ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ನೌಕರರು ಏಪ್ರೀಲ್ 7 ರಿಂದ ಮುಷ್ಕರ ಹಮ್ಮಿಕೊಂಡಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ನಾಳೆಯಿಂದ ಮುಷ್ಕರ ನಡೆಸುತ್ತಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆ ನೌಕರರ 6ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡಲು ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಏಪ್ರೀಲ್ 7 ರಿಂದ ಅನಿರ್ದಿಷ್ಠಾವಧಿ ಮುಷ್ಕರ ನಡೆಸುವುದು ಬಹುತೇಕ ನಿಶ್ಚಿತವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಂಗಳವಾರ ಸಂಜೆಯಿಂದಲೇ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಓಡಾಟಕ್ಕೆ ಬಸ್‌ಗಳನ್ನು ನೆಚ್ಚಿಕೊಂಡಿರುವ ಸಾರ್ವಜನಿಕರು ತೊಂದರೆಗೆ ಸಿಲುಕಲಿದ್ದಾರೆ.
ಪರ್ಯಾಯ ವ್ಯವಸ್ಥೆಗೆ ಮುಂದಾದ ಸರ್ಕಾರ
ಸರ್ಕಾರಿ ಬಸ್ಗಳ ಬದಲಿಗೆ ಖಾಸಗಿ ಬಸ್ ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಕೆಎಸ್.ಆರ್.ಟಿಸಿ ಮುಖ್ಯ ಸಂಚಾರಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಮತ್ತೊಂದು ಕಡೆ ಸಾರಿಗೆ ನೌಕರರ ಪ್ರತಿಭಟನೆಯನ್ನು ನಿಯಂತ್ರಿಸಲು 144 ಸೆಕ್ಷನ್ ಜಾರಿ ಮಾಡಲಾಗಿದೆ.
ಸಾರಿಗೆ ಸಂಸ್ಥೆಯ ನೌಕರರ ೬ನೇ ವೇತನ ಆಯೋಗದ ಬೇಡಿಕೆ ಈಡೇರದಿದ್ದರೆ ಏಪ್ರೀಲ್ 7 ರಿಂದ ಅನಿರ್ದಿಷ್ಟಾವದಿ ಮುಷ್ಕರ ನಡೆಸುವುದು ನಿಶ್ಚಿತ ಮುಷ್ಕರವನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಸಾರಿಗೆ ನೌಕರರಿಗೆ ಶೇ. 8 ರಷ್ಟು ವತನ ಏರಿಸುವ ಸರ್ಕಾರದ ನಿರ್ಧಾರ ತಮಗೆ ಒಪ್ಪಿಗೆ ಇಲ್ಲ. 6ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡುವ ತೀರ್ಮಾನವಾಗಬೇಕು ಇಲ್ಲದಿದ್ದರೆ ಅರ್ನಿದಿಷ್ಟಾವದಿ ಮುಷ್ಕರ ನಡೆಸುತ್ತೇವೆ ಎಂದರು.
ಸರ್ಕಾರದ ಎಸ್ಮಾ ಪ್ರಯೋಗಕ್ಕೂ ನಾವು ಜಗ್ಗುವುದಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಬೇಕು ಅಲ್ಲಿಯವರೆಗೂ ಹೋರಾಟ ನಿಲ್ಲದು. ನಮ್ಮ ಪ್ರತಭಟನೆ ಶಾಂತಿಯುತವಾಗಿರುತ್ತದೆ. ಜೈಲಿಗೆ ಹೋಗಲು ಸಿದ್ಧ ಎಂದು ಅವರು ಹೇಳಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದು, ನಾಳೆಯಿಂದ ಸಂಪೂರ್ಣವಾಗಿ ಬಸ್‌ಗಳ ಸಂಚಾರ ಸ್ತಬ್ಧವಾಗುವ ಸಾಧ್ಯತೆಗಳಿವೆ.
ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ನಾಳೆಯಿಂದ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಮುಂದಾಗಿದ್ದು ಇಂದು ಸಂಜೆಯಿಂದಲೇ ಮುಷ್ಕರದ ಬಿಸಿ ತಟ್ಟಲಿದ್ದು, ಸಂಜೆಯ ನಂತರ ಬಹುತೇಕ ಸಾರಿಗೆ ಬಸ್‌ಗಳ ಸಂಚಾರ ಏರುಪೇರಾಗಲಿದೆ. ಹಾಗಾಗಿ ಬಸ್‌ಗಳನ್ನೇ ಅವಲಂಭಿಸಿರುವ ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳಿವೆ.
ಸಾರಿಗೆ ನೌಕರರ ಮುಷ್ಕರದಿಂದ ಬೆಂಗಳೂರಿನಲ್ಲಿ ಪ್ರತಿನಿತ್ಯ ಸಂಚರಿಸುವ ಆರು ಸಾವಿರ ಬಸ್‌ಗಳು ಸೇರಿದಂತೆ ರಾಜ್ಯಾದ್ಯಂತ ಪ್ರತಿನಿತ್ಯ ಸಂಚರಿಸುವ 20 ಸಾವಿರ ಬಸ್‌ಗಳ ಓಡಾಟ ಸ್ತಬ್ದವಾಗಲಿದ್ದು, ನಿತ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಓಡಾಡುವ ಒಂದು ಕೋಟಿಗೂ ಹೆಚ್ಚು ಜನ ತೊಂದರೆಗೆ ಸಿಲುಕಲಿದ್ದಾರೆ
ಸಾರಿಗೆ ನೌಕರರ ಮುಷ್ಕರ: ಬುಧವಾರ 5 ನಿಮಿಷಕ್ಕೊಂದು ಮೆಟ್ರೋ ರೈಲು ವ್ಯವಸ್ಥೆ!
ಸಾರಿಗೆ ನೌಕರರು ಬುಧವಾರ (ಏ.7) ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಧ್ಯರಾತ್ರಿಯವರೆಗೂ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಮೆಟ್ರೋ ಸಂಚಾರ ನಡುವಿನ ಅವಧಿಯನ್ನೂ ಹೆಚ್ಚಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ರೈಲಿನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೆಟ್ರೋ ಓಡಾಟ ಇರಲಿದೆ. ಇನ್ನು ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ರೈಲು ಓಡಾಟಕ್ಕೂ ಅವಕಾಶ ಕೊಡುವಂತೆ ಮನವಿ ಮಾಡಲಾಗಿದೆ.
Share your comments