ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಕೇವಲ 36 ರನ್ ಗೆ ಆಲೌಟ್ ಆಗಿ ತೀವ್ರ ಟೀಕೆಗೆ ಒಳಗಾದ ಇಂಡಿಯಾ ಇಂದು ಎಲ್ಲರ ಮೆಚ್ಚುಗೆ ಗಳಿಸಿದೆ.4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿತ್ತು. ಇಂದು ಇದೇ ಆಸ್ಟ್ರೇಲಿಯಾ ತಂಡದ ಬಾಲರ್ ಗಳ ಬೆವರಿಳಿಸಿ ಸರಣ ಕೈವಶಮಾಡಿಕೊಂಡಿದೆ.
ಹೌದು, ಬ್ರಿಸ್ಬೇನ್ ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್ಗಳ ಅಂತರದಲ್ಲಿ ಮಣಿಸುವ ಮೂಲಕ ಭಾರತ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ಕೈ ವಶ ಮಾಡಿಕೊಂಡಿದೆ. ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿಯನ್ನು ಭಾರತ ತಂಡ 7 ವಿಕೆಟ್ ಕಳೆದುಕೊಂಡು ಮೆಟ್ಟಿ ನಿಂತು ಗೆದ್ದು ಬೀಗಿತು.
4ನೇ ಟೆಸ್ಟ್ ಡ್ರಾ ಆಗಬಹುದು ಎಂದು ಭಾವಿಸಲಾಗಿತ್ತು. ಇಂಡಿಯಾ ಸ್ವಲ್ಪ ಎಡವಿದರೆ ಸರಣ ಸೋಲುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನು ಮೀರಿ ಆಟವಾಡಿ ಇಂಡಿಯಾ ಪಂದ್ಯ ಗೆದ್ದು ಸರಣಿ ತನ್ನ ಮಡಿಲಲ್ಲಿ ಇರಿಸಿಕೊಂಡಿದೆ.
ಅಂತಿಮ ದಿನವಾದ ಮಂಗಳವಾರ ಆರಂಭದಲ್ಲೇ ಭಾರತ ಆಘಾತ ಎದುರಿಸಿತು. ರೋಹಿತ್ ಶರ್ಮಾ ಕೇವಲ 7 ರನ್ ಗಳಿಸಿ ಔಟ್ ಆದರು. ಬಳಿಕ ಜೊತೆಗೂಡಿದ ಗಿಲ್ ಮತ್ತು ಪೂಜಾರ ಜೋಡಿ ಶತಕದ ಜೊತೆಯಾಡುವ ಮೂಲಕ ಭಾರತದ ಇನ್ನಿಂಗ್ಸ್ ಗೆ ಬಲ ತಂದರು. ಈ ಹಂತದಲ್ಲಿ 91 ರನ್ ಗಳಿಸಿ ಶತಕದಂಚಿನಲ್ಲಿದ್ದ ಗಿಲ್ ಲೈಯಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ರಹಾನೆ (24 ರನ್), ಪೂಜಾರ (56 ರನ್), ಮಯಾಂಕ್ ಅಗರ್ವಾಲ್ (9 ರನ್) ಔಟ್ ಆದರು. ಈ ವೇಳೆ ಪಂದ್ಯ ಡ್ರಾ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕ್ರೀಸ್ ಗೆ ಬಂದ ರಿಷಬ್ ಪಂತ್ 138 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು. ಪಂತ್ ಗೆ ವಾಷಿಂಗ್ಟನ್ ಸುಂದರ್ (22 ರನ್) ಅಂತಿಮ ಹಂತದಲ್ಲಿ ಉತ್ತಮ ಸಾಥ್ ನೀಡಿದರು.
ಪಂದ್ಯದ ಅಂತಿಮ ದಿನದಾದಲ್ಲಿ 324 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ ಇನ್ನೆರಡು ಓವರ್ಗಳು ಬಾಕಿ ಇರುವಾಗಲೇ 3 ವಿಕೆಟ್ಗಳ ರೋಚಕ ಜಯ ದಾಖಲಿಸಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು. ಈ ಮೂಲಕ ಸತತ ಎರಡು ಬಾರಿ ಕಾಂಗರೂ ನಾಡಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊತ್ತ ಮೊದಲ ತಂಡವೆಂಬ ಇತಿಹಾಸ ಬರೆದಿದೆ.
2018-19ರಲ್ಲಿ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ 2-1 ಅಂತರದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಇದೀಗ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರ ಸೇವೆ ಇಲ್ಲದೇ ಇದ್ದರೂ ಕೂಡ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಸರಣಿ ಗೆಲುವನ್ನು ಮರುಕಳಿಸಿ ಆಸೀಸ್ಗೆ ಮರ್ಮಾಘಾತ ನೀಡಿದೆ.
Share your comments