1. ಸುದ್ದಿಗಳು

ಸಾಲ ಪಾವತಿಸದಿದ್ದರೂ ರೈತರ ಆಸ್ತಿ ಜಪ್ತಿ ಮಾಡದಂತೆ ಕಾನೂನು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Hitesh
Hitesh
Chief Minister Basavaraja Bommai

ರೈತರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಇದರ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಇದನ್ನೂ ಓದಿರಿ: EPF Interest Money: ನೌಕರರಿಗೆ ಸಿಹಿಸುದ್ದಿ- PF ಖಾತೆಗಳಿಗೆ ಬಡ್ಡಿ ಹಣ ವರ್ಗಾವಣೆ! ನಿಮ್ಮ ಬ್ಯಾಲೆನ್ಸ್‌ ಚೆಕ್‌ ಮಾಡಿ

ರೈತರು ಸಾಲ ಮರುಪಾವತಿ ಮಾಡುವುದನ್ನು ವಿಳಂಬ ಮಾಡುವ ಸಂದರ್ಭದಲ್ಲಿ ಅವರ ಆಸ್ತಿ, ಚಿನ್ನಾಭರಣ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಜಪ್ತಿ ಮಾಡದಂತೆ ನಿರ್ಬಂಧ ವಿಧಿಸುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರಗತಿಪರ ಕೃಷಿಕರಿಗೆ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

ಈಗಾಗಲೇ ರೈತರ ಆಸ್ತಿ ಜಪ್ತಿ ಮತ್ತು ಹರಾಜು ಕ್ರಮಕ್ಕೆ ಮುಂದಾಗದಂತೆ ಬ್ಯಾಂಕ್‌ನ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. 

ಸಹಕಾರ ಸಂಘಗಳು, ಬ್ಯಾಂಕ್‌ಗಳಿಗೆ ರೈತರು ಸಾಲ ಮರು ಪಾವತಿಸದಿದ್ದರೆ ಆಸ್ತಿ ಜಪ್ತಿ ಮಾಡುವಂತಿಲ್ಲ.

ಈ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗುವುದು. ಕೃಷಿ ಚಟುವಟಿಕೆಗೆ ಸಹಕಾರ ಸಂಘಗಳು, ಬ್ಯಾಂಕ್‌ಗಳಿಂದ ರೈತರು ಸಾಲ ಪಡೆದು ಕೆಲವೊಮ್ಮೆ ಮರು ಪಾವತಿ ಮಾಡಲು ಆಗುವುದಿಲ್ಲ.

ಇದನ್ನೂ ಓದಿರಿ: Employee Provident Fund: ಸರ್ಕಾರಿ ನೌಕರರಿಗೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು!

ಈ ಸಮಯದಲ್ಲಿ ರೈತರ ಆಸ್ತಿ ಜಪ್ತಿ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗುವುದು.

ಈ ಸಂಬಂಧ ಕಾನೂನು ತಜ್ಞರ ಜೊತೆ ಚರ್ಚೆ ಮಾಡಲಾಗುವುದು ಎಂದರು.

ರೈತರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡದ ಸಂದರ್ಭಗಳಲ್ಲಿ ಆಸ್ತಿ ಜಪ್ತಿ ಮಾಡದೆ ಸಮಯಾವಕಾಶ ನೀಡಬೇಕು ಎಂದು ಸಹಕಾರ ಹಾಗೂ ಇತರೆ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ಗ್ರಾಮೀಣ ಸಾಲ ಪದ್ಧತಿಯಲ್ಲಿ ಈ ನಿಟ್ಟಿನಲ್ಲಿ ಹಲವು ಕಾನೂನುಗಳು ಬದಲಾಗಬೇಕಿದೆ.

ನಮ್ಮಲ್ಲಿ 2ರಿಂದ 3 ಹೆಕ್ಟೇರ್‌ ಭೂಮಿ ಇರುವ ರೈತರೇ ಹೆಚ್ಚಿದ್ದು, 1 ಲಕ್ಷದವರೆಗೆ ಮಾತ್ರ ಸಾಲ ಸಿಗುತ್ತಿದೆ.

ಈ ಬಗ್ಗೆ ನಬಾರ್ಡ್‌ನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಐದಾರು ಲಕ್ಷ ರೂಪಾಯಿ ಸಾಲ ಸಿಕ್ಕರೆ ರೈತರಿಗೂ ಅನುಕೂಲವಾಗಲಿದೆ ಎಂದರು. 

ರೈತರು ಬೆಳೆದಿಲ್ಲ 

ಈ ಹಿಂದೆಗಿಂತ ಇಂದು ಕೃಷಿ ಕ್ಷೇತ್ರ ವಿಸ್ತಾರವಾಗಿದೆ. ಆದರೆ, ನಮ್ಮ ರೈತರು ಮಾತ್ರ ಅಭಿವೃದ್ಧಿ ಹೊಂದಿಲ್ಲ.

ಸರ್ಕಾರ ಮತ್ತು ಸಮಾಜವು ರೈತರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು.

ಕೃಷಿ ವಿವಿಗಳು ಕ್ಯಾಂಪಸ್‌ ಬಿಟ್ಟು ಹೊರಬಂದು ರೈತರ ಜಮೀನುಗಳಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.   

ಹೊಸ ತಳಿ, ನೂತನ ತಾಂತ್ರಿಕತೆಗಳು ರೈತರಿಗೆ ಸುಲಭವಾಗಿ ಸಿಗುವಂತಾಗಬೇಕು. ಕೃಷಿಯ ವಿಚಾರದಲ್ಲಿ ರಾಜಕಾರಣ ಮಾಡಬಾರದು.

ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಆದರೆ ಎಲ್ಲ ಪಕ್ಷಗಳೂ ರೈತರಿಗೆ ಸೇರಿವೆ ಎಂದು ಹೇಳಿದರು.

ಸಹಕಾರ ಬ್ಯಾಂಕ್‌ಗಳು ರೈತರಿಗೆ ನಿಗದಿಗಿಂತ ಕಡಿಮೆ ಮೊತ್ತದ ಸಾಲ ನೀಡುತ್ತಿವೆ. ಜಮೀನು ವಿಸ್ತೀರ್ಣ ಆಧರಿಸಿ ಸಾಲದ ಮೊತ್ತವನ್ನು ಹೆಚ್ಚಿಸಲೂ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರೈತರ ಆದಾಯ ಹೆಚ್ಚಿದರೆ ರಾಜ್ಯವೂ ಅಭಿವೃದ್ಧಿ ಆಗಲಿದೆ ಎಂದರು.

ರಾಜ್ಯದ 10 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ನೆರವು ವಿತರಿಸಲಾಗಿದೆ‌. 6 ಲಕ್ಷ ಕೃಷಿ ಕಾರ್ಮಿಕರ ಮಕ್ಕಳನ್ನು ಗುರುತಿಸಿದ್ದು, ಅವರಿಗೂ ಶೀಘ್ರವೇ ವಿದ್ಯಾನಿಧಿ ಅಡಿ ವಿದ್ಯಾರ್ಥಿ ವೇತನ ವಿತರಿಸಲಾಗುವುದು.

ನೇಕಾರರು, ಮೀನುಗಾರರು, ಟ್ಯಾಕ್ಸಿ ಹಾಗೂ ಆಟೊರಿಕ್ಷಾ ಚಾಲಕರ ಮಕ್ಕಳಿಗೂ ಈ ಯೋಜನೆ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ  ಎಂದು ಹೇಳಿದರು.

ಶೇ 60ರಷ್ಟು ಜನರು ಕೃಷಿ ಅವಲಂಬಿತರಿದ್ದಾರೆ. ಕೃಷಿ ವಲಯದಲ್ಲಿ ಶೇ 1 ರಷ್ಟು ಬೆಳವಣಿಗೆಯಾದರೆ ಕೈಗಾರಿಕೆ ಹಾಗೂ ಸೇವಾ ವಲಯದಲ್ಲಿ ಹೆಚ್ಚಿನ ಬೆಳವಣಿಗೆ ಆಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಿರಿಧಾನ್ಯ ಮೇಳ ಜನವರಿ ಮೊದಲ ವಾರದಲ್ಲಿ ರಾಜ್ಯಮಟ್ಟದ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.  

ಕೃಷಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರಬೇಕು. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗದ ರಾಷ್ಟ್ರ ಸ್ವಾಭಿಮಾನಿ ರಾಷ್ಟ್ರವಾಗಲು ಆಗುವುದಿಲ್ಲ.

ಸಮಗ್ರ ಕೃಷಿಯಿಂದ ಅಧಿಕ ಆದಾಯ ಗಳಿಸಬಹುದು. ಈ ನಿಟ್ಟಿನಲ್ಲಿ ಕೃಷಿ ವಿವಿಗಳೂ ರೈತರಿಗೆ ಮಾರ್ಗದರ್ಶನ ನೀಡಬೇಕು.

ರೈತ ಶಕ್ತಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಡೀಸೆಲ್‌ ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದರು. 

ರಾಸಾಯನಿಕ ಗೊಬ್ಬರ ಕಡಿಮೆ ಮಾಡಲು ಸಲಹೆ

ಕೃಷಿ ಮೇಳವು ಸಾವಿರಾರು ಜನರಿಗೆ ಪ್ರೇರಣೆ ನೀಡುತ್ತಿದೆ. ಕೃಷಿ ಮೇಳದ ಸಂಭ್ರಮದ ವಾತಾವರಣ ನೋಡಿದರೆ ಮೈಸೂರು ಜಂಬೂ ಸವಾರಿ ನೋಡಿದಂತೆ ಆಗುತ್ತದೆ.

ರೈತರು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ರಾಸಾಯನಿಕ ಗೊಬ್ಬರಗಳ ಅಧಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿದ್ದು, ಫಲವತ್ತತೆ ಹೆಚ್ಚಿಸಬೇಕು.

ಆಧುನಿಕ ತಂತ್ರಜ್ಞಾನ, ಉಪಕರಣಗಳನ್ನು ಬಳಸಿಕೊಂಡು ರೈತರು ಹೆಚ್ಚು ಆದಾಯ ಗಳಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ವಿವಿಧ ಸಾಧಕರನ್ನು ಗೌರವಿಸಲಾಯಿತು.

ಕಂದಾಯ ಸಚಿವ ಆರ್‌.ಅಶೋಕ್‌, ಕೃಷಿ ಸಚಿವ ಬಿ.ಸಿ.ಪಾಟೀಲ್‌, ಶಾಸಕ ಕೃಷ್ಣ ಭೈರೇಗೌಡ, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ್‌, ರಾಯಚೂರು ಕೃಷಿ ವಿ.ವಿ ಕುಲಪತಿ ಡಾ.ಎಂ.ಹನುಮಂತಪ್ಪ ಉಪಸ್ಥಿತರಿದ್ದರು. 

Published On: 06 November 2022, 10:08 AM English Summary: Law not to confiscate property of farmers even if they do not pay loans: Chief Minister Basavaraja Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.