಮೆ ದರ ದಲ್ಲಿ ಇಂಧನ ತಲುಪಿಸುವ
ಉದ್ದೇಶದಿಂದ ದೇಶದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿದಂತೆ ಬೆಲೆಯೂ ಕಡಿಮೆ ಆಗಲಿದೆ ಎಂದಿದ್ದಾರೆ.
--------
7. ರಾಜ್ಯ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ
ನವೆಂಬರ್ ತಿಂಗಳ ವೇತನದ ನಿರ್ದಿಷ್ಟ ಮೊತ್ತವನ್ನು ನೀಡುತ್ತಿದ್ದು, ಇದಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿದೆ.
ಹಣಕಾಸು ಸಚಿವಾಲಯವು ವೇತನ ಕಡಿತಕ್ಕೆ ಮಂಜೂರಾತಿ ನೀಡಿದೆ. ಸರ್ಕಾರಿ ಅಧಿಕಾರಿ,
ನೌಕರರು ನೀಡುವ ವಂತಿಗೆ ಮೊತ್ತಕ್ಕೆ ಆದಾಯ ತೆರಿಗೆ ವಿನಾಯ್ತಿ ನೀಡುವಂತೆ ಪ್ರಸ್ತಾಪಿಸಲಾಗಿತ್ತು.
ಇದೀಗ ಈ ಪ್ರಸ್ತಾವನೆ ಅನುಮೋದನೆ ಆಗಿದ್ದು, ಪುಣ್ಯಕೋಟಿ ಯೋಜನೆಗೆ ದೇಣಿಗೆ ನೀಡುವ ಮೊತ್ತಕ್ಕೆ ತೆರಿಗೆ ವಿನಾಯ್ತಿ ಸಿಗಲಿದೆ.
--------
8. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ನಡಿ ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಸೌಲಭ್ಯ ನೋಂದಣಿ
ಪ್ರಕ್ರಿಯೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಆರೈಕೆ ವೃತ್ತಿಪರರ ನೋಂದಣಿ ವಲಯದಲ್ಲಿ 28,643 ವೈದ್ಯರು ಮತ್ತು ದಾದಿಯರು ನೋಂದಣಿಯಾಗಿದ್ದು, ರಾಜ್ಯ ಮೊದಲ ಸ್ಥಾನದಲ್ಲಿದೆ.
ಆರೋಗ್ಯ ಸೌಲಭ್ಯ ನೋಂದಣಿಯಡಿ ಕರ್ನಾಟಕ 2 ನೇ ಸ್ಥಾನದಲ್ಲಿದ್ದು, 27,244 ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದಿದ್ದಾರೆ.
--------
ರಾಜ್ಯ ಕಬ್ಬು ಬೆಳೆಗಾರರ ಸಂಘ,ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಕಬ್ಬಿನ ಎಫ್ಆರ್ಪಿ ದರ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ
ರೈತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆ ಆರನೇ ದಿನವಾದ ಭಾನುವಾರವೂ ಮುಂದುವರಿದಿದೆ.
ಶನಿವಾರ ರೈತರು ಅಣಕು ಶವಯಾತ್ರೆ ನಡೆಸಿದ್ದರು. ಈ ವೇಳೆ ಪೊಲೀಸರು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ
ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವು ರೈತ ಮುಖಂಡರನ್ನು ಬಂಧಿಸಿದ್ದರು.
ಧರಣಿ ನಿರತ ರೈತರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ, ಭಾನುವಾರ ರಾಜ್ಯಾದ್ಯಂತ
ಕಪ್ಪುಪಟ್ಟಿ ಪ್ರತಿಭಟನೆ ಕರೆ ನೀಡಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆ ಕಬ್ಬು ಬೆಳೆಗಾರರು ಪ್ರತಿಭಟನೆ ಪ್ರಾರಂಭಿಸಿದ್ದಾರೆ.
--------
10. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 3,673
ಪೌರಕಾರ್ಮಿಕರ ಸೇವೆಗಳನ್ನು ಕಾಯಂ ಮಾಡಲಾಗಿದೆ.
ಪೌರಕಾರ್ಮಿಕರ ಕಾಯಂತಿಗೆ ಸಂಬಂಧಿಸಿದಂತೆ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಸರ್ಕಾರದ ಅಡಿಯಲ್ಲಿ 17 ಸಾವಿರದಿಂದ
28,950 ರೂಪಾಯಿ ವರೆಗಿನ ವೇತನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
--------
Share your comments