1. ಸುದ್ದಿಗಳು

ಇನ್ನುಮುಂದೆ ಟ್ರ್ಯಾಕ್ಟರ್ ಸೇರಿ ಎಲ್ಲಾ ಕೃಷಿ ಯಂತ್ರೋಪಕರಣಗಳ ಮೇಲೆ ಎಂಆರ್‌ಪಿ ಪ್ರದರ್ಶನ ಕಡ್ಡಾಯ

Tractor

ರೈತರು ಕೃಷಿ ಕೆಲಸಗಳಿಗೆ ಉಪಯೋಗಿಸುವ ಎಲ್ಲಾ ಕೃಷಿಯಂತ್ರೋಪಕರಣಗಳ ಮೇಲೆ ಅವುಗಳ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಪ್ರದರ್ಶಿಸುವುದು ಇನ್ನುಮುಂದೆ ಕಡ್ಡಾಯ ಎಂದು ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಈ ಕುರಿತು ಉಡುಪಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ‘ಸರ್ಕಾರದ ಸಹಾಯಧನ ಯೋಜನೆ ಅಡಿ ಬರುವ ಟ್ರ್ಯಾಕ್ಟರ್ , ಟಿಲ್ಲರ್, ರೋಟೋವೇಟರ್ ಸೇರಿದಂತೆ ಎಲ್ಲಾ ಕೃಷಿ ಯಂತ್ರೋಪಕರಣಗಳ ಮೇಲೆ ಅವುಗಳನ್ನು ಉತ್ಪಾದಿಸುವ ಕಂಪನಿಗಳು ಯಂತ್ರಗಳ ನಿಗದಿತ ಎಂಆರ್‌ಪಿ ದರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು’ ಎಂದರು.

ಎಂಆರ್‌ಪಿ ಪ್ರದರ್ಶನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು, ಕೃಷಿ ಉಪಕರಣಗಳನ್ನು ತಯಾರಿಸುವ ಸಂಸ್ಥೆಗಳು ಹಾಗೂ ಅವುಗಳ ಡೀಲರ್‌ಗಳಿಗೆ ಯಂತ್ರೋಪಕರಣಗಳ ಮೇಲೆ ಅವುಗಳ ಬೆಲೆಯನ್ನು ನಮೂದಿಸುವಂತೆ ಅಥವಾ ಪ್ರದರ್ಶಿಸುವಂತೆ ಸೂಚಿಸಬೇಕು. ಹಾಗೇ ಈ ಬೆಲೆ ರಾಜ್ಯ ಕೃಷಿ ಇಲಾಖೆಯ ಜಾಲತಾಣದಲ್ಲಿಯೂ ಪ್ರಕಟಗೊಳ್ಳಬೇಕು. ಇದರಿಂದ ಪ್ರತಿಯೊಂದು ಯಂತ್ರೋಪಕರಣಗಳ ನಿರ್ದಿಷ್ಟ ಬೆಲೆ ಎಷ್ಟೆಂಬುದು ರೈತರಿಗೆ ತಿಳಿಯಲಿದೆ. ಜೊತೆಗೆ ರೈತರು ಮೋಸ ಹೋಗುವುದು ತಪ್ಪುತ್ತದೆ ಎಂದು ತಿಳಿಸಿದರು.

‘ಈ ಕುರಿತಂತೆ ನಾವು ಮೇ ತಿಂಗಳ ಆರಂಭದಲ್ಲೇ ನಿರ್ಧಾರ ಪ್ರಕಟಿಸಿದ್ದೆವು. ಆದರೆ ಹಲವು ರಾಜ್ಯಗಳಲ್ಲಿ ಈ ನಿಯಮ ಜಾರಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಎಂಆರ್‌ಪಿ ಪ್ರದರ್ಶನವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಎಲ್ಲಾ ರಾಜ್ಯ ಸರ್ಕಾರಗಳು ಮುತುವರ್ಜಿ ವಹಿಸಿ ಆದೇಶ ಜಾರಿಗೊಳಿಸುವ ಮೂಲಕ ರೈತರು ನಿಗದಿತ ದರದಲ್ಲೇ ಕೃಷಿ ಯಂತ್ರೋಪಕರಣಗಳನ್ನು ಕೊಳ್ಳಲು ಮತ್ತು ಸಬ್ಸಿಡಿ ಯೋಜನೆಗಳ ಪ್ರಯೋಜನ ಪಡೆಯಲು ನೆರವಾಗಬೇಕು’ ಎಂದು ಕೋರಿದರು.

‘ಸಹಾಯಯಧನ ಯೋಜನೆಗಳ ಅಡಿಯಲ್ಲಿ ಯಂತ್ರೋಪಕರಣಗಳನ್ನು ಖರೀದಿಸುವ ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಷ್ಟು, ಗರಿಷ್ಠ 1 ಲಕ್ಷ ರೂಪಾಯಿವರೆಗೆ ಸಹಾಯಧನ ನಿಗದಿಪಡಿಸಲಾಗಿದೆ. ಯಂತ್ರೋಪಕರಣಗಳ ಮಾರಾಟಗಾರರು ತಮಗೆ ತಿಳಿದಂತೆ ದರ ವಿಧಿಸಿ ರೈತರಿಗೆ ವಂಚಿಸುತ್ತಿರುವ ಆರೋಪಗಳು ಕೇಳಿಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆಯಡಿ 2014ರಿಂದ ಇಲ್ಲಿಯವರೆಗೆ 5,490 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಕರ್ನಾಟಕ ರಾಜ್ಯಕ್ಕೆ 560.67 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. 7 ವರ್ಷಗಳ ಅವಧಿಯಲ್ಲಿ 362 ಹೈಟೆಕ್ ಹಬ್‌ಗಳನ್ನು ನಿರ್ಮಿಸಿದ್ದು, ಕರ್ನಾಟಕದಲ್ಲಿ 213 ಹೈಟೆಕ್ ಕೇಂದ್ರಗಳು ನಿರ್ಮಾಣವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಉತ್ತಮ ಸಾಧನೆ ಮಾಡಿದ್ದು, ಬೇರೆಲ್ಲಾ ರಾಜ್ಯಗಳಿಗಿಂತಲೂ ಮುಂಚೂಣಿಯಲ್ಲಿದೆ ಎಂದು ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಅವರು ಇತ್ತೀಚೆಗೆ ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ, ಕೃಷಿ ಯಂತ್ರೋಪಕರಣಗಳ ಎಂಆರ್‌ಪಿ ಪ್ರದರ್ಶನಕ್ಕೆ ಆದೇಶಿಸುವಂತೆ ಮನವಿ ಸಲ್ಲಿಸಿದ್ದರು. ಈ ವೇಳೆ ಸಂಸದರ ಆಪ್ತ ಕಾರ್ಯದರ್ಶಿ ದೇವರಾಜ ಸಿ.ಎಚ್. ಜೊತೆಗಿದ್ದರು.

ಗ್ರಾ.ಪಂ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕವೂ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ಕೊಡಲಾಗುತ್ತಿದೆ. ಆಧುನಿಕ ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳು ಕೃಷಿ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ ರೈತರಿಗೆ ಆರ್ಥಿಕ ಬಲ ಒದಗಿಸುತ್ತವೆ. ಇದರಿಂದ ಬೆಳೆಗಳ ಬಿತ್ತನೆ, ನಾಟಿ, ನೀರಾವರಿ ವ್ಯಯವಸ್ಥೆ, ಕೊಯ್ಲು ಹಾಗೂ ಧಾನ್ಯ, ಉತ್ಪನ್ನಗಳ ಸಂಗ್ರಹಕ್ಕೆ ಅನುಕೂಲವಾಗುತ್ತಿದೆ ಎಂದರು.

ಮನವಿ ಮಾಡಿದ್ದ ಸಂಸದ ಸಿದ್ದೇಶ್ವರ

ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಾಗಿ ಬೇಕಾಗಿರುವ ಟ್ರ್ಯಾಕ್ಟರ್  ಹಾಗೂ ಇನ್ನಿತರ ಕೃಷಿ ಯಂತ್ರೋಪಕರಣಗಳಿಗೆ ಎಂಆರ್‌ಪಿ ದರ ನಿಗದಿಪಡಿಸುವಂತೆ ಕೃಷಿ ಸಚಿವರಾದ ನರೇಂದ್ರಸಿಂಗ್ ತೋಮರ್ ಹಾಗೂ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಇತ್ತೀಚೆಗಷ್ಟೇ ಮನವಿ ಮಾಡಿದ್ದರು.

ದೆಹಲಿಯ ಕೃಷಿ ಭವನದಲ್ಲಿ ಸಚಿವ ನರೇಂದ್ರಸಿಂಗ್ ತೋಮರ್ ಹಾಗೂ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದ ಸಂಸದ ಸಿದ್ದೇಶ್ವರ ಅವರು, ಟ್ರ್ಯಾಕ್ಟರ್  ಹಾಗೂ ಇತರ ಕೃಷಿ ಯಂತ್ರೋಪಕರಣಗಳಿಗೆ ಗರಿಷ್ಠ ಮಾರಾಟ ದರ ನಿಗದಿಪಡಿಸುವಂತೆ ಕಳೆದೊಂದು ವರ್ಷದಿಂದ ಪ್ರಧಾನ ಮಂತ್ರಿಗಳು ಸೇರಿದಂತೆ ಕೃಷಿ ಸಚಿವರಿಗೆ ಹಲವಾರು ಬಾರಿ ಪತ್ರ ಬರೆದಿದ್ದರು. ಅಲ್ಲದೆ, ಸಂಸತ್ತಿನಲ್ಲಿ ಪ್ರಶ್ನೆ ಕೇಳುವ ಮೂಲಕ, ಸದನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು.

ಸಂಸದರ ಸತತ ಪ್ರಯತ್ನದ ಫಲವಾಗಿ ಕೇಂದ್ರ ಕೃಷಿ ಸಚಿವಾಲಯ ಮೇ ತಿಂಗಳಲ್ಲಿ ದೇಶದ ಎಲ್ಲಾ ಟ್ರ್ಯಾಕ್ಟರ್  ಹಾಗೂ ಕೃಷಿ ಯಂತ್ರೋಪಕರಣ ಉತ್ಪಾದಕ ಕಂಪನಿಗಳಿಗೆ ಪತ್ರ ಬರೆದು, ಎಂಆರ್‌ಪಿ ದರ ಪ್ರದರ್ಶಿಸುವ ಕುರಿತು ಸ್ಪಷ್ಟ ನಿರ್ದೇಶನ ನೀಡಿತ್ತು. ಅಲ್ಲದೆ, ಈ ಕುರಿತು ಸರ್ಕಾರಿ ಆದೇಶ ಹೊರಡಿಸಲು ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವರು ಭರವಸೆ ನೀಡಿದ್ದರು. ಕೇಂದ್ರ ಕೃಷಿ ಸಚಿವರ ಭೇಟಿ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ಈ ಹಿಂದೆ ಸರ್ಕಾರ ನೀಡಿರುವ ನಿರ್ದೇಶನಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವಾಲಯದಿಂದ ಸರ್ಕಾರಿ ಆದೇಶ ಹೊರಡಿಸುವುದು ಬಾಕಿ ಇರುವ ವಿಷಯವನ್ನು ಸಚಿವರ ಗಮನಕ್ಕೆ ತಂದಿದ್ದರು.

‘ಪ್ರಸ್ತುತ ಕೇಂದ್ರ ಸರ್ಕಾರವು ಈ ಕುರಿತು ಆದೆಶ ಹೊರಡಿಸಿದ್ದು, ಕೆಲವೇ ದಿನಗಳಲ್ಲಿ ಕೃಷಿ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ಟರ್  ಹಾಗೂ ಇತರ ಕೃಷಿ ಯಂತ್ರೋಪಕರಣಗಳ ಗರಿಷ್ಠ ಮಾರಾಟ ದರ ಪ್ರಕಟವಾಗಲಿದೆ. ಇದರಿಂದಾಗಿ ಕಂಪನಿಗಳಿಂದ ರೈತರಿಗೆ ಆಗುತ್ತಿದ್ದ ಅನ್ಯಾಯ, ಶೋಷಣೆ ನಿಲ್ಲಲಿದೆ. ಹಾಗೇ ಸರ್ಕಾರದ ಈ ಆದೇಶದಿಂದ ದೇಶದ ಕೋಟ್ಯಂತರ ರೈತರಿಗೆ ಅನುಕೂಲವಾಗಲಿದೆ,’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅವರು ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ.

Published On: 06 August 2021, 08:29 PM English Summary: mandatory display of mrp for all agriculture machinery and equipment

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.