ಶಿವಮೊಗ್ಗ : ಕೃಷಿಯಲ್ಲಿ ವಿಜ್ಞಾನ ಮತ್ತು ತಾಂತ್ರಿಕತೆ ಬಳಸುವ ಮೂಲಕ ಆಹಾರೋತ್ಪಾದನೆಯಲ್ಲಿ ಹೆಚ್ಚಳವಾಗಬೇಕಿದೆ, ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರ ಅಭಿವೃದ್ಧಿಗೊಳಿಸುವ ಕಾಯಕವಾಗಬೇಕಿದೆ ಎಂದು ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಮಹಾದೇವಪ್ಪ ಅಭಿಪ್ರಾಯಪಟ್ಟರು.
ನಗರದ ನವುಲೆ ಕೃಷಿ ಮತ್ತು ತೋಟಗಾರಿಕೆ ವಿವಿ ವತಿಯಿಂದ ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಮೇಳದ ಎರಡನೇ ದಿನದ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ರೈತರಲ್ಲಿ ಅರಿವಿನ ಕೊರತೆಯಿಂದಾಗಿ ಕೆಲವು ಸಂಶೋಧನೆಗಳ ಫಲ ದೊರೆಯುತ್ತಿಲ್ಲ. ಕೃಷಿ ಕಾರಾರಯಗಾರ ಹಾಗೂ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ರೈತರು ವಿಜ್ಞಾನ ಮತ್ತು ತಾಂತ್ರಿಕತೆಯಿಂದ ವಂಚಿತರಾಗಬಾರದು ಎಂಬ ಧ್ಯೇಯ ಪ್ರಮುಖವಾಗಬೇಕು. ಅಲ್ಲದೇ ರೈತರ ಬೆಳೆಗಳಿಗೆ ಕನಿಷ್ಠ ವೈಜ್ಞಾನಿಕ ಬೆಲೆ ನೀಡಿ ಅವರನ್ನು ಆರ್ಥಿಕವಾಗಿ ಬಲಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ದೇಶ ಸ್ವಾತಂತ್ರ್ಯ ಪಡೆದುಕೊಂಡಾಗ 33 ಕೋಟಿಯಷ್ಟಿದ್ದ ಜನ ಸಂಖ್ಯೆಯೀಗ 123 ಕೋಟಿಗೇರಿದೆ. ಪ್ರಸ್ತುತ 273 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿದ್ದು, ಅದು 500 ಮಿಲಿಯನ್ ಟನ್‌ಗಳಷ್ಟು ಹೆಚ್ಚಬೇಕು. ಇಂದಿಗೂ ಅದೆಷ್ಟೋ ಮಂದಿ ಅನ್ನಾಹಾರವಿಲ್ಲದೇ ಬಳಲುತ್ತಿದ್ದಾರೆ. ಗರ್ಭಿಣಿಯರು, ಮಕ್ಕಳಿಗೆ ಪೌಷ್ಟಿಕಾಂಶ ದೊರಕುತ್ತಿಲ್ಲ. ಹಾಗಾಗಿ ಆಹಾರೋತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ ಖರೆ ಮಾತನಾಡಿ, ಕೃಷಿ ಇಂದು ರೈತರಿಗೆ ಲಾಭದಾಯಕವಾಗಿ ಕಾಣುತ್ತಿಲ್ಲ. ಹಾಗಾಗಿ ಬಹುತೇಕರು ಕೃಷಿ ಬಿಟ್ಟು ಪಟ್ಟಣದ ಕಡೆ ಬರುತ್ತಿದ್ದಾರೆ. ಅಲ್ಲದೇ ಹವಾಮಾನ ವೈಪರೀತ್ಯವೂ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕೆ ಅನುಗುಣವಾದಂತಹ ತಳಿಗಳ ಸಂಶೋಧನೆಗಳು ನಡೆಯಬೇಕಿದೆ ಎಂದರು.
ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿದ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಮಾತನಾಡಿ, ನೀರನ್ನು ವ್ಯಯ ಮಾಡದೇ ಸದ್ಬಳಕೆ ಮಾಡಿಕೊಂಡು ಹೆಚ್ಚೆಚ್ಚು ಇಳುವರಿ ಪಡೆಯಬೇಕು. ರಾಜ್ಯ ಸರಕಾರ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಲು ಮುಂದಾಗಿದ್ದು, ರೈತರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಬಾಗಲಕೋಟೆ ತೋಟಗಾರಿಕೆ ವಿವಿ ಪ್ರಭಾರ ಕುಲಪತಿ ಡಾ. ಕೆ.ಎಂ. ಇಂದ್ರೇಶ್, ಹರಿಯಾಣದ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮ ಶೀಲತೆ ನಿರ್ವಹಣಾ ವಿವಿ ಕುಲಪತಿ ಡಾ. ವಾಸುದೇವಪ್ಪ, ನವುಲೆ ಕೃಷಿ ಮತ್ತು ತೋಟಗಾರಿಕೆ ವಿವಿ ವಿಸ್ತರಣಾ ನಿರ್ದೇಶಕ ಟಿ.ಎಚ್.ಗೌಡ, ಮಲ್ಲಣ್ಣ ಮತ್ತಿತರರು ಇದ್ದರು.
ಅನುಭವ ಹಾಗೂ ಕಾಯಕ ಆಧಾರದಲ್ಲಿ ರೈತರೇ ಮೊದಲ ಕೃಷಿ ವಿಜ್ಞಾನಿಗಳು. ಆದರೂ ಕೃಷಿ ವಿಜ್ಞಾನಿಗಳು ರೈತರಿಗೆ ಸ್ಪಷ್ಟ ಮಾರ್ಗದರ್ಶನ ಮಾಡಬೇಕು. ಕೃಷಿ ವಿಜ್ಞಾನಿಗಳು ಖಾಸಗಿ, ಸಾರ್ವಜನಿಕರ ಸಹಯೋಗದೊಂದಿಗೆ ಸಂಶೋಧನೆ ತಲುಪಿಸುವ ಕೆಲಸವಾಗಬೇಕಿದೆ.
- ಡಾ.ಮಹಾದೇವಪ್ಪ ,ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ
Share your comments