ಮಡಿಕೇರಿ: ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ವೃತ್ತಿ ತರಬೇತಿ ಅವಧಿಯಲ್ಲಿ ಶಿಷ್ಯ ವೇತನ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಂಬಂಧ, 2023-24ನೇ ಸಾಲಿನಲ್ಲಿ ವೃತ್ತಿ ತರಬೇತಿಗೆ ಪರಿಶಿಷ್ಟ ವರ್ಗದ ಅರ್ಹ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪರಿಶಿಷ್ಟ ಪಂಗಡ ಜಾತಿಗೆ ಸೇರಿದ್ದು, ಕೊಡಗು ಜಿಲ್ಲೆಯವರಾಗಿರಬೇಕು. 40 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಯ ಮತ್ತು ಪೋಷಕರ ವಾರ್ಷಿಕ ಆದಾಯ ರೂ.2.50 ಲಕ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ ಮೊದಲು ಯಾವುದೇ ಪದವಿ ನಂತರ 3 ವರ್ಷಗಳ ಅಥವಾ ಪಿಯುಸಿ ನಂತರ 5 ವರ್ಷಗಳ ಕೋರ್ಸುಗಳ ಕಾನೂನು ಪದವಿ ಪಡೆದಿರಬೇಕು.
ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು 15 ವರ್ಷಕ್ಕೆ ಕಡಿಮೆಯಿಲ್ಲದಂತೆ ಸೇವೆ ಸಲ್ಲಿಸಿರುವ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್/ ಸರ್ಕಾರಿ ವಕೀಲರು/ ವೃತ್ತಿಪರ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು.ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಬಿಟ್ಟು ಹೋಗಬಾರದು. ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರಿ ಸಿಕ್ಕಿದಲ್ಲಿ ಮಾತ್ರ ನಿಯಮಾನುಸಾರ ಸಡಿಲಗೊಳಿಸಲಾಗುವುದು.
ಒಂದು ವೇಳೆ ಮಧ್ಯದಲ್ಲಿ ತರಬೇತಿ ಬಿಟ್ಟು ಹೋದಲ್ಲಿ ಅಂತವರಿಗೆ ಪಾವತಿಸಲಾದ ಶಿಷ್ಯವೇತನವನ್ನು ನಿಯಮಾನುಸಾರ ವಸೂಲಿ ಮಾಡಲಾಗುವುದು. ತರಬೇತಿ ಅವಧಿಯು 2 ವರ್ಷಗಳಾಗಿದ್ದು, ಮಾಸಿಕ ರೂ.10 ಸಾವಿರಗಳಿಗೆ ಶಿಷ್ಯವೇತನವನ್ನು ನೀಡಲಾಗುವುದು. ಸುಳ್ಳು ಮಾಹಿತಿ ದಾಖಲಾತಿಗಳನ್ನು ಒದಗಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿ ಪಡಿಸಲಾಗುವುದು. ಅಂತಹ ಅಭ್ಯರ್ಥಿಗಳಿಂದ ತರಬೇತಿ ಅವಧಿಯಲ್ಲಿ ನೀಡಿದ ಶಿಷ್ಯವೇತನವನ್ನು ಶೇ.10 ರ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು.
ಅರ್ಜಿಯಲ್ಲಿ ಪೂರ್ಣ ಮಾಹಿತಿ ಇಲ್ಲದಿದ್ದ ಪಕ್ಷದಲ್ಲಿ ಅರ್ಜಿ ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಯು ಕಾನೂನು ಪದವಿಯಲ್ಲಿ ತೇರ್ಗಡೆ ಹೊಂದಿದ 2 ವರ್ಷದೊಳಗಾಗಿ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿದ ನಂತರ ಶಿಷ್ಯವೇತನ ಮತ್ತು ಎನ್‍ರೋಲ್‍ಮೆಂಟ್ ಫೀಯನ್ನು ನೀಡತಕ್ಕದ್ದು.
ಸದಸ್ಯ ಕಾರ್ಯದರ್ಶಿಯು ಅಧ್ಯಕ್ಷರ ಪೂರ್ವಾನುಮತಿ ಪಡೆದು ಅಭ್ಯರ್ಥಿಯ ಶಿಷ್ಯವೇತನವನ್ನು ದೂರು ಬಂದಲ್ಲಿ ಅಥವಾ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ್ದಲ್ಲಿ ಮತ್ತು ತರಬೇತಿಗೆ ಮಾಹಿತಿ ನೀಡದೆ ಗೈರು ಹಾಜರಾಗಿದ್ದಲ್ಲಿ ತಡೆಹಿಡಿಯಬಹುದು. ಅಧ್ಯಕ್ಷರು ಈ ಬಗ್ಗೆ ಪರಿಶೀಲಿಸಿ ಅಭ್ಯರ್ಥಿಯ ಕಡೆಯಿಂದ ಯಾವುದೇ ಲೋಪವಿಲ್ಲವೆಂದು ಕಂಡುಬಂದಲ್ಲಿ ತಡೆಹಿಡಿದಿರುವ ಶಿಷ್ಯವೇತನವನ್ನು ಮರುಪಾವತಿಸಲು ಆದೇಶಿಸಬಹುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಕಾನೂನು ಪದವೀಧರ ತರಬೇತಿಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಗರ್ಭಿಣಿ ಸ್ಥಿತಿಯಲ್ಲಿರುವ ವೇಳೆ ಮಹಿಳಾ ಅಭ್ಯರ್ಥಿಗಳಿಗೆ 135 ದಿನಗಳ ತರಬೇತಿ ಭತ್ಯೆ ರಹಿತ ರಜೆಯನ್ನು (2 ವರ್ಷಗಳ ತರಬೇತಿಗೆ 1 ಬಾರಿ ಮಾತ್ರ) ವೈದ್ಯಕೀಯ ಪ್ರಮಾಣ ಪತ್ರ ಪಡೆದು ರಜೆ ಮಂಜೂರುಗೊಳಿಸಿ ತರಬೇತಿಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಯನ್ನು ಆನ್‍ಲೈನ್ ಮೂಲಕ www.tw.kar.nic.in ನಲ್ಲಿ ಜುಲೈ, 24 ರವರೆಗೆ ವರೆಗೆ ಸಲ್ಲಿಸುವುದು.
Share your comments