ಈಗ ಎಲ್ಲೆಲ್ಲೂ ಆಮ್ಲಜನಕದ್ದೇ ಮಾತು. ಅದರಲ್ಲೂ ಕೊರೊನಾ ಸಾಂಕ್ರಾಮಿಕ ಸೋಂಕಿನ ಎರಡನೇ ಅಲೆ ಆರಂಭವಾದಾಗಿನಿಂದ ಆಮ್ಲಜನಕ ಸಿಗದೇ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಸೆಲೆಬ್ರಿಟಿಗಳು, ದಾನಿಗಳು ಹಾಗೂ ಸ್ವಂಸೇವಕರ ನೆರವಿನಿಂದ ಅಗತ್ಯ ಇರುವವರಿಗೆ ಸೂಕ್ತ ಸಮಯಕ್ಕೆ ಆಮ್ಲಜನಕ ದೊರೆತು ನೂರಾರು ಪ್ರಾಣಗಳೂ ಉಳಿದಿವೆ.
ಅದೇನೇ ಇದ್ದರೂ ಕೊರೋನಾ ಸೋಂಕು ಮನುಕುಲಕ್ಕೆ ಆಮ್ಲಜನಕದ ಮಹತ್ವ ತಿಳಿಸಿಕೊಟ್ಟಿದೆ. ಕಾಡು, ಹಸಿರು ಪರಿಸರದ ನಾಶದಿಂದ ಉಸಿರಾಡುವ ಗಾಳಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮ, ವಾಹನಗಳು ಹೊರಸೂಸುವ ಇಂಗಾಲದ ಡೈಆಕ್ಸೈಡ್ನಿಂದ ರಕ್ಷಿಸಿಕೊಳ್ಳೋಣವೆಂದು ಹೊರಗೆ ಹೋಗದೆ ಮನೆ ಸೇರಿಕೊಂಡು ಬಾಗಿಲು ಹಾಕಿಕೊಂಡರೆ, ಅಲ್ಲೂ ಆಮ್ಲಜನಕದ ಕೊರತೆ ಎದುರಾಗುತ್ತಿದೆ. ಪರಿಣಾಮ ಜಗತ್ತಿನಾದ್ಯಂತ ಪ್ರತಿ ವರ್ಷ 2 ಮಿಲಿಯನ್ ಅಂದರೆ, 20 ಲಕ್ಷ ಮಂದಿ ಆಮ್ಲಜನಕದ ಕೊರತೆಯಿಂದ ಪ್ರಾಣ ಬಿಡುತ್ತಿದ್ದಾರೆ. ಇಷ್ಟೊಂದು ಮಂದಿ ಸಾವಿಗೀಡಾಗುತ್ತಿರುವುದು ಮನೆಯ ಒಳಗೇ ಎಂಬುದು ಅಚ್ಚರಿ ಹುಟ್ಟಿಸುವ ವಿಷಯ.
ಇಂತಹ ಸಂದರ್ಭದಲ್ಲಿ ಮನೆಯ ಒಳಗೇ ಹಲವಾರು ಅಲಂಕಾರಿಕ ಸಸ್ಯಗಳನ್ನು ಬೆಳೆಸಿ ಮನೆ ವಾತಾವರಣದಲ್ಲಿಯೇ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿಕೊಂಡು ಆರೋಗ್ಯಯುತ ಜೀವನ ನಡೆಸಲು ಸಾಧ್ಯವಿದೆ ಎಂಬ ಕುರಿತು ಪರಿಸರ ತಜ್ಞ, ಪರಿಸರ ವಾದಿ ಪಂಚಯ್ಯ ವಿರೂಪಾಕ್ಷಯ್ಯ ಹಿರೇಮಠ್ ಅವರು ಮಾಹಿತಿ ನೀಡಿದ್ದಾರೆ.
ಮನೆಯೊಳಗೆ ಕಲುಷಿತ ಗಾಳಿ
ನಾವೆಲ್ಲರೂ ಮನೆಯನ್ನು ಸ್ವಚ್ಛವಾಗಿಡುತ್ತೇವೆ. ಆ ಮೂಲಕ ರೋಗ ರುಜಿನಗಳು ಹರಡದಂತೆ ಎಚ್ಚರ ವಹಿಸುತ್ತೇವೆ. ಆದರೆ, ನಮ್ಮ ಮನೆಯೊಳಗೇ ಶುದ್ಧ ಗಾಳಿ ಅಥವಾ ಆಮ್ಲಜನಕದ ಕೊರತೆ ಇದೆ ಎಂಬ ಸತ್ಯ ನಮ್ಮ ಅರಿವಿಗೆ ಬರುವುದೇ ಇಲ್ಲ. ಪ್ರತಿ ನಿತ್ಯ ನಾವು ಮನೆ ಸ್ವಚ್ಛ ಮಾಡಲು ಬಳಸುವ ರಾಸಾಯನಿಕ ಮಿಶ್ರಿತ ದ್ರಾವಣಗಳು (ಲಿಕ್ವಿಡ್) ನಾವು ಉಸಿರಾಡುವ ಗಾಳಿಗೆ ವಿಷ ಬೆರೆಸುತ್ತಿವೆ. ಮನೆಯ ನೆಲ ಒರೆಸಲು ಬಳಸುವ ಸ್ವಚ್ಛತಾ ದ್ರಾವಣ, ಸೊಳ್ಳೆ ಬತ್ತಿ, ಜಿರಲೆ ಮತ್ತಿತರ ಕೀಟಗಳನ್ನು ಕೊಲ್ಲಲು ಸಿಂಪಡಿಸುವ ಕೀಟನಾಶಕಗಳಿಂದ ಹಾನಿಕಾರಕ ಟಾಕ್ಸಿನ್ ನಮ್ಮ ಮನೆಯ ವಾತಾವರಣದಲ್ಲಿ ಬೆರೆತುಹೋಗುತ್ತದೆ. ಅಷ್ಟು ಮಾತ್ರವಲ್ಲ, ಇದರಿಂದ ಮನೆಯೊಳಗಿನ ಆಮ್ಲಜನಕದ ಪ್ರಮಾಣ ಕೂಡ ಕುಸಿಯುತ್ತದೆ. ಇದರೊಂದಿಗೆ ನಾವು ನಿತ್ಯ ಬಳಸುವ ಪ್ಲಾಸ್ಟಿಕ್ ಉತ್ಪನ್ನಗಳೂ ವಿಷಾನಿಲವನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ನಮಗೆ ಅರಿವಿಲ್ಲದೆಯೇ ನಾವು ವಿಷ ಗಾಳಿ ಸೇವಿಸುತ್ತೇವೆ.
ನಗರಗಳಲ್ಲಿ ಸಮಸ್ಯೆ ಹೆಚ್ಚು
ಹಳ್ಳಿಗಳ ಮನೆಗಳ ಬಾಗಿಲು ಹಾಕುವುದು ಕತ್ತಲಾದ ನಂತರವೇ. ಹೀಗಾಗಿ ಅಲ್ಲಿನ ಮನೆಗಳಲ್ಲಿ ಆಮ್ಲಜನಕದ ಕೊರತೆ ಅಷ್ಟಾಗಿ ಕಾಡುವುದಿಲ್ಲ. ಆದರೆ ನಗರ ಪ್ರದೇಶದ ಜನ ಮನೆಯ ಬಾಗಿಲುಗಳನ್ನು ತೆರೆಯುವುದೇ ಅಪರೂಪ. ಹಿಗಾಗಿ ಹೊರಗಿನ ಗಾಳಿ ಮನೆಯೊಳಗೆ ಪ್ರವೇಶಿಸದೆ, ಅಲ್ಲಿ ಆಮ್ಲಜನಕದ ಕೊರತೆ ಸೃಷ್ಟಿಯಾಗುತ್ತದೆ. ಜೊತೆಗೆ ನಗರದ ಜನ ರಾತ್ರಿ ಪೂರ್ತಿ ಎ.ಸಿ ಬಳಸುತ್ತಾರೆ. ಇದರಿಂದ ಮಲಗುವ ಕೋಣೆಯಲ್ಲಿ ಆಮ್ಲಜನಕ ಪ್ರಮಾಣ ಬಹುತೇಕ ಶೂನ್ಯ ಪ್ರಮಾಣಕ್ಕೆ ಬಂದು ನಿಲ್ಲುತ್ತದೆ. ಇದೇ ವಾತಾವರಣದಲ್ಲಿ ಬೆಳಗ್ಗೆ ಎದ್ದಾಗ ಆಮ್ಲಜನಕದ ಕೊರತೆ ಉಂಟಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕಾರಣ, ಮನೆಯ ಕಿಟಕಿ, ಬಾಗಿಲುಗಳನ್ನು ಆದಷ್ಟು ಹೊತ್ತು ತೆರೆದಿಡಬೇಕು.
ಆಮ್ಲಜನಕ ಹೆಚ್ಚಿಸಲು ಹೀಗೆ ಮಾಡಿ
ಪ್ರತಿ ದಿನ 2ರಿಂದ 4 ತಾಸುಗಳ ಕಾಲ ಮನೆಯ ಕಿಟಕಿ, ಬಾಗಿಲುಗಳನ್ನು ತೆರೆದಿಡಬೇಕು. ಸಾಧ್ಯವಾದರೆ ಎ.ಸಿ ಬದಲು ಸೀಲಿಂಗ್ ಇಲ್ಲವೇ ಸ್ಟ್ಯಾಂಡ್ ಫ್ಯಾನ್ ಬಳಸಬೇಕು. ರಾತ್ರಿ ಮಲಗಿರುವಾಗ ಕೋಣೆಯ ಗಾಳಿ ಹೊರ ಹೋಗುವಂತೆ ಕಿಟಕಿಗಳನ್ನು ತೆರೆದಿಡಬೇಕು. ವಿಷಾನಿಲವನ್ನು ಹೊರಸೂಸುವ ರಾಸಾಯನಿಕ ಉತ್ಪನ್ನಗಳ ಬಳಕೆ ನಿಲ್ಲಿಸಿ, ಅವುಗಳ ಬದಲಿಗೆ, ಪರಿಸರ ಸ್ನೇಹಿ ಸಾವಯವ, ಜೈವಿಕ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು. ಪ್ಲಾಸ್ಟಿಕ್ ಡಬ್ಬ, ಕವರ್ ಬಳಕೆ ನಿಲ್ಲಿಸಿ, ಮರ, ನಾರಿನಿಂದ ತಯಾರಿಸುವ ಉತ್ಪನ್ನಗಳನ್ನು ಬಳಸಬೇಕು ಎನ್ನುತ್ತಾರೆ ಪಿ.ವಿ.ಹಿರೇಮಠ್ ಅವರು.
ಮನೆಯೊಳಗೆ ಈ ಸಸ್ಯಗಳಿರಲಿ
ಮನಿ ಪ್ಲಾಂಟ್, ಅಡಕೆ ಜಾತಿಯ ಅಲಂಕಾರಿಕ ಸಸ್ಯ, ಸ್ನೇಕ್ ಪ್ಲಾಂಟ್, ಸ್ಪೆöಡರ್ ಪ್ಲಾಂಟ್ ಸೇರಿ ಹಲವಾರು ಸಸ್ಯಗಳನ್ನು ಮನೆಯ ಒಳಗೆ ಬೆಳೆಸುವುದರಿಂದ ಮನೆಯ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಬಹುದು. ಮನಿ ಪ್ಲಾಂಟ್ ಗಳನ್ನು ಬಹುತೇಕ ಎಲ್ಲ ಮನೆಗಳಲ್ಲೂ ಬೆಳೆಸುತ್ತಾರೆ. ವಿಶೇಷವೆಂದರೆ ಇವುಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುವ ಗುಣ ಹೊಂದಿವೆ. ಹೀಗಾಗಿ ಮನೆಯ ನಾಲ್ಕು ಕಡೆ ಮನಿ ಪ್ಲಾಂಟ್ ಬೆಳೆಸಿದರೆ ಆಕ್ಸಿಜನ್ ಪ್ರಮಾಣ ಹೆಚ್ಚುತ್ತದೆ. ಅಡಕೆ ಜಾತಿಯ ಅಲಂಕಾರಿಕ ಗಿಡ (ಅರೆಕಾ ಪ್ಲಾಂಟ್) ಕೂಡ ಹೆಚ್ಚಿನ ಪ್ರಮಾಣದ ಆಮ್ಲಜನಕ ಬಿಡುಗಡೆ ಮಾಡಲಿದ್ದು, ಮನೆಯ ವಿಶಾಲ ಸ್ಥಳಗಳಲ್ಲಿ ಕುಂಡ ಇರಿಸಿ ಈ ಗಿಡ ಬೆಳೆಸಬಹುದು. ಇನ್ನು ಸ್ನೇಕ್ ಪ್ಲಾಂಟ್ ರಾತ್ರಿ ಹೊತ್ತಿನಲ್ಲಿ ಆಮ್ಲಜನಕ ಉತ್ಪಾದಿಸುವ ವಿಶೇಷ ಗುಣ ಹೊಂದಿದೆ. ಹೀಗಾಗಿ ಇಂತಹ ಎರಡು ಗಿಡಗಳನ್ನು ಮಲಗುವ ಕೋಣೆಗಳಲ್ಲಿ ಬೆಳೆಸುವುದು ಸೂಕ್ತ ಎಂದು ಪಿ.ವಿ.ಹಿರೇಮಠ್ ಹೇಳುತ್ತಾರೆ.
ಇವುಗಳೊಂದಿಗೆ ಸ್ಪೆöಡರ್ ಪ್ಲಾಂಟ್, ಸ್ಪಾಟಿಫೆಲ್ಲಂ, ಆಗ್ಲೋನಿಮಾ, ಸೆಂಟೆಡ್ ಜೆರೇನಿಯಂ (ಇದನ್ನು ಬೆಳೆಸುವುದರಿಂದ ಇದರ ವಾಸನೆಯಿಂದಾಗಿ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ), ಫಿಲೋಡ್ರೆಂಡನ್ (ಮಾಸ್ಟಿಕ್ ಪ್ಲಾಂಟ್) ಸಸ್ಯಗಳನ್ನು ಮನೆಯೊಳಗೆ ಬೆಳೆಸಿದಾಗ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಅದೂ ಅಲ್ಲದೆ, ಇವೆಲ್ಲವೂ ಅಲಂಕಾರಿಕ ಸಸ್ಯಗಳಾಗಿರುವುದರಿಂದ ಮನೆಯ ಅಂದ ಕೂಡ ಹೆಚ್ಚುತ್ತದೆ.
ಆಧಾರ: ನೇಚರ್ ಫಸ್ಟ್ ಇಕೋ ವಿಲೇಜ್
Share your comments