ಕಲಬುರಗಿ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿ ಕೃಷಿ ಬಳಕೆ ನಿಟ್ಟಿನಲ್ಲಿ ಇಸ್ರೇಲ್ ದೇಶದ ದಕ್ಷಿಣ ಭಾರತದ ಕಾನ್ಸುಲೇಟ್ ಜನರಲ್ ಜೊನಾಥನ್ ಜಡ್ಕಾ ಅವರನ್ನು ತಾವು ಸಂಪರ್ಕಿಸಿದ್ದು, ಶೀಘ್ರದಲ್ಲಿಯೆ ಅವರ ನೇತೃತ್ವದ ತಂಡ ಕಲಬುರಗಿಗೆ ಬಂದು ಅಧ್ಯಯನ ಮಾಡಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್. ನಿರಾಣಿ ಅವರು ತಿಳಿಸಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿರುವ ಹಾನಿ ಮತ್ತು ಕೈಗೊಂಡ ಪರಿಹಾರ ಕ್ರಮಗಳು ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕಲಬುರಗಿ ವಿಜನ್-2050 ಭಾಗವಾಗಿ ಕಲಬುರಗಿ ಜಿಲ್ಲೆಯ ಮಣ್ಣಿನ ಗುಣಮಟ್ಟ, ಇಲ್ಲಿನ ಹವಾಗುಣ ಮತ್ತು ನೀರಿನ ಲಭ್ಯತೆ ಕುರಿತು ಅಧ್ಯöಯನ ಮಾಡಿ ಅಗತ್ಯ ಸಲಹೆ ನೀಡಲು ಕಾನ್ಸುಲೇಟ್ ಜನರಲ್ ಜೊನಾಥನ್ ಜಡ್ಕಾ ಅವರನ್ನು ಸಂಪರ್ಕಿಸಿದಾಗ ಅವರು ಹಿಂದುಳಿದ ಈ ಪ್ರದೇಶಕ್ಕೆ ತಾವೇ ಖುದ್ದಾಗಿ ಬರಲು ಉತ್ಸುಕರಾಗಿದ್ದಾರೆ. ಹೀಗಾಗಿ ಅವರ ಪ್ರವಾಸದ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅವರೊಂದಿಗೆ ಇಡೀ ಜಿಲ್ಲೆ ಸಂಚರಿಸಿ ಅಧ್ಯಯನಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಮುರುಗೇಶ ನಿರಾಣಿ ನಿರ್ದೇಶಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ 2 ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮತ್ತು ನಗರ ಪ್ರದೇಶದಲ್ಲಿ 1 ಲಕ್ಷ ಸೇರಿದಂತೆ ರಾಜ್ಯದಾದ್ಯಂತ ವಿವಿಧ ವಸತಿ ಯೋಜನೆ ಅಡಿಯಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿಸಿ ಸೂರಿಲ್ಲದವರಿಗೆ ಸೂರು ಕಲ್ಪಿಸುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹದಿಂದ ಬಾಧಿತ ಗ್ರಾಮಗಳ ಗ್ರಾಮಸ್ಥರಿಗೆ ಶಾಶ್ವತ ವಸತಿ ಕಲ್ಪಿಸಲು ಕೂಡಲೇ ಸರ್ವೆ ಮಾಡಿ ಪಟ್ಟಿ ನೀಡಬೇಕು ಎಂದರು.
ಸಭೆಯ ಚರ್ಚೆಯಲ್ಲಿ ಭಾಗವಹಿಸಿದ ಶಾಸಕ ಎಂ.ವೈ.ಪಾಟೀಲ ಅವರು ಮಾತನಾಡಿ ಕಲಬುರಗಿ ಹೈಕೋರ್ಟ್ನಿಂದ ಹೂಸೂರು ಕಲ್ಪಿಸುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆ ಮೇಲೆ ಮಳೆ ನೀರು ನಿಂತು ಕೆಟ್ಟು ಹೋಗಿದ್ದು, ಕೂಡಲೆ ಸುಧಾರಣೆ ಮಾಡಬೇಕು ಎಂದು ಸಚಿವರಲ್ಲಿ ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವರು ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೆ ಪರಿಶೀಲಿಸಿ ಅಂದಾಜು ಪಟ್ಟಿ ಸಲ್ಲಿಸಬೇಕು ಎಂದರು.
ಮುಂಗಾರು ಚುರುಕುಗೊಂಡ ಕಾರಣ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರಸಗೊಬ್ಬರ ಕೊರತೆಯಾದರೆ ನನ್ನ ಗಮನಕ್ಕೆ ತನ್ನಿ ಎಂದು ಸಚಿವರು ಜಂಟಿ ಕೃಷಿ ನಿದೇಶಕರಿಗೆ ಸೂಚಿಸಿದರು.
ಕಲಬುರಗಿ ಜಿಲ್ಲೆಗೆ ಕೇಂದ್ರ ಸರಕಾರ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಮಂಜೂರು ಮಾಡಿದೆ. ಇದಕ್ಕೆ ಪೂರಕವಾಗಿ ತುರ್ತಾಗಿ 1000 ಎಕರೆ ಜಮೀನು ಒತ್ತುವರಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದಿಮದ ನಿರ್ದೇಶನ ಬಂದಿದೆ ಎಂದು ಜಿಲ್ಲಾಧಿಕಾರಿ ಜ್ಯೋತ್ಸ್ನಾ ಅವರು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆಸಿದ ಸಚಿವರು, ಕೇವಲ 1000 ಎಕರೆ ಒತ್ತುವರಿ ಮಾಡಿಕೊಳ್ಳುವುದು ಬೇಡ. ಬದಲಿಗೆ ಒಂದೇ ಕಡೆ 5000 ಎಕರೆ ಒತ್ತುವರಿ ಮಾಡಿಕೊಳ್ಳುವುದರಿಂದ, ಒಂದೇ ಕಡೆ ಬೇರೆ ಬೇರೆ ಉದ್ಯಮಗಳನ್ನು ಆರಂಭಿಸಬಹುದು. ಜೊತೆಗೆ, ಎಲ್ಲ ರೀತಿಯ ಮೂಲ ಸೌಲಭ್ಯ ಕಲ್ಪಿಸಿ “ಇಂಡಸ್ಟಿçಯಲ್ ಹಬ್” ಮಾಡಿದರೆ ಇನ್ನೂ ಒಳ್ಳೆಯದು ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.
ಆಗಸ್ಟ್ನಲ್ಲಿ ವಿಜನ್-2050 ಕಾರ್ಯಾಗಾರ: ಕಲಬುರಗಿ ವಿಜನ್-2050 ಕುರಿತಂತೆ ವಿವಿಧ ಕ್ಷೇತ್ರ ತಜ್ಞರನ್ನು ಆಹ್ವಾನಿಸಿ ಸಲಹೆ ಪಡೆಯಲು ಒಂದು ದಿನದ ಕಾರ್ಯಾಗಾರ ಆಗಸ್ಟ್ ಮಾಹೆಯಲ್ಲಿ ಏರ್ಪಡಿಸಲಾಗುವುದು. ವಿಜನ್ ಡಾಕ್ಯೂಮೆಂಟ್ ಸಿದ್ಧಪಡಿಕೆಗೆ ಗ್ಲೋಬಲ್ ಕನ್ಸಲಟೆಂಟ್ ಗುರುತಿಸಿ ಅವರ ಮುಖೇನ ಡಿ.ಪಿ.ಆರ್. ಸಿದ್ಧಪಡಿಸುವುದು ಮತ್ತು ಅದಕ್ಕನುಗುಣವಾಗಿ ಹಣಕಾಸು ಹೊಂದಾಣಿಕೆಗೂ ಚಿಂತನೆ ನಡೆಸಲಾಗುವುದು ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಹೂಡಿಕೆ, ರಸ್ತೆ ಸುಧಾರಣೆ, ಉದ್ಯೋಗ ಸೃಷ್ಠಿ, ಶಿಕ್ಷಣ ಕ್ಷೇತ್ರ ಸುಧಾರಣೆ, ಸರಕು ಸಾಗಣಿಕೆಗೆ ಬ್ರಾಡ್ ಗೇಜ್ ರೈಲು ಓಡಾಟ ಹೀಗೆ ನಾನಾ ವಿಷಯಗಳನ್ನು ಹಂತ-ಹಂತವಾಗಿ ಅಭಿವೃದ್ಧಿಗೆ ಪಡಿಸುವ ಗುರಿ ವಿಜನ್-2050 ಹೊಂದಿದೆ ಎಂದು ಕನಸಿನ ಕಲಬುರಗಿ ಕುರಿತು ಸಚಿವ ಮುರುಗೇಶ ನಿರಾಣಿ ವಿವರಿಸಿದರು.
Share your comments