ರಾಜ್ಯದಲ್ಲಿ ಶಾಲೆ ಕಾಲೇಜು ಆರಂಭಕ್ಕೆ ಕೊನೆಗೂ ರಾಜ್ಯ ಸರ್ಕಾರ ನಿರ್ಧಾರಕೈಗೊಂಡಿದೆ. ಜನವರಿ 1 ರಿಂದ 10ಮತ್ತು 12ನೇ ತರಗತಿ ಆರಂಭಿಸಲು ಹಸಿರು ನಿಶಾನೆ ದೊರೆತಿದೆ.
ಕೋವಿಡ್ ಲಾಕ್ಡೌನ್ ಕಾರಣ ಕಳೆದ ಮಾರ್ಚ್ನಲ್ಲಿ ಶಾಲಾ– ಕಾಲೇಜುಗಳನ್ನು ಮುಚ್ಚಲಾಗಿತ್ತು. ಶಾಲೆಗಳ ಪುನರಾರಂಭದ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವರು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ರಾಜ್ಯ ಕೋವಿಡ್–19 ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ’ ಎಂದು ಹೇಳಿದರು.
ಶಾಲಾ ತರಗತಿ ಹಾಗೂ ವಿದ್ಯಾಗಮ ಕಾರ್ಯಕ್ರಮ ಹೇಗೆ ನಡೆಯಬೇಕು ಎಂಬುದಕ್ಕೆ ಪ್ರಮಾಣಿತ ಕಾರ್ಯಚರಣಾ ವಿಧಾನ (ಎಸ್ಓಪಿ) ವನ್ನು ಬಿಡುಗಡೆ ಮಾಡಿದೆ.
ಈ ತರಗತಿಗಳನ್ನು ಪ್ರಾರಂಭಿಸಿ 15 ದಿನಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಇತರ ತರಗತಿಗಳನ್ನು ತೆರೆಯುವ ಕುರಿತು ನಿರ್ಧರಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ.ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ -19 ಲಕ್ಷಣಗಳಿಲ್ಲ ಎಂದು ದೃಢೀಕರಿಸಬೇಕು.
ಶಾಲೆಗಳಲ್ಲೇ ವಿದ್ಯಾಗಮ
6 ರಿಂದ 9 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳನ್ನು ಜ.1 ರಿಂದ ಶಾಲೆಗಳಲ್ಲೇ ಆರಂಭಿಸಲಾಗುವುದು. 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದ ರೀದತಿಯಲ್ಲಿ ವಿಶೇಷ ಕ್ರಮಕೈಗೊಳ್ಳುವ ಕುರಿತು ಚಿಂತನೆ ನಡೆದಿದೆ. ಅದು ಪರೀಕ್ಷೆ ಇಲ್ಲದೆಯೇ ತೇರ್ಗಡೆಯೇ ಎಂದು ಈಗಲೇ ಹೇಳುವಂತಿಲ್ಲ. ಜನವರಿ 15 ರ ಬಳಿಕವೇ ಮುಂದಿನ ತೀರ್ಮಾನ ತಿಳಿಯಲಿದೆ ಎಂದರು.
ಜ.14 ರಿಂದ 1 ರಿಂದ 5 ನೇ ತರಗತಿಗಳಿಗೂ ವಿದ್ಯಾಗಮ ವಿಸ್ತರಿಸಲಾಗುತ್ತದೆ. ಖಾಸಗಿ ಶಾಲೆಗಳಲ್ಲೂ ವಿದ್ಯಾಗಮ ಆರಂಭಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಶಾಲಾರಂಭಕ್ಕೂ ಮೊದಲು ಸಭೆ
ತರಗತಿಗಳಲ್ಲಿ ಶಿಕ್ಷಕರು ಕೋವಿಡ್ ಲಕ್ಷಣಗಳ ಕುರಿತು ವಿದ್ಯಾರ್ಥಿಗಳನ್ನು ಪ್ರತಿದಿನವೂ ಪರೀಕ್ಷೆಗೆ ಒಳಪಡಿಸಬೇಕು. ಕೋವಿಡ್ ಲಕ್ಷಣಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಯನ್ನು ಪರೀಕ್ಷೆ ಮತ್ತು ಸಮಾಲೋಚನೆಗೆ ಸಮೀಪದ ಆಸ್ಪತ್ರೆಗೆ ಕಳಿಸಬೇಕು. ಶಾಲಾರಂಭಕ್ಕೂ ಮೊದಲು ಡಿಸೆಂಬರ್ ಮಾಸದಲ್ಲಿ ಶಾಲಾಡಳಿತಮಂಡಳಿಗಳು, ಶಾಲಾ ಮೇಲುಸ್ತುವಾರಿ ಸಮಿತಿಗಳು, ಪೋಷಕು ಸೇರಿದಂತೆ ಶೈಕ್ಷಣಿಕ ಪಾಲುದಾರರ ಸಭೆ ನಡೆಸಬೇಕು.
Share your comments