KDP meeting : ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಡಿಪಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಭೆಯ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
ಇಲಾಖೆಗಳ ನಡುವೆ ಹೊಂದಾಣಿಕೆ ಇರಬೇಕು. ಬಹಳಷ್ಟು ಇಲಾಖೆಗಳ ನಡುವೆ ಅಂತರ್ ಸಂಬಂಧ ಇರುತ್ತದೆ. ಹೀಗಾಗಿ ಪರಸ್ಪರ ಹೊಂದಾಣಿಕೆಯಿಂದ ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ನಡುವೆ ಹೊಂದಾಣಿಕೆಯಿಂದ ತೀರ್ಮಾನ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು.
ನಾನು ಕೆಡಿಪಿ ಸಭೆ ಕರೆದಾಗ ರಾಜ್ಯ ಮಟ್ಟದ ಅಧಿಕಾರಿಗಳೂ ಸಭೆಗೆ ಬರಬೇಕು. ಸಭೆಗೆ ಆಹ್ವಾನ ಹೋದರೂ ಬರದಿದ್ದರೆ ಅಂತಹ ಅಧಿಕಾರಿಗಳ ಮೇಳೆ ಕ್ರಮ ಕೈಗೊಳ್ಳಲಾಗುವುದು.
ಅಧಿಕಾರಿಗಳು ಪ್ರೋಟೋಕಾಲ್ ಪಾಲಿಸಬೇಕು. ಅಧಿಕಾರಿಗಳೇ ರಾಜಕೀಯ ಮಾಡಬಾರದು. ಚುನಾಯಿತ ಪ್ರತಿನಿಧಿಗಳು ಯಾವುದೇ ಪಕ್ಷದವರಾಗಿದ್ದರೂ ಸರ್ಕಾರದ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪ್ರೋಟೋಕಾಲ್ ಪಾಲಿಸಬೇಕು.
ಕೃಷಿ ಸಂಬಂಧಿ ನೀಡಿದ ಸೂಚನೆಗಳು:
ರೈತರಿಗೆ ಒಮ್ಮೆ ಬೀಜಗಳನ್ನು ಒದಗಿಸಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೃಷಿ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳಬಾರದು. ಯಾವುದೇ ಕಾರಣದಿಂದ ಬೆಳೆ ನಷ್ಟವಾದರೆ ಮತ್ತೊಂದು ಸುತ್ತು ಬೀಜ ವಿತರಣೆ ಮಾಡಬೇಕು.
ಪರ್ಯಾಯ ಬೆಳೆ ಬೆಳೆಯಲು ಅಗತ್ಯವಾದ ತಿಳಿವಳಿಕೆ ಮತ್ತು ಸವಲತ್ತುಗಳನ್ನು ಒದಗಿಸಬೇಕು. ಇಡೀ ಜಿಲ್ಲೆಯಲ್ಲಿ ಎಲ್ಲೇ ಬೀಜ-ಗೊಬ್ಬರದ ಕೊರತೆ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಳ್ಳಿಗಳಿಗೆ ಹೋಗಿ ರೈತರ ಸಮಸ್ಯೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳಬೇಕು. ಬಳಿಕ ಸಮಸ್ಯೆ ಪರಿಹಾರ ಮಾಡಬೇಕು. ರೈತರ ಜತೆ ಗೌರವಯುತವಾಗಿ ನಡೆದುಕೊಳ್ಳಬೇಕು. ಕಚೇರಿಗೆ ಬರುವ ರೈತರ ಜತೆ ಆರೋಗ್ಯಕರವಾದ ನಡವಳಿಕೆ ಇಟ್ಟುಕೊಳ್ಳಬೇಕು.
ರೈತ ಸಂಪರ್ಕ ಕೇಂದ್ರಗಳು ಇರುವುದೇ ರೈತರಿಗೆ ಮಾಹಿತಿ ಕೊಟ್ಟು ಸಹಕಾರ ಕೊಡುವುದಕ್ಕೆ. ರೈತರು ತಮ್ಮ ಅನುಭವದಿಂದಲೇ ಕೃಷಿಯಲ್ಲಿ ಪಳಗಿರುತ್ತಾರೆ. ಅಧಿಕಾರಿಗಳಿಗಿಂತ ಹೆಚ್ಚು ತಿಳಿವಳಿಕೆ ಹೊಂದಿದ್ದಾರೆ. ಆದ್ದರಿಂದ ರೈತರ ಮಾತು ಕೇಳಿಸಿಕೊಳ್ಳಬೇಕು, ಫೀಲ್ಡ್ ವಿಸಿಟ್ ಮಾಡಿ, ಡೈರಿ ಬರೆಯುವುದನ್ನು ರೂಢಿಕೊಳ್ಳಬೇಕು ಎಂದು ತಿಳಿಹೇಳಿದರು.
ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಅಧಿಕಾರಿಗಳು ಅವರಿಗೆ ಮಾನವೀಯವಾಗಿ ಸ್ಪಂದಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.
ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಉದಾರವಾಗಿ ವರ್ತಿಸಿ. ಸರ್ಕಾರ ಹಣ ಕೊಡತ್ತೆ. ತಡ ಮಾಡದೆ ಪರಿಹಾರ ಅವರಿಗೆ ತಲುಪಬೇಕು. ಅನಗತ್ಯ ತಡ ಮಾಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಬೆಲೆ ನಷ್ಟ ಮತ್ತು ರೈತರ ಆತ್ಮಹತ್ಯೆಗಳ ಕುರಿತಾಗಿ ವಾಸ್ತವ ಸಂಗತಿಗಳು ಮತ್ತು ಕಾರಣಗಳನ್ನು ಪತ್ತೆ ಹಚ್ಚಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆತ್ಮಹತ್ಯೆಗಳಾಗಿದ್ದರೆ ಅದನ್ನೂ ನಮೂದಿಸಬೇಕು.
ಆತ್ಮಹತ್ಯೆ ಹಿಂದಿನ ನೈಜ ಸಂಗತಿಯನ್ನು ಸ್ಪಷ್ಟವಾಗಿ ಗುರುತಿಸಿ, ದಾಖಲಿಸಬೇಕು ಎನ್ನುವ ಸೂಚನೆ ನೀಡಲಾಯಿತು.
ನೀರಾವರಿ ಇಲಾಖೆ:
ನಮ್ಮ ರೈತರಿಗೆ ಅನ್ಯಾಯ ಮಾಡಿ ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಕೊಡಬೇಕು ಎನ್ನುವ ಸೂಚನೆ ಯಾವ ಆದೇಶದಲ್ಲೂ ಇಲ್ಲ. ನಮ್ಮ ಬೆಳೆ ಮತ್ತು ಕುಡಿಯುವ ನೀರಿನ ರಕ್ಷಣೆ ಮಾಡಿಕೊಳ್ಳಬೇಕು. ಸಂಕಷ್ಟ ಪರಿಹಾರ ಸೂತ್ರ ಇನ್ನೂ ಸಿದ್ದಗೊಳ್ಳಬೇಕಿದೆ.
ಕುಡಿಯುವ ನೀರಿಗೆ ಮತ್ತು ಕೃಷಿಗೆ ಅಗತ್ಯವಾದ ನೀರಿನ ಪ್ರಮಾಣ ಎಷ್ಟು? ನಮ್ಮಲ್ಲಿ ಸಂಗ್ರಹದಲ್ಲಿರುವ ನೀರಿನ ಪ್ರಮಾಣ ಎಷ್ಟು ಎನ್ನುವ ಕುರಿತಾಗಿ ವೈಜ್ಞಾನಿಕ ತಿಳಿವಳಿಕೆ ಮತ್ತು ಮಾಹಿತಿ ಸಿದ್ದವಿಟ್ಟುಕೊಂಡು ನಮ್ಮ ರೈತರ ಹಿತ ಕಾಪಾಡುವುದನ್ನೇ ಮೊದಲ ಆಧ್ಯತೆಯನ್ನಾಗಿ ಕ್ರಮ ವಹಿಸಲು ಸೂಚಿಸಲಾಯಿತು.
ಎಂಜಿನಿಯರ್ಗಳು ನಾಲೆ ಮೇಲೆ ತಿರುಗಾಡಿ ನೀರು ಟೈಲ್ ಎಂಡ್ ವರೆಗೂ ತಲುಪುತ್ತಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ನಾಲೆಗೆ ನೀರು ಬಿಡುವ ಮೊದಲು ಹೂಳು ತೆಗೆಯಬೇಕು. ನೀರು ಬಿಟ್ಟ ಬಳಿಕ ಹೂಳು ತೆಗೆಯಲು ಹೋಗಬಾರದು.
ನಾಲೆಗಳಿಗೆ ನೀರು ಬಿಡುವ ಮೊದಲೇ ಮೋಟಾರು ಪಂಪ್ಗಳನ್ನು ರಿಪೇರಿ ಮಾಡಿಸಬೇಕು
ಪಶುಪಾಲನಾ ಇಲಾಖೆ:
ಕುರಿ ಮತ್ತು ಹಸು ಹಾಗೂ ಎತ್ತುಗಳು ಮೃತಪಟ್ಟಾಗ ಪರಿಹಾರ ಒದಗಿಸಬೇಕು. ಅಗತ್ಯ ಹಣವನ್ನು ಸರ್ಕಾರಕ್ಕೆ ಕೇಳಿ.
ರಾಸುಗಳಿಗೆ ಅಗತ್ಯ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಸಂಭಾವ್ಯ ಕಾಯಿಲೆಗಳಿಗೆ ಔಷಧಿ ರೆಡಿ ಇಟ್ಟುಕೊಂಡಿರಬೇಕು.
ಪಶುಪಾಲಕರಿಗೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ನಂದಿನಿ ಹಾಲಿನ ದರವನ್ನು ೩ ರೂ ಹೆಚ್ಚಿಸಿದೆವು. ಈ ೩ ರೂ ಪೂರ್ತಿಯಾಗಿ ನೇರ ರೈತರಿಗೆ ತಲುಪಬೇಕು.
ರೈತರಿಗೆ ೩ರೂ ಹೆಚ್ಚುವರಿವಾಗಿ ಸಿಕ್ಕ ಮೇಲೆ ನಂದಿನಿಗೆ ಬರುವ ಹಾಲಿನ ಪ್ರಮಾಣ ಹೆಚ್ಚಾಗಿದೆ. ಈಗ ಹಾಲು ಒಕ್ಕೂಟಗಳು ಲಾಭ ಮಾಡಿಕೊಳ್ಳಬೇಕು, ಆ ಲಾಭ ರೈತರಿಗೆ ಸೇರಬೇಕು ಎಂದು ಸೂಚಿಸಿದರು.
ಹಾಲು ಒಕ್ಕೂಟಗಳಿಗೆ ಮನಸೋ ಇಚ್ಚೆ ನೇಮಕ ಮಾಡಿಕೊಳ್ಳಬಾರದು. ಹೊರ ಗುತ್ತಿಗೆ ಎನ್ನುವುದನ್ನು ದಂಧೆ ಮಾಡಿಕೊಳ್ಳಬಾರದು. ಮೀಸಲಾತಿ ಮಾನದಂಡದಲ್ಲಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
Share your comments