ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಮೆಣಸಿನಕಾಯಿ ಮುಖ್ಯವಾದ ತರಕಾರಿ ಹಾಗೂ ಸಾಂಬಾರ ಪದಾರ್ಥದ ಬೆಳೆಯಾಗಿ ಪ್ರಸಿದ್ದಿ ಹೊಂದಿದೆ. ಇದನ್ನು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಮುಖ್ಯವಾಗಿ ಈ ಬೆಳೆಯನ್ನು ಬೆಳಗಾವಿ, ಧಾರವಾಡ, ಕಲಬುರಗಿ, ಶಿವಮೊಗ್ಗ, ಕೋಲಾರ, ಮೈಸೂರು, ಚಿತ್ರದುರ್ಗ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ಬೆಳೆಗೆ ತಗಲುವ ರೋಗ,ಕೀಟಗಳ ಹಾವಳಿ ಹಾಗೂ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ಇಲ್ಲಿದೆ.....
-
ಸಸಿ ಕಾಂಡ ಕೊಳೆ ರೋಗ:
ಈ ರೋಗವು ಮಣ್ಣಿನಲ್ಲಿ ಜೀವಿಸುವ ಫಿಥಿಯಮ್ ಅಥವಾ ಪೈಟಾಪ್ಥಾರಾ ಎಂಬ ಶೀಲಿಂಧ್ರದಿಂದ ಬರುತ್ತದೆ. ಈ ರೋಗಕ್ಕೆ ತುತ್ತಾದ ಗಿಡದ ಕಾಂಡವು ಕಪ್ಪು ಅಥವಾ ಕಂದು ಬಣ್ಣದಿಂದ ಕೊಳೆತು ಗುಂಪು-ಗುಂಪಾಗಿ ಸಾಯುತ್ತವೆ. ಮಣ್ಣಿನಲ್ಲಿಯ ಅಧಿಕ ತೇವಾಂಶ ಈ ರೋಗದ ತೀಕ್ಷ್ಣತೆಗೆ ಸಹಾಯವಾಗುತ್ತದೆ.
-
ಎಲೆ ಚುಕ್ಕೆ ರೋಗ
ಈ ರೋಗವು ಸರ್ಕೋಸ್ಪೊರಾ ಎಂಬ ಶೀಲಿಂಧ್ರದಿಂದ ಬರುತ್ತದೆ. ಚಿಕ್ಕ ವರ್ತುಲಾಕಾರದ ಚುಕ್ಕೆಗಳು ಮೊದಲು ನೀರಿನಿಂದ ಆವೃತವಾದ ಪ್ರದೇಶಗಳಂತೆ ಎಲೆಯ ಕೆಳಭಾಗದಲ್ಲಿ ಕಂಡು ಬರುತ್ತದೆ. ಚುಕ್ಕೆಗಳು ಬೆಳೆದಂತೆಲ್ಲಾ ದಟ್ಟ ಕಂದು ಬಣ್ಣದ ಉಂಗುರವು ಬೆಳೆದು ಹಾಗೂ ತಗ್ಗಾದ ಪ್ರದೇಶದಿಂದ ಕೂಡಿ ಬಿಳಿ ಮಿಶ್ರಿತ ಕಂದು ಬಣ್ಣದ ಕೇಂದ್ರಗಳನ್ನು ಹೊಂದಿರುತ್ತದೆ. ಹೂವಿನ ದೇಟು, ಕಾಂಡದ ಮೇಲ್ಭಾಗದಲ್ಲಿ ಇಂತಹ ಚುಕ್ಕೆಗಳು ಕಂಡು ಬಂದರೂ ಹಣ್ಣಿನ ಮೇಲೆ ವಿರಳ.
-
ಚಿಬ್ಬುರೋಗ:
ಈ ರೋಗವು ಕೊಲೋಟೋಟ್ರೈಕಮ್ ಕ್ಯಾಪ್ಸಿಸ್ಸಿ ಎಂಬ ಶೀಲಿಂಧ್ರದಿಂದ ಬರುತ್ತದೆ. ಈ ಶೀಲಿಂಧ್ರವು ಹೂವಿನ ಮುಖಾಂತರ ಪ್ರವೇಶಿಸಿ ಹೂವು, ಟೊಂಗೆಗಳ ತುದಿಗಳು ಹಾಗೂ ಗಿಡದ ಕವಲುಗಳು ತುದಿಯಿಂದ ಹಿಂದಕ್ಕೆ ಒಣಗಿ ಸಾಯುತ್ತವೆ. ಇದರಿಂದ ಯಾವುದೇ ಇಳುವರಿ ಬರುವುದಿಲ್ಲ.
-
ಹಣ್ಣು ಕೊಳೆ ರೋಗ:
ಈ ರೋಗವು ಕೊಲೋಟೋಟ್ರೈಕಮ್ ಕ್ಯಾಪ್ಸಿಸ್ಸಿ ಎಂಬ ಶೀಲಿಂಧ್ರದಿಂದ ಬರುತ್ತದೆ. ಹಣ್ಣಿನ ಮೇಲೆ ದುಂಡನೆಯ ನೀರಿನಿಂದ ಆವೃತವಾದ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ನಂತರ ಹಣ್ಣಿನ ಪೂರ್ತಿ ಭಾಗವನ್ನು ಆವರಿಸಿ ಉದ್ದನೆಯಾಕಾರದ ದೊಡ್ಡ ಮಚ್ಚೆಗಳಾಗಿ ಹರಡುತ್ತವೆ. ಇಂತಹ ಮಚ್ಚೆಗಳ ಮಧ್ಯಭಾಗದಲ್ಲಿ ಕಪ್ಪು ಬಣ್ಣದಿಂದ ಕೂಡಿದ ಶಿಲೀಂಧ್ರದ ಅವಕಗಳ ಸೊಂಕು ಕಾಣಿಸುತ್ತದೆ. ನಂತರ ಕ್ರಮೇಣವಾಗಿ ರೋಗಗ್ರಸ್ಥ ಮೆಣಸಿನಕಾಯಿ ಹಣ್ಣುಗಳು ಬಿಸಿಲಿಗೆ ಒಣಗಿಸಿದಂತೆಲ್ಲಾ ಬಿಳಿ ಬಣ್ಣಕ್ಕೆ ತಿರುಗಿ ಹೊಳೆಯಲ್ಪಡುತ್ತದೆ. ಬೀಜಗಳು ಸಹ ಬಣ್ಣಗೆಟ್ಟಿರುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಧಾರಣೆ ಸಿಗುತ್ತದೆ.
5 ಬೂದಿ ರೋಗ:
ಈ ರೋಗವು ಲೆವುಲುಲ್ಲಾಟಾರಿಕಾ ಎಂಬ ಶೀಲಿಂಧ್ರದಿಂದ ಬರುತ್ತದೆ. ರೋಗದ ಪ್ರಮುಖ ಲಕ್ಷಣಗಳೆಂದರೆ ಎಲೆಯ ಕೆಳಭಾಗದಲ್ಲಿ ಅಲ್ಲಲ್ಲಿ ಬೂದಿ ಚೆಲ್ಲಿದ ಹಾಗೆ ಕಾಣಬಹುದಾಗಿದ್ದು ರೋಗದ ತೀವ್ರತೆ ಹೆಚ್ಚಾದಂತೆಲ್ಲಾ ಸಂಪೂರ್ಣವಾಗಿ ಎಲೆಯ ಕೆಳಭಾಗದಲ್ಲಿ ಆವರಿಸಿಕೊಳ್ಳುತ್ತದೆ. ಅಲ್ಲದೆ ಅದೇ ಭಾಗದ ಎಲೆಯ ಮೇಲ್ಭಾಗವು ಹಳದಿ ಬಣ್ಣಕ್ಕೆ ತಿರುಗುವುದನ್ನು ಕಾಣಬಹುದಾಗಿದ್ದು, ಕೆಲವು ಸಂದರ್ಭದಲ್ಲಿ ಎಲೆಯ ಮೇಲ್ಭಾಗದಲ್ಲೂ ಬೂದಿ ಚೆಲ್ಲಿದ ಹಾಗೆ ಇರುವ ಲಕ್ಷಣಗಳನ್ನು ಕಾಣಬಹುದಾಗಿದೆ. ರೋಗದ ಪರಿಣಾಮವಾಗಿ ದ್ಯುತಿ ಸಂಶ್ಲೇಷಣಾಕ್ರಿಯೆಯ ಮೇಲೆ ಪರಿಣಾಮ ಬೀರಿ ಆಹಾರ ತಯಾರಿಕೆಯಲ್ಲಿ ಅಡಚಣೆ ಉಂಟಾಗುತ್ತದೆ. ಅಲ್ಲದೆ ರೋಗದಿಂದ ಸಂಪೂರ್ಣವಾಗಿ ಎಲೆಗಳು ಹಳದಿಯಾಗಿ ಒಣಗಿ ಗಿಡದಿಂದ ಉದುರಿ ಬೀಳುತ್ತವೆ.
6 ಮುಟುರು ರೋಗ:
ಈ ರೋಗವು ವಿವಿಧ ನಂಜಾಣುಗಳು ಮತ್ತು ಕೀಟಗಳ ಸಂಕಿರ್ಣ ಬಾಧೆಯಿಂದ ಉಂಟಾಗುವುದು. ಕೀಟಗಳಾದ ಧ್ರಿಪ್ಸ್, ಮೈಟ್ ನುಸಿ ಮತ್ತು ಜಿಗಿಹೇನು ಎಲೆಯ ರಸ ಹೀರುವ ಜೊತೆಗೆ ನಂಜಾಣುಗಳನ್ನು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹಾಗೂ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಸಾರವಾಗಲು ಕಾರಣವಾಗಿದೆ. ಸಸಿ ಮಡಿಗಳಲ್ಲಿ ಸುಮಾರು 20 ದಿವಸದ ಸಸಿಗಳಲ್ಲಿ ಮೊಟ್ಟ ಮೊದಲಿಗೆ ನಂಜು ತಗಲಿದ ಎಲೆಗಳ ಮೇಲೆ ಹಸಿರು ಹಳದಿ ಬಣ್ಣದ ಚುಕ್ಕೆಗಳು ಉಬ್ಬು ದಿನ್ನೆಗಳಾಗಿ ಕಂಡು ಬರುವುದು ನಂತರ, ಹೊಲದಲ್ಲಿ ನಾಟಿ ಮಾಡಿದ ನಂತರವು ಇಂತಹ ಲಕ್ಷಣಗಳನ್ನು ಕಾಣಬಹುದಾಗಿದೆ. ಹೊಸದಾಗಿ ಚಿಗುರುತ್ತಿರುವ ಎಲೆಗಳು ಹಸಿರು ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗಿ ಮುದುರಿಕೊಳ್ಳುತ್ತವೆ. ಅಲ್ಲದೆ ರೋಗದ ತೀವ್ರತೆ ಹೆಚ್ಚಿದಂತೆಲ್ಲಾ ಎಲೆಗಳು ಇಲಿಬಾಲದಂತೆ ಸಣ್ಣದಾಗಿ ಕಂಡು ಬರುತ್ತದೆ. ಕೊನೆಗೆ ಗಿಡಗಳು ಕುಬ್ಜವಾಗಿ ಉಳಿಯುತ್ತವೆ. ಕೆಲವೊಂದು ಸಾರಿ ಎಲೆಗಳು ಚೆನ್ನಾಗಿ ಕಂಡು ಬಂದರೂ ಸುರಳಿಯಾಕಾರದ ಉಂಗುರಗಳು ಕಂಡು ಬರುತ್ತವೆ. ಇಂತಹ ಗಿಡಗಳು ಯಾವುದೇ ಕಾಯಿ ಅಥವಾ ಹೂವನ್ನು ಬಿಡುವುದಿಲ್ಲ. ಕಾಯಿ ಬಿಟ್ಟರು ಹೀಚಕು ಕಾಯಿಗಳನ್ನು ಗಿಡದಲ್ಲಿ ಕಾಣಬಹುದಾಗಿದೆ.
7 ಸೊರಗು ರೋಗ:
ಈ ರೋಗವು ಪ್ಯುಜೆರಿಯಂ ಎಂಬ ಶೀಲಿಂಧ್ರದಿಂದ ಬರುತ್ತದೆ. ಭೂಮಿಗೆ ಹೊಂದಿಕೊಂಡಂತೆ ಇರುವ ಕಾಂಡದ ಭಾಗದಲ್ಲಿ ಬಿಳಿ ಹತ್ತಿಯ ದಾರದಂತೆ ಕಾಣುವ ಶಿಲೀಂಧ್ರ ಕಾಣಿಸುತ್ತದೆ. ಇದರಿಂದ ಎಲೆ ಮತ್ತು ಕಾಂಡಗಳಿಗೆ ಬೇರುಗಳಿಂದ ಆಹಾರ ಮತ್ತು ನೀರು ಸರಬರಾಜು ಆಗುವುದು ನಿಂತು ಹೋಗುತ್ತದೆ, ಪರಿಣಾಮವಾಗಿ ಗಿಡ ಬಾಡುತ್ತ ಕ್ರಮೇಣ ಒಣಗಿ ನಿಲ್ಲುತ್ತದೆ. ಶಿಲೀಂಧ್ರದ ಹಾವಳಿ ತೀವ್ರಇದ್ದಲ್ಲಿ ಸಾಸಿವೆ ಕಾಳಿನಂತಹ ಶೀಲಿಂಧ್ರದ ಬೀಜ ಗಳನ್ನು ಕಾಣಬಹುದು.
8. ಬಾಡುರೋಗ:
ಈ ರೋಗವು ರಾಲ್ಸಟೋನಿಯಾ ಸೊಲ್ಯಾನೇಸಿಯಾರಮ್ ಎಂಬ ದುಂಡಾಣುವಿನಿಂದ ಬರುತ್ತದೆ. ಭೂಮಿಯಲ್ಲಿ ತೇವಾಂಶ ಸಾಕಷ್ಟಿದ್ದರೂ ಈ ರೋಗದ ಬಾಧೆಯಿಂದ ಗಿಡಗಳು ಒಮ್ಮಿಂದೊಮ್ಮೆಲೆ ಬಾಡಿ ಹೋಗುತ್ತವೆ. ಅಂತಹ ಗಿಡಗಳ ಕೆಳಗಿನ ಕಾಂಡವನ್ನು ಸೀಳಿದಾಗ ಕಂದು ಬಣ್ಣಕಂಡು ಬರುತ್ತದೆ. ಪೂರ್ತಿಗಿಡ ಬಾಡುವುದರಿಂದ ಇಳುವರಿ ಬರುವುದಿಲ್ಲ. ಈ ರೋಗವು ಹೈಬ್ರೀಡ್ ತಳಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಸಮಗ್ರರೋಗ ನಿರ್ವಹಣೆ
- ಏರು ಸಸಿಮಡಿಗಳನ್ನು ತಯಾರಿಸಿ ಸಾಕಷ್ಟು ನೀರುಣಿಸಿ ಅದನ್ನು 400-500 ಗೇಜಿನ ಪಾರದರ್ಶಕ ಪಾಲಿಥೀನ್ ಪೇಪರಿನಿಂದ ಏಪ್ರಿಲ್ - ಮೇ ತಿಂಗಳುಗಳಲ್ಲಿ 6 ವಾರಗಳ ಕಾಲ ಮುಚ್ಚಿಡಬೇಕು. ಇದರಿಂದ ಮಣ್ಣಿನ ಉಷ್ಣಾಂಶ ಹೆಚ್ಚಾಗಿ ಮಣ್ಣಿನಲ್ಲಿರುವ ಶಿಲೀಂದ್ರ ರೋಗಾಣುಗಳು ನಾಶವಾಗುತ್ತವೆ.
- ಬಿತ್ತನೆಗೆರೋಗರಹಿತ ಬೀಜಗಳ ಆಯ್ಕೆ ಮಾಡಬೇಕು.
- ಬೇಸಿಗೆಯಲ್ಲಿ ಆಳವಾಗಿ ಮಾಗಿ ಉಳುಮೆ ಮಾಡಬೇಕು.
- ಪ್ರತಿ ಮಡಿಗೆ 30 ಕಿ. ಗ್ರಾಂ. ಕೊಟ್ಟಿಗೆಗೊಬ್ಬರ, 500 ಗ್ರಾಂ. 15:15:15 ಸಂಯುಕ್ತ ರಾಸಾಯನಿಕ ಗೊಬ್ಬರ, 25 ಗ್ರಾಂ. ಕಾರ್ಬೊಪ್ಯೂರಾನ್ ಹಾಗೊ 2 ಕಿ. ಗ್ರಾಂ. ಬೇವಿನ ಹಿಂಡಿ ಬೆರೆಸಬೇಕು.
- ಬಿತ್ತನೆಗೆ ಮುಂಚೆ ಪ್ರತಿ ಕಿ. ಗ್ರಾಂ ಬೀಜವನ್ನು 20 ಗ್ರಾಂ ಟ್ರೈಕೋಡರ್ಮಾ ಹಾಗೂ 20 ಗ್ರಾಂ ಸೂಡೊಮುನಾಸ್ದಿಂದ ಬೀಜೋಪಚಾರ ಮಾಡಬೇಕು. ಅಥವಾ
- ಪ್ರತಿ ಕಿ. ಗ್ರಾಂ ಬೀಜವನ್ನು 2 ಗ್ರಾಂ ರಿಡೋಮಿಲ್ ಎಂ ಝಢ್. ಅಥವಾ2 ಗ್ರಾಂ ಥೈರಾಮ್ ಅಥವಾ 2 ಗ್ರಾಂ ಕ್ಯಾಪ್ಟಾನದಿಂದ ಬೀಜೋಪಚಾರ ಮಾಡಬೇಕು.
- ಬಿತ್ತಿದ 8 ರಿಂದ 12 ದಿವಸದೊಳಗೆ ಸಸಿ ಕಾಂಡ ಕೊಳೆ ರೋಗ ಕಂಡು ಬಂದರೆ 2 ಗ್ರಾಂ ರಿಡೋಮಿಲ್ ಎಂ ಝಢ್. ಅಥವಾ 2 ಗ್ರಾಂ ಥೈರಾಮ್ ಅಥವಾ 2 ಗ್ರಾಂ ಕ್ಯಾಪ್ಟಾನನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಶಿಲೀಂದ್ರನಾಶಕ ದ್ರಾವಣವನ್ನು ಸಸಿ ಮಡಿಗಳಲ್ಲಿ ಹಾಕಬೇಕು.
- ಮೆಣಸಿನ ಸಸಿಗಳನ್ನು ನಾಟಿಗೆ ಐದುಸಿವಸ ಮುಚೆ ಸಸಿ ಮಡಿಗಳಲ್ಲಿಯೇ ಚಿವುಟಿ ಹಾರೆ ನಂತರ ನಾಟಿ ಮಾಡುವುದರಿಂದ ಮುಟುರುರೋಗದ ಬಾದೆ ಕಡಿಮೆಯಾಗುವುದು ಮತ್ತು ಹೆಚ್ಚಿನ ಇಳುವರಿ ಪಡೆಯಬಹುದು.
- ಪ್ರತಿ ಅರ್ಧ ಎಕರೆ ಸುತ್ತಲೂ 3 ರಿಂದ 4 ಸಾಲು ಜೋಳ ಅಥವಾ ಗೋವಿನ ಜೋಳ 15 ರಿಂದ 20 ದಿನಗಳ ಮುಂಚೆ ಬಿತ್ತನೆ ಮಾಡಬೇಕು.
- ಬೆಳೆ ಪರಿವರ್ತನೆಯನ್ನು ಕೈಗೊಳ್ಳಬೇಕು, ಮೆಣಸಿನಕಾಯಿ, ಬದನೆ, ಆಲೂಗಡ್ಡೆ ಹಾಗೂ ಟೊಮ್ಯಾಟೊ ಬೆಳೆಗಳನ್ನು ಬಿಟ್ಟು ಇತರೆ ಬೆಳೆಗಳ ಕಾಲುಗೈ ಅನುಸರಿಸುವುದರಿಂದ ಸೊರಗು ರೋಗ ಹಾಗೂ ಬಾಡುರೋಗವನ್ನು ಹತೋಟಿಯಲ್ಲಿಡಬಹುದು.
- ಸ್ವಚ್ಛವಾದ ಬೇಸಾಯ, ರೋಗ ಪೀಡಿತ ಗಿಡಗಳನ್ನು ಹಾಗೂ ಕವಲುಗಳನ್ನು ಆರಿಸಿ ಸುಡಬೇಕು.
- ಶಿಫಾರಸ್ಸು ಮಾಡಿದ (25 ಟನ್/ಹೆ) ಕಳಿತ ಕೊಟ್ಟಿಗೆ ಗೊಬ್ಬರದ ಜೊತೆಗೆ ಟ್ರೈಕೋಡರ್ಮಾ (5 ಕಿ. ಗ್ರಾಂ) ವನ್ನು ಬೆರಸಿ 10-15 ದಿನಗಳ ಕಾಲ ತೇವಾಂಶವಿರುವಂತೆ ನೇರಳಲ್ಲಿ ಬೆಳಸಿ ಬಿತ್ತನೆ ಮಾಡುವ ಪೂರ್ವದಲ್ಲಿ ಭೂಮಿಗೆ ಸೇರಿಸುವುದು ಅಥವಾ ಗುಣಿಗಳಿಗೆ ಹಾಕಬೇಕು.
- ನಾಟಿ ಮಾಡುವ ಪೂರ್ವ ಪ್ರತಿ ಹೇಕ್ಟೇರ್ಗೆ 2.5 ಕ್ವಿಂಟಾಲ್ ಬೇವಿನ ಹಿಂಡಿ ಹಾಗೂ 2.5 ಟನ್ ಎರೆಹುಳು ಗೊಬ್ಬರ ಹಾಕುವುದರಿಂದ ರಸ ಹೀರುವ ಕೀಟಗಳ ಬಾಧೆ ಕಡಿಮೆಯಾಗಿ ಮುಟುರುರೋಗವನ್ನು ಹತೋಟಿಯಲ್ಲಿಡಬಹುದು.
- ನಂಜಾಣುಗಳು ಹರಡುವಲ್ಲಿ ಕೀಟಗಳು ಪ್ರಮುಖವಾದ ಪಾತ್ರ ವಹಿಸುತ್ತಿರುವುದರಿಂದ ಸಸಿ ಮಡಿಯಲ್ಲಿ ಹಾಗೂ ನಾಟಿ ಮಾಡಿದ ಬೆಳೆಯಲ್ಲಿ ಕೀಟದ ಬಾಧೆಯಿಂದ ಒಳ ಮುಟುರುವಿಕೆ ಕಾಣಿಸಿಕೊಂಡಲ್ಲಿ ಪ್ರತಿ ಲೀಟರ್ ನೀರಿನಲ್ಲಿ ನಿಮ್ಜಾಲ್ 2 ಮೀ.ಲೀ. ಅಥವಾ ಡೈಫೆಂಥುರಾನ್ 50 ಡಬ್ಲೂ.ಪಿ. 1 ಗ್ರಾಂ ಬೆರೆಸಿ ಸಿಂಪಡಿಸಿ.
- ಚಿಬ್ಬುರೋಗ, ಹಣ್ಣು ಕೊಳೆ ರೋಗ, ಎಲೆ ಚುಕ್ಕೆ ರೋಗ ಹಾಗೂ ಬೂದಿ ರೋಗ ಕಂಡುಬಂದರೆ 1 ಮೀ. ಲೀ. ಹೆಕ್ಸಾಕೋನಾಜೋಲ್ 5 ಇ.ಸಿ. ಪ್ರತಿ ಲೀ. ನೀರಿಗೆ ಬೆರೆಸಿ 15 ದಿನಗಳ ಅಂತರದಲ್ಲಿ 2 ಸಾರಿ ಸಿಂಪಡಿಸಿ.ಅಥವಾ
- ಫ್ಲೂಕ್ಸಾಪೈರಾಕ್ಸೈಡ್ + ಪೈರಾಕ್ಲೋಸ್ಟ್ರೋಬಿನ್ 500 ಎಸ್.ಸಿ. ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ ನೀರಿಗೆ 0.5 ಮಿ.ಲೀ. ಬೆರೆಸಿ ಸಿಂಪಡಿಸುವುದರಿಂದ ಮೆಣಸಿನಕಾಯಿ ಬೆಳೆಗೆ ತಗಲುವ ಚಿಬ್ಬುರೋಗ, ಹಣ್ಣು ಕೊಳೆ ರೋಗ, ಎಲೆ ಚುಕ್ಕೆ ರೋಗ ಮತ್ತು ಬೂದಿ ರೋಗದ ಬಾಧೆಯನ್ನು ಹತೋಟಿ ಮಾಡುವುದಲ್ಲದೆ, ಬಿಳಿಕಾಯಿ ಪ್ರಮಾಣ ಕಡಿಮೆಯಾಗುವುದು ಮತ್ತು ಕೆಂಪು ಬಣ್ಣದ ಪ್ರಮಾಣ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಪಡೆಯಬಹುದು.
- ಸೊರಗುರೋಗ ಹಾಗೂ ಬಾಡುರೋಗ ಕಂಡುಬಂದರೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.5 ಗ್ರಾಂ ಸ್ಟ್ರೆಪ್ಟೋಸೈಕ್ಲೀನ್ ಪ್ರತಿ ಲೀಟರ್ ನೀರಿಗೆ ಬೆರೆಸಿ ದ್ರಾವಣವನ್ನು ಗಿಡದ ಬುಡಕ್ಕೆ ತೊಯ್ಯುವಂತೆ ಸುರಿಯಬೇಕು.
ಲೇಖಕರು: ಡಾ. ಅಬ್ದುಲ್ ಕರೀಂ ಎಮ್ ಮತ್ತು ಡಾ.ಕೃಷ್ಣಾ ಡಿ. ಕುರುಬೆಟ್ಟ
krishina.kurubetta@uhsbagalkot.edu.in
makuasd@gmail.com
Share your comments