ಕೇಂದ್ರದ ಬಿಜೆಪಿ ಸರ್ಕಾರ 9 ವರ್ಷಗಳ ಆಡಳಿತ ಪೂರೈಸಿದೆ. 2019 ರ ಇದೇ ದಿನದಂದು ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ್ದರು. 9 ನೇ ವರ್ಷಾಚರಣೆ ಪ್ರಯುಕ್ತ ಟ್ವೀಟ್ ಮಾಡಿರುವ ಪ್ರಧಾನಮಂತಿ, ಈ ವಸಂತಗಳು ವಿನಮ್ರತೆ ಮತ್ತು ಕೃತಜ್ಞತೆಯಿಂದ ತುಂಬಿದೆ. ಈ ಅವಧಿಯಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಧಾರ ಮತ್ತು ತೆಗೆದುಕೊಳ್ಳುವ ಪ್ರತಿ ಕ್ರಮ ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದಲೇ ಕೂಡಿದ್ದು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಇನ್ನಷ್ಟು ಶ್ರಮಿಸುವುದಾಗಿ ಹೇಳಿದ್ದಾರೆ.
ಕಳೆದ 9 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಪಯಣವನ್ನು ಪ್ರದರ್ಶಿಸಲು ಪ್ರಧಾನಿ ತಮ್ಮ ಟ್ವಿಟರ್ ಖಾತೆಯಲ್ಲಿ ವೆಬ್‌ಸೈಟ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸರ್ಕಾರದ ವಿವಿಧ ಯೋಜನೆಗಳಿಂದ ಜನರು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ವೀಕ್ಷಿಸಲು ಜನರನ್ನು ಆಹ್ವಾನಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಒಂಭತ್ತು ವರ್ಷಗಳ ಆಡಳಿತ ಬಡವರ ಕಲ್ಯಾಣ ಮತ್ತು ಉತ್ತಮ ಆಢಳಿತಕ್ಕೆ ನಿದರ್ಶನವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬಣ್ಣಿಸಿದ್ದಾರೆ.
ಈ ಅವಧಿಯಲ್ಲಿ ರಾಷ್ಟ್ರೀಯ ಭದ್ರತೆ, ಸ್ವಾವಲಂಬನೆ, ಜಾಗತಿಕ ಸ್ಥಾನಮಾನ, ಆರ್ಥಿಕ ಸಬಲೀಕರಣ ಮತ್ತಿತರ ಕ್ಷೇತ್ರಗಳಲ್ಲಿ ದೇಶ ಮಹತ್ತರ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ನಡ್ಡಾ, ಸರ್ಕಾರದ ಕಲ್ಯಾಣ ಯೋಜನೆಗಳು ಕಟ್ಟಕಡೆಯ ಜನರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಆರೋಗ್ಯ, ಶಿಕ್ಷಣ, ರಸ್ತೆ, ನೀರು ಮತ್ತು ವಿದ್ಯುತ್ ಸೇರಿದಂತೆ ಅತಿ ಅವಶ್ಯಕ ಮೂಲಸೌಲಭ್ಯಗಳು ದೇಶದ ದೂರದ ಪ್ರದೇಶಗಳನ್ನು ತಲುಪಿವೆ. ಕೋವಿಡ್ ಸಾಂಕ್ರಾಮಿಕದ ನಂತರ ಭಾರತ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಬಿಜೆಪಿ ಮುಖ್ಯಸ್ಥರು ಹೇಳಿದ್ದಾರೆ.
ಸರ್ಕಾರ 9 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಂಬಿಸಲು ದೇಶಾದ್ಯಂತ ಮಹಾಜನ ಸಂಪರ್ಕ ಅಭಿಯಾನ ಆರಂಭಿಸಲು ಬಿಜೆಪಿ ನಿರ್ಧರಿಸಿದೆ. ನವದೆಹಲಿಯಲ್ಲಿಂದು ಸುದ್ದಿಗಾರರೋದಿಗೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಕಳೆದ 9 ವರ್ಷಗಳಲ್ಲಿ ಭಾರತ ಪರಿವರ್ತನೆ ಕಂಡಿದ್ದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಲೋಕಸಭೆ ಕ್ಷೇತ್ರ ಮಟ್ಟದಲ್ಲಿ 500 ಸಭೆಗಳ ಜೊತೆಗೆ ದೇಶಾದ್ಯಂತ 51 ದೊಡ್ಡ ಸಭೆಗಳನ್ನು ಆಯೋಜಿಸಲಾಗುವುದು.
ಮುಂದಿನ ತಿಂಗಳ 30ರ ವರೆಗೆ ನಡೆಯುವ ಅಭಿಯಾನದಲ್ಲಿ 600 ಸ್ಥಳಗಳಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗುವುದು. ನಾಲ್ಕು ಸಾವಿರಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮುಂಬೈನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ದೆ, ಇಂದಿನಿಂದ ಒಂದು ತಿಂಗಳ ಬೃಹತ್ ಸಾರ್ವಜನಿಕ ಸಂಪರ್ಕ ಸಭೆ ಆರಂಭವಾಗಿದೆ ಎಂದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಸಂಚರಿಸಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮೂಲ:airrnu
Share your comments