ಪ್ರಸಕ್ತ ವರ್ಷ ಉತ್ತಮ ಮುಂಗಾರು ಆಗಿದ್ದರಿಂದ ಇತರ ಬೆಳೆಗಳಂತೆ ಸಿರಿಧಾನ್ಯಗಳ ಬಿತ್ತನೆಯೂ ಸಹ ಗಣನೀಯವಾಗಿ ಹೆಚ್ಚಾಗಿದೆ.
ಕೊರೋನಾ ಸೋಂಕು ತಡೆಯಲು ಸರ್ಕಾರ ಹೇರಿದ್ದ ಲಾಕ್ಡೌನ್ ದಿಂದಾಗಿ ಉದ್ಯೋಗ ಕಳೆದುಕೊಂಡ ಬಹುತೇಕ ಯುವಜನರು ಗ್ರಾಮೀಣ ಪ್ರದೇಶಕ್ಕೆ ತೆರಳಿದ ಪರಿಣಾಮ ಬಿತ್ತನೆ ಪ್ರಮಾಣ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ರಾಜ್ಯ ಸರಕಾರವು 2017ರಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ‘ಸಿರಿಧಾನ್ಯ ನೀತಿ’ ಜಾರಿಗೆ ತಂದ ಪರಿಣಾಮ ಮತ್ತು ಕಳೆದ ವರ್ಷ ಜಾರಿಗೆ ತಂದಿರುವ ‘ರೈತ ಸಿರಿ’ ಯೋಜನೆಯಿಂದ ರಾಗಿ ಸಹಿತ ಸಿರಿಧಾನ್ಯ ಬಿತ್ತನೆ ಹೆಚ್ಚುತ್ತಿದೆ. ಸಜ್ಜೆ, ನವಣೆ, ಅರ್ಕ, ಬರಗು ಬೆಳೆಗಳ ಬಿತ್ತನೆ ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ 2 ಪಟ್ಟು ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 1 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಸಿರಿಧಾನ್ಯ ಬಿತ್ತನೆಯಾಗಿದೆ. ಕಳೆದ ವರ್ಷ 18.26 ಲಕ್ಷ ಹೆಕ್ಟೇರ್ಗಳಲ್ಲಿ ಆಗಿದ್ದರೆ ಈ ವರ್ಷ ಇದು 19.54 ಲಕ್ಷ ಹೆಕ್ಟೇರ್ಗೇರಿದೆ.
ಚಿತ್ರದುರ್ಗ, ತುಮಕೂರು, ಹಾವೇರಿ, ಬೆಳಗಾವಿ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಾಮರಾಜನಗರ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಸಿರಿಧಾನ್ಯ ಬಿತ್ತನೆಗೆ ಹೆಚ್ಚಿನ ಬೇಡಿಕೆ ಇದೆ. ಆರೋಗ್ಯ ಕಾರಣಕ್ಕಾಗಿ ಗ್ರಾಹಕರಿಂದಲೂ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿಯೂ ಸಹ ಸಿರಿಧಾನ್ಯಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದರಿಂದ ಬಿತ್ತನೆಯೂ ಹೆಚ್ಚಾಗುತ್ತಿದೆ. ಸಿರಿಧಾನ್ಯಗಳಿಗೆ ಬೇಡಿಕೆ ಕುಸಿದಿತ್ತು. ಆದರೆ ಇತ್ತೀಚಗೆ ಜನರು ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರಿಂದ ಸಿರಿಧಾನ್ಯಗಳ ಕಡೆ ಒಲವು ಹೆಚ್ಚಾಗಿದೆ. ಸಿರಿಧಾನ್ಯಗಳಿಗೆ ಹೆಚ್ಚು ಬೇಡಿಕೆ ಬರುತ್ತಿದ್ದರಿಂದ ರೈತರು ಸಹ ಹೆಚ್ಚು ಬಿತ್ತನೆಯಲ್ಲಿ ತೊಡಗಿದ್ದಾರೆ.
ರೈತ ಸಿರಿಯ ಪ್ರೋತ್ಸಾಹ:
2019-20ನೇ ಸಾಲಿನಲ್ಲಿ ರೈತರಿಸಿ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಿ ನವಣೆ, ಹಾರಕ, ಸಾಮೆ, ಕೊರಲೆ, ಬರಗು, ಊದಲು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೆರಿಗೆ 10 ಸಾವಿರ ರೂಪಾಯಿಗಳಂತೆ ಗರಿಷ್ಠ 2 ಹೆಕ್ಟೇರ್ ಮಿತಿಯಲ್ಲಿ ಪ್ರೋತ್ಸಾಹಧನ ನೀಡಲಾಗುತ್ತಿದೆ.
Share your comments