ಪ್ರತಿ ಟನ್ಗೆ 15 ಸಾವಿರ ದರದಲ್ಲಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕೆಎಂಎಫ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯ ಬಳಿಕ ಮಾತನಾಡಿದ ಅವರು,ಟನ್ಗೆ 15 ಸಾವಿರ ರೂಪಾಯಿಗಳಂತೆ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಿರ್ಧರಿಸಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆದೇಶದ ಮೇರೆಗೆ ಮೆಕ್ಕಜೋಳ ಖರೀದಿಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಂದಾಜು 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಯೋಗ್ಯ ದರ ಇಲ್ಲದೆ ಪರದಾಡುತ್ತಿರುವ ಮೆಕ್ಕೆಜೋಳ ಬೆಳೆ ರೈತರ ಅನುಕೂಲಕ್ಕಾಗಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವತಿಯಿಂದ ಮೆಕ್ಕೆಜೋಳ ಖರೀದಿಸಲು ತೀರ್ಮಾನಿಸಲಾಗಿದೆ. ಬಾಗಲಕೋಟೆ, ಬೆಳೆಗಾವಿ, ಹಾವೇರಿ, ದಾವಣಗೇರೆ, ಧಾರವಾಡ, ಗದಗ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಮುಖ್ಯ ಬೆಳೆಯಾಗಿ ಮೆಕ್ಕೆಜೋಳವನ್ನೇ ಬೆಳೆಯಲಾಗುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ಸಹ ಡಿಸೆಂಬರ್-ಜನವರಿ ಅಂತ್ಯದವರೆಗೆ ಬೇಕಾಗುವ ಪ್ರಮಾಣದ ಮೆಕ್ಕೆಜೋಳದ ಖರೀದಿಗೆ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ದರ ಕುಸಿತ ಉಂಟಾದಾಗ ಕೆಎಂಎಫ್ ರೈತರ ನೆರವಿಗೆ ಧಾವಿಸಿ ಕಳೆದ ಮೇ ಮತ್ತು ಜೂನ್ನಲ್ಲಿ 51,259 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲಾಗಿತ್ತು. ಕೋವಿಡ್ ಮುಂದುವರಿದಿರುವುದರಿಂದ ಪುನಃ ಮೆಕ್ಕೆಜೋಳವನ್ನು ರೈತರಿಂದಲೇ ನೇರವಾಗಿ ಖರೀದಿಸಲು ಕೆಎಂಎಫ್ ತೀರ್ಮಾನಿಸಿದೆ ಎಂದರು.
ಕೆಎಂಎಫ್ನ 5 ಪಶು ಆಹಾರ ಘಟಕಗಳಿಂದ ವಾರ್ಷಿಕ 6.5ರಿಂದ 7 ಲಕ್ಷ ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದಿಸಲಾಗುತ್ತಿದೆ. ಪಶು ಆಹಾರ ಉತ್ಪಾದನೆಗೆ ವಾರ್ಷಿಕ ಸರಾಸರಿ 2.20 ಲಕ್ಷ ಮೆಟ್ರಿಕ್ ಟನ್ಗಳಷ್ಟು ಮೆಕ್ಕೆಜೋಳದ ಅವಶ್ಯಕತೆ ಇದೆ. ನಂದಿನಿ ಗೋಲ್ಡ್ ಪಶು ಆಹಾರದಲ್ಲಿ ಶಕ್ತಿಯ ಪ್ರಮಾಣ ಹೆಚ್ಚಿಸಲು ಶೇ. 35ರಷ್ಟು ಮೆಕ್ಕೆಜೋಳ ಉಪಯೋಗಿಸಲಾಗುತ್ತಿದೆ ಎಂದರು.
Share your comments